ಪುತ್ತೂರು:ಪುತ್ತೂರು ಮಹಾಲಿಂಗೇಶ್ವರ ದೇವಳದ ವರ್ಷಾವಧಿ ಜಾತ್ರೋತ್ಸವ ಸಂದರ್ಭ ರಥೋತ್ಸವದಂದು ಶ್ರೀ ಮಹಾಲಿಂಗೇಶ್ವರ ದೇವರು ಹಾಗೂ ಉಳ್ಳಾಲ್ತಿ ಭಂಡಾರದ ಜೊತೆ ಭೇಟಿ ನೀಡುವ ಬಂಗಾರ್ ಕಾಯರ್ಕಟ್ಟೆಯು ಪುನರ್ ನವೀಕರಣಗೊಂಡಿದೆ.
ಹಿಂದೆ ಶ್ರೀ ದೇವಳದಿಂದ ಉಂಬಳಿ ಪಡೆದ ಕಟ್ಟೆಯ ಸ್ಥಳದ ವಾರಸುದಾರರಾದ ನಿವೃತ್ತ ಸೇನಾನಿ ಸುಬೇದಾರ್ ಭಾಸ್ಕರ ಗೌಡ ಮತ್ತು ಶ್ರೀಮತಿ ಜಯಂತಿ ಭಾಸ್ಕರ ಗೌಡ ದಂಪತಿ ಮಗ ಅರ್ಜುನ್ ಭಾಸ್ಕರ ಗೌಡ, ಆಶಿತ ಗೌಡ ಮತ್ತು ಸಹೋದರರು ಕಟ್ಟೆಯ ಪನರ್ ನಿರ್ಮಾಣ ಕಾರ್ಯದ ಸಂಪೂರ್ಣ ವೆಚ್ಚವನ್ನು ಸೇವಾ ರೂಪದಲ್ಲಿ ಭರಿಸಿದ್ದು ಈ ಸಂಬಂಧ ರೂ.1.10 ಲಕ್ಷವನ್ನು ಶ್ರೀ ದೇವಳದ ಕಚೇರಿಯಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಹಾಗೂ ಸರ್ವ ಸದಸ್ಯರ ಉಪಸ್ಥಿತಿಯಲ್ಲಿ ಹಸ್ತಾಂತರಿಸಿದರು.ಕಟ್ಟೆಯ ಶಿಲಾ ಪೀಠ, ಇನ್ನಿತರ ಕೆಲಸ ಕಾರ್ಯಗಳಿಗಾಗಿ ಹೆಚ್ಚುವರಿ ಮೊತ್ತ ರೂ.23 ಸಾವಿರವನ್ನು ಕೂಡಾ ಭರಿಸಿರುತ್ತಾರೆ.
1942ರಲ್ಲಿ ಕಟ್ಟೆ ಸ್ಥಾಪನೆಗೊಂಡಿತ್ತು: ಬಂಗಾರ್ ಕಾಯರ್ ಕಟ್ಟೆ ಭಾಸ್ಕರ ಗೌಡರ ಅಜ್ಜ ದಿ.ಸೋಮಪ್ಪ ಗೌಡರ ಕಾಲದಲ್ಲಿ 1942ರಲ್ಲಿ ಸ್ಥಾಪನೆಗೊಂಡಿತ್ತು. ಇದೀಗ ಪುನರ್ ನವೀಕರಣಗೊಂಡ ಕಟ್ಟೆಯ ಮತ್ತು ನಾಗದೇವರ ಪುನರ್ ಪ್ರತಿಷ್ಟೆ, ನೂತನ ಶಿಲಾ ಪೀಠವನ್ನು ಪ್ರತಿಷ್ಟಾಪಿಸುವ ವೈದಿಕ ವಿಧಿವಿಧಾನಗಳು ಏ.9ರಂದು ಬೆಳಿಗ್ಗೆ ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ವಿ.ಎಸ್.ಭಟ್ ಅವರ ನೇತೃತ್ವದಲ್ಲಿ ವ್ಯವಸ್ಥಾಪನಾ ಸಮಿತಿ, ಭಕ್ತಜನರ ಇರುವಿಕೆಯೊಂದಿಗೆ ನಡೆಯಿತು. ಕಟ್ಟೆಯ ಪುನರ್ ನವೀಕರಣ ಕಾಮಗಾರಿ ಸ್ಥಳೀಯ ಪಾರಂಪರಿಕ ಕಟ್ಟಡಗಳ ಮತ್ತು ಗುತ್ತಿಗೆದಾರ ಇಂಜಿನಿಯರ್ ಶಂಕರ ಭಟ್ಟರು ಪಾರಂಪರಿಕ ಸ್ಪರ್ಶ ನೀಡಿದ್ದರು. ದೇವಳದ ವಾಸ್ತುತಜ್ಞ ಪಿ.ಜಿ.ಜಗನ್ನಿವಾಸ ರಾವ್ ಕಟ್ಟೆಯ ವಾಸ್ತು ಹಾಗೂ ಅಂದಾಜು ಪಟ್ಟಿ ಒದಗಿಸಿರುತ್ತಾರೆ, ಕಟ್ಟೆಯ ನಿರ್ಮಾಣದ ನೀರಿನ ವ್ಯವಸ್ಥೆಯ ಬಗ್ಗೆ ನಿವೃತ್ತ ಸೇನಾನಿ ವಸಂತ ಗೌಡ ಗುಂಡಿಕಂಡ ಮತ್ತು ಪರಮೇಶ್ವರ ಭಟ್ ಸಹಕರಿಸಿರುತ್ತಾರೆ. ವ್ಯವಸ್ಥಾಪನಾ ಸಮಿತಿ ಸದಸ್ಯ ರಾಮದಾಸ ಗೌಡ ಎಸ್.ರವರು ದೇವಳದ ಸಮಿತಿ ಹಾಗೂ ಕಟ್ಟೆಯ ಕುಟುಂಬಿಕರ ಸಮನ್ವಯತೆಯೊಂದಿಗೆ ಮುತುವರ್ಜಿ ವಹಿಸಿರುತ್ತಾರೆ.