ಲಂಚ ಭ್ರಷ್ಟಾಚಾರದ ವಿರುದ್ಧ ಪ್ರತಿಜ್ಞೆ ಮಾಡಿದ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ

0

ದಾಖಲೆ ಸಹಿತ ಕೊಟ್ಟಲ್ಲಿ ಲಂಚ ಪಡೆದವರಿಂದ ಹಣ ವಾಪಸ್ ತೆಗೆಸಿಕೊಡಲು ಪ್ರಾಮಾಣಿಕ ಪ್ರಯತ್ನದ ಭರವಸೆ

ಪುತ್ತೂರು: ‘ಚುನಾವಣೆಗೆ ನಿಂತ ಎಲ್ಲಾ ಅಭ್ಯರ್ಥಿಗಳು ಲಂಚ, ಭ್ರಷ್ಟಾಚಾರದ ವಿರುದ್ಧ ಪ್ರತಿಜ್ಞೆ ಮಾಡಲಿ, ಅಧಿಕಾರಿಗಳು ಲಂಚ, ಭ್ರಷ್ಟಾಚಾರದಿಂದ ಪಡೆದ ಹಣವನ್ನು ಜನರಿಗೆ ಹಿಂತಿರುಗಿಸುವ ಘೋಷಣೆ ಮಾಡಲಿ’ ಎಂದು ಸುದ್ದಿ ಜನಾಂದೋಲನ ವೇದಿಕೆ ವತಿಯಿಂದ ನಡೆಯುತ್ತಿರುವ ಆಂದೋಲನಕ್ಕೆ ಪೂರಕವಾಗಿ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಅವರು ಲಂಚ ಭ್ರಷ್ಟಾಚಾರದ ವಿರುದ್ಧ ಪ್ರತಿಜ್ಞೆ ಮಾಡಿದ್ದಾರೆ. ಅಧಿಕಾರಿಗಳು ಜನರಿಂದ ಲಂಚ ಪಡೆದ ಬಗ್ಗೆ ದಾಖಲೆ ಸಹಿತ ಕೊಟ್ಟಲ್ಲಿ ಲಂಚ ಪಡೆದವರಿಂದ ಹಣ ವಾಪಸ್ ತೆಗೆಸಿಕೊಡುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿಯೂ ಅವರು ಪ್ರತಿಜ್ಞೆ ಮಾಡಿದ್ದಾರೆ. ಚುನಾವಣಾ ಬಿರುಸಿನ ಪ್ರಚಾರದಲ್ಲಿರುವ ಅವರು ಏ.23ರಂದು ಸಂಜೆ ಕೊಡಿಪ್ಪಾಡಿ ಸಮೀಪ ಚುನಾವಣಾ ಪ್ರಚಾರದ ವೇಳೆ ‘ಲಂಚ, ಭ್ರಷ್ಟಾಚಾರದ ವಿರುದ್ಧ’ದ ಫಲಕ ಸ್ವೀಕರಿಸಿ, ಪ್ರತಿಜ್ಞೆ ಮಾಡಿದರು.
‘ನಾನು 20 ವರ್ಷದಿಂದ ಸರಕಾರದ ಜನಪ್ರತಿನಿಧಿಯಾಗಿ ಆಡಳಿತ ಮಾಡಿದ್ದೇನೆ. ಆ ಸಂದರ್ಭದಲ್ಲೂ ಲಂಚದ ವಿರುದ್ಧವೇ ಹೋರಾಟ ಮಾಡಿದವಳು. ಮುಂದೆಯೂ ನಾನು ಲಂಚ ತೆಗೆದು ಕೊಳ್ಳುವವರಿಗೆ ಖಂಡಿತವಾಗಿಯೂ ಅವಕಾಶ ಕೊಡುವುದಿಲ್ಲ. ಇದಕ್ಕೆ ಎಷ್ಟು ಸಾಧ್ಯವಿದೆಯೋ ಅಷ್ಟು ಪ್ರಯತ್ನ ಮಾಡುತ್ತೇನೆ. ಎಲ್ಲರನ್ನು ಲಂಚ ತೆಗೆದುಕೊಳ್ಳದ ಹಾಗೆ ನಿಲ್ಲಿಸಲು ಆಗುತ್ತದೆಯೋ ಎಂಬುದು ನನಗೆ ಗೊತ್ತಿಲ್ಲ. ಆದರೂ ನಾನು ಪ್ರಾಮಾಣಿಕ ಪ್ರಯತ್ನವನ್ನು ಖಂಡಿತವಾಗಿ ಮಾಡುತ್ತೇನೆ. ಲಂಚ ಪಡೆದವರ ವಿರುದ್ಧ ಏನು ಸೂಕ್ತ ಕ್ರಮ ಕೈಗೊಳ್ಳಬಹುದೋ ಅದನ್ನು ಖಂಡಿತಾ ಮಾಡುತ್ತೇನೆ. ಅದೇ ರೀತಿ ಸೂಕ್ತ ದಾಖಲೆ ನೀಡಿದರೆ, ಲಂಚ ಪಡೆದವರಿಂದ ಆ ಹಣವನ್ನು ಲಂಚ ಕೊಟ್ಟವರಿಗೆ ವಾಪಸ್ ತೆಗೆಸಿಕೊಡುವ ನಿಟ್ಟಿನಲ್ಲಿ ಪ್ರಾಮಾಣಿಕ ಕೆಲಸ ಮಾಡುತ್ತೇನೆ’ ಎಂದು ಆಶಾ ತಿಮ್ಮಪ್ಪ ಭರವಸೆ ನೀಡಿದ್ದಾರೆ.

ಸುದ್ದಿ ಬಿಡುಗಡೆ ಸಿಇಒ ಸೃಜನ್ ಊರುಬೈಲು, ಸ್ಥಾನೀಯ ಸಂಪಾದಕ ಕರುಣಾಕರ ರೈ ಸಿ.ಎಚ್., ಹಿರಿಯ ವರದಿಗಾಗಿ ಲೋಕೇಶ್ ಬನ್ನೂರು ಅವರು ಆಶಾ ತಿಮ್ಮಪ್ಪ ಅವರಿಗೆ ಲಂಚ, ಭ್ರಷ್ಟಾಚಾರದ ವಿರುದ್ಧದ ಫಲಕ ನೀಡಿ ಪ್ರತಿಜ್ಞೆ ಮಾಡಿಸಿದರು. ಈ ಸಂದರ್ಭದಲ್ಲಿ ತಾ.ಪಂ ಮಾಜಿ ಸದಸ್ಯೆ ಮೀನಾಕ್ಷಿ ಮಂಜುನಾಥ್, ಆದರ್ಶ ಶೆಟ್ಟಿ ಉಪ್ಪಿನಂಗಡಿ, ಪುನೀತ್ ಮಾಡತ್ತಾರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here