ತ್ಯಾಗಪೂರ್ಣ ಸೇವೆ ಜೀವನದಲ್ಲಿ ಅತೀ ಮುಖ್ಯ: ಒಡಿಯೂರು ಶ್ರೀ
ವಿಟ್ಲ: ಮನುಷ್ಯ ತನ್ನ ಬದುಕನ್ನು ಸಾರ್ಥಕತೆಯೆಡೆಗೆ ಸಾಗಿಸಲು ಗುರುಹಿರಿಯರ ಆಶೀರ್ವಾದ ಆದರ್ಶ ಮುಖ್ಯ. ತ್ಯಾಗಪೂರ್ಣ ಸೇವೆ ಜೀವನದಲ್ಲಿ ಅತೀ ಮುಖ್ಯ, ಮನಸ್ಸು ಹಾಗೂ ಉತ್ತಮ ಭಾವನೆ ಮನುಷ್ಯನಿಗೆ ಅತೀ ಮುಖ್ಯ ಎಂದು ಶ್ರೀಧಾಮ ಮಾಣಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.
ಅವರು ಎ.29ರಂದು ಶ್ರೀಧಾಮದಲ್ಲಿ ಶ್ರೀ ಮಹಾಲಕ್ಷ್ಮೀ ಮಹಿಳಾ ಸೇವಾ ಸಮಿತಿ ಮತ್ತು ಶ್ರೀಧಾಮ ಮಿತ್ರ ವೃಂದದ ಆಶ್ರಯದಲ್ಲಿ ನಡೆದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯ ಪೂರ್ಣಾಹುತಿ ಬಳಿಕ ಆಶೀರ್ವಚನ ನೀಡಿದರು.
ಉತ್ತಮ ಕಾರ್ಯವಾಗಲು ಉತ್ತಮ ಮನಸ್ಸು ಮುಖ್ಯ. ಉತ್ತಮ ಕಲ್ಪನೆಯೊಂದಿಗೆ ಸಾಗಿದರೆ ಜೀವನ ಪಾವನವಾಗುವುದು. ಮಹತ್ಮರ ದರ್ಶನ ಅಂತರ್ಗತವಾಗಿ ನೋಡಬೇಕು. ಉತ್ತಮ ಕರ್ಮದಲ್ಲಿ ಉತ್ತಮ ಅನುಭವ ಪಡೆಯಬಹುದು. ಆಗ ಮಾತ್ರ ಉತ್ತಮ ಜ್ಞಾನ ಸಂಪಾದನೆ ಸಾಧ್ಯ. ಶ್ರೀಧಾಮದಲ್ಲಿ ಶ್ರೀ ಮಹಾಲಕ್ಷ್ಮೀ ಮಹಿಳಾ ಸೇವಾ ಸಮಿತಿ ಮತ್ತು ಶ್ರೀಧಾಮ ಮಿತ್ರ ವೃಂದದ ಸೇವೆ ಅನನ್ಯವಾದುದು. ಅವರ ತ್ಯಾಗಪೂರ್ಣ ಸೇವೆಯಿಂದಾಗಿ ಶ್ರೀಧಾಮದಲ್ಲಿ ಬಹಳಷ್ಟು ಕೆಲಸಕಾರ್ಯಗಳಾಗಿವೆ ಎಂದರು. ಈ ಸಂದರ್ಭದಲ್ಲಿ ಟ್ರಸ್ಟಿ ತಾರನಾಥ ಕೊಟ್ಟಾರಿ, ಉದ್ಯಮಿ ಭಾಸ್ಕರ ಶೆಟ್ಟಿ ಪುಣೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಬೆಳಗ್ಗೆ ಗಣಪತಿ ಹೋಮ, ಲಕ್ಷ್ಮೀ ಕಲ್ಪೋಕ್ತ ಪೂಜೆ, ಗುರುಪೂಜೆ ನಡೆಯಿತುಮ ಬಳಿಕ ಚಂಡಿಕಾ ಯಾಗ ಆರಂಭಗೊಂಡಿತು. ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ನಡೆಯಿತು. ಮಧ್ಯಾಹ್ನ ಯಾಗದ ಪೂರ್ಣಾಹುತಿ ಬಳಿಕ ಮಹಾಪೂಜೆ ನಡೆದು ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.