ಶಿರಾಡಿ: ಚರ್ಚ್‌ನಿಂದ ಹರಕೆಯ ಚಿನ್ನ, ಬೆಳ್ಳಿ, ಕಾಣಿಕೆ ಡಬ್ಬಿ ಕಳ್ಳತನ

0

ನೆಲ್ಯಾಡಿ: ಕಡಬ ತಾಲೂಕಿನ ಶಿರಾಡಿ ಗ್ರಾಮದ ಶಿರಾಡಿ ಸೈಂಟ್ ಪೀಟರ್ಸ್ ಮತ್ತು ಪೌಲ್ಸ್ ಚಾಕೋಬೈಟ್ ಸಿರಿಯನ್ ಚರ್ಚ್‌ನಿಂದ ಹರಕೆಯ ರೂಪದಲ್ಲಿ ಬಂದಿದ್ದ ಚಿನ್ನ, ಬೆಳ್ಳಿ, ಕಾಣಿಕೆ ಡಬ್ಬಿಯಲ್ಲಿನ ನಗದು ಹಾಗೂ ಡಿಸೀಲ್ ಸೇರಿ ಸುಮಾರು 1.08 ಲಕ್ಷ ರೂ.ಮೌಲ್ಯದ ಸೊತ್ತು ಕಳವುಗೊಂಡಿರುವ ಘಟನೆ ನಡೆದಿದೆ.


ಎ.30ರ ಸಂಜೆ 3 ಗಂಟೆಯಿಂದ ಮೇ 1ರ ರಾತ್ರಿ 7 ಗಂಟೆ ಮಧ್ಯದ ಅವಧಿಯಲ್ಲಿ ಈ ಕಳ್ಳತನ ನಡೆದಿದೆ. ಚರ್ಚ್‌ನ ಕಛೇರಿ ಕೊಠಡಿಯ ಬಾಗಿಲ ಚಿಲಕ ಮುರಿದು ಒಳನುಗ್ಗಿದ ಕಳ್ಳರು ಕಚೇರಿಯೊಳಗೆ ಕಬ್ಬಿಣದ ಕಪಾಟನಲ್ಲಿ ಬಿಳಿ ಪ್ಲಾಸ್ಟಿಕ್ ಡಬ್ಬದಲ್ಲಿದ್ದ 12 ಗ್ರಾಂ. ತೂಕದ ಹರಕೆಯ ಚಿನ್ನ ಹಾಗೂ ಅಂದಾಜು 250 ಗ್ರಾಂ. ತೂಕದ ಹರಕೆಯ ಬೆಳ್ಳಿ, ಮೇಜಿನ ಡ್ರವರ್‌ನಲ್ಲಿದ್ದ ಕಾಣಿಕೆ ಡಬ್ಬದಲ್ಲಿದ್ದ 15,880 ನಗದು ದೋಚಿದ್ದಾರೆ. ಬಳಿಕ ಅಲ್ಲಿದ್ದ ಮರದ ಕಪಾಟನ್ನು ತೆಗೆದು ದಾಖಲಾತಿಗಳನ್ನು ಚೆಲ್ಲಾಪಿಲ್ಲಿ ಮಾಡಲಾಗಿದೆ. ತೆರೆದ ಶೆಡ್‌ನಲ್ಲಿದ್ದ ಜನರೇಟರ್‌ನ ಬೀಗವನ್ನು ಮುರಿದು ಅದರಲ್ಲಿ ಕಪ್ಪು ಬಣ್ಣದ ಕ್ಯಾನ್‌ನಲ್ಲಿದ್ದ 35 ಲೀಟರ್ ಡಿಸೀಲ್ ಕಳ್ಳತನ ಮಾಡಲಾಗಿದೆ. ಚರ್ಚ್‌ನ ಒಂದು ಬಾಗಿಲಿನ ಲಾಕರ್‌ನ್ನು ಬಲವಂತವಾಗಿ ಮೀಟಿ ತೆಗೆದು ಚರ್ಚ್‌ನಲ್ಲಿದ್ದ 3,500 ನಗದು ಇರುವ ಪ್ಲಾಸ್ಟಿಕ್ ಕಾಣಿಕೆ ಡಬ್ಬಿಯನ್ನು ಕಳ್ಳತನ ಮಾಡಲಾಗಿದೆ. ಚಿನ್ನ, ಬೆಳ್ಳಿ, ಡಿಸೀಲ್ ಹಾಗೂ ನಗದು ಸೇರಿ 1,08,455 ರೂ.,ಮೌಲ್ಯದ ಸೊತ್ತು ಕಳ್ಳತನವಾಗಿದೆ ಎಂದು ಅಂದಾಜಿಸಲಾಗಿದೆ.


ಎ.30ರಂದು ಬೆಳಿಗ್ಗೆ ಎಂದಿನಂತೆ ಚರ್ಚ್‌ನಲ್ಲಿ ಪ್ರಾರ್ಥನೆ ನಡೆದ ಬಳಿಕ ಬಂದ ಕಾಣಿಕೆಯ ಹಣ ಲೆಕ್ಕಾಚಾರ ಮಾಡಿ ಸಂಜೆ 3 ಗಂಟೆಗೆ ಚರ್ಚ್‌ನ ಸದಸ್ಯರು ಚರ್ಚ್‌ನ ಬಾಗಿಲು ಭದ್ರಪಡಿಸಿ ಹೋಗಿದ್ದರು. ಮೇ 1 ರಂದು ಸಂಜೆ ಸುಮಾರು 7 ಗಂಟೆಗೆ ಜೇನ್ ಜೋನ್ ಎಂಬವರು ಚರ್ಚ್‌ನ ಸಹಾಯಕರ ರೂಮ್‌ನ ಲೈಟ್ ಉರಿಯುತ್ತಿರುವುದನ್ನು ಗಮನಿಸಿ ರೂಮ್‌ನ ಬಳಿ ಹೋಗಿ ನೋಡಿದಾಗ ಬಾಗಿಲಿನ ಕೊಂಡಿಯನ್ನು ಬಲವಂತವಾಗಿ ತೆಗೆದಿರುವುದನ್ನು ನೋಡಿ ಶ್ಯಾಮ್ ಮ್ಯಾಥ್ಯೂ ಎಂಬವರಿಗೆ ಮಾಹಿತಿ ನೀಡಿದ್ದರು. ಬಳಿಕ ಅವರು ಚರ್ಚ್‌ನ ಆಡಳಿತ ಮಂಡಳಿ ಕಾರ್ಯದರ್ಶಿ ಮನೋಜ್ ಜೋಯಿಸ್ ಎಂಬವರನ್ನು ಬರಲು ಹೇಳಿ ಅವರೊಂದಿಗೆ ಸಹಾಯಕರ ರೂಮಿನ ಒಳಗೆ ಹೋಗಿ ನೋಡಿದಾಗ ಎರಡೂ ಕಪಾಟುಗಳಲ್ಲಿನ ಸಾಮಾನುಗಳನ್ನು ಚಲ್ಲಾಪಿಲ್ಲಿ ಮಾಡಿದ್ದು, ಫಾದರ್ ಉಳಕೊಳ್ಳುವ ಕೊಠಡಿಯ ಬಾಗಿಲಿನ ಚಿಲಕವನ್ನು ಬಲವಂತವಾಗಿ ಮೀಟಿ ತೆಗೆದಿದ್ದು, ಕೊಠಡಿಯಲ್ಲಿದ್ದ ಕಬ್ಬಿಣದ ಕಪಾಟನ್ನು ಮೇಜಿನ ಡ್ರವರ್‌ನಲ್ಲೂ ಹುಡುಕಾಡಿ ಸೊತ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿರುವುದು ಕಂಡಬಂದಿದೆ. ಬಳಿಕ ಘಟನೆ ಕುರಿತು ಅವರು ಪೊಲೀಸರಿಗೆ ಮಾಹಿತಿ ನೀಡಿದ್ದರು.


ಶ್ವಾನದಳ, ಬೆರಳಚ್ಚು ತಜ್ಞರ ಆಗಮನ:
ಮೇ 2ರಂದು ಸ್ಥಳಕ್ಕೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲನೆ ನಡೆಸಿ ಮಾಹಿತಿ ಸಂಗ್ರಹಿಸಿದ್ದಾರೆ. ಉಪ್ಪಿನಂಗಡಿ ಸರ್ಕಲ್ ಇನ್ಸ್‌ಪೆಕ್ಟರ್, ಸಬ್‌ಇನ್ಸ್‌ಪೆಕ್ಟರ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚರ್ಚ್‌ನ ಆಡಳಿತ ಮಂಡಳಿ ಕಾರ್ಯದರ್ಶಿ ಮನೋಜ್ ಜೋಯಿಸ್, ಕೋಶಾಧಿಕಾರಿ ರಾಜೇಶ್ ಕೆ.ಕೆ., ಶಿರಾಡಿ ಗ್ರಾ.ಪಂ.ಉಪಾಧ್ಯಕ್ಷ ಕಾರ್ತಿಕೇಯನ್, ಸದಸ್ಯರಾದ ಎಂ.ಕೆ.ಪೌಲೋಸ್, ಸನ್ನಿಜಾನ್ ಮತ್ತಿತರರು ಪೊಲೀಸರಿಗೆ ಮಾಹಿತಿ ನೀಡಿದರು. ಚರ್ಚ್‌ನ ಕಾರ್ಯದರ್ಶಿ ಮನೋಜ್ ಜೋಯಿಸ್ ಅವರು ನೀಡಿದ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಕಲಂ 454, 457, 380 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here