ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಕೋಡಿಂಬಾಡಿ ದೇವಸ್ಥಾನಕ್ಕೆ ಅಶೋಕ್ ಕುಮಾರ್ ರೈ ಭೇಟಿ; ಪಕ್ಷ ನೀಡಿದ ಸೂಚನೆಯಂತೆ ಕೆಲಸ ಆರಂಭಿಸಿದ್ದೇನೆ: ‘ಸುದ್ದಿ’ಗೆ ಅಶೋಕ್ ಕುಮಾರ್ ರೈ

0

ಪುತ್ತೂರು: ವಿಧಾನಸಭಾ ಚುನಾವಣೆಗೆ ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿ ಅಶೋಕ್ ಕುಮಾರ್ ರೈ ಕೋಡಿಂಬಾಡಿಯವರು ಮಹತೋಭಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ತಮ್ಮ ಬೆಂಬಲಿಗರೊಂದಿಗೆ ಕ್ಷೇತ್ರಕ್ಕೆ ಭೇಟಿ ನೀಡಿದ ಅಶೋಕ್ ಕುಮಾರ್ ರೈಯವರು ದೇವರ ದರ್ಶನ ಪಡೆದರು. ಕ್ಷೇತ್ರದ ಅರ್ಚಕರು ಅಶೋಕ್ ಕುಮಾರ್ ರೈಯವರು ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದುಬರುವಂತಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿ ಪ್ರಸಾದ ನೀಡಿದರು. ಇದೇ ವೇಳೆ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ ರಾಮಚಂದ್ರ ಕಾಮತ್ ಅವರು ಶಾಲು ಹೊದೆಸಿ ಅಶೋಕ್ ಕುಮಾರ್ ರೈಯವರನ್ನು ಅಭಿನಂದಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ಪಂಜಿಗುಡ್ಡೆ ಈಶ್ವರ ಭಟ್, ವೇದನಾಥ ಸುವರ್ಣ, ನಿರಂಜನ್ ರೈ ಮಠಂತಬೆಟ್ಟು, ಶಿವನಾಥ ರೈ ಮೇಗಿನಗುತ್ತು, ಜಯಪ್ರಕಾಶ್ ಬದಿನಾರು, ಗುರುಪ್ರಸಾದ್ ರೈ ಕುದ್ಕಾಡಿ, ಮುರಳೀಧರ ನಾಯ್ಕ್, ಡ್ಯಾಶ್ ಮಾರ್ಕೆಟಿಂಗ್‌ನ ನಿಹಾಲ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಬಳಿಕ ಅಶೋಕ್ ಕುಮಾರ್ ರೈಯವರು ಕೋಡಿಂಬಾಡಿ ಮಠಂತಬೆಟ್ಟು ಶ್ರೀ ಮಹಿಷಮ‌ರ್ಧಿನಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.

ಈ ವೇಳೆ ಸುದ್ದಿ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ನಾನು ಮಹಾಲಿಂಗೇಶ್ವರನ ಭಕ್ತ. ನನ್ನ ಮನಃಸಂಕಲ್ಪವನ್ನು ಮಹಾಲಿಂಗೇಶ್ವರ ದೇವರ ಜೊತೆಗೆ ಮಾಡಿಕೊಂಡಿದ್ದೆ. ಎರಡು ದಿನ ಮೊದಲು ನೀವು ಹೋಗಿ ನಿಮ್ಮ ಕೆಲಸ ಆರಂಭ ಮಾಡಿ, ನಿಮ್ಮ ಅಭ್ಯರ್ಥಿ ಸ್ಥಾನ ಕ್ಲಿಯರ್ ಆಗಿದೆ. ನಿಮ್ಮನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದ್ದೇವೆ ಎನ್ನುವುದಾಗಿ ಕಾಂಗ್ರೆಸ್‌ನಿಂದ ಸೂಚನೆ ದೊರಕಿದೆ. ಆ ಪ್ರಕಾರ ಇಂದು ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನ, ಮಠಂತಬೆಟ್ಟು ದೇವಸ್ಥಾನಕ್ಕೆ ಭೇಟಿ ನೀಡಿದ್ದೇನೆ. ಇಂದಲ್ಲ ನಾಳೆ ಅಧಿಕೃತ ಅಭ್ಯರ್ಥಿ ಪಟ್ಟಿ ಬಿಡುಗಡೆಯಾಗುತ್ತದೆ. ಅಧಿಕೃತ ಪಟ್ಟಿ ಬಿಡುಗಡೆಯಾದ ಬಳಿಕ ಪಕ್ಷದ ಅಧ್ಯಕ್ಷರು ಸಹಿತ ಎಲ್ಲರನ್ನೂ ಕರೆದುಕೊಂಡು ಮತ್ತೊಮ್ಮೆ ಕ್ಷೇತ್ರಕ್ಕೆ ಬರುತ್ತೇವೆ. ಎಲ್ಲ ಮಸೀದಿಗಳು, ದೇವಸ್ಥಾನಗಳು, ಚರ್ಚ್‌ಗಳಿಗೆ ಭೇಟಿ ನೀಡುತ್ತೇವೆ. ನಾನು ಯಾವುದೇ ಕೆಲಸ ಮಾಡುವಾಗಲೂ ಮಹಾಲಿಂಗೇಶ್ವರ ಮತ್ತು ಮಹಿಷಮರ್ಧಿನಿ ತಾಯಿಯ ಬಳಿ ಕೇಳಿಯೇ ಕೆಲಸ ಮಾಡುವವನು ಎಂದು ಹೇಳಿದರು.

ಪುತ್ತೂರು ಕಾಂಗ್ರೆಸ್‌ನಲ್ಲಿ ಅಸಮಾಧಾನ ಸ್ಫೋಟಗೊಂಡಿರುವ ಬಗ್ಗೆ ಮಾತನಾಡಿದ ಅವರು, ನಾವು ಮೊನ್ನೆಯವರೆಗೆ ಜೊತೆಯಲ್ಲೇ ಕೆಲಸ ಮಾಡಿದವರು. ಪಕ್ಷದ ಅಭ್ಯರ್ಥಿ ಯಾರೇ ಆದರೂ ನಾವು ಅವರ ಪರವಾಗಿ ಕೆಲಸ ಮಾಡುತ್ತೇವೆ ಎಂದು ಹೇಳುತ್ತಾ ಬರುತ್ತಿದ್ದೇವೆ. ಪಕ್ಷದಲ್ಲಿರುವವರು ಎಲ್ಲರೂ ಹಿರಿಯರು. ಅವರಿಗೆ ಜವಾಬ್ದಾರಿ ಗೊತ್ತಿದೆ. ಅವರಿಗೆ ಪಕ್ಷದಲ್ಲಿ ಮುಂದಕ್ಕೆ ಭವಿಷ್ಯವಿದೆ. ಮುಂದಕ್ಕೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ. ಅರ್ಹರಿಗೆ ಆದ್ಯತೆಗೆ ತಕ್ಕ ಕೆಲಸ ಅಥವಾ ಜವಾಬ್ದಾರಿಗಳನ್ನು ಹಂಚುವ ಕೆಲಸ ವರಿಷ್ಠರು ಮಾಡಲಿದ್ದಾರೆ. ನಾವು 14 ಜನ ಆಕಾಂಕ್ಷಿಗಳ ಪೈಕಿ ಯಾರು ಅಭ್ಯರ್ಥಿಯಾದರೂ ಅವರ ಪರವಾಗಿ ಜೊತೆಯಾಗಿ ನಿಂತು ಕೆಲಸ ಮಾಡುತ್ತೇವೆ ಎಂದು ಜನರಿಗೆ ಮಾತು ನೀಡಿದ್ದೇವೆ. ಆ ಮಾತನ್ನು ನಾವೆಲ್ಲರೂ ಉಳಿಸಿಕೊಳ್ಳುತ್ತೇವೆ ಎಂದು ಹೇಳಿದರು.

ಒಂದು ಪಕ್ಷದಲ್ಲಿ ಒಂದು ಕ್ಷೇತ್ರಕ್ಕೆ ಒಬ್ಬನಿಗೆ ಮಾತ್ರ ಟಿಕೆಟ್ ನೀಡಬೇಕು. ಅದನ್ನು ಅರ್ಹತೆಯ ಮೇರೆಗೆ ತೂಗಿ ಅಳೆಯುವ ಕೆಲಸ ಮಾಡುತ್ತಾರೆ. ಕರ್ನಾಟಕದಿಂದ ಎರಡು, ಎಐಸಿಸಿಯಿಂದ ಒಂದು ಸೇರಿ ಒಟ್ಟು ಮೂರು ಸರ್ವೇ ಮಾಡಿ ಅದರ ಪ್ರಕಾರ ವಿನ್ನಿಂಗ್ ಕ್ಯಾಂಡಿಡೇಟ್ ಯಾರಿದ್ದಾರೋ ಅವರಿಗೆ ನೀಡುವ ಕೆಲಸ ಆಗಿದೆ. ಅರ್ಹತೆಗೆ ತಕ್ಕಂತೆ ಟಿಕೆಟ್ ನೀಡುವ ಕೆಲಸ ಮಾಡಿದ್ದಾರೆನ್ನುವುದು ನನ್ನ ಅನಿಸಿಕೆ. ಇನ್ನೆರಡು ದಿನಗಳಲ್ಲಿ ಅಽಕೃತವಾಗಿ ಟಿಕೆಟ್ ಘೋಷಣೆಯಾಗುತ್ತದೆ ಆ ಬಳಿಕ ನನಗೆ ಆಶೀರ್ವಾದ ಮಾಡಿ ಎಂದು ನಾನು ಜನರ ಬಳಿ ಕೇಳಿಕೊಳ್ಳುತ್ತೇನೆ. ಯಾವುದೇ ಮುಚ್ಚುಮರೆ ಇಲ್ಲದೆ, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಮುಖಾಂತರ ಪುತ್ತೂರಿನ ಏಳಿಗೆಗೆ ಕೆಲಸ ಮಾಡುತ್ತೇನೆ ಎಂದು ಹೇಳಿದರು.

LEAVE A REPLY

Please enter your comment!
Please enter your name here