ನಿಡ್ಪಳ್ಳಿ: ಪಾಣಾಜೆ ಸುಬೋಧ ಪ್ರೌಢಶಾಲೆಯ 1997-98ನೇ ಸಾಲಿನ ಹತ್ತನೇ ತರಗತಿ ಹಿರಿಯ ವಿದ್ಯಾರ್ಥಿಗಳ ಸ್ನೇಹ ಮಿಲನ ಕಾರ್ಯಕ್ರಮ ‘ನೆನಪುಗಳ ಮೆರವಣಿಗೆ’ ಪಾಣಾಜೆ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಉಪೇಂದ್ರ ಬಲ್ಯಾಯ ದೇವಸ್ಯ ಇವರ ಅಧ್ಯಕ್ಷತೆಯಲ್ಲಿ ಶಾಲೆಯಲ್ಲಿ ಜರಗಿತು.
ದೇಶ ವಿದೇಶದ ನಾನಾ ಕಡೆಗಳಲ್ಲಿ ತಮ್ಮ ತಮ್ಮ ವೃತ್ತಿಗಳಲ್ಲಿ ನಿರತರಾಗಿರುವ ಹಿರಿಯ ವಿದ್ಯಾರ್ಥಿಗಳು ತಾವು ವಿದ್ಯಾರ್ಜನೆ ಮಾಡಿದ ಶಾಲೆಯಲ್ಲಿ ಒಟ್ಟಿಗೆ ಸೇರಿ ತಮಗೆ ಬೋಧಿಸಿದ ಶಿಕ್ಷಕರ ಹಿತವಚನಗಳನ್ನು ಆಲಿಸಿದರು. ಸಮಾರಂಭದ ಅಧ್ಯಕ್ಷರು, ಶಾಲಾ ಸಂಚಾಲಕರು ಹಾಗೂ ಶಿಕ್ಷಕರು ಜೊತೆಯಲ್ಲಿ ದೀಪ ಪ್ರಜ್ವಲನೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅಗಲಿದ ಗುರುಗಳಿಗೆ ಮತ್ತು ಸಹಪಾಠಿಗಳಿಗೆ ಮೌನ ಪ್ರಾರ್ಥನೆ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು. ಗುರುಗಳಾದ ಪಿಲಿಂಗಲ್ಲು ಕೃಷ್ಣ ಭಟ್, ಮೊಳಕ್ಕಾಲು ಶ್ರೀಕೃಷ್ಣ ಭಟ್, ಸಿ. ಸುಬ್ರಹ್ಮಣ್ಯ ಶಾಸ್ತ್ರಿ, ಎಸ್ ಕೆ ನಾರಾಯಣ ಭಟ್, ಪುರಂದರ ಎಂ ಜಿ, ನಿರ್ಮಲ ಕೆ, ಸದಾಶಿವ ಎಸ್ ವಿ, ಸಂಘದ ಅಧ್ಯಕ್ಷ ಉಪೇಂದ್ರ ಬಲ್ಯಾಯ, ಸಂಚಾಲಕ ಮಹಾಬಲೇಶ್ವರ ಭಟ್, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರವೀಂದ್ರ ಭಂಡಾರಿ ಹಾಗೂ ಪ್ರಸ್ತುತ ಶಿಕ್ಷಕರಾದ ವಿನುತ ಕುಮಾರಿ ಬಿ, ಸುಧೀರ್ ಎಸ್ ಪಿ, ಕೀರ್ತಿ ಸುಬ್ರಹ್ಮಣ್ಯ ಹಾಗೂ ಖಜಾಂಜಿ ಎ ಎನ್ ಕೊಳಂಬೆ ಅವರನ್ನು ಶಾಲು ಹೊದೆಸಿ ಸ್ಮರಣಿಕೆ ನೀಡಿ ಹಿರಿಯ ವಿದ್ಯಾರ್ಥಿಗಳು ಸನ್ಮಾನಿಸಿದರು.
ಶಾಲಾ ಸಂಚಾಲಕರು ಪ್ರಕೃತ ಶಾಲೆಯ ಸ್ಥಿತಿಯನ್ನು ವಿವರಿಸಿ ಹಿರಿಯ ವಿದ್ಯಾರ್ಥಿಗಳ ಸಹಕಾರವನ್ನು ಕೋರಿದರು. ಹಿರಿಯ ವಿದ್ಯಾರ್ಥಿಗಳಾದ ರಾಜೇಶ್ ಎ ಆರ್, ಜಯಂತಿ, ಸೀತಾರಾಮ ಭರಣ್ಯ ತಾವು ಶಾಲೆಯಲ್ಲಿ ಕಳೆದ ದಿನಗಳನ್ನು ನೆನಪಿಸಿಕೊಳ್ಳುತ್ತಾ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಬ್ಯಾಚಿನ ಎಲ್ಲಾ ವಿದ್ಯಾರ್ಥಿಗಳು ತಮ್ಮ ಗುರುಗಳಿಂದ ಹಾಗೂ ಆಡಳಿತ ಮಂಡಳಿ ಸದಸ್ಯರಿಂದ ನೆನಪಿನ ಕಾಣಿಕೆಗಳನ್ನು ಪಡೆದುಕೊಂಡರು. ಕಾರ್ಯಕ್ರಮಕ್ಕೆ ಸಹಕರಿಸಿದ ಬಿಬಿ ಕ್ರಿಯೇಷನ್ಸ್ ನ ಹರೀಶ್ ನೆಲ್ಲಿತ್ತಿಮಾರು, ಪ್ರದೀಪ್ ಪಾಣಾಜೆ ಹಾಗೂ ಮಾ.ಆನಘ ಅವರನ್ನು ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು.
ಪ್ರವೀಣ ಪ್ರಾರ್ಥಿಸಿ, ಅಮೃತ್ ನಾರಾಯಣ ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರು. ಸೀತಾರಾಮ ಭರಣ್ಯ ಕಾರ್ಯಕ್ರಮದ ರೂವಾರಿ ಜಯಕುಮಾರ್ ರೈ ಅವರ ಕಾರ್ಯವನ್ನು ಶ್ಲಾಘಿಸುತ್ತಾ ವಂದಿಸಿದರು. ಅನ್ನಪೂರ್ಣ ಎಸ್ ಆರ್ ಕಾರ್ಯಕ್ರಮ ನಿರೂಪಿಸಿದರು.
ಶಾಲೆಗೆ ರೂ 1,56,500 ದೇಣಿಗೆ ಹಸ್ತಾಂತರ
ಹಿರಿಯ ವಿದ್ಯಾರ್ಥಿಗಳಾದ ಜಯಕುಮಾರ್ ರೈ ಹಾಗೂ ಗಿರೀಶ್ ಭಟ್ ಬಾಳೆಮೂಲೆ ಅವರು ಈ ಬ್ಯಾಚಿನ ಹಿರಿಯ ವಿದ್ಯಾರ್ಥಿಗಳು ಒಟ್ಟು ಸೇರಿ ಸಂಗ್ರಹಿಸಿದ ರೂ.1,56,500 ನ್ನು ಶಾಲಾಭಿವೃದ್ಧಿ ಕೆಲಸಗಳಿಗಾಗಿ ಸಂಘದ ಅಧ್ಯಕ್ಷರು ಹಾಗೂ ಶಾಲಾ ಸಂಚಾಲಕರಿಗೆ ದೇಣಿಗೆಯಾಗಿ ಹಸ್ತಾಂತರಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸಹ ಭೋಜನ ನಡೆಯಿತು. ಆ ಸಮಯದಲ್ಲಿ ಪ್ರವೀಣ, ಅನ್ನಪೂರ್ಣ ಹಾಗೂ ಗಿರಿ ವೆಂಕಟೇಶ ಹಾಡುಗಳನ್ನು ಹಾಡಿದರು.
