ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಪ್ರಕಟ; ಅಂಬಿಕಾ, ರಾಮಕುಂಜ, ಇಂದ್ರಪ್ರಸ್ಥ, ಆತೂರು ಆಯಿಶಾ, ಸಾಲ್ಮರ ಅಸ್ವಾಲಿಹಾ, ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಪ.ಪೂ ಶೇ.1೦೦ ತೇರ್ಗಡೆ ಫಲಿತಾಂಶ

0

ಕಲಾವಿಭಾಗ ವಿವೇಕಾನಂದದ ಮಂಜುಶ್ರೀ ರಾಜ್ಯದಲ್ಲಿ ತೃತೀಯ

ವಾಣಿಜ್ಯ ವಿಭಾಗ ರಾಜ್ಯದಲ್ಲಿ ವಿವೇಕಾನಂದದ ಆದಿತ್ಯ ನಾರಾಯಣ ತೃತೀಯ, ನರೇಂದ್ರದ ಪಲ್ಲವಿ 5ನೇ ಸ್ಥಾನ

ವಿಜ್ಞಾನ ವಿಭಾಗ: ಅಳಿಕೆಯ ಯೋಗೀಶ್ ರಾಜ್ಯದಲ್ಲಿ ತೃತೀಯ, ಜಿಲ್ಲೆಯಲ್ಲಿ ಪ್ರಥಮ, ವಿವೇಕಾನಂದದ ಆಶ್ರಯ ಪಿ.,ದೀಪ್ತಿಲಕ್ಷ್ಮೀಗೆ ಐದನೇ ರ‍್ಯಾಂಕ್

ಪುತ್ತೂರು:ಕಳೆದ ತಿಂಗಳು ನಡೆದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು ದ.ಕ.ಜಿಲ್ಲೆ ಪ್ರಥಮ ಸ್ಥಾನ ಪಡೆದುಕೊಂಡಿದ್ದು ಉಡುಪಿ ಜಿಲ್ಲೆ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಪುತ್ತೂರು, ಕಡಬ, ವಿಟ್ಲದ ವಿವಿಧ ಕಾಲೇಜುಗಳು ಉತ್ತಮ ಫಲಿತಾಂಶ ದಾಖಲಿಸಿವೆ. ಲಭ್ಯ ಮಾಹಿತಿಯಂತೆ, ಪುತ್ತೂರುನ ಅಂಬಿಕಾ ಪದವಿ ಪೂರ್ವ ಕಾಲೇಜು, ರಾಮಕುಂಜದ ಶ್ರೀ ರಾಮಕುಂಜೇಶ್ವರ ಪ.ಪೂ.ಕಾಲೇಜು,ಉಪ್ಪಿನಂಗಡಿ ಇಂದ್ರಪ್ರಸ್ಥ ಪ.ಪೂ.ಕಾಲೇಜು, ಆತೂರು ಆಯಿಷಾ ಹೆಣ್ಮಕ್ಕಳ ಪ.ಪೂ.ಕಾಲೇಜು,ಸಾಲ್ಮರ ಅಸ್ವಾಲಿಹಾ ವುಮೆನ್ಸ್ ಕಾಲೇಜು,ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜು,ನೆಲ್ಯಾಡಿ ಜ್ಞಾನೋದಯ ಬೆಥನಿ ಪ.ಪೂ.ಕಾಲೇಜು ಶೇ.ನೂರು ಫಲಿತಾಂಶ ಪಡೆದುಕೊಂಡಿದೆ. ಸರಕಾರಿ ಪ.ಪೂ.ಕಾಲೇಜುಗಳ ಪೈಕಿ ಮುಕ್ರಂಪಾಡಿ ಬಾಲಕಿಯರ ಸ.ಪ.ಪೂ.ಕಾಲೇಜು ವಾಣಿಜ್ಯ ಮತ್ತು ವಿಜ್ಞಾನ ವಿಭಾಗದಲ್ಲಿ ಶೇ.100 ಫಲಿತಾಂಶ ದಾಖಲಿಸಿದೆ.ನೆಲ್ಯಾಡಿ ಸಂತ ಜಾರ್ಜ್ ಪ.ಪೂ.ಕಾಲೇಜು ವಾಣಿಜ್ಯ ವಿಭಾಗ, ನೆಲ್ಯಾಡಿ ಜ್ಞಾನೋದಯ ಬೆಥನಿ ಪ.ಪೂ ವಾಣಿಜ್ಯ ವಿಭಾಗ, ಆಲಂಕಾರು ದುರ್ಗಾಂಬಾ ಪ.ಪೂ.ಕಾಲೇಜು ಕಲಾ ವಿಭಾಗಕ್ಕೆ ಶೇ.100 ಫಲಿತಾಂಶ ದೊರೆತಿದೆ.

ರಾಜ್ಯದಲ್ಲಿ ರ‍್ಯಾಂಕ್ ಪಡೆದವರು: ಕಲಾ ವಿಭಾಗದಲ್ಲಿ ವಿವೇಕಾನಂದ ಪ.ಪೂ.ಕಾಲೇಜಿನ ಮಂಜುಶ್ರೀ 591 ಅಂಕಗಳೊಂದಿಗೆ ರಾಜ್ಯದಲ್ಲಿ ತೃತೀಯ ರ‍್ಯಾಂಕ್ ಪಡೆದುಕೊಂಡಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ವಿವೇಕಾನಂದದ ಆದಿತ್ಯನಾರಾಯಣ 595 ಅಂಕಗಳೊಂದಿಗೆ ರಾಜ್ಯದಲ್ಲಿ ತೃತೀಯ ರ‍್ಯಾಂಕ್ ಪಡೆದುಕೊಂಡಿದ್ದು, ತೆಂಕಿಲ ನರೇಂದ್ರ ಪ.ಪೂ.ಕಾಲೇಜಿನ ಪಲ್ಲವಿಯವರು 593 ಅಂಕಗಳೊಂದಿಗೆ ರಾಜ್ಯದಲ್ಲಿ 5ನೇ ಸ್ಥಾನ ಪಡೆದುಕೊಂಡಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಅಳಿಕೆ ಶ್ರೀ ಸತ್ಯಸಾಯಿ ಲೋಕಸೇವಾ ಪ.ಪೂ.ಕಾಲೇಜಿನ ಯೋಗೀಶ್ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದು ರಾಜ್ಯದಲ್ಲಿ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ವಿವೇಕಾನಂದದ ಆಶ್ರಯ ಪಿ., ದೀಪ್ತಿಲಕ್ಷ್ಮೀ ತಲಾ 592 ಅಂಕಗಳೊಂದಿಗೆ ರಾಜ್ಯದಲ್ಲಿ ಐದನೇ ರ‍್ಯಾಂಕ್ ಪಡೆದುಕೊಂಡಿದ್ದಾರೆ.

ವಿವೇಕಾನಂದಕ್ಕೆ ಗರಿಷ್ಠ ಡಿಸ್ಟಿಂಕ್ಷನ್

ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಗರಿಷ್ಠ 341 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. 20 ವಿದ್ಯಾರ್ಥಿಗಳು 585ಕ್ಕಿಂತ ಅಧಿಕ ಅಂಕಗಳನ್ನು ಪಡೆದುಕೊಂಡಿದ್ದಾರೆ. ಅಂಬಿಕಾ ಪದವಿ ಪೂರ್ವ ಕಾಲೇಜಿನ 136 ಮಂದಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ರಾಮಕುಂಜ ರಾಮಕುಂಜೇಶ್ವರ ಪ.ಪೂ.ಕಾಲೇಜಿನ 64 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆಯಾಗಿದ್ದಾರೆ.

LEAVE A REPLY

Please enter your comment!
Please enter your name here