ಕೆಯ್ಯೂರು – ತೆಗ್ಗು ಸಂಪರ್ಕ ರಸ್ತೆ ಆಗ್ರಹಿಸಿ ಎರಕ್ಕಳದಲ್ಲಿ ಮತದಾನ ಬಹಿಷ್ಕಾರ ಬ್ಯಾನರ್ ಅಳವಡಿಕೆ

0

ಪುತ್ತೂರು: ಕೆಯ್ಯೂರು ಗ್ರಾಮದ ಎರಕ್ಕಳ ಅರಬ್ಬೀ ಮೂಲಕ ಕೆಯ್ಯೂರು -ತೆಗ್ಗು ಸಂಪರ್ಕ ರಸ್ತೆ ಕಲ್ಪಿಸುವಂತೆ ಆಗ್ರಹಿಸಿ ಗ್ರಾಮದ ಎರಕ್ಕಳದಲ್ಲಿ ಮತದಾನ ಬಹಿಷ್ಕಾರ ಬ್ಯಾನರ್ ಅಳವಡಿಸಲಾಗಿದೆ. ಈ ಬಗ್ಗೆ ತೆಗ್ಗು ಕಲ್ಲುಗುಡ್ಡೆ, ಎರಕ್ಕಳ ಪರಿಶಿಷ್ಠ ಜಾತಿ ಹಾಗೂ ಗ್ರಾಮಸ್ಥರು ಕೆಯ್ಯೂರು ಗ್ರಾಮ ಇವರು ಅರ್ಜಿ ಸಲ್ಲಿಸಿದ್ದು ಎರಕ್ಕಳ ನಿವಾಸಿಗಳಾದ ಸುಮಾರು 30 ಮಂದಿ ಸಹಿ ಮಾಡಿದ ಅರ್ಜಿಯನ್ನು ಪುತ್ತೂರು ತಹಶೀಲ್ದಾರ್‌ರವರಿಗೆ ಸಲ್ಲಿಸಿದ್ದು, ಈ ಅರ್ಜಿಯಲ್ಲಿ ತೆಗ್ಗು ಕೆಯ್ಯೂರು ಎರಕ್ಕಳದ ಅರಬ್ಬೀ ಮೂಲಕ ಸಂಪರ್ಕ ರಸ್ತೆ ಆಗಬೇಕು ಈ ನಮ್ಮ ಮನವಿಗೆ ಸ್ಪಂದಿಸದೇ ಇದ್ದಲ್ಲಿ ಮುಂದಿನ ಯಾವುದೇ ಚುನಾವಣೆಯಲ್ಲಿ ಮತದಾನ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ.

ತೆಗ್ಗುವಿನಿಂದ ಕೆಯ್ಯೂರು ಸಂಪರ್ಕಿಸಲು ಹಾಗೂ ಎರಕ್ಕಳ ಪರಿಶಿಷ್ಟ ಜಾತಿ ಹಾಗೂ ಇತರ ಸ್ಥಳೀಯ ಗ್ರಾಮಸ್ಥರಿಗೆ ತೆಗ್ಗು ಅಂಗನವಾಡಿ , ನಮ್ಮೂರ ತೆಗ್ಗು ಪ್ರಾಥಮಿಕ ಶಾಲೆ, ಹಾಲಿನ ಡೈರಿ, ಮೊಗೇರ್ಕಳ ಗುಡಿ, ವಿಷ್ಣುಮೂರ್ತಿ ದೈವಸ್ಥಾನ ಇತ್ಯಾದಿ ಈ ಸಂಪರ್ಕ ರಸ್ತೆ ಅಗತ್ಯ ಎಂದು ತಿಳಿಸಲಾಗಿದ್ದು, ಈ ಬಗ್ಗೆ ಗ್ರಾಮ ಲೆಕ್ಕಾಧಿಕಾರಿಯವರಿಗೆ,ತಹಶೀಲ್ದಾರ್, ತಾಪಂ ಕಾರ್ಯನಿರ್ವಹಣಾಧಿಕಾರಿಯವರಿಗೆ ಈಗಾಗಲೇ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಆದ್ದರಿಂದ ಜನಪ್ರತಿನಿಧಿಗಳು, ಅಧಿಕಾರಿಗಳು ನಮ್ಮ ಮನವಿಗೆ ಸ್ಪಂದನೆ ನೀಡದೇ ಇದ್ದಲ್ಲಿ ಮತದಾನ ಬಹಿಷ್ಕಾರ ಮಾಡುತ್ತೇವೆ ಎಂದು ಅರ್ಜಿಯಲ್ಲಿ ತಿಳಿಸಿದ್ದಾರೆ.


` ಬಹಳ ಅಗತ್ಯವಿರುವ ಎರಕ್ಕಳ ಅರಬ್ಬೀ ಮೂಲಕ ಕೆಯ್ಯೂರು ತೆಗ್ಗು ಸಂಪರ್ಕ ರಸ್ತೆ ಆಗಬೇಕೆಂದು ಈಗಾಗಲೇ ಸಂಬಂಧಪಟ್ಟ ಎಲ್ಲಾ ಅಧಿಕಾರಿ ವರ್ಗದವರಿಗೆ, ಜನಪ್ರತಿನಿಧಿಗಳಿಗೆ ಅರ್ಜಿ ಸಲ್ಲಿಸಿದ್ದೇವೆ. ಆದರೂ ನಮ್ಮ ಮನವಿಗೆ ಯಾವುದೇ ಸ್ಪಂದನೆ ದೊರೆತಿಲ್ಲ ಆದ್ದರಿಂದ ಈ ವರ್ಷ ಮತದಾನ ಬಹಿಷ್ಕಾರಕ್ಕೆ ನಿರ್ಧರಿಸಿದ್ದೇವೆ.’
ಉದಯ ಕುಮಾರ್ ಎರಕ್ಕಳ, ಗ್ರಾಮಸ್ಥರು

LEAVE A REPLY

Please enter your comment!
Please enter your name here