ಗಂಗಾ ಕಲ್ಯಾಣ ದುರುಪಯೋಗ, ಜಾತಿ ನಿಂದನೆ ಆರೋಪ – ಗ್ರಾ.ಪಂ. ಮಾಜಿ ಸದಸ್ಯೆ, ಪತಿ ವಿರುದ್ಧ ಪ್ರಕರಣ ದಾಖಲು

0

ಉಪ್ಪಿನಂಗಡಿ: ಆದಿ ದ್ರಾವಿಡ ಸಮುದಾಯದ ವ್ಯಕ್ತಿಯೋರ್ವರ ಹೆಸರಿನಲ್ಲಿ ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ಮಂಜೂರಾದ ಕೊಳವೆ ಬಾವಿಯ ನೀರನ್ನು ತನ್ನ ಸ್ವಂತಕ್ಕೆ ಉಪಯೋಗಿಸಿದ್ದಲ್ಲದೆ, ಅವರ ಹೆಸರಿನಲ್ಲಿ ಹಣಕಾಸು ಸಂಸ್ಥೆಯಲ್ಲಿ ಸಾಲ ಪಡೆದು ಅದನ್ನು ತಾನು ಪಡೆದುಕೊಂಡು, ಬಳಿಕ ಕಟ್ಟದೇ, ಕೇಳಲು ಬಂದಾಗ ಅವರಿಗೆ ಜಾತಿ ನಿಂದನೆ ಹಾಗೂ ಜೀವ ಬೆದರಿಕೆ ಹಾಕಿದ ಆರೋಪದಲ್ಲಿ 34 ನೆಕ್ಕಿಲಾಡಿ ಗ್ರಾ.ಪಂ. ಮಾಜಿ ಸದಸ್ಯೆ ಸತ್ಯವತಿ ಹಾಗೂ ಅವರ ಪತಿ ಹರೀಶ್ ಪೂಂಜಾ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದಲಿತ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

34 ನೆಕ್ಕಿಲಾಡಿ ಗ್ರಾಮದ ಅಲಿಮಾರ್ ಮನೆ ನಿವಾಸಿ ಅಣ್ಣಿ ಆದಿ ದ್ರಾವಿಡ ಎಂಬವರ ಪತ್ನಿ ಲೀಲಾ ಎಂಬವರು ಈ ದೂರು ನೀಡಿದ್ದು, ‘ತನ್ನ ಅತ್ತೆ ಬೊಮ್ಮಿಯವರ ಹೆಸರಿನಲ್ಲಿ ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ಮಂಜೂರಾದ ಕೊಳವೆ ಬಾವಿಯನ್ನು ಅಲಿಮಾರ್‌ನ ಸತ್ಯವತಿ ಎಂಬವರು ತನ್ನ ಸ್ವಂತಕ್ಕೆ ಉಪಯೋಗಿಸಿಕೊಂಡಿದ್ದು, ಅಲ್ಲದೇ, ಅವರು ನನ್ನ ಮುಗ್ಧತೆಯನ್ನು ಉಪಯೋಗಿಸಿಕೊಂಡು ಹಣಕಾಸು ಸಂಸ್ಥೆಯೊಂದರಿಂದ ನನ್ನ ಹೆಸರಿನಲ್ಲಿ 30 ಸಾವಿರ ರೂ. ಸಾಲ ಪಡೆಯಲು ಹೇಳಿ ಈ ಹಣವನ್ನು ಅವರೇ ತೆಗೆದುಕೊಂಡಿದ್ದಲ್ಲದೆ, ಅದನ್ನು ಕಟ್ಟಲು ಹೇಳಿದಾಗ ನನಗೆ 34 ನೆಕ್ಕಿಲಾಡಿ ಅಲಿಮಾರ್ ನಿವಾಸಿ ಸತ್ಯವತಿ ಹಾಗೂ ಅವರ ಪತಿ ಹರೀಶ್ ಪೂಂಜಾ ಜಾತಿ ನಿಂದನೆಗೈದು ಕೊಲೆ ಬೆದರಿಕೆ ಒಡ್ಡಿದ್ದಾರೆ’ ಎಂದು ಆರೋಪಿಸಿದ್ದಾರೆ. ಇವರು ಮಾಡಿರುವ ವಂಚನೆ ಬಗ್ಗೆ ಪೊಲೀಸ್ ಹಾಗೂ ಕಂದಾಯ ಇಲಾಖೆಗೆ ದೂರು ನೀಡಿದ್ದು, ಈ ಬಗ್ಗೆ ವಿಚಾರಣೆ ನಡೆಯುತ್ತಿದೆ. ಇದರಿಂದ ಆಕ್ರೋಶಿತರಾದ ಅವರು ಈ ಕೃತ್ಯವೆಸಗಿದ್ದಾರೆ ಎಂದು ದೂರಿನಲ್ಲಿ ಲೀಲಾ, ಅವರು ಆಪಾದಿಸಿದ್ದಾರೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ 504, 506 ಐಪಿಎಸ್ ಸೆಕ್ಷನ್ ಮತ್ತು ಕಲಂ 3(1)(ಆರ್)(ಎಸ್) ಎಸ್‌ಸಿ/ ಎಸ್ಟಿ ದೌರ್ಜನ್ಯ ಕಾಯ್ದೆ 2015ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

LEAVE A REPLY

Please enter your comment!
Please enter your name here