ಮತದಾನದ ಅರಿವು ಮೂಡಿ ಅರ್ಹ ಅಭ್ಯರ್ಥಿ ಆಯ್ಕೆಗೆ ಸಹಕಾರಿ-ಡಾ|ವೀರೇಂದ್ರ ಹೆಗ್ಗಡೆ
ಹೋರಾಟದಿಂದ ಶೇ.೨ರಷ್ಟು ಭ್ರಷ್ಟಾಚಾರ ಕಡಿಮೆಯಾದರೂ ದೊಡ್ಡ ಸಾಧನೆಯೆ -ಡಿ.ಹರ್ಷೇಂದ್ರ ಕುಮಾರ್
ಪುತ್ತೂರು: ಸುದ್ದಿ ಜನಾಂದೋಲನ ವೇದಿಕೆಯ ಮೂಲಕ ಲಂಚ ಭ್ರಷ್ಟಾಚಾರದ ವಿರುದ್ಧ ನಡೆಯುತ್ತಿರುವ ಆಂದೋಲನ ಯಶಸ್ವಿಯಾಗಿ ನಡೆಯಲಿ, ಈ ಹೋರಾಟದ ಮೂಲಕ ಮತದಾರರಲ್ಲಿ ಜನಜಾಗೃತಿ ಮೂಡುವಂತಾಗಲಿ ಎಂದು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ರಾಜ್ಯಸಭಾ ಸದಸ್ಯರೂ ಆಗಿರುವ ಡಾ| ಡಿ. ವೀರೇಂದ್ರ ಹೆಗ್ಗಡೆ ಮತ್ತು ಡಿ. ಹರ್ಷೇಂದ್ರ ಕುಮಾರ್ ಶುಭ ಹಾರೈಸಿದ್ದಾರೆ.
’ಚುನಾವಣೆಗೆ ನಿಂತ ಎಲ್ಲಾ ಅಭ್ಯರ್ಥಿಗಳು ಲಂಚ, ಭ್ರಷ್ಟಾಚಾರದ ವಿರುದ್ಧ ಪ್ರತಿಜ್ಞೆ ಮಾಡಬೇಕು, ಅಧಿಕಾರಿಗಳು ಲಂಚ, ಭ್ರಷ್ಟಾಚಾರದಿಂದ ಪಡೆದ ಹಣವನ್ನು ಜನರಿಗೆ ಹಿಂತಿರುಗಿಸುವ ಘೋಷಣೆ ಮಾಡಬೇಕು, ಲಂಚ, ಭ್ರಷ್ಟಾಚಾರ ನಿರ್ಮೂಲನೆಯೇ ದೊಡ್ಡ ಜನಸೇವೆ ಮತ್ತು ದೇಶ ಸೇವೆ. ಉತ್ತಮ ಸೇವೆಗೆ ಪುರಸ್ಕಾರ,ಲಂಚ ಭ್ರಷ್ಟಾಚಾರಕ್ಕೆ ಬಹಿಷ್ಕಾರ. ಲಂಚ ಎಂದರೆ ದರೋಡೆ, ಭ್ರಷ್ಟಾಚಾರ ಎಂದರೆ ದೇಶದ್ರೋಹ.ಲಂಚ, ಭ್ರಷ್ಟಾಚಾರ ಮುಕ್ತ ಊರು, ತಾಲೂಕು, ರಾಜ್ಯ ನಮ್ಮದಾಗಲಿ’ ಎಂದು ಸುದ್ದಿ ಜನಾಂದೋಲನ ವೇದಿಕೆ ನಡೆಸುತ್ತಿರುವ ಆಂದೋಲನದ ಫಲಕವನ್ನು ಡಾ| ವೀರೇಂದ್ರ ಹೆಗ್ಗಡೆಯವರು ಏ.23ರಂದು ಧರ್ಮಸ್ಥಳ ಬೀಡುವಿನಲ್ಲಿ ಸ್ವೀಕರಿಸಿದ ವೇಳೆ ಮಾತನಾಡಿದರು.
ಸುದ್ದಿ ಜನಾಂದೋಲನ ವೇದಿಕೆಯ ಮುಖ್ಯಸ್ಥರಾದ ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ.ಯು.ಪಿ.ಶಿವಾನಂದರವರು ಆಂದೋಲನದ ಕುರಿತು ವಿವರಿಸಿದರು. ಪುತ್ತೂರು, ಸುಳ್ಯ, ಬೆಳ್ತಂಗಡಿ ತಾಲೂಕುಗಳಲ್ಲಿ ಭ್ರಷ್ಟಾಚಾರದ ವಿರುದ್ಧದ ಆಂದೋಲನವನ್ನು ಸುದ್ದಿ ಬಳಗದ ಸಮರ್ಥ ತಂಡ ಮುನ್ನಡೆಸಲಿದೆ. ಜಿಲ್ಲೆಯಲ್ಲಿ ನನ್ನ ನೇತೃತ್ವದಲ್ಲಿ ಆಂದೋಲನ ಮುಂದುವರಿಯಲಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪರ್ಧಿಸುತ್ತಿರುವ ವರುಣಾ ವಿಧಾನಸಭಾ ಕ್ಷೇತ್ರ ಮತ್ತು ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪರ್ಧಿಸುತ್ತಿರುವ ಶಿಗ್ಗಾವಿ ವಿಧಾನಸಭಾ ಕ್ಷೇತ್ರದಲ್ಲಿ ನಾನು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದು ಭ್ರಷ್ಟಾಚಾರದ ವಿರುದ್ಧ ಹೋರಾಟ ರೂಪಿಸಲಿದ್ದೇನೆ. ಭ್ರಷ್ಟಾಚಾರದ ವಿರುದ್ಧ ಜನಜಾಗೃತಿ ಮೂಡಿಸಲಿದ್ದೇನೆ ಎಂದು ಡಾ.ಯು.ಪಿ.ಶಿವಾನಂದರವರು ತಿಳಿಸಿದರು. ಬಳಿಕ ಮಾತನಾಡಿದ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆಯವರು ನೀವು ಉತ್ತಮ ಆಂದೋಲನಗಳನ್ನು ಹಮ್ಮಿಕೊಂಡಿದ್ದೀರಿ. ನೀವು ಕೈಗೊಂಡಿರುವ ಆಂದೋಲನ ಯಶಸ್ವಿಯಾಗಲಿ. ಇಂತಹ ಕಾರ್ಯಗಳು ನಡೆದಾಗ ಜನರಲ್ಲಿ ಮತದಾನ ಕುರಿತು ಅರಿವು ಮೂಡುತ್ತದೆ ಹಾಗೂ ಅರ್ಹ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು. ಈ ಆಂದೋಲನದಿಂದಾಗಿ ಭ್ರಷ್ಟಾಚಾರದ ಕುರಿತು ಜನರಿಗೆ ಮುಕ್ತವಾಗಿ ತಿಳಿಸಲು ಅವಕಾಶ ನೀಡಿದಂತಾಗಿದೆ ಎಂದು ಹೇಳಿದ ಡಾ| ಹೆಗ್ಗಡೆಯವರು ತಮ್ಮ ಹೋರಾಟ ಯಶಸ್ಸು ಕಾಣಲಿ ಎಂದು ಹಾರೈಸಿದರು. ಬಳಿಕ ಡಾ| ವೀರೆಂದ್ರ ಹೆಗ್ಗಡೆಯವರ ಸಹೋದರ ಹರ್ಷೇಂದ್ರ ಕುಮಾರ್ ಅವರು ಭ್ರಷ್ಟಾಚಾರದ ವಿರುದ್ಧದ ಫಲಕ ಸ್ವೀಕರಿಸಿದರು. ನಿಮ್ಮ ಈ ಆಂದೋಲನಗಳಿಗೆ ನನ್ನ ಹಾಟ್ಸಪ್ ಎಂದು ಹೇಳಿದ ಹರ್ಷೇಂದ್ರ ಕುಮಾರ್ ಅವರು ಭ್ರಷ್ಟಾಚಾರದ ವಿರುದ್ಧ ನೀವು ನಡೆಸುತ್ತಿರುವ ಹೋರಾಟದಿಂದಾಗಿ ಶೇಕಡಾ ಎರಡರಷ್ಟು ಭ್ರಷ್ಟಾಚಾರ ಕಡಿಮೆ ಆದರೂ ಅದು ದೊಡ್ಡ ಸಾಧನೆಯೇ ಎಂದರು. ಸುದ್ದಿಯ ಆಂದೋಲನ ಯಶಸ್ವಿಯಾಗಲಿ ನಡೆಯಲಿ ಎಂದು ಅವರು ಹಾರೈಸಿದರು.
ಸುದ್ದಿ ಬಳಗದ ಕು.ಸಿಂಚನಾ ಊರುಬೈಲು, ಸಂತೋಷ್ ಕುಮಾರ್ ಶಾಂತಿನಗರ, ಸಂದೀಪ್ ಶೆಟ್ಟಿ ಮತ್ತು ಮನೀಶ್ ಅಂಚನ್ ಉಪಸ್ಥಿತರಿದ್ದರು.