ಬೆಳಂದೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ನ್ಯಾಕ್ ಸಂಸ್ಥೆಯಿಂದ B+ ಗ್ರೇಡ್

0

ಕಾಣಿಯೂರು: ಬೆಳಂದೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ನ್ಯಾಕ್ ಸಂಸ್ಥೆಯಿಂದ B+ ಗ್ರೇಡ್ ಲಭಿಸಿದೆ. ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಸಂಸ್ಥೆ (ನ್ಯಾಕ್)ಯು ಬೆಳಂದೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಮೌಲ್ಯಮಾಪನಕ್ಕಾಗಿ ತಜ್ಞರ ಸಮಿತಿಯನ್ನು ಕಳುಹಿಸಿತ್ತು. ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಸಂಸ್ಥೆಯ ಪರಿಶೀಲನಾ ತಂಡದ ಮುಖ್ಯಸ್ಥರಾದ ವಾರಣಾಸಿ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದ ಪ್ರೊ. ಹೆಚ್. ಕೆ. ಸಿಂಗ್, ಸಂಯೋಜಕರಾದ ಕೇರಳ ಪೆರಿಯ ಕೇಂದ್ರೀಯ ವಿಶ್ವವಿದ್ಯಾನಿಲಯದ ಪ್ರೊ. ಸುರೇಶ್ ರಂಗರಾಜನ್ ಮತ್ತು ಸದಸ್ಯರಾದ ಮಧ್ಯಪ್ರದೇಶದ ಸಿಕಾ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ತರಂಜಿತ್ ಸೂದ್ ಅವರು ಬೆಳಂದೂರು ಕಾಲೇಜಿಗೆ ಎಪ್ರಿಲ್ 4 ಮತ್ತು 5 ರಂದು ಭೇಟಿ ನೀಡಿದ್ದರು. ಮೌಲ್ಯಮಾಪನಕ್ಕಾಗಿ ಬೆಳಂದೂರು ಕಾಲೇಜಿನಿಂದ ನ್ಯಾಕ್‌ಗೆ ಸಲ್ಲಿಸಿದ ವಿವಿಧ ದಾಖಲೆಗಳನ್ನು, ಭೌತಿಕ ಸ್ಥಿತಿಗಳನ್ನು ಪರಿಶೀಲಿಸಿದರು.

ಕಾಲೇಜಿನ ಪ್ರಾಂಶುಪಾಲರು, ಐ.ಕ್ಯು.ಎ.ಸಿ. ಸಂಯೋಜಕರು, ವಿಭಾಗ ಮುಖ್ಯಸ್ಥರು ದಾಖಲೆಗಳನ್ನು ನೀಡಿದರು. ಕಾಲೇಜು ಅಭಿವೃದ್ದಿ ಸಮಿತಿ, ರಕ್ಷಕ-ಶಿಕ್ಷಕ ಸಂಘ, ಹಿರಿಯ ವಿದ್ಯಾರ್ಥಿ ಸಂಘ, ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳೊಂದಿಗೆ ಪ್ರತ್ಯೇಕ ಸಂವಾದ ನಡೆಸಿದರು. ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ, ಕಾಲೇಜಿನ ಅಡಿಕೆ ತೋಟದಲ್ಲಿ ವಿದ್ಯಾರ್ಥಿಗಳ ಕೆಲಸ ಇತ್ಯಾದಿಗಳನ್ನು ನೋಡಿ ತಜ್ಜರು ಮೆಚ್ಚುಗೆ ವ್ಯಕ್ತಪಡಿಸಿದರು.

ಬಳಿಕ ಎಪ್ರಿಲ್ 5ರಂದು ನಡೆದ ಸಭೆಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ| ಶಂಕರ ಭಟ್ ಪಿ ಮತ್ತು ಐ.ಕ್ಯು.ಎ.ಸಿ. ಸಂಯೋಜಕರಾದ ಪ್ರೊ. ಪದ್ಮನಾಭರಿಗೆ ನ್ಯಾಕ್ ತಂಡದವರು ವರದಿಯನ್ನು ಹಸ್ತಾಂತರಿಸಿದರು. ಪರಿಶೀಲನಾ ತಂಡವು ನ್ಯಾಕ್‌ಗೆ ಸಲ್ಲಿಸಿದ ವರದಿಯ ಪ್ರಕಾರ ನ್ಯಾಕ್ ಸಂಸ್ಥೆ ಬೆಳಂದೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ 2.58 ಸಿ.ಜಿ.ಪಿ.ಎ. ಅಂಕಗಳೊಂದಿಗೆ 5 ವರ್ಷಗಳ ಅವಧಿಗೆ B+   ಗ್ರೇಡ್ ನೀಡಿರುತ್ತದೆ.

LEAVE A REPLY

Please enter your comment!
Please enter your name here