ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಪುತ್ತೂರು ಶಾಸನಗಳ ಕುರಿತು ಪ್ರಬಂಧ ಮಂಡನೆಗೆ ಪುತ್ತೂರು ಉಮೇಶ್ ನಾಯಕ್ ಅವರ ಪ್ರಬಂಧ ಆಯ್ಕೆ

0

ಪುತ್ತೂರು:ಭಾರತ ಸರಕಾರದ ಅಧೀನವಿರುವ ಉನ್ನತ ಶಿಕ್ಷಣ ಇಲಾಖೆ ಸಚಿವಾಲಯದ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ ಭಾರತೀಯ ಭಾಷಾ ಸಂಸ್ಥಾನಂ ಮೈಸೂರು ಇವರು ಆಯೋಜಿಸಿರುವ ಶಾಸ್ತ್ರೀಯ ಕನ್ನಡ ಸಾಂಸ್ಕೃತಿಕ ಪರಿಶೋಧನಾ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಪುತ್ತೂರು ಉಮೇಶ್ ನಾಯಕ್ ಅವರ ’ಪುತ್ತೂರ ಶಾಸನಗಳು ಮತ್ತು ಅದರಲ್ಲಿ ಉಲ್ಲೇಖಿಸುವ ವಿಷಯಗಳ ವರ್ಗೀಕರಣ ಮತ್ತು ಆರ್ಥ ವ್ಯವಸ್ಥೆ’ ಕುರಿತು ರಚಿಸಿರುವ ಪ್ರಬಂಧವು ಪ್ರಬಂಧ ಮಂಡನೆಗೆ ಆಯ್ಕೆಯಾಗಿದೆ.

ಏಪ್ರಿಲ್ 26 ರಿಂದ 28ರ ತನಕ ಮೈಸೂರಿನ ಭಾರತೀಯ ಭಾಷಾ ಸಂಸ್ಥಾನಂ ಸಭಾಂಗಣದಲ್ಲಿ ನಡೆಯುವ ಮೂರು ದಿನಗಳ ವಿಚಾರ ಸಂಕಿರಣದಲ್ಲಿ ಇವರು ಪ್ರಬಂಧ ಮಂಡನೆ ಮಾಡಲಿದ್ದಾರೆ.

ಕ್ರಿ.ಶ 1431 ರಲ್ಲಿ ವಿಜಯನಗರದ ಅರಸರು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಒಳಾಂಗಣದಲ್ಲಿ ಸ್ಥಾಪಿಸಿರುವ ಈ ಶಾಸನದಲ್ಲಿ ಉಲ್ಲೇಖಿಸಿರುವ ಅನೇಕ ವಿಚಾರಗಳ ಕುರಿತು ಬೆಳಕನ್ನ ಚೆಲ್ಲುವ ಹಾಗೂ ಶಾಸನದಲ್ಲಿ ಉಲ್ಲೇಖಿಸಿರುವ ಸೇವೆಗಳ ವಿವರ, ಸೇವಾ ಭದ್ರತೆಗಾಗಿ ಮಾಡಿರುವ ಅರ್ಥ ವ್ಯವಸ್ಥೆ, ಧನ ಮತ್ತು ಸ್ಥಳ ದಾನ ಮಾಡಿದ ದಾನಿಗಳ ವಿವರ, ಸುಮಾರು 590 ವರ್ಷಗಳ ಹಿಂದೆಯೇ ಇಂದಿನ ವ್ಯವಸ್ಥಾಪನಾ ಸಮಿತಿಯ ಮಾದರಿಯಲ್ಲಿ ರಚಿಸಿದ ಸಮಿತಿಯ ವಿವರ ಇತ್ಯಾದಿಗಳ ಕುರಿತು ಬೆಳಕನ್ನು ಚೆಲ್ಲುವ ಪ್ರಬಂಧ ಇದಾಗಿದೆ.

ಕನ್ನಡ ಭಾಷಾ ಸಂಸ್ಕೃತಿ ಕುರಿತಾಗಿ ಬೆಳಕನ್ನು ಚೆಲ್ಲುವ ನಿಟ್ಟಿನಲ್ಲಿ ಹಲ್ಮಿಡಿ ಶಾಸನ ಮತ್ತು ಬುಕ್ಕರಾಯನ ಶಾಸನದಷ್ಟೇ ಪ್ರಮುಖವಾದ ಪುತ್ತೂರು ಶಾಸನಗಳು ಬೆಳಕಿಗೆ ಬರಬೇಕು, ಇನ್ನೂ ಹೆಚ್ಚಿನ ಅಧ್ಯಯನಗಳಾಗಬೇಕು ಹಾಗೂ ಇದಕ್ಕೆ ಶಾಸನ ಅಧ್ಯಯನ ಕ್ಷೇತ್ರದಲ್ಲಿ ಮಾನ್ಯತೆ ಮತ್ತು ಪ್ರಸಿದ್ಧಿ ಪಡೆಯಬೇಕೆಂಬ ಉದ್ದೇಶದಲ್ಲಿ ಪುತ್ತೂರು ಉಮೇಶ್ ನಾಯಕ್ ಅವರು ಈ ಪ್ರಬಂಧವನ್ನು ಹಿರಿಯ ಶಾಸನ ತಜ್ಞರಾದ ಡಾ ಉಮಾನಾಥ ಶೆಣೈ ಅವರ ಮಾರ್ಗದರ್ಶನದಲ್ಲಿ ರಚನೆ ಮಾಡಿರುತ್ತಾರೆ. ಇವರು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸ್ಥಳ ಪುರಾಣ ಸಂಗ್ರಹ ಸ್ವಯಂಭೂ ಶ್ರೀ ಮಹಾಲಿಂಗೇಶ್ವರ ಎಂಬ ಕ್ಷೇತ್ರಪುರಾಣ ಸಂಗ್ರಹ ಕೃತಿಯನ್ನು ರಚಿಸಿರುತ್ತಾರೆ. ಇದು ಕರ್ನಾಟಕ ಸರಕಾರದ ಧಾರ್ಮಿಕ ದತ್ತಿ ಇಲಾಖೆಯಿಂದ 2015ರಲ್ಲಿ ಪ್ರಕಟವೂ ಆಗಿರುತ್ತದೆ.

ಈ ಕಾರ್ಯಕ್ರಮದಲ್ಲಿ ನಾಡೋಜ ಹಂ.ಪಾ ನಾಗರಾಜಯ್ಯ, ಕಸಾಪ ಅಧ್ಯಕ್ಷರಾದ ಡಾ ಮಹೇಶ್ ಜೋಶಿ, ಭಾರತೀಯ ಭಾಷಾ ಸಂಸ್ಥಾನಂ ಇದರ ನಿರ್ದೇಶಕರಾದ ಶೈಲೇಂದ್ರ ಮೋಹನ್, ಯೋಜನಾ ನಿರ್ದೇಶಕರಾದ ಎಂ ಎನ್ ತಳವಾರ್, ಉಪನಿರ್ದೇಶಕರಾದ ಸಿವಿ ಶಿವರಾಮಕೃಷ್ಣ, ಹಿರಿಯ ಇತಿಹಾಸ ತಜ್ಞರಾದ ಪ್ರೊ.ಚೂಡಾ ಮಣಿ ನಂದಗೋಪಾಲ್ ಭಾಗವಹಿಸಲಿದ್ದಾರೆ. ಸಮಾರೋಪ ಭಾಷಣವನ್ನು ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಹಿರಿಯ ವಿದ್ವಾಂಸರಾದ ಡಾ ವಸಂತ ಕುಮಾರ ತಾಳ್ತಾಜೆ ಅವರು ಮಾಡಲಿದ್ದಾರೆ.ಹಲವು ವಿದ್ವಾಂಸರಿಂದ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ.

LEAVE A REPLY

Please enter your comment!
Please enter your name here