ಬಡವರ ವಿರೋಧಿ ಬಿಜೆಪಿಯನ್ನು ಸೋಲಿಸಲೇಬೇಕು-ಅಶೋಕ್ ರೈ
ಪುತ್ತೂರು: ಬಿಜೆಪಿ ಸರಕಾರದ ದುರಾಡಳಿತ, ಭ್ರಷ್ಟಾಚಾರ, ಬೆಲೆಯೇರಿಕೆಯಿಂದ ಜನರ ಬದುಕು ತತ್ತರಿಸಿ ಹೋಗಿದ್ದು ಈ ಬಾರಿಯ ಚುನಾವಣೆಯಲ್ಲಿ ಜನತೆ ಬಡವರ ವಿರೋಧಿ ಬಿಜೆಪಿಯನ್ನು ತಿರಸ್ಕರಿಸಿ ಕಾಂಗ್ರೆಸ್ ಕೈ ಹಿಡಿಯಲಿದ್ದಾರೆ ಎಂದು ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಕೋಡಿಂಬಾಡಿ ಹೇಳಿದರು.
ಎ.24ರಂದು ಸೊರಕೆ ಪೆರಂಟೋಲು ಮೈದಾನದಲ್ಲಿ ನಡೆದ ಪಕ್ಷದ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
40% ಲಂಚ ಇರುವ ಕಾರಣ ಒಂದಷ್ಟು ಕಡೆ ಜಲ್ಲಿ ಮತ್ತು ಸಿಮೆಂಟ್ ಹಾಕಿದ್ದು ಬಿಟ್ಟರೆ ಬಿಜೆಪಿಯವರಲ್ಲಿ ಅಭಿವೃದ್ಧಿ ಎನ್ನುವುದು ಇಲ್ಲವೇ ಇಲ್ಲ. ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಜನರ ನೆಮ್ಮದಿ ಹಾಳಾಗಿದೆ, ಯುವಕರಿಗೆ ಉದ್ಯೋಗ ಇಲ್ಲ, ಲಂಚ, ಭ್ರಷ್ಟಾಚಾರ ಮಿತಿ ಮೀರಿದೆ. ಹಿಂದುತ್ವ ಎನ್ನುವ ಬಿಜೆಪಿಯವರು ಹಿಂದೂಗಳಿಗೆ ಮೋಸ ಮಾಡುತ್ತಿದ್ದಾರೆ. ಬಿಜೆಪಿ, ಎಸ್‌ಡಿಪಿಐಯವರ ಅಪಪ್ರಚಾರಗಳಿಗೆ ಕಿವಿಗೊಡದೆ ಜನತೆ ಈ ಬಾರಿ ನನ್ನನ್ನು ಆಶೀರ್ವದಿಸಿ ಎಂದು ಅಶೋಕ್ ಕುಮಾರ್ ರೈ ಮನವಿ ಮಾಡಿದರು.
ಪುತ್ತೂರಿನಲ್ಲಿ ಕಾಂಗ್ರೆಸ್ ಗೆಲ್ಲಬೇಕು-ಶಕುಂತಳಾ ಶೆಟ್ಟಿ: ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಮಾತನಾಡಿ ಬಿಜೆಪಿಯವರಿಗೆ ಅಭಿವೃದ್ಧಿ ಅಂದರೆ ಏನೆಂದು ಗೊತ್ತಿಲ್ಲ, ಅವರ ಆಡಳಿತ ಹೇಗೆಂದು ಎಲ್ಲರಿಗೂ ಗೊತ್ತಾಗಿದೆ. ಜನತೆ ಬದಲಾವಣೆ ಬಯಸಿದ್ದು ಈ ಬಾರಿ ಪುತ್ತೂರಿನಲ್ಲಿ ಕಾಂಗ್ರೆಸ್ ಗೆಲ್ಲಬೇಕು, ಅದಕ್ಕಾಗಿ ಸಮರ್ಥ ಅಭ್ಯರ್ಥಿ ಅಶೋಕ್ ರೈಯವರನ್ನು ಗೆಲ್ಲಿಸಬೇಕು ಎಂದು ಹೇಳಿದರು.
ಅಶೋಕ್ ರೈ ಗೆಲ್ಲಿಸಲು ಬೂತ್ ಮಟ್ಟದಲ್ಲೇ ಪರಿಶ್ರಮ-ಹೇಮನಾಥ ಶೆಟ್ಟಿ: ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ ಮಾತನಾಡಿ ಕಾಂಗ್ರೆಸ್ ಗೆದ್ದರೆ 200 ಯುನಿಟ್ ವಿದ್ಯುತ್ ಉಚಿತವಾಗಿ ಸಿಗಲಿದ್ದು ಮನೆಯ ಯಜಮಾನಿಗೆ ಮಾಸಿಕ ರೂ.2೦೦೦ ಹಣ ಸಿಗಲಿದೆ. ಪ್ರತಿಯೊಬ್ಬರಿಗೂ ತಲಾ 10 ಕೆಜಿ ಉಚಿತ ಅಕ್ಕಿ ಸಿಗಲಿದೆ. ಇದು ಕಾಂಗ್ರೆಸ್ ನೀಡಿದ ಭರವಸೆಯಾದ ಕಾರಣ ಇವೆಲ್ಲವೂ ಸಿಗುವುದು ಗ್ಯಾರಂಟಿ. ಬಿಜೆಪಿಯವರ ಹಾಗೆ ಸುಳ್ಳು ಹೇಳಿ ನಾವು ಮತ ಪಡೆಯುವುದಿಲ್ಲ. ಏನೇ ಆದರೂ ಈ ಬಾರಿ ಅಶೋಕ್ ಕುಮಾರ್ ರೈ ಅವರನ್ನು ನಾವು ಗೆಲ್ಲಿಸಲೇಬೇಕು. ಅದಕ್ಕಾಗಿ ಬೂತ್ ಮಟ್ಟದಿಂದಲೇ ಪರಿಶ್ರಮ ಪಡಬೇಕು ಎಂದು ಹೇಳಿದರು. ಹಿಂದುತ್ವದ ಹೆಸರಿನಲ್ಲಿ ಬಿಜೆಪಿ ಜನರನ್ನು ಒಡೆಯುತ್ತಿದ್ದು ದ್ವೇಷ, ವಿಭಜನೆ ಬಿಜೆಪಿಯ ಅಜೆಂಡಾ ಆಗಿದೆ. ಜನತೆಗೆ ಉಪಯೋಗಕ್ಕಿಲ್ಲದ, ಬಡವರ ಪರ ಕಾಳಜಯಿಲ್ಲದ ಭ್ರಷ್ಟ ಬಿಜೆಪಿಯನ್ನು ಈ ಬಾರಿ ಸೋಲಿಸುವುದು ನಮ್ಮೆಲ್ಲರ ಬಾಧ್ಯತೆಯಾಗಿದೆ. ಸರ್ವೆ ಕಾಂಗ್ರೆಸ್‌ನ ಪ್ರಬಲ ಕ್ಷೇತ್ರವಾಗಿದ್ದು ಇಲ್ಲಿ ಯಾವತ್ತೂ ಕಾಂಗ್ರೆಸ್ ಲೀಡ್ ಪಡೆಯುತ್ತದೆ ಎಂದು ಹೇಮನಾಥ ಶೆಟ್ಟಿ ಹೇಳಿದರು.
ಮತ್ತೊಮ್ಮೆ ಕಾಂಗ್ರೆಸ್ ಗೆಲ್ಲಿಸಬೇಕು-ಎಂ.ಬಿ ವಿಶ್ವನಾಥ ರೈ: ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ ವಿಶ್ವನಾಥ ರೈ ಮಾತನಾಡಿ ಬಡವರ, ಜನಸಾಮಾನ್ಯರ ಬಗ್ಗೆ ಚಿಂತನೆ, ಕಾಳಜಿ ಇಲ್ಲದ ಕೆಟ್ಟ ಬಿಜೆಪಿ ಸರಕಾರವನ್ನು ಕಿತ್ತೊಗೆದು ಕಾಂಗ್ರೆಸ್‌ನ್ನು ಮತ್ತೊಮ್ಮೆ ಗೆಲ್ಲಿಸುವುದು ಅನಿವಾರ್ಯವಾಗಿದೆ. ಸದಾ ಸಮಾಜ ಸೇವೆಯಲ್ಲಿರುವ ಅಶೋಕ್ ಕುಮಾರ್ ರೈ ಅವರನ್ನು ಗೆಲ್ಲಿಸಲು ನಾವೆಲ್ಲಾ ಶಕ್ತಿಮೀರಿ ಪ್ರಯತ್ನಿಸಬೇಕು ಎಂದು ಹೇಳಿದರು.
ಕಾರ್ಯಕರ್ತರು ಶಕ್ತಿಮೀರಿ ಪ್ರಯತ್ನಿಸಬೇಕು-ಎಸ್.ಡಿ ವಸಂತ: ಸ್ವಾಗತಿಸಿದ ಸರ್ವೆ ವಲಯ ಕಾಂಗ್ರೆಸ್ ಅಧ್ಯಕ್ಷ ಎಸ್.ಡಿ ವಸಂತ ಮಾತನಾಡಿ ಬಿಜೆಪಿ ದುರಾಡಳಿತ ಕೊನೆಗಾಣಿಸಲು ಮತ್ತು ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈಯವರನ್ನು ಬಹುಮತದಿಂದ ಚುನಾಯಿಸಲು ಕಾರ್ಯಕರ್ತರೆಲ್ಲರೂ ಶಕ್ತಿ ಮೀರಿ ಪ್ರಯತ್ನಿಸಬೇಕು ಎಂದು ಹೇಳಿದರು.
ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ ವಿಶ್ವನಾಥ ರೈ, ಪ್ರ.ಕಾರ್ಯದರ್ಶಿ ಅಮಳ ರಾಮಚಂದ್ರ, ಬ್ಲಾಕ್ ಉಸ್ತುವಾರಿ ಮುರಳೀಧರ ರೈ ಮಠಂತಬೆಟ್ಟು, ಪ್ರಚಾರ ಸಮಿತಿ ಅಧ್ಯಕ್ಷ ಭಾಸ್ಕರ ಗೌಡ ಕೋಡಿಂಬಾಳ, ಕೆಪಿಸಿಸಿ ಕಾರ್ಯದರ್ಶಿ ಎಂ.ಎಸ್ ಮುಹಮ್ಮದ್ ಮೊದಲಾದವರು ಮಾತನಾಡಿ ಕಾಂಗ್ರೆಸ್‌ಗೆ ಮತ ನೀಡಿ ಗೆಲ್ಲಿಸುವಂತೆ ಮನವಿ ಮಾಡಿದರು.
ವೇದಿಕೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ವಿ.ಎಚ್.ಎ ಶಕೂರ್ ಹಾಜಿ, ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಕಾರ್ಯದರ್ಶಿ ನಝೀರ್ ಮಠ, ಜಿಲ್ಲಾ ಕಾಂಗ್ರೆಸ್ ವಕ್ತಾರ ಮಹಮ್ಮದ್ ಬಡಗನ್ನೂರು, ಮುಂಡೂರು ಸಿ.ಎ ಬ್ಯಾಂಕ್ ಅಧ್ಯಕ್ಷ ಸುರೇಶ್ ಕುಮಾರ್ ಸೊರಕೆ, ಪ್ರಚಾರ ಸಮಿತಿ ಸಹ ಸಂಚಾಲಕರಾದ ವೇದನಾಥ ಸುವರ್ಣ ನರಿಮೊಗರು, ಎಂ.ಪಿ ಅಬೂಬಕ್ಕರ್, ನಿರ್ದೇಶಕರಾದ ಆನಂದ ಪೂಜಾರಿ, ಕೊರಗಪ್ಪ ಸೊರಕೆ, ಕಾಂಗ್ರೆಸ್ ಬೂತ್ ಅಧ್ಯಕ್ಷರಾದ ಯತೀಶ್ ರೈ ಮೇಗಿನಗುತ್ತು, ಮಜೀದ್ ಬಾಳಾಯ, ಮುಂಡೂರು ಗ್ರಾ.ಪಂ ಸದಸ್ಯ ಕಮಲೇಶ್ ಎಸ್.ವಿ, ಕಮಲಾ ನೇರೋಳ್ತಡ್ಕ, ವಿಜಯಾ ಕರ್ಮಿನಡ್ಕ, ತಾ.ಪಂ ಮಾಜಿ ಸದಸ್ಯೆ ಸುಮತಿ, ಎನ್‌ಎಸ್‌ಯುಐ ಮುಖಂಡ ಫಾರೂಕ್ ಬಾಯಬೆ, ನಗರಸಭೆ ಮಾಜಿ ಸದಸ್ಯ ಅನ್ವರ್ ಖಾಸಿಂ, ಲ್ಯಾನ್ಸಿ ಮಸ್ಕರೇನ್ಹಸ್, ಇಸಾಕ್ ಸಾಲ್ಮರ ಉಪಸ್ಥಿತರಿದ್ದರು. ಬ್ಲಾಕ್ ಕಾಂಗ್ರೆಸ್ ಸದಸ್ಯ ರಾಮಚಂದ್ರ ಸೊರಕೆ ವಂದಿಸಿದರು. ಬ್ಲಾಕ್ ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳ ಅಧ್ಯಕ್ಷ ಸಿದ್ದೀಕ್ ಸುಲ್ತಾನ್ ಕೂಡುರಸ್ತೆ ಕಾರ್ಯಕ್ರಮ ನಿರೂಪಿಸಿದರು. ನೂರಾರು ಮಂದಿ ಭಾಗವಹಿಸಿದ್ದರು.
ಜೋರು ಮಾತನಾಡಿದರೆ ಬಿಜೆಪಿಯವರಿಗೆ ಟೆನ್ಶನ್
ನಾನು ಜೋರಾಗಿ ಮಾತನಾಡಿದರೆ ಬಿಜೆಪಿಯವರಿಗೆ ಟೆನ್ಶನ್ ಶುರುವಾಗುತ್ತದೆ. ನಾನು ಮಾತನಾಡಿರುವ ಭಾಷಣದ ತುಣುಕನ್ನು ಅರ್ದ ಕಟ್ ಮಾಡಿ ಅಪಪ್ರಚಾರ ನಡೆಸುವ ಮೂಲಕ ಬಿಜೆಪಿಗರು ವಿಘ್ನ ಸಂತೋಷ ಪಡೆಯುತ್ತಾರೆ. ಬಿಜೆಪಿಯವರ ಅಪಪ್ರಚಾರಕ್ಕೆ ತಲೆ ಕೆಡಿಸಿಕೊಳ್ಳುವವನು ನಾನಲ್ಲ.
ಇಲ್ಲಿನ ಶಾಸಕರು ಯಾವುದೇ ಅಭಿವೃದ್ಧಿ ಮಾಡದೇ ಮಜಾ ಮಾಡಿದ್ದಾರೆ. ಅದಕ್ಕಾಗಿ ಜನತೆ ಈ ಬಾರಿ ಬಿಜೆಪಿಗೆ ತಕ್ಕ ಪಾಠ ಕಲಿಸಿಯೇ ಕಲಿಸುತ್ತಾರೆ. ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಸೇರಿರುವುದನ್ನು ನೋಡುವಾಗ ಕಾಂಗ್ರೆಸ್ ಗೆಲುವು ಖಚಿತ ಎಂಬಂತಾಗಿದೆ.
-ಅಶೋಕ್ ಕುಮಾರ್ ರೈ, ಕಾಂಗ್ರೆಸ್ ಅಭ್ಯರ್ಥಿ