ಸುಳ್ಯ: ನಾನು ಶಾಸಕ ಸ್ಥಾನದ ಅಭ್ಯರ್ಥಿ ಆಗುವೆನೆಂಬ ನಿರೀಕ್ಷೆ ಇರಲಿಲ್ಲ. ಪಕ್ಷ, ಸಂಘಟನೆಯ ಹಿರಿಯರು ನನ್ನನ್ನು ಗುರುತಿಸಿ ಸಾಮಾನ್ಯ ಕಾರ್ಯಕರ್ತಳಾದ ನನಗೆ ಅವಕಾಶ ನೀಡಿದ್ದಾರೆ. ಈ ಜವಾಬ್ದಾರಿಯನ್ನು ಎಲ್ಲರ ಸಹಕಾರ ಹಾಗೂ ಸಚಿವರಾಗಿರುವ ಎಸ್.ಅಂಗಾರರ ಮಾರ್ಗದರ್ಶನದಲ್ಲಿಯೇ ನಿಭಾಯಿಸುತ್ತೇನೆ ಎಂದು ಸುಳ್ಯ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕು.ಭಾಗೀರಥಿ ಮುರುಳ್ಯ ಹೇಳಿದ್ದಾರೆ.
ಬಿಜೆಪಿ ಅಭ್ಯರ್ಥಿಯಾದ ಬಳಿಕ ಸುದ್ದಿಯೊಂದಿಗೆ ಮಾತನಾಡಿದ ಭಾಗೀರಥಿಯವರು, ನಾನು ಶಾಸಕ ಸ್ಥಾನದ ಅಭ್ಯರ್ಥಿ ಆಗಬಹುದೆಂದು ಭಾವಿಸಿರಲಿಲ್ಲ. ಆದರೆ ಪಕ್ಷ ಈ ಜವಾಬ್ದಾರಿ ನೀಡಿದೆ. ಸಾಮಾನ್ಯ ಕಾರ್ಯಕರ್ತರೊಬ್ಬರಿಗೆ ಬೇರೆ ಪಕ್ಷಗಳಲ್ಲಿ ಟಿಕೆಟ್ ಸಿಗೋದು ಕಷ್ಟ. ಅದೇನಿದ್ದರೂ ಬಿಜೆಪಿಯಲ್ಲಿ ಮಾತ್ರ ಸಾಧ್ಯ ಎಂದು ಹೇಳಿದರು.
ನನ್ನ ತಂದೆ ಹಾಗೂ ತಾಯಿ ಬಿಜೆಪಿಯಲ್ಲಿ ಕೆಲಸ ಮಾಡಿದ್ದಾರೆ. ಇಬ್ಬರೂ ಗ್ರಾಮ ಪಂಚಾಯತ್ ಚುನಾವಣೆಗೆ ಸ್ಪರ್ಧಿಸಿ ಸೋಲನುಭವಿಸಿದ್ದರು. ನಾನು ಕೂಡಾ ಪಕ್ಷದಲ್ಲಿ ಸಣ್ಣ ವಯಸ್ಸಿನಿಂದಲೇ ಕೆಲಸ ಮಾಡಿಕೊಂಡಿದ್ದೇನೆ. ಅದೇ ಕಾರಣಕ್ಕಾಗಿ ತಾ.ಪಂ. ಚುನಾವಣೆಗೆ ಸ್ಪರ್ಧಿಸಲು ಅವಕಾಶ ಸಿಕ್ಕಿತು. ಜಿ.ಪಂ ಜಾಲ್ಸೂರು ಕ್ಷೇತ್ರದಿಂದಲೂ ಸ್ಪರ್ಧೆ ಮಾಡಿ ಗೆದ್ದಿದ್ದೆ. ಈ ಎಲ್ಲ ಅವಕಾಶ ನೀಡಿದ್ದು ನನ್ನ ಪಕ್ಷ ಹಾಗೂ ಸಂಘಟನೆಯ ಹಿರಿಯರು. ಈಗಲೂ ಅವರೇ ನನ್ನನ್ನು ಗುರುತಿಸಿದ್ದಾರೆ. ನಾನು ಈ ಹಿಂದೆ ಜನಪ್ರತಿನಿಧಿಯಾಗಿ ಮಾಡಿದ ಕೆಲಸದಲ್ಲಿ ನನಗೆ ತೃಪ್ತಿ ಇದೆ ಎಂದು ಹೇಳಿದರು.
ನನಗೆ ಬಿಜೆಪಿಯಲ್ಲಿ ನೀಡಿದ ಜವಾಬ್ದಾರಿಯನ್ನು ಎಲ್ಲರ ಸಲಹೆ ಪಡೆದು ನಿಭಾಯಿಸಿದ್ದೇನೆ. ಕೊಟ್ಟ ಜವಾಬ್ದಾರಿಗೆ ಚ್ಯುತಿ ಬಾರದೆ ಕೆಲಸ ನಿರ್ವಹಿಸಿದ್ದೇನೆ ಎಂದ ಅವರು, ಈ ಬಾರಿಯ ವಿಧಾನಸಭಾ ಚುನಾವಣೆಗೆ ಪಕ್ಷ ಸಿದ್ಧತೆ ಮಾಡಿಕೊಂಡಿದೆ. ಬಿಜೆಪಿಯಲ್ಲಿ ಎಲ್ಲರೂ ಸೇರಿ ಕೆಲಸ ಮಾಡುತ್ತೇವೆ ಎಂದು ಹೇಳಿದರು.
ನಾನು ಮುರುಳ್ಯ ಯುವತಿ ಮಂಡಲದ ಅಧ್ಯಕ್ಷೆಯಾಗಿ, ಸುಳ್ಯದ ಯುವಜನ ಸಂಯುಕ್ತ ಮಂಡಳಿಯ ಅಧ್ಯಕ್ಷೆಯಾಗಿ ಕೆಲಸ ಮಾಡಿದ್ದೇನೆ. ನಾನು ಅಧ್ಯಕ್ಷೆಯಾಗಿದ್ದ ಸಂದರ್ಭದಲ್ಲಿ ಸುಳ್ಯದಲ್ಲಿ ರಾಜ್ಯ ಮಟ್ಟದ ಯುವಜನ ಮೇಳ ಜರುಗಿತ್ತು. ಇದೆಲ್ಲವೂ ಶಾಸಕ ಅಂಗಾರರ ಮಾರ್ಗದರ್ಶನದಲ್ಲೇ ಆಗಿತ್ತು ಎಂದ ಅವರು, ಸುಳ್ಯ ಕ್ಷೇತ್ರವನ್ನು ಶಾಸಕ ಅಂಗಾರರು 6 ಬಾರಿ ಪ್ರತಿನಿಧಿಸಿ ಗೆದ್ದಿದ್ದಾರೆ. ಸರಳ ಸಜ್ಜನ ವ್ಯಕ್ತಿ. ಉತ್ತಮ ರಾಜಕಾರಣಿ ಅವರು. ಅವರ ನಡೆ ನುಡಿ, ಕೆಲಸ ಕಾರ್ಯಗಳನ್ನು ನಾನು ಗಮನಿಸಿದ್ದೇನೆ. ನಾನೂ ಕೂಡಾ ಅದನ್ನು ಅಳವಡಿಸಿಕೊಂಡಿದ್ದೇನೆ. ಮುಂದೆ ಅವರ ಮಾರ್ಗದರ್ಶನದಲ್ಲೇ ಮುನ್ನಡೆಯುವೆ. ಅವರಿಂದಲೇ ನನಗೆ ಈ ಅವಕಾಶ ದೊರೆತಿದೆ ಎಂದು ಅಂದುಕೊಂಡಿದ್ದೇನೆ ಎಂದು ಭಾಗೀರಥಿಯವರು ಹೇಳಿದರು.
ಟಿಕೆಟ್ ವಿಚಾರದಲ್ಲಿ ಏನೇ ಅಸಮಾಧಾನವಿದ್ದರೂ ಅದನ್ನು ಪಕ್ಷ ಹಾಗೂ ಸಂಘಟನೆಯ ಹಿರಿಯರು ಸರಿ ಪಡಿಸಿ, ನನ್ನನ್ನು ಗೆಲ್ಲಿಸುತ್ತಾರೆಂಬ ವಿಶ್ವಾಸ ನನಗಿದೆ ಎಂದು ಭಾಗೀರಥಿ ಮುರುಳ್ಯ ಹೇಳಿದರು.