ಪುತ್ತೂರು: ವಿವಾಹ ಸಿದ್ಧಿ, ಸಂತಾನ ಸಿದ್ಧಿ ಮೊದಲಾದ ಭಕ್ತಜನರ ಸರ್ವಕಾಮನೆಗಳನು ಈಡೇರಿಸುವ ಬೆಳ್ಳಿಪ್ಪಾಡಿ ಶ್ರೀ ಸಕಲೇಶ್ವರ ದೇವಸ್ಥಾನದ ನವೀಕರಣ ಪುನಃಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಎ.29 ರಿಂದ ಮೇ 7ರ ತನಕ ಜರುಗಲಿದೆ. ಪುತ್ತೂರು ಉಪ್ಪಿನಂಗಡಿ ರಸ್ತೆಯಲ್ಲಿ ಸುಮಾರು 8ಕಿ.ಮೀ ದೂರದಲ್ಲಿರುವ ಬೆಳ್ಳಿಪ್ಪಾಡಿ ಊರು ಇತಿಹಾಸ ಪ್ರಸಿದ್ಧ, ಇಲ್ಲಿಯೇ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನ ಮತ್ತು ಶ್ರೀ ಸಕಲೇಶ್ವರ ದೇವಸ್ಥಾಗಳಿದ್ದು, ಇತರ ಧರ್ಮದೈವಗಳ ಸ್ಥಾನವೂ ಇದೆ. ಇಲ್ಲಿ ಜೀರ್ಣಾವ್ಯವಸ್ಥೆಯಲ್ಲಿರುವ ಶ್ರೀ ಸಕಲೇಶ್ವರ ದೇವಸ್ಥಾನ ಇದೀಗ ಜೀರ್ಣೋದ್ದಾರಗೊಂಡು ಬ್ರಹ್ಮಕಲಶೋತ್ಸವ ನಡೆಯಲಿದೆ.
ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿಯವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಸುಮಾರು ಸಾವಿರಾರು ವರ್ಷಗಳ ಹಿಂದೆ ಹೊಯ್ಸಳ ಶೈಲಿಯಲ್ಲಿರುವ ಈ ಶ್ರೀ ಸಕಲೇಶ್ವರ ಪಂಚಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಗಳು ಸುಮಾರು ರೂ.1 ಕೋಟಿ ವೆಚ್ಚದಲ್ಲಿ ಪೂರ್ಣಗೊಂಡಿದೆ. ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಯವರ ನೇತೃತ್ವದಲ್ಲಿ ಶ್ರೀ ದೇವರಿಗೆ ಅನುಜ್ಞಾಕಲಶ, ಬಾಲಾಯ ಪ್ರತಿಷ್ಠೆ ಕಾರ್ಯಕ್ರಮ 2022ರ ಮಾ.28ರಂದು ಸಂಪನ್ನಗೊಂಡಿತ್ತು. ಇದೀಗ ಜೀರ್ಣೋದ್ಧಾರ ಕಾರ್ಯ ಪೂರ್ಣಗೊಂಡು ಎ.29ರಿಂದ ಮೇ 7ರ ತನಕ ಬ್ರಹ್ಮಕಲಶೋತ್ಸವ ಜರುಗಲಿದೆ. ಬ್ರಹ್ಮಕಲಶೋತ್ಸವ ಸಂದರ್ಭ ಪ್ರತಿ ದಿನ ಗಣಪತಿ ಹೋಮ ನಡೆಯಲಿದೆ. ಎ.29ಕ್ಕೆ ಹಸಿರು ಹೊರೆಕಾಣಿಕೆ ಸಮರ್ಪಣೆ, ಉಪ್ಪಿನಂಗಡಿ ರಾಮನಗರ ಶ್ರೀ ಶಾರದಾ ವನಿತಾ ಭಜನಾ ಮಂಡಳಿ ಮತ್ತು ಒಡಯೂರು ವಜ್ರಮಾತಾ ಭಜನಾ ಮಂಡಳಿಯಿಂದ ಭಜನಾ ಸೇವೆ ನಡೆಯಲಿದೆ. ಎ.30ಕ್ಕೆ ಅಂಕುರಪೂಜೆ ಸಹಿತ ವಿವಿಧ ವೈದಿಕ ಕಾರ್ಯಕ್ರಮ ನಡೆಯಲಿದ್ದು ಅಂದು ಪಡ್ನೂರು ಬೇರಿಕೆ ಶ್ರೀ ಆದಿಶಕ್ತಿ ಭಜನಾ ಮಂದಿರ, ಪಾಲಿಂಜೆ ಶ್ರೀ ಮಹಾವಿಷ್ಣು ಮಹಿಳಾ ಭಜನಾ ಮಂಡಳಿಯಿಂದ ಭಜನೆ ನಡೆಯಲಿದೆ. ಮೇ 1ಕ್ಕೆ ಬೆಳ್ಳಿಪ್ಪಾಡಿ ಶ್ರೀ ಸುಬ್ರಹ್ಮಣ್ಯ ಭಜಾ ಮಂದಿರ, ಶ್ರೀ ಮಹಾವಿಷ್ಣು ಭಜನಾ ಮಂಡಳಿಯಿಂದ ಭಜನೆ ನಡೆಯಲಿದೆ. ಮೇ 2ಕ್ಕೆ ನೆಕ್ಕಿಲಾಡಿ ಶ್ರೀ ಅಯ್ಯಪ್ಪ ಭಜನಾ ಮಂದಿರ, ಸುಭಾಷ್‌ನಗರ ಶ್ರೀ ಸತ್ಯನಾರಾಯಣ ಭಜನಾ ಮಂದಿರದಿಂದ ಭಜನಾ ಸೇವೆ ನಡೆಯಲಿದೆ. ಮೇ 3ಕ್ಕೆ ಕುಂಟ್ಯಾನ ಶ್ರೀ ಭ್ರಾಮರಿ ಭಜನಾ ಮಂಡಳಿ, ಕೋಡಿಂಬಾಡಿ ಅಶ್ವತ್ಥಕಟ್ಟೆ ಧರ್ಮಶ್ರೀ ಭಜನಾ ಮಂದಿರದಿಂದ ಭಜನಾ ಸೇವೆ ನಡೆಯಲಿದೆ. ಮೇ 4ಕ್ಕೆ ಶ್ರೀ ಸಕಲೇಶ್ವರ ದೇವರ ಪುನಃಪ್ರತಿಷ್ಟೆ, ಗಣಪತಿ ದೇವರ ಪ್ರತಿಷ್ಠೆ, ಅಷ್ಟಬಂಧಕ್ರಿಯೆ ನಡೆಯಲಿದೆ. ಇದೇ ಸಂದರ್ಭದಲ್ಲಿ ಕುಂಭೇಶಕಲಾಶಾಭಿಷೇಕ, ನಿದ್ರಾಕಲಾಶಾಭಿಷೇಕ, ಜೀವಕಲಶಾಭಿಷೇಕ, ಪ್ರತಿಷ್ಠಾಪೂಜೆ, ಶಿಖರಪ್ರತಿಷ್ಠೆ, ಧೂವಾವತಿ ದೈವದ ಪ್ರತಿಷ್ಠೆ ನಡೆಯಲಿದೆ. ಕೋಡಿಂಬಾಡಿ ಕೃಷ್ಣಗಿರಿ ಮಂಜುನಾಥ ಭಜನಾ ಮಂದಿರ, ಕೋಡಿಂಬಾಡಿ ದಾಸ ಸಂಕೀರ್ತನಾ ಬಳಗದಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ಮೇ 5ಕ್ಕೆ ತ್ರಿಕಾಲಪೂಜೆ, ಸೇಡಿಯಾಪು ಶ್ರೀ ದೇವಿ ಭಜನಾ ಮಂಡಳಿ, ಕೋಡಿಂಬಾಡಿ ವನಿತಾ ಸಮಾಜದಿಂದ ಭಜನಾ ಸೇವೆ ನಡೆಯಲಿದೆ. ಮೇ 6ಕ್ಕೆ ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ಭಜನಾ ಮಂಡಳಿ, ಕೋಡಿಪ್ಪಾಡಿ ಅರ್ಕ ಶ್ರೀ ಮಹಾದೇವಿ ಭಜನಾ ಮಂಡಳಿಯಿಂದ ಭಜನಾ ಸೇವೆ ನಡೆಯಲಿದೆ. ಮೇ 7ಕ್ಕೆ ಶ್ರೀ ದೇವರಿಗೆ ಬ್ರಹ್ಮಕಲಶಾಭಿಷೇಕ ನಡೆಲಿದೆ. ಅದೇ ದಿನ ರಾತ್ರಿ ಶ್ರೀ ದೇವರ ಜಾತ್ರೋತ್ಸವವು ನಡೆಯಲಿದೆ. ಸಂಜೆ ಶ್ರೀ ದೇವರ ಬಲಿ ಹೊರಟು ಶ್ರೀ ಭೂತಬಲಿ ಉತ್ಸವ, ವಸಂತಕಟ್ಟೆ ಪೂಜೆ, ದರ್ಶನ ಬಲಿ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ ನಡೆಯಲಿದೆ. ಮೇ 8ರಂದು ಕ್ಷೇತ್ರದ ದೈವಗಳಿಗೆ ನೇಮೋತ್ಸವ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದ ಅವರು ಚುನವಣಾ ನೀತಿ ಸಂಹಿತ ಹಿನ್ನೆಲೆಯಲ್ಲಿ ಯಾವುದೇ ಸಭಾ ಕಾರ್ಯಕ್ರಮ ಮಾಡಿಲ್ಲ ಎಂದವರು ನುಡಿದರು. ಪತ್ರಿಕಾಗೋಷ್ಠಿಯಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಕಾರ್ತಿಕ್ ರೈ ಬೆಳ್ಳಿಪ್ಪಾಡಿ, ಪ್ರಧಾನ ಕಾರ್ಯದರ್ಶಿ ಮೋನಪ್ಪ ಗೌಡ ಪಮ್ಮನಮಜಲು, ಗೌರವಾಧ್ಯಕ್ಷ ಕೇಶವ ಗೌಡ ಕೈಪ, ಕಾರ್ಯದರ್ಶಿ ಮೋಹನ ಪಕ್ಕಳ ಉಪಸ್ಥಿತರಿದ್ದರು.
ಪಾರಂಪರಿಕ ಶೈಲಿಯನ್ನು ಉಳಿಸಿ ಪುನರ್‌ನಿರ್ಮಾಣ
ಊರ, ಪರವೂರಿನ ಮತ್ತು ಬೆಳ್ಳಿಪ್ಪಾಡಿ ಮನೆತನದವರು ಸೇರಿ ಅತ್ಯಂತ ಶಿಥಿಲಾವ್ಯವಸ್ಥೆಯಲ್ಲಿದ್ದ ಶ್ರೀ ಸಕಲೇಶ್ವರ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಜ್ಯೋತಿಷ್ಯ ವಿದ್ವಾಂಸದ ಮೂಲಕ ಅಷ್ಟಮಂಗಲ, ಸ್ವರ್ಣಪ್ರಶ್ನೆಯನ್ನು ಇಟ್ಟು ಸುಧೀರ್ಘವಾಗಿ ಚಿಂತಿಸಲಾಯಿತು. ಇದರಲ್ಲಿ ಕಂಡು ಬಂದ ಪ್ರಕಾರ ಶ್ರೀ ದೇವಸ್ಥಾನವು ಅತಿ ಪುರಾತನ ಕಾಲದಿಂದಲೂ ಋಷಿಮುನಿಗಳಿಂದ ಆರಾಧಿಸಲಸ್ಪಟ್ಟದಾಗಿದ್ದು, ಈ ದೇವರು ಶ್ರೀ ಮಹಾಮೃತ್ಯುಂಜಯ ಪಂಚಲಿಂಗೇಶ್ವರ ಸ್ವರೂಪಿಯಾದ ಈಶ್ವರನೇ ಆಗಿದ್ದು, ಪೂರ್ವದಲ್ಲಿ ಈ ದೇವಸ್ಥಾನ ೮ಗ್ರಾಮಗಳಿಗೆ ಸಂಬಂಧಿಸಿದ ಗ್ರಾಮ ದೇವಸ್ಥಾನ, ಸೀಮಾ ದೇವಸ್ಥಾನವೂ ಆಗಿತ್ತು. ಹಿಂದೆ ಇಲ್ಲಿ ಉತ್ಸವಾದಿ ಜಾತ್ರೆಗಳು ವಿಜೃಂಭಣೆಯಿಂದ ನಡೆಯುತ್ತಿತ್ತು. ಶ್ರೀ ಸತ್ಯನಾರಾಯಣ ದೇವರ ಆರಾಧಾನೆಯೂ ಇಲ್ಲಿ ನಿರಂತರವಾಗಿತ್ತು. ಹಾಗಾಗಿ ಅದರ ಜೀರ್ಣೋದ್ಧಾರ ಕಾರ್ಯ ಕೈಗೆತ್ತಿಕೊಂಡಾಗ ಸಾವಿರಾರು ವರ್ಷಗಳ ಪುರಾತನವಾಗಿರುವ ಶ್ರೀ ಸಕಲೇಶ್ವರ ಪಂಚಲಿಂಗೇಶ್ವರ ದೇವಸ್ಥಾನ ಪೂರ್ಣ ಮಣ್ಣಿನ ಗೋಡೆಯನ್ನು ಹೊಂದಿದೆ. ಈ ನಿಟ್ಟಿನಲ್ಲಿ ಹಿಂದಿನ ಪರಂಪರೆ ಪಾರಂಪರಿಕವನ್ನು ಉಳಿಸಿಕೊಂಡು ಜೀರ್ಣೋದ್ಧಾರ ಕಾರ್ಯ ಮಾಡಲಾಗಿದೆ. ಪಾರಂಪರಿಕ ಆರ್ಕಿಟೆಕ್ಟ್ ತಜ್ಞರನ್ನು ಕರೆಸಿ ಅವರ ಮಾರ್ಗದರ್ಶನದಂತೆ ಬೆಲ್ಲ ಸುಣ್ಣ ಬಳಸಿಯೇ ದೇವಳದ ಪುನರ್‌ನಿರ್ಮಾಣ ಕಾರ್ಯ ನಡೆದಿದೆ.
ಪ್ರಸಾದ್ ಕೌಶಲ್ ಶೆಟ್ಟಿ, ಕಾರ್ಯಾಧ್ಯಕ್ಷರು ಜೀರ್ಣೋದ್ಧಾರ ಸಮಿತಿ
ಶ್ರೀ ಸಕಲೇಶ್ವರ ಪಂಚಲಿಂಗೇಶ್ವರ ದೆವಸ್ಥಾನ
ಮಹಾಬಲಿ ಪೀಠದ ಅಡಿಯಲ್ಲಿ ಪತ್ತೆಯಾದ ಹಾಳಾಗದ ದರ್ಬೆ, ತುಳಸಿ, ಕೇಪುಳ ಹೂವು, ದ್ರವ್ಯ
ದೇವಳದ ಜೀರ್ಣೊದ್ಧಾರ ಕಾರ್ಯ ಮಾಡುವ ವೇಳೆ ಈ ಹಿಂದೆ ಬ್ರಹ್ಮಕಲಶೋತ್ಸವದಂದು ಮಹಾಬಲಿ ಪೀಠದ ಅಡಿಯಲ್ಲಿ ಇರಿಸಲಾಗಿದ್ದ ಬುತ್ತಿಯನ್ನು ಹೋಳುವ ಕರಡಿಗೆಯೊಳಗೆ ದರ್ಬೆ, ತುಳಸಿ, ಕೇಪುಳ ಹೂವು ಮತ್ತು ದ್ರವ್ಯ ಪತ್ತೆಯಾಗಿದ್ದು, ದ್ರವ್ಯದ ಬಣ್ಣ ಬದಲಾಗಿದ್ದರೂ ತುಳಸಿ, ಕೇಪುಳ ಹೂವು, ದರ್ಬೆ ಕೆಡದ ಶುದ್ಧವಾಗಿತ್ತು. ಇದು ಕ್ಷೇತ್ರದ ಕಾರ್ಣಿಕವನ್ನು ತೋರಿಸಿದೆ ಎಂದು ದೇವಳದ ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಪ್ರಸಾದ್ ಕೌಶಲ್ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿ ಮೋಹನ ಪಕ್ಕಳ ಅವರು ಮಾಹಿತಿ ನೀಡಿದರು. 2012ರಲ್ಲಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲೂ ಇಂತಹದ್ದೇ ಹಲವು ಘಟನೆಗಳು ಬೆಳಕಿಗೆ ಬಂದಿದ್ದು, ಆ ಸಂದರ್ಭ ದೇವಳದ ಶಿಖರದ ಕಲಶದಲ್ಲಿ ಶುದ್ದವಾದ ಭತ್ತ ಪತ್ತೆಯಾಗಿತ್ತು. ದೇವಳದ ಗರ್ಭಗುಡಿಯ ಮೇಲೆ ದೇವರ ಪ್ರಭಾವಳಿ ಪತ್ತೆಯಾಗಿತ್ತು. ಪ್ರಭಾವಳಿಗೆ ಸುತ್ತಿದ್ದ ವಸ್ತ್ರ ಸ್ವಲ್ಪವೂ ಕೆಡದೆ ಶುದ್ಧವಾಗಿರುವುದನ್ನು ಗಮನಿಸಬಹುದು.