ಪುತ್ತೂರು: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪುತ್ತೂರು ವಿಧಾನ ಸಭಾ ಕ್ಷೇತ್ರ ಸಮಿತಿ ವತಿಯಿಂದ ಭಾರತ ರತ್ನ ಡಾ ಬಾಬಾ ಸಾಹೇಬ್ ಅಂಬೇಡ್ಕರ್ ರವರ 132ನೇ ಜನ್ಮ ಜಯಂತಿ ಕಾರ್ಯಕ್ರಮ ಪಕ್ಷದ ಕಛೇರಿಯಲ್ಲಿ ನಡೆಯಿತು.
ಎಸ್‌ಡಿಪಿಐ ಪುತ್ತೂರು ಕ್ಷೇತ್ರ ಸಮಿತಿ ಅಧ್ಯಕ್ಷ ಹಾಜಿ ಇಬ್ರಾಹಿಂ ಸಾಗರ್ ಅಧ್ಯಕ್ಷತೆ ವಹಿಸಿದ್ದರು. ಎಸ್‌ಡಿಪಿಐ ಮುಖಂಡ, ಸವಣೂರು ಗ್ರಾ.ಪಂ ಸದಸ್ಯರೂ ಆಗಿರುವ ಬಾಬು ಸವಣೂರು ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಉದ್ಘಾಟಿಸಿದರು. ಅಧ್ಯಕ್ಷ ಇಬ್ರಾಹಿಂ ಸಾಗರ್ ಮಾತನಾಡಿ ಶೋಷಿತರ, ದಮನಿತರ ಅಭ್ಯುದಯಕ್ಕಾಗಿ ಅಂಬೇಡ್ಕರ್‌ರವರು ತನ್ನ ಜೀವಿತದುದ್ದಕ್ಕೂ ಹೋರಾಟ ನಡೆಸಿದ್ದು, ಎಸ್‌ಡಿಪಿಐ ತನ್ನ ರಾಜಕೀಯ ಚಿಂತನೆಯ ಭಾಗವಾಗಿ ಈ ದಿನವನ್ನು ಹಲವು ವರ್ಷಗಳಿಂದ ಸಾಮಾಜಿಕ ನ್ಯಾಯ ದಿನವನ್ನಾಗಿ ಆಚರಿಸುತ್ತಿದೆ ಎಂದು ಹೇಳಿದರು. ಬಾಬು ಸವಣೂರು ಮಾತನಾಡಿ ಅಂಬೇಡ್ಕರ್ ಅವರ ಚಿಂತನೆಗಳು ಮಾತ್ರ ದೇಶದ ಏಕತೆ ಮತ್ತು ಅಭಿವೃದ್ಧಿಯನ್ನು ಕಾಪಾಡಲು ಸಾಧ್ಯ ಎಂದರು. ಉಪಾಧ್ಯಕ್ಷ ಅಬ್ದುಲ್ ಹಮೀದ್ ಸಾಲ್ಮರ ಮಾತನಾಡಿ ಅಂಬೇಡ್ಕರ್ ಚಿಂತನೆಗಳು ಈ ದೇಶದ ಎಲ್ಲಾ ವರ್ಗಗಳ ಅಭ್ಯುದಯಕ್ಕೆ ಅಡಿಪಾಯವಾಗಿದೆ ಎಂದರು. ಕ್ಷೇತ್ರ ಸಮಿತಿ ಸದಸ್ಯ ಅಬೂಬಕ್ಕರ್ ಸಿದ್ದೀಕ್ ಉಪಸ್ಥಿತರಿದ್ದರು. ಕ್ಷೇತ್ರ ಸಮಿತಿ ಕಾರ್ಯದರ್ಶಿ ರಹೀಂ ಪುತ್ತೂರು ಸ್ವಾಗತಿಸಿದರು. ಹಿರಿಯರಾದ ಪಿ ಬಿ ಕೆ ಮಹಮ್ಮದ್ ಮತ್ತಿತರರು ಉಪಸ್ಥಿತರಿದ್ದರು. ಕೋಶಾಧಿಕಾರಿ ಯಹಿಯಾ ಕೂರ್ನಡ್ಕ ವಂದಿಸಿದರು.