‘ಬಿಜೆಪಿಯವರು ಲಂಚ ಭ್ರಷ್ಟಾಚಾರದ ಕೆಲಸ ಮಾಡುತ್ತಾರೆ-ಅವರಿಗೆ ಬುದ್ಧಿ ಕಲಿಸುವ ಕೆಲಸ ಮಾಡುತ್ತೇನೆ’ ಎಂದು ಹೇಳಿದ್ದ ನನ್ನ ಮಾತನ್ನು ತಿರುಚಿ ಪ್ರಚಾರ ಮಾಡಲಾಗಿದೆ; ಭ್ರಷ್ಟಾಚಾರಿಗಳಿಗೆ ಬುದ್ಧಿ ಕಲಿಸುವ ಹೇಳಿಕೆಗೆ ಈಗಲೂ ಬದ್ಧ- ಅಶೋಕ್ ಕುಮಾರ್ ರೈ

0

ಪುತ್ತೂರು: ನಾಮಪತ್ರ ಸಲ್ಲಿಕೆ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ನಾನು ಮಾಡಿದ ಭಾಷಣವನ್ನು ತಿರುಚಲಾಗಿದೆ. ನನ್ನ ಹೇಳಿಕೆಯನ್ನು ಕತ್ತರಿಸಿ, ತಪ್ಪಾದ ರೀತಿಯಲ್ಲಿ ಬಿಂಬಿಸುವ ಕೆಲಸ ಆಗಿದೆ. ನಾನು ಹೇಳಿರುವುದು ಏನೆಂದರೆ ಬಿಜೆಪಿಯವರು ಅಕ್ರಮ ಸಕ್ರಮ ಮತ್ತು 94ಸಿಯಲ್ಲಿ ಲಂಚ ಭ್ರಷ್ಟಾಚಾರದ ಕೆಲಸವನ್ನು ಮಾಡುತ್ತಿದ್ದಾರೆ. ನಿಮಗೆ ಬುದ್ದಿ ಕಲಿಸುವ ಕೆಲಸ ಮಾಡುತ್ತೇನೆ ಎಂದು. ಅದಕ್ಕೆ ಈಗಲೂ ನಾನು ಬದ್ಧನಾಗಿದ್ದೇನೆ. ಭ್ರಷ್ಟಾಚಾರಿಗಳಿಗೆ ಬುದ್ಧಿ ಕಲಿಸುತ್ತೇನೆ ಎನ್ನುವ ಹೇಳಿಕೆಗೆ ನಾನು ಈಗಲೂ ಬದ್ಧನಾಗಿದ್ದೇನೆ. ನಾನು ಎಂದಿಗೂ ಭಾರತೀಯ ಜನತಾ ಪಕ್ಷ ಅಥವಾ ಬಿಜೆಪಿ ಕಾರ್ಯಕರ್ತರನ್ನು ನೋಡಿಕೊಳ್ಳುತ್ತೇನೆ ಎಂದು ಹೇಳಿಲ್ಲ ಎಂದು ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಹೇಳಿದ್ದಾರೆ.

ಎ.21ರಂದು ಸುದ್ದಿ ಚಾನೆಲ್ ಜೊತೆಗೆ ಮಾತನಾಡಿದ ಅವರು, ಇನ್ನಾದರೂ ಸುಳ್ಳು ಮಾಹಿತಿಗಳನ್ನು ಕೊಡುವುದನ್ನು ನಿಲ್ಲಿಸಿ. ಇನ್ನಾದರೂ ಇಂತಹ ವಿಚಾರಗಳನ್ನು ಬಿಡಿ. ಇನ್ನೊಬ್ಬರನ್ನು ನಿಂದಿಸಿ ಏಕವಚನದಲ್ಲಿ ಮಾತನಾಡುವುದನ್ನು ಬಿಟ್ಟುಬಿಡಿ. ನೀವು ಹಿರಿಯರು, ಪಕ್ಷದಲ್ಲಿ ಗೌರವಾನ್ವಿತರು. ಇಂತಹ ಮಾತುಗಳಿಂದ ನಿಮ್ಮ ಗೌರವ ಹೋಗುತ್ತದೆ ವಿನಃ ಬೇರೆಯವರ ಗೌರವ ಹೋಗುವುದಿಲ್ಲ. ಜನರಿಗೆ ಅಶೋಕ್ ರೈ ಏನೆಂದು ಗೊತ್ತು. ಗೊತ್ತಿದ್ದು ಯಾರಿಗೂ ಅನ್ಯಾಯ ಮಾಡಿದವನಲ್ಲ. ಹೀಯಾಳಿಸಿದವನಲ್ಲ, ಅಷ್ಟು ದೊಡ್ಡ ವ್ಯಕ್ತಿಯೂ ಅಲ್ಲ. ಮೋದಿಯವರ ಬಗ್ಗೆ, ಇನ್ನೊಂದು ರಾಷ್ಟ್ರೀಯ ಪಕ್ಷಕ್ಕೆ ಇಂತಹ ಮಾತುಗಳನ್ನು ಹೇಳುವ ಅಶೋಕ್ ರೈ ನಾನಲ್ಲ. ಅಷ್ಟು ಪ್ರಜ್ಞೆ ನನಗಿದೆ. ಆದರೆ ನನ್ನ ಮಾತನ್ನು ತಿರುಚಿ ಪಕ್ಷದವರಿಗೆ ಬೇರೆಬೇರೆ ವಿಚಾರವನ್ನು ಮುಟ್ಟಿಸುವುದು ಸರಿಯಲ್ಲ. ಚುನಾವಣೆಯಲ್ಲಿ ಇಂತಹ ವಿಚಾರಗಳು ಬರುವುದು ಸಹಜ. ನಾನು ಮತಕೇಳುವುದು ಅಭಿವೃದ್ಧಿ ವಿಚಾರದಲ್ಲಿ. ಸಮಾಜದ ಕಟ್ಟಕಡೆಯ ವ್ಯಕ್ತಿಯ ಕಣ್ಣೀರು ಒರೆಸುವ ಕೆಲಸ ಮಾಡುತ್ತೇನೆ. ಯಾರು ಭ್ರಷ್ಟಾಚಾರ ಮಾಡ್ತಾರೋ ಅವರಿಗೆ ವಿರೋಧ ಮಾಡುತ್ತೇನೆ. ಇದೇ ನನ್ನ ಧ್ಯೇಯ, ಉದ್ದೇಶ. ಮತದಾರರನ್ನು ದಾರಿತಪ್ಪಿಸಲು ಯಾರಿಗೂ ಸಾಧ್ಯವಿಲ್ಲ. ಈ 5 ವರ್ಷದಲ್ಲಿ ಮತದಾರರಿಗೆ ಯಾರು ಏನು ಎನ್ನುವುದು ಗೊತ್ತಾಗಿದೆ. ಹಿಂದುತ್ವದ ವಿಚಾರಗಳನ್ನೇ ಕೆದಕಿ ಮತ ತೆಗೆಯಲು ಪ್ರಯತ್ನಪಟ್ಟರೆ ಅದು ಖಂಡಿತಾ ಈ ಬಾರಿ ಯಶಸ್ಸಾಗುವುದಿಲ್ಲ. 5 ವರ್ಷದ ಬಜೆಟ್‌ನಲ್ಲಿ ಒಂದು ರೂ.ಗಳನ್ನೂ ನೀಡದ ಸರಕಾರ ಇಂತಹ ಮಾತುಗಳನ್ನು ಹೇಳಿ ಮತ ಪಡೆಯುತ್ತೇವೆ ಎಂದರೆ ಅದು ಅವರ ತಪ್ಪು ಭಾವನೆ. ನಾವು ಬೇರೆಯವರ ಬಗ್ಗೆ ಮಾತನಾಡುವುದಿಲ್ಲ. ನಮ್ಮ ಬಗ್ಗೆ ಮಾತನಾಡಿ ಮತದಾರರ ಬಳಿ ಮತ ಕೇಳುವ ಕೆಲಸ ಮಾಡುತ್ತೇವೆ. ಅವರಿಗೆ ಈಗ ದಿಕ್ಕುತಪ್ಪಿದೆ. ಅದಕ್ಕಾಗಿ ಈ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಬಿಜೆಪಿಯಲ್ಲಿ ತುಳಿದಿದ್ದರಿಂದಲ್ಲವೇ ನಾನು ಕಾಂಗ್ರೆಸ್‌ಗೆ ಬಂದಿರುವುದು? ಅಲ್ಲಿ ಅವರು ಯಾರನ್ನು ಮೇಲೆ ಬರಲು ಬಿಟ್ಟಿದ್ದಾರೆ? ಒಂದು ರಾಷ್ಟ್ರೀಯ ಪಕ್ಷಕ್ಕೆ ಪುತ್ತೂರಿನಲ್ಲಿ ಯಾರೂ ಅಭ್ಯರ್ಥಿಗಳಿರಲಿಲ್ವಾ? ಅವರು ಹುಡುಕಿ ಹುಡುಕಿ ಅಭ್ಯರ್ಥಿಯನ್ನು ಸುಳ್ಯದಿಂದ ತಂದಿದ್ದಾರೆ. ಪುತ್ತೂರಲ್ಲಿ ಬಿಜೆಪಿಗೆ ಅಭ್ಯರ್ಥಿ ಸಿಗಲಿಲ್ಲವೇ? ಇಲ್ಲಿ ಯಾರೂ ಅರ್ಹರಿಲ್ಲವೇ? ನಮ್ಮಂತಹ ಪಕ್ಷಕ್ಕೆ ಕೆಲಸ ಮಾಡಿದವರನ್ನು, ಯುವಕರನ್ನು ತುಳಿದು ತುಳಿದು ಅವರಿಗೆ ಡಮ್ಮಿ ಕ್ಯಾಂಡಿಡೇಟ್‌ಗಳು ಬೇಕು. ಈ ಬಾರಿ ಮತದಾರರು ಬುದ್ಧಿ ಕಲಿಸುವ ಕೆಲಸ ಮಾಡುತ್ತಾರೆ. ಮತದಾರರು ನಿರ್ಧಾರ ಮಾಡುತ್ತಾರೆ. ಮಹಾಲಿಂಗೇಶ್ವರ ಅದನ್ನು ತೋರಿಸುತ್ತಾನೆ ಎಂದು ಅಶೋಕ್ ರೈ ಹೇಳಿದರು.

ನಾನು ಕಳೆದ 15-20 ವರ್ಷಗಳಿಂದ ನಿರಂತರ ಕೆಲಸ ಮಾಡುತ್ತಿದ್ದೇನೆ. ಈಗ ಕಾಂಗ್ರೆಸ್‌ಗೆ ಬಂದಿದ್ದೇನೆ. ನಿಷ್ಠಾವಂತರಾಗಿ ಕೆಲಸ ಮಾಡುವವರಿಗೆ ಅಲ್ಲಿ ಅವಕಾಶಗಳು ಇಲ್ಲ. ಅಶೋಕ್ ರೈ ಹೋಗಿಬಿಟ್ಟರೆ ಅರುಣ್ ಪುತ್ತಿಲ ಇದ್ದರಲ್ಲವೇ? ಅವರಿಗೆ ನೀಡಬಹುದಿತ್ತಲ್ವಾ? ಶಕ್ತ ಅಭ್ಯರ್ಥಿಗೆ ನೀಡಬಹುದಿತ್ತಲ್ವಾ? ಅವರಿಗೆ ಏನು ಕಡಿಮೆ ಆಗಿದೆ? ಇದರ ಅರ್ಥ ಏನೆಂದರೆ ಬಿಜೆಪಿಗರಿಗೆ ಡಮ್ಮಿ ಕ್ಯಾಂಡಿಡೇಟ್‌ಗಳು ಬೇಕು. ಅವರು ಹೇಳಿದಂತೆ ಕೇಳುವವರು ಬೇಕು, ಅದಕ್ಕಾಗಿ ಈ ರೀತಿ ಮಾಡಿದ್ದಾರೆ ಎಂದು ಅಶೋಕ್ ಕುಮಾರ್ ರೈ ಹೇಳಿದರು. ಕಾಂಗ್ರೆಸ್ ಅಭ್ಯರ್ಥಿಯಾಗಿ ನನ್ನ ನಾಮಪತ್ರ ಅಂಗೀಕಾರಗೊಂಡಿದೆ. ಬೂತ್ ಮಟ್ಟದಿಂದ ಹೇಗೆ ಕಾರ್ಯೋನ್ಮುಖರಾಗಬೇಕು ಎನ್ನುವ ಬಗ್ಗೆ ತಯಾರಿಯಲ್ಲಿದ್ದಾರೆ. ಕಾಂಗ್ರೆಸ್ ಪದಾಧಿಕಾರಿಗಳು, ಬೂತ್ ಮಟ್ಟದ ಕಾರ್ಯಕರ್ತರು ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here