ಕಾಣಿಯೂರು: ಮಹಿಳೆಯರ ಮತ್ತು ಮಕ್ಕಳ ರಕ್ಷಣೆ ಹಾಗೂ ರಾಜ್ಯದ ಅಭಿವೃದ್ಧಿಗಾಗಿ ಕಾಂಗ್ರೆಸ್‌ನಿಂದ ಸಾಧ್ಯ. ಆದ್ದರಿಂದ ಕಾಂಗ್ರೆಸ್ ಪಕ್ಷಕ್ಕೆ ತಮ್ಮೆಲ್ಲರ ಅಮೂಲ್ಯವಾದ ಮತವನ್ನು ನೀಡಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವಂತೆ ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ಪ್ರಧಾನ ಕಾರ್ಯದರ್ಶಿ ಭವ್ಯ ನರಸಿಂಹಮೂರ್ತಿ ಕರೆ ನೀಡಿದರು.
ಏ. 18ರಂದು ಸುಳ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಿ.ಕೃಷ್ಣಪ್ಪ ಅವರ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಸುಳ್ಯ ಬ್ಲಾಕ್ ಕಾಂಗ್ರೆಸ್ ವತಿಯಿಂದ ಟೌನ್ ಹಾಲ್ ಬಳಿ ಆಯೋಜಿಸಲಾಗಿದ್ದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಈ ಬಾರಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಈಗಾಗಲೇ ಘೋಷಣೆ ಮಾಡಿರುವಂತಹ ನಾಲ್ಕು ಗ್ಯಾರಂಟಿ ಯೋಜನೆಗಳು ಮಹಿಳೆಯರ ಮತ್ತು ಮಕ್ಕಳ ರಕ್ಷಣೆ, ಸ್ವಾವಲಂಬಿ ಬದುಕಿಗೆ, ಬಡತನ ನಿರ್ಮೂಲನೆಗೆ ಉತ್ತಮ ಕೊಡುಗೆಯಾಗಿದೆ ಎಂದರು. ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದ ಮೇಲೆ ಜಿಲ್ಲೆಯ ವಿಜಯ ಬ್ಯಾಂಕ್‌ನ್ನು ಉತ್ತರ ಭಾರತದ ಬ್ಯಾಂಕಿಗೆ ಜೋಡಿಸಿ ವಿಜಯ ಬ್ಯಾಂಕ್ ಹೆಸರನ್ನೇ ಅಳಿಸಿದೆ. ಮಂಗಳೂರು ವಿಮಾನ ನಿಲ್ದಾಣಕ್ಕೆ ಕೋಟಿ ಚೆನ್ನಯ್ಯರ ಹೆಸರನ್ನು ಇಡುವ ಬದಲು ಅದಾನಿಯ ಹೆಸರನ್ನು ಇಟ್ಟು ಅನ್ಯಾಯ ಮಾಡಿದೆ ಎಂದು ಟೀಕಿಸಿದರು. ಮಾಜಿ ಸಚಿವ ಯು.ಟಿ.ಖಾದರ್ ಮಾತನಾಡಿ, ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಹೆಚ್ಚಿನ ಸ್ಥಾನವನ್ನು ಪಡೆಯಬೇಕಾದರೆ ಸುಳ್ಯದ ಅಭ್ಯರ್ಥಿ ಜಿ.ಕೃಷ್ಣಪ್ಪ ಅವರ ಗೆಲುವು ಅತಿ ಅವಶ್ಯಕವಾಗಿದೆ. ರಾಜ್ಯದ ಅಭಿವೃದ್ಧಿಯನ್ನು ಬಯಸಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಬೇಕಾಗಿದೆ ಎಂದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಅಭ್ಯರ್ಥಿ ಜಿ.ಕೃಷ್ಣಪ್ಪ, ಪಕ್ಷದ ಮುಖಂಡರಾದ ಟಿ.ಎಂ.ಶಹೀದ್, ಎಂ.ವೆಂಕಪ್ಪ ಗೌಡ, ಹಮೀದ್ ಕುತ್ತಮಟ್ಟೆ, ಎನ್. ಜಯಪ್ರಕಾಶ್ ರೈ, ಸದಾನಂದ ಮಾವಂಜಿ, ಕೆ.ಎಮ್.ಮುಸ್ತ- ಮೊದಲಾದವರು ಉಪಸ್ಥಿತರಿದ್ದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿಸಿ ಜಯರಾಮ್ ಸಾಗತಿಸಿದರು. ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ ಕಾರ್ಯಕ್ರಮ ನಿರೂಪಿಸಿದರು.
ಎರಡು ಬಾರಿ ನಾಮ ಪತ್ರ ಸಲ್ಲಿಕೆ; ಸುಳ್ಯ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಿ.ಕೃಷ್ಣಪ್ಪ ಅವರು ಮಂಗಳವಾರ ಬೆಳಗ್ಗೆ ನಾಮ ಪತ್ರ ಸಲ್ಲಿಸಿದರು. ನಾಮ ಪತ್ರ ಸಲ್ಲಿಕೆಗೂ ಮೊದಲು ಜಿ.ಕೃಷ್ಣಪ್ಪ ಅವರು ಬೆಳಗ್ಗೆ ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನ, ಗಾಂಽನಗರದ ಜುಮ್ಮಾ ಮಸೀದಿ ಮತ್ತು ಬೀರಮಂಗಲ ಸೈಂಟ್ ಬ್ರಿಜಿಡ್ ಚರ್ಚ್‌ಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.
ಬಳಿಕ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿಯ ಕಾಂಗ್ರೆಸ್ ಕಛೇರಿ ಸಮೀಪದಿಂದ ಮೆರವಣಿಗೆಯಲ್ಲಿ ಸಾಗಲಾಯಿತು. ರಥಬೀದಿ ಮೂಲಕ ಪುರಭವನದ ವರೆಗೆ ಸಾಗಲಾಯಿತು. ಅಭ್ಯರ್ಥಿ ಜಿ.ಕೃಷ್ಣಪ್ಪ ಅವರು ತೆರೆದ ವಾಹನದಲ್ಲಿ ಮೆರವಣಿಗೆಯಲ್ಲಿ ಸಾಗಿದರು. ಬಳಿಕ ಪುರಭವನದ ಬಳಿಕ ಸಾರ್ವಜನಿಕ ಸಭೆ ನಡೆಸಲಾಯಿತು. ಈ ಸಭೆಯಲ್ಲಿ ಕಾಂಗ್ರೆಸ್ ವಕ್ತಾರೆ ಭವ್ಯ ನರಸಿಂಹಮೂರ್ತಿ, ಮಾಜಿ ಸಚಿವ ಯು.ಟಿ.ಖಾದರ್ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಭಾರೀ ಸಂಖ್ಯೆಯಲ್ಲಿ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಭಾಗವಹಿಸಿದ್ದರು.
ಸುಳ್ಯದ ತಾಲೂಕು ಕಛೇರಿಗೆ ತೆರಳಿದ ಜಿ.ಕೃಷ್ಣಪ್ಪ ನಾಮ ಪತ್ರ ಸಲ್ಲಿಸಿದರು. ಮೊದಲ ನಾಮ ಪತ್ರ ಸಲ್ಲಿಕೆ ವೇಳೆ ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಜಿಲ್ಲಾ ಉಪಾಧ್ಯಕ್ಷ ಎನ್.ಜಯಪ್ರಕಾಶ್ ರೈ, ಕೆಪಿಸಿಸಿ ವಕ್ತಾರ ಟಿ.ಎಂ.ಶಹೀದ್ ಜತೆಗಿದ್ದರು. ಮೊದಲ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮುಗಿದ ಬಳಿಕ ಹೊರಬಂದ ಅಭ್ಯರ್ಥಿ ಜಿ.ಕೃಷ್ಣಪ್ಪ ಅವರು ಎರಡನೇ ಬಾರಿ ನಾಮಪತ್ರ ಸಲ್ಲಿಕೆ ವೇಳೆ ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಽರ್ ಕುಮಾರ್ ಶೆಟ್ಟಿ, ಕೆಪಿಸಿಸಿ ಮಾಜಿ ಸದಸ್ಯ ಡಾ.ರಘು, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ಕೋಲ್ಚರ್, ಕಡಬ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಪಿ.ಪಿ.ವರ್ಗೀಸ್ ಜತೆಗಿದ್ದರು.