ಪುತ್ತೂರು: ಕಳೆದ 19 ವರ್ಷಗಳಿಂದ ಕಲಾ ಸೇವೆ ನೀಡುತ್ತಿರುವ ವೀರಮಂಗಲ ಶ್ರೀ ಕೃಷ್ಣ ಕಲಾ ಕೇಂದ್ರದ 20ನೇಯ ಸಂಭ್ರಮಾಚರಣೆಯು ಎ.23ರಂದು ವೀರಮಂಗಲ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಕುಮಾರಧಾರಾ ಸಭಾ ಭವನದಲ್ಲಿ ನೆರವೇರಿತು. 20ನೇ ಸಂಭ್ರಮಾಚರಣೆಯ ಅಂಗವಾಗಿ ವಿಂಶತಿ ನೃತ್ಯೋತ್ಸವ ಎಂಬ ವಿನೂತನ ಕಾರ್ಯಕ್ರಮ ಹಾಗೂ ಸಾಮೂಹಿಕ ಸಂಜೀವಿನಿ ಮೃತ್ಯುಂಜಯ ಹೋಮ ಹಾಗೂ ನೂರಾರು ವಿದ್ಯಾರ್ಥಿಗಳಿಂದ ನಡೆದ ಗೀತಾ ಗಾಯನ, ಗೀತಾ ಮಾಧುರ್ಯ, ಭರತನಾಟ್ಯ ಹಾಗೂ ನೃತ್ಯರೂಪಕಗಳು ಪ್ರೇಕ್ಷಕರ ಮನಸೋರೆಗೊಳಿಸಿತು.
ಕಾರ್ಯಕ್ರಮದ ಪ್ರಾರಂಭದಲ್ಲಿ ಬೆಳಿಗ್ಗೆ ಶ್ರೀ ವಿಷ್ಣು ಸಹಸ್ರ ನಾಮಾರ್ಚನೆ ಮತ್ತು ಪವಮಾನಾಭಿಷೇಕಗಳೊಂದಿಗೆ ಕಾರ್ಯಕ್ರಮಗಳಿಗೆ ಚಾಲನೆ ದೊರೆಯಿತು. ಬಳಿಕ ವೇ.ಮೂ ಶ್ರೀವತ್ಸ ಕೆದಿಲಾಯರವರ ನೇತೃತ್ವದಲ್ಲಿ ಸಾಮೂಹಿಕ ಮೃತ್ಯುಂಜಯ ಹೋಮ ನಡೆಯಿತು. ಇದೇ ಸಂದರ್ಭದಲ್ಲಿ ಸಂಸ್ಥೆಯ ನಿರ್ದೇಶಕರು ಹಾಗೂ ವಿದ್ಯಾರ್ಥಿಗಳಿಂದ ದಾಸ ಸಂಕೀರ್ತನೆಗಳು ನೆರವೇರಿತು.
ಸಭಾ ಕಾರ್ಯಕ್ರಮ, ಆಶೀರ್ವಚನ, ಸನ್ಮಾನ, ಪುಸ್ತಕ ಬಿಡುಗಡೆ:
ವಿಂಶತಿ ನೃತ್ಯೋತ್ಸವದ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಮಾತನಾಡಿ, ಸಂಗೀತ, ಕಲೆಗಳು ಭಾರತ ದೇಶದ ಮೌಲ್ಯಗಳು. ಕಲೆಯಿಂದ ಸಂಸ್ಕಾರ ಉಳಿದಿದೆ ಮತ್ತು ಕೌಶಲ್ಯ ವೃದ್ಧಿಯಾಗಿದೆ. ಕಲಿಕೆಗೆ ಪರಿಶ್ರಮ ಮುಖ್ಯ. ಪರಿಶ್ರಮವಿಲ್ಲದೆ ಯಾವುದೇ ವಿದ್ಯೆ ಕರಗತವಾಗಲು ಸಾಧ್ಯವಿಲ್ಲ. ಕಲೆಯಲ್ಲಿ ನಮಗರಿವಿಲ್ಲದ ಶಾರೀರಿಕ, ಮಾನಸಿಕ ಸ್ವಾಸ್ಥ್ಯ ಅಡಗಿದೆ. ಕಲಾ ಕ್ಷೇತ್ರದಲ್ಲಿ ಅಭಿನಯಕ್ಕಿಂತ ಅನುಭವ ಪ್ರಾಮುಖ್ಯವಾಗಿದೆ. ನಿರಂತರವಾಗಿ ಅಭ್ಯಾಸ ಮಾಡುವವನೇ ನಿಜವಾದ ವಿದ್ಯಾರ್ಥಿಯಾಗಲು ಸಾಧ್ಯ. ತಾಳ್ಮೆ, ಸಹನೆ ಹಾಗೂ ಕಠಿಣ ಪರಿಶ್ರಮದ ಮೂಲಕ ವಿದ್ಯೆಯನ್ನು ಕರಗತ ಮಾಡಿಕೊಳ್ಳಬೇಕು ಎಂದು ಹೇಳಿದ ಸ್ವಾಮಿಜೀಯವರು ಗೋಪಾಲಕೃಷ್ಣರವರು ತಾನು ನೃತ್ಯ ವಿದ್ಯಾಭ್ಯಾಸ ಪಡೆದು ಶ್ರೀಕೃಷ್ಣನ ಹೆಸರಿನಲ್ಲಿ ಕಲಾ ಕೇಂದ್ರ ಪ್ರಾರಂಭಿಸಿ ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡುವುದಲ್ಲದೆ ಉತ್ತಮ ಸಾಹಿತ್ಯ ಒಳಗೊಂಡ ಪುಸ್ತಕವನ್ನು ತಾನೇ ರಚನೆಯ ಮಾಡಿರುವುದು ಶ್ಲಾಘನೀಯ. ಈ ಸಂಸ್ಥೆಯು ಸಹಸ್ರಾರು ವರ್ಷಗಳ ಕಾಲ ಮುನ್ನಡೆಯಲಿ ಎಂದು ಅವರು ಆಶಿಸಿದರು.
ಗೋಪಾಲಕೃಷ್ಣರವರು ಕಲಾ ಪ್ರಪಂಚಕ್ಕೆ ಆಸ್ತಿಯಾಗಲಿ- ರಾಧಾಕೃಷ್ಣ ಶಗ್ರಿತ್ತಾಯ:
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ವೀರಮಂಗಲ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಅರ್ಚಕ ರಾಧಾಕೃಷ್ಣ ಶಗ್ರಿತ್ತಾಯ ಮಾತನಾಡಿ, ಮನುಷ್ಯ ಸಂಸ್ಕಾರ ಉಳಿಸುವಲ್ಲಿ ಸಂಗೀತ ಕಲೆಗಳು ಸಹಕಾರಿ. ಗೋಪಾಲಕೃಷ್ಣರವರು ತಾನು ಪಡೆದ ವಿದ್ಯೆಯನ್ನು ಸಂಸ್ಥೆಯ ಮೂಲಕ ಪುತ್ತೂರು ಸುತ್ತ ಮುತ್ತಲಿನ ವಿದ್ಯರ್ಥಿಗಳಿಗೆ ತರಬೇತಿ ನೀಡುವ ಮೂಲಕ ಕಲೆಯ ವ್ಯಾಪ್ತಿ ವಿಸ್ತಾರಗೊಳಿಸುವಲ್ಲಿ ಕಲಾ ಸೇವೆ ನೀಡುತ್ತಿದ್ದಾರೆ. ಇವರು ಪಾರಂಪರಿಕ ನೃತ್ಯಗಳಿಗೆ ಸೀಮಿತವಾಗಿರದೆ, ನೆಲದ ದೈವ, ದೇವರ ಕಥೆಗಳನ್ನು ನೃತ್ಯ ರೂಪಕಗಳಾಗಿ ವಿದ್ಯಾರ್ಥೀಗಳ ಮೂಲಕ ಪ್ರದರ್ಶಿಸಿ ಪೌರಾಣಿಕತೆ, ಇತಿಹಾಸವನ್ನು ತಿಳಿಯಲು ಸಹಕಾರಿಯಾಗಿದ್ದಾರೆ. ಇವರ ಕಲಾ ಸೇವೆ ನೂರರು ವರ್ಷಗಳ ಮುನ್ನಡೆದು ಕಲಾ ಪ್ರಪಂಚಕ್ಕೆ ಆಸ್ತಿಯಾಗಲಿ ಎಂದು ಹಾರೈಸಿದರು.
ಕಲಾಸೇವೆ ನಿರಂತರವಾಗಿರಬೇಕು-ಸುದರ್ಶನ್ ಎಂ.ಎಲ್ ಭಟ್:
ಅಧ್ಯಕ್ಷತೆ ವಹಿಸಿದ್ದ ಪುತ್ತೂರು ಶ್ರೀಶಾರದಾ ಕಲಾ ಕೇಂದ್ರದ ಕಾರ್ಯವಾಹಕ ನಿರ್ದೇಶಕ ಸುದರ್ಶನ್ ಎಂ.ಎಲ್ ಭಟ್ ಮಾತನಾಡಿ, ಕಲಾ ಕ್ಷೇತ್ರದಲ್ಲಿ ಸಿಗುವಷ್ಟು ಸಂತೋಷ ಬೇರೆ ಯಾವ ಕ್ಷೇತ್ರದಲ್ಲಿಯೂ ಪಡೆಯಲು ಸಾಧ್ಯವಿಲ್ಲ. ಕಲಾ ಕ್ಷೇತ್ರದಲ್ಲಿ ವಿದ್ವತ್ ಪಡೆದ ಬಳಿಕ ಸ್ಥಗಿತಗೊಳಿಸದೇ ತಾನು ಪಡೆದ ವಿದ್ಯೆಯನ್ನು ಇತರರಿಗೂ ಧಾರೆ ಎರೆಯುವ ಮೂಲಕ ಅದು ನಿರಂತರವಾಗಿ ಒಂದು ತಲೆಮಾರಿನಿಂದ ಇನ್ನೊಂದು ತಲೆಮಾರಿಗೆ ಹರಿಯುತ್ತಿರಬೇಕು. ವಿದ್ವಾನ್ ಗೋಪಾಲಕೃಷ್ಣರವರು ಬಹಳ ಪರಿಶ್ರಮದಿಂದ ಅಭ್ಯಾಸ ಪಡೆದುಕೊಂಡು ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ. ವೀರಮಂಗಲದ ಜನತೆ ಅವರಿಗೆ ಬೆನ್ನೆಲುಬಾಗಿ ನಿಂತಿರುವುದರಿಂದ ಸಂಸ್ಥೆ 20 ವರ್ಷಗಳ ಕಾಲ ಮುನ್ನಡೆಯಲು ಸಹಕಾರಿಯಾಗಿದೆ ಎಂದರು.
ಸಂಸ್ಥೆ ಬೆಳೆಯಲು ಊರವರ, ಪೋಷಕರ ಸಹಕಾರ ಅಗತ್ಯ-ವಿದ್ವಾನ್ ಚಂದ್ರಶೇಖರ ನಾವಡ:
ಸುರತ್ಕಲ್ ನಾಟ್ಯಾಂಜಲಿ ಕಲಾ ಅಕಾಡೆಮಿಯ ನಿರ್ದೇಶಕರು, ಕರ್ನಾಟಕ ಕರಾವಳಿ ನೃತ್ಯ ಕಲಾ ಪರಿಷತ್‌ನ ಉಪಾಧ್ಯಕ್ಷ ಕರ್ನಾಟಕ ಕಲಾಶ್ರೀ ವಿದ್ವಾನ್ ಚಂದ್ರಶೇಖರ ನಾವಡ ಮಾತನಾಡಿ, ಭರತನಾಟ್ಯ ಒಂದೆರಡು ದಿನಗಳ ತರಬೇತಿಯಿಂದ ಪಡೆಯಲು ಸಾಧ್ಯವಿಲ್ಲ. ಸತತವಾದ ತರಬೇತಿ, ಕಠಿಣ ಪರಿಶ್ರಮ ಅವಶ್ಯಕತೆಯಿದೆ. ತಾನು ಪಡೆದ ವಿದ್ಯೆಯ ಮೂಲಕ ಕಲಾ ಕೇಂದ್ರ ಪ್ರಾರಂಭಿಸಿ, ಅದರ ಮೂಲಕ ಗ್ರಾಮೀಣ ಪ್ರದೇಶದ ನೂರಾರು ಮಂದಿ ವಿದ್ಯಾರ್ಥಿಗಳಿಗೆ ಧಾರೆ ಎರೆಯುತ್ತಿರುವುದು ಶ್ಲಾಘನೀಯ. ತನ್ನ ಕಠಿನ ಪರಿಶ್ರಮದ ಮೂಲಕ ಗೋಪಾಲಕೃಷ್ಣರವರು ಯಶಸ್ಸು ಗಳಿಸಲು ಸಾಧ್ಯವಾಗಿದೆ. ಸಂಸ್ಥೆ ಬೆಳೆಯಲು ಊರವರ ಹಾಗೂ ಪೋಷಕರ ಸಹಕಾರ ಅಗತ್ಯ ಎಂದರು.
ಗೋಪಾಲಕೃಷ್ಣ ತನ್ನ ಪ್ರಥಮ ವಿದ್ಯಾರ್ಥಿ-ಸುಮ ರಾಮ್‌ಪ್ರಸಾದ್:
ಬೆಂಗಳೂರು ಶ್ರೀ ಶಾರದಾ ಕಲಾ ಕೇಂದ್ರದ ನಿರ್ದೇಶಕಿ ಸುಮಾ ರಾಮ್‌ಪ್ರಸಾದ್ ಮಾತನಾಡಿ, ತಾನು ಭರತನಾಟ್ಯ ಶಿಕ್ಷಣ ನೀಡಿದ ವಿದ್ಯಾರ್ಥಿಗಳಲ್ಲಿ ಪುರುಷರ ವಿಭಾಗದಲ್ಲಿ ಗೋಪಾಲಕೃಷ್ಣರವರು ನನ್ನ ಪ್ರಥಮ ವಿದ್ಯಾರ್ಥಿಯಾಗಿದ್ದಾರೆ. ಇವರಿಗೆ ತರಬೇತಿ ನೀಡಿದ ಬಳಿಕವೇ ಹುಡುಗರಿಗೆ ಭರತನಾಟ್ಯ ತರಬೇತಿ ಪ್ರಾರಂಭಿಸಿದ್ದೇನೆ. ಅಪಾರ ಗುರುಭಕ್ತಿ ಹೊಂದಿರುವ ಗೋಪಾಲಕೃಷ್ಣರವರು ಬಹಳಷ್ಟು ಶ್ರದ್ಧೆ ಹಾಗೂ ಆಸಕ್ತಿಯಿಂದ ನಾಟ್ಯ ತರಬೇತಿ ಪಡೆದುಕೊಂಡು ಕಳೆದ ಇಪ್ಪತ್ತು ವರ್ಷಗಳಿಂದ ಸಂಸ್ಥೆಯನ್ನು ಮುನ್ನಡೆಸಿ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿರುವ ಗೋಪಾಲಕೃಷ್ಣರವರ ಸಾಧನೆಯನ್ನು ಶ್ಲಾಫಿಸಿದರು.
ಶಾಸ್ತ್ರೀಯ ಕಲೆಗಳಿಂದ ಸಂಸ್ಕಾರಯುತವಾದ ಜೀವನ-ರೂಪಲೇಖಾ:
ದ.ಕ ಜಿಲ್ಲಾ ಸಂಸ್ಕಾರ ಭಾರತಿಯ ಉಪಾಧ್ಯಕ್ಷೆ ರೂಪಲೇಖಾ ಮಾತನಾಡಿ, ಶಾಸ್ತ್ರೀಯ ಕಲೆಗಳಿಂದಾಗಿ ದೇಶದ ಪುರಾತನ ಸಂಸ್ಕೃತಿಗಳು ಬೆಳೆದು ಬಂದಿದೆ. ಇದು ದೈವತ್ವವಾದ ಕಲೆ. ಮಕ್ಕಳಿಗೆ ಕಲಾ ಶಿಕ್ಷಣದ ಜೊತೆಗೆ ಸಂಸ್ಕಾರಯುತವಾದ ಜೀವನವನ್ನು ನೀಡುತ್ತದೆ. ಶಾಸ್ತ್ರ ಸಂಬಂಧಿಸಿದ ಕಲೆಯಾಗಿರುವುದರಿಂದ ಗುರುಗಳ ಮೂಲಕವೇ ಅಭ್ಯಸಿಸಬೇಕು. ಯೂಟ್ಯೂಬ್ ಮೂಲಕ ಅಭ್ಯಸಿಸುವುದು ಸರಿಯಲ್ಲ ಎಂದರು. ಶ್ರೀಕೃಷ್ಣ ಕಲಾ ಕೇಂದ್ರದ ನಿರ್ದೇಶಕ ಗೋಪಾಲಕೃಷ್ಣರವರು ಬಹುಮುಖ ಪ್ರತಿಭೆಯುಲ್ಲ ಪ್ರತಿಭಾವಂತ. ಕಲೆಯ ಮೇಲಿನ ಅಪಾರ ಶ್ರದ್ಧೆ ಭಕ್ತಿಯ ಪ್ರತೀಕವಾಗಿ ಸಂಸ್ಥೆ ಇಪ್ಪತ್ತು ವರ್ಷಗಳನ್ನು ಪೂರೈಸಿದೆ ಎಂದರು.
ಶ್ರೀಕೃಷ್ಣ ಕಲಾ ಕೇಂದ್ರದ ನಿರ್ದೇಶಕ ಗೋಪಾಲಕೃಷ್ಣ ವೀರಮಂಗಲ ಪ್ರಾಸ್ತಾವಿಕವಾಗಿ ಮಾತನಾಡಿ, ವಿದುಷಿ ಸುಮ ರಾಮ್‌ಪ್ರಸಾದ್‌ರವರಲ್ಲಿ ಭರತನಾಟ್ಯ ಅಭ್ಯಾಸ ಪಡೆದು, ತಾನು ಪಡೆದ ವಿದ್ಯೆಯನ್ನು ನೂರಾರು ಮಂದಿ ವಿದ್ಯಾರ್ಥಿಗಳಿಗೆ ಧಾರೆ ಎರೆಯಬೇಕೆಂಬ ಹಂಬಲದಿಂದ ಶ್ರೀಕೃಷ್ಣ ಕಲಾ ಕೇಂದ್ರವನ್ನು ಪ್ರಾರಂಭಿಸಿ ಕಳೆದ ಇಪ್ಪತ್ತು ವರ್ಷಗಳಿಂದ ನಿರಂತರವಾಗಿ ವಿದ್ಯಾರ್ಥಿಗಳಿಗೆ ಭರತನಾಟ್ಯ ತರಬೇತಿಗಳನ್ನು ನೀಡಲಾಗಿದೆ. 20ನೇ ವರ್ಷಾಚರಣೆಯ ಅಂಗವಾಗಿ ವಿಂಶತಿ ನೃತ್ಯೋತ್ಸವ, ಸಾಮೂಹಿಕ ಸಂಜೀವಿನಿ ಮೃತ್ಯುಂಜಯ ಹೋಮಗಳನ್ನು ನಡೆಸಲಾಗಿದೆ. ಇದೇ ಸಂದರ್ಭದಲ್ಲಿ ನೃತ್ಯ ಗೀತಾ ಪುಸ್ತಕ ಎಡನೇ ಆವೃತ್ತಿಯು ಬಿಡುಗಡೆಗೊಳ್ಳಲಿದೆ ಎಂದರು.
ಸನ್ಮಾನ:
ಶ್ರೀಕೃಷ್ಣ ಕಲಾಕೇಂದ್ರ ನಿರ್ದೇಶಕರ ಗುರು ಸುದರ್ಶನ್ ಎಂ.ಎಲ್ ಭಟ್ ರವರ ತಾಯಿ ಮಾಲಿನಿ ಎಂ.ಎಲ್ ಭಟ್, ಸಂಸ್ಥೆಯ ಕಾಣಿಯೂರು ಹಾಗೂ ವೀರಮಂಗಲ ಶಾಖೆಗಳಲ್ಲಿ ತರಬೇತಿ ನೀಡಲು ಸ್ಥಳಾವಕಾಶ ನೀಡಿದ ಕಾಣಿಯೂರು ರಾಶಿ ಕಾಂಪ್ಲೆಕ್ಸ್ ಮ್ಹಾಲಕ ಚಂದ್ರಶೇಖರ ಗೌಡ ಹಾಗೂ ವೀರಮಂಗಲ ಶಾಲಾ ಶಿಕ್ಷಕ ತಾರಾನಾಥ ಸವಣೂರು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
‘ನೃತ್ಯಗೀತಾ’ ಎರಡನೇ ಆವೃತ್ತಿ ಬಿಡುಗಡೆ:
ಶ್ರೀಕೃಷ್ಣ ಕಲಾ ಕೇಂದ್ರ ನಿರ್ದೇಶಕ ಗೋಪಾಲಕೃಷ್ಣ ವೀರಮಂಗಲರವರು ರಚಿಸಿ ‘ನೃತ್ಯ ಗೀತಾ’ ಪುಸ್ತಕದ ಎರಡನೇ ಆವೃತ್ತಿಯನ್ನು ಒಡಿಯೂರು ಶ್ರೀ ಗುರುದೇವಾನಂದ ಸ್ವಾಮಿಜಿಯವರು ಬಿಡುಗಡೆ ಮಾಡಿದರು.
ಸಂಸ್ಥೆಯ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ನಿರ್ದೇಶಕ ಗೋಪಾಲಕೃಷ್ಣ ವೀರಮಂಗಲ ಸ್ವಾಗತಿಸಿದರು. ನಾರಾಯಣ ಶೆಟ್ಟಿ, ಶಿಕ್ಷಕ ತಾರಾನಾಥ ಸವಣೂರು, ಯಮುನಾ ರಘುಚಂದ್ರ, ಹರೀಶ್ ಆಚಾರ್ಯ ಆನಾಜೆ, ಸುಚಿತ್ರ ಸಾರಕೂಟೇಲು ಅತಿಥಿಗಳನ್ನು ತಾಂಬೂಲ ನೀಡಿ ಸ್ವಾಗತಿಸಿದರು. ಯೋಗೀಶ್ ವೀರಮಂಗಲ, ಪ್ರೀಯ ಶ್ರೀ ವೀರಮಂಗಲ ಕಾರ್ಯಕ್ರಮ ನಿರೂಪಿಸಿದರು. ಹರ್ಷ ಗುತ್ತು ವಂದಿಸಿದರು.
ಮನಸೋರೆಗೊಳಿಸಿದ ಭರತನಾಟ್ಯ, ನೃತ್ಯರೂಪಕ:
ಅಪರಾಹ್ನ ನಡೆದ ಕಾರ್ಯಕ್ರಮದಲ್ಲಿ ವಿದ್ವಾನ್ ಗೋಪಾಲಕೃಷ್ಣ ವೀರಮಂಗಲ ವಿರಚಿತ ಕೃಷ್ಣಾಂಕಿತ ಗೀತಾ ಗಾಯನ ಗೀತ ಮಾಧುರ‍್ಯ, ವಿದ್ವಾನ್ ಸುದರ್ಶನ್ ಎಂ.ಎಲ್ ಭಟ್ ನಿರ್ದೇಶನದಲ್ಲಿ ನೃತ್ಯಾರ್ಚನೆ, ವಿದ್ವಾನ್ ಗೋಪಾಲಕೃಷ್ಣ ವೀರಮಂಗಲ ರಚನೆ ಹಾಗೂ ನಿರ್ದೇಶನದಲ್ಲಿ ಭರತನಾಟ್ಯ ವೈವಿದ್ಯ ಮತ್ತು ಕಾರ್ಣಿಕೋದ ಕಾಳಮ್ಮ ನೃತ್ಯರೂಪಕಗಳು ಪ್ರೇಕ್ಷಕರ ಮನಸೋರೆಗೊಳಿಸಿತು. 112 ವಿದ್ಯಾರ್ಥಿಗಳು ನೃತ ವೈವಿದ್ಯಾದಲ್ಲಿ ಭಾಗವಹಿಸಿದ್ದರು.