ಬಸವ ವಸತಿ ಯೋಜನೆಯಡಿಯಲ್ಲಿ ಸುಳ್ಳು ಮಾಹಿತಿ ಕುರಿತು ಲೋಕಾಯುಕ್ತಕ್ಕೆ ದೂರು ಹಿನ್ನೆಲೆ ; ಬಡ್ಡಿ ಸಮೇತ ಅನುದಾನ ಪಾವತಿಸಲು ನೆಕ್ಕಿಲಾಡಿ ಗ್ರಾ.ಪಂ. ಸದಸ್ಯೆಗೆ ನೊಟೀಸ್

0

ಪುತ್ತೂರು: ಬಸವ ವಸತಿ ಯೋಜನೆಯಡಿಯಲ್ಲಿ ಅನುದಾನವನ್ನು ಪಡೆದುಕೊಂಡು ತೋರಿಸಿದ ಸರ್ವೇ ನಂಬರ್‌ನಲ್ಲಿ ಮನೆ ನಿರ್ಮಿಸದೆ ಸುಳ್ಳು ಮಾಹಿತಿಯನ್ನು ನೀಡಿ ಬೇರೆ ಸರ್ವೇ ನಂಬರ್‌ನಲ್ಲಿ ಮನೆ ನಿರ್ಮಿಸಿದ ಕಾರಣ ವಸತಿ ಯೋಜನೆಯಡಿ ಮನೆ ನಿರ್ಮಾಣಕ್ಕೆ ಪಡೆದ ಅನುದಾನವನ್ನು ನಿಯಮಾನುಸಾರ ಬಡ್ಡಿ ಸಮೇತ ನಿಗಮಕ್ಕೆ ಪಾವತಿಸಲು 34 ನೆಕ್ಕಿಲಾಡಿ ಗ್ರಾ.ಪಂ. ಸದಸ್ಯೆ ಸುಜಾತ ಆರ್ ರೈ ಅವರಿಗೆ ಗ್ರಾ.ಪಂ. ಪಿಡಿಒ ಅವರು ನೊಟೀಸ್ ಜಾರಿಗೊಳಿಸಿದ್ದಾರೆ.

ಸುಜಾತ ಆರ್ ರೈಯವರಿಗೆ 2013-14ನೇ ಸಾಲಿನ ಬಸವ ವಸತಿ ಯೋಜನೆಯಡಿಯಲ್ಲಿ ಮನೆ ಮಂಜೂರಾತಿಯಾಗಿದ್ದು, ಮನೆ ನಿರ್ಮಾಣಕ್ಕಾಗಿ ಅವರು ಸರಕಾರಕ್ಕೆ 34 ನೆಕ್ಕಿಲಾಡಿ ಗ್ರಾಮದ ಸರ್ವೇ ನಂಬರ್ 89/17(ಪಿ2)ರಲ್ಲಿ 0.14 ಎಕರೆ ಜಮೀನನ್ನು ಉಪನೋಂದಣಾಧಿಕಾರಿಯವರ ಕಚೇರಿಯಲ್ಲಿ ಅಡಮಾನ ಮಾಡಿಕೊಟ್ಟಿದ್ದು, ವಸತಿ ನಿಗಮದಿಂದ ಅನುದಾನವನ್ನು ಪಡೆದುಕೊಂಡಿರುತ್ತಾರೆ. ಆದರೆ ಇವರು ಸರಕಾರಕ್ಕೆ ಅಡಮಾನ ಮಾಡಿಕೊಟ್ಟ ಜಮೀನಿನಲ್ಲಿ ಸರಕಾರದ ಅನುದಾನ ಪಡೆದ ಮನೆಯನ್ನು ನಿರ್ಮಿಸದೇ ಸರಕಾರಕ್ಕೆ ಸುಳ್ಳು ಮಾಹಿತಿ ನೀಡಿ ಇತರ ಸರ್ವೆ ನಂಬರ್‌ನ ಜಮೀನಿನಲ್ಲಿ ಮನೆ ರಚನೆ ಮಾಡಿದ್ದಾರೆಂದು ಅಲಿಮಾರ ಚಂದ್ರಹಾಸ ಶೆಟ್ಟಿಯವರು ಕರ್ನಾಟಕ ಲೋಕಾಯುಕ್ತ ಸಂಸ್ಥೆಯಲ್ಲಿ ದೂರು ದಾಖಲಿಸಿದ್ದರು. ಈ ದೂರಿನ ಮೇರೆಗೆ ಕೈಗೊಂಡ ಕ್ರಮಗಳ ಬಗ್ಗೆ ಸಾಮಾಜಿಕ ಕಾರ್ಯಕರ್ತ ಜತೀಂದ್ರ ಶೆಟ್ಟಿ ಅಲಿಮಾರ್ ಅವರು ೩೪ ನೆಕ್ಕಿಲಾಡಿ ಗ್ರಾ.ಪಂ.ನಲ್ಲಿ ಮಾಹಿತಿ ಹಕ್ಕಿನಲ್ಲಿ ಮಾಹಿತಿ ಕೇಳಿದ್ದರು.

ಅವರಿಗೆ ಇದೀಗ ಮಾಹಿತಿ ನೀಡಲಾಗಿದೆ. ಅದರಂತೆ, ಈ ದೂರಿನ ಮೇರೆಗೆ ದಕ್ಷಿಣ ಕನ್ನಡ ಜಿ.ಪಂ.ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರು ಪುತ್ತೂರು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕಾಧಿಕಾರಿಯವರಿಗೆ 2023ರ ಜ.11ರಂದು ಪತ್ರ ಬರೆದಿದ್ದು, ಅದರಲ್ಲಿ ಲೋಕಾಯುಕ್ತಕ್ಕೆ ಸಲ್ಲಿಸಿದ ದೂರಿನ ಕುರಿತು ಹಾಗೂ ಹೆಚ್ಚುವರಿ ನಿಬಂಧಕರು ವಿಚಾರಣೆಗಳು- 6 ಕರ್ನಾಟಕ ಲೋಕಾಯುಕ್ತ ಬೆಂಗಳೂರು ಇವರ ಪತ್ರ ಸಂಖ್ಯೆಯನ್ನು ಉಲ್ಲೇಖಿಸಿ, ಈ ದೂರಿನ ಮೇರೆಗೆ ಶ್ರೀಮತಿ ಸುಜಾತ ಆರ್ ರೈಯವರು ವಸತಿ ಯೋಜನೆಯಡಿ ಮನೆ ನಿರ್ಮಾಣಕ್ಕೆ ಪಡೆದುಕೊಂಡ ಅನುದಾನವನ್ನು ನಿಯಮಾನುಸಾರ ಬಡ್ಡಿ ಸಮೇತ ವಸೂಲಿ ಮಾಡಿ ನಿಗಮಕ್ಕೆ ಪಾವತಿಸಲು ಸೂಕ್ತ ಕ್ರಮ ವಹಿಸುವಂತೆ ಆದೇಶಿಸಲಾಗಿತ್ತು. ಈ ಆದೇಶದಂತೆ 2023ರ ಎ.6ರಂದು 34 ನೆಕ್ಕಿಲಾಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರು ಸುಜಾತ ಆರ್ ರೈಯವರಿಗೆ ನೊಟೀಸ್ ಜಾರಿಗೊಳಿಸಿದ್ದು, 2013-14ರ ಸಾಲಿನಲ್ಲಿ ಬಸವ ವಸತಿ ಕೋಡ್ ಸಂ.: 78118 ಯೋಜನೆಯಡಿ ಸರಕಾರದ ಅನುದಾನವನ್ನು ಪಡೆದುಕೊಂಡು ಸರ್ವೇ ನಂ. 89/17(ಪಿ2)ರಲ್ಲಿ ವಾಸದ ವಸತಿ ಮನೆಯನ್ನು ನಿರ್ಮಿಸದೆ ಸುಳ್ಳು ಮಾಹಿತಿಯನ್ನು ನೀಡಿ ಇತರ ಸರ್ವೆ ನಂಬ್ರದಲ್ಲಿ ವಸತಿಯನ್ನು ನಿರ್ಮಿಸಿರುವ ಕಾರಣ ದ.ಕ.ಜಿ.ಪಂ.ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರು ಹಾಗೂ ಪುತ್ತೂರು ತಾ.ಪಂ.ನ ಕಾರ್ಯನಿರ್ವಾಹಕಾಧಿಕಾರಿಯವರ ಆದೇಶದಂತೆ 2,20,428.91 ರೂ.ವನ್ನು ಮೆನೇಜಿಂಗ್ ಡೈರೆಕ್ಟರ್ ರಾಜೀವ್ ಗಾಂಧಿ ಹೌಸಿಂಗ್ ಕಾರ್ಪೋರೇಷನ್ ಲಿಮಿಟೆಡ್ ಬೆಂಗಳೂರು ಇವರ ಹೆಸರಿಗೆ ಡಿ.ಡಿ. ತೆಗೆದು ಏ.6ರಂದೇ ಗ್ರಾ.ಪಂ.ಗೆ ನೀಡತಕ್ಕದ್ದು, ತಪ್ಪಿದ್ದಲ್ಲಿ ಮುಂದಿನ ಆಗುಹೋಗುಗಳಿಗೆ ತಾವೇ ಜವಾಬ್ದಾರರಾಗಿರುತ್ತೀರಿ ಎಂದು ನೊಟೀಸ್‌ನಲ್ಲಿ ತಿಳಿಸಲಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಜತೀಂದ್ರ ಶೆಟ್ಟಿ ಅಲಿಮಾರ್ ಪತ್ರಿಕೆಗೆ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here