ಬೆಳ್ಳಾರೆ:ಕಾಮಧೇನು ಗೋಲ್ಡ್ ಪ್ಯಾಲೇಸ್ ಬೀಗ ಒಡೆದು ಒಳಪ್ರವೇಶಿಸಿ ಆಭರಣ, ದಾಖಲೆಪತ್ರ, ಸಿಸಿ ಕ್ಯಾಮರಾ ಕೊಂಡೊಯ್ದ ಆರೋಪ – ಮಾಧವ ಗೌಡ, ಸ್ಪಂದನಾ, ದಿವ್ಯಪ್ರಭಾ ವಿರುದ್ಧ ಪ್ರಕರಣ ದಾಖಲು

0

ಪುತ್ತೂರು:ಬೆಳ್ಳಾರೆಯಲ್ಲಿರುವ ಚಿನ್ನಾಭರಣ ಮಳಿಗೆಯೊಂದರ ಬೀಗವನ್ನು ಒಡೆದು ಒಳಪ್ರವೇಶಿಸಿ ಮಳಿಗೆಯಲ್ಲಿದ್ದ ಚಿನ್ನ, ಬೆಳ್ಳಿ ಆಭರಣ, ದಾಖಲೆ ಪತ್ರ ಹಾಗೂ ಸಿಸಿ ಕ್ಯಾಮರಾಗಳನ್ನು ದರೋಡೆ ಮಾಡಿಕೊಂಡು ಹೋಗಿರುವುದಾಗಿ ಆರೋಪಿಸಿ ನೀಡಲಾದ ದೂರಿನ ಹಿನ್ನೆಲೆಯಲ್ಲಿ ಮಾಧವ ಗೌಡ, ಶ್ರೀಮತಿ ಸ್ಪಂದನಾ ಮತ್ತು ಅವರ ತಾಯಿ ದಿವ್ಯಪ್ರಭಾ ಗೌಡರ ವಿರುದ್ಧ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಳ್ಳಾರೆ ಗ್ರಾಮದ `ಧರ್ಮಶ್ರೀ ನಿಲಯ’ದ ಶ್ರೀಮತಿ ತಾರಾಕುಮಾರಿ(46ವ.)ಗಂಡ ಮಾಧವ ಗೌಡ ಎಂಬವರು ಸುಳ್ಯದ ಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ನೀಡಿರುವ ಖಾಸಗಿ ದೂರಿನ ಆಧಾರದಲ್ಲಿ ಇದೀಗ ಬೆಳ್ಳಾರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.ಜ.19ರಂದು ಮಧ್ಯಾಹ್ನ ಘಟನೆ ನಡೆದಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಬೆಳ್ಳಾರೆ ಧರ್ಮಶ್ರೀ ನಿಲಯದ ಮಾಧವ ಗೌಡ, ಪುತ್ತೂರು ಪರ್ಲಡ್ಕ ಫಾ.ಪತ್ರಾವೋ ಆಸ್ಪತ್ರೆ ಬಳಿಯ ಗುರ್ಜುರ್ ಪ್ಯಾಲೇಸ್‌ನ ಸ್ಪಂದನಾ ಗೌಡ ಮತ್ತು ಸ್ಪಂದನಾರವರ ತಾಯಿ ದಿವ್ಯಪ್ರಭಾ ಗೌಡ ಅವರ ವಿರುದ್ಧ ದೂರು ನೀಡಲಾಗಿದೆ. ತಾನು ಈ ಹಿಂದೆ ಬೆಳ್ಳಾರೆ ಪೇಟೆಯಲ್ಲಿ ಕಾಮಧೇನು ಗೋಲ್ಡ್ ಪ್ಯಾಲೇಸ್ ಎಂಬ ಚಿನ್ನಾಭರಣ ಮಳಿಗೆಯನ್ನು ಹೊಂದಿ ವ್ಯಾಪಾರ ಮಾಡಿಕೊಂಡಿದ್ದೆ. ಈ ಮಳಿಗೆಯನ್ನು ತನ್ನ ಗಂಡನ ಮೊದಲನೇ ಪತ್ನಿ ಶ್ರೀಮತಿ ನೀರಜಾಕ್ಷಿಯವರ ಮಗ ನವೀನ್ ಎಂ. ಹಾಗೂ ಆತನ ಪತ್ನಿ ಶ್ರೀಮತಿ ಸ್ಪಂದನರವರಿಗೆ 31-12-2020ರಂದು ಇತ್ತಂಡದವರು ಒಪ್ಪಿಕೊಂಡು ಮಾಡಿದ ಕರಾರಿನಂತೆ, ಮಳಿಗೆಯಲ್ಲಿದ್ದ ಚಿನ್ನ ಮತ್ತು ಬೆಳ್ಳಿಯ ಸ್ಟಾಕ್ ಸಮೇತ ರೂ.1,48,70,872ಕ್ಕೆ ಮಾರಾಟ ಮಾಡಿರುತ್ತಾರೆ. ಸದರಿ ಕರಾರಿನ ಪ್ರಕಾರ ಖರೀದಿದಾರರು ರೂ.10,000ವನ್ನು ಮುಂಗಡ ಪಾವತಿಸಿರುತ್ತಾರೆ. ಉಳಿದ ಹಣವನ್ನು 24 ತಿಂಗಳ ಒಳಗೆ ಪಾವತಿಸಬೇಕಾಗಿದ್ದು, ತಪ್ಪಿದಲ್ಲಿ ಚಿನ್ನಾರಭಣ ಮಳಿಗೆಯಲ್ಲಿರುವ ಆಭರಣಗಳು ಮತ್ತು ಪೀಠೋಪಕರಣಗಳನ್ನು ಒಳಗೊಂಡು ತನ್ನ ಸ್ವಾಧೀನಕ್ಕೆ ಹಿಂತಿರುಗಿಸುವಂತೆ ಕರಾರಿನಲ್ಲಿ ಒಪ್ಪಿಕೊಂಡಿರುತ್ತಾರೆ. ಕರಾರು ಒಪ್ಪಂದದ ಬಳಿಕ ಖರೀದಿದಾರರಾದ ನವೀನ್ ಎಂ.ಹಾಗೂ ಅವರ ಪತ್ನಿ ಶ್ರೀಮತಿ ಸ್ಪಂದನಾರವರು ವಶಕ್ಕೆ ಪಡೆದು ವ್ಯಾಪಾರ ಮಾಡುತ್ತಿದ್ದು ಕರಾರು ಒಪ್ಪಂದದಂತೆ 24 ತಿಂಗಳು ಕಳೆದರೂ ಉಳಿಕೆ ಹಣವನ್ನು ನೀಡಿರುವುದಿಲ್ಲ. ಕೆಲವು ಸಮಯಗಳ ಹಿಂದೆ ಖರೀದಿದಾರರಾದ ನವೀನ್ ಎಂ ಮತ್ತು ಶ್ರೀಮತಿ ಸ್ಪಂದನಾರವರ ವೈವಾಹಿಕ ಜೀವನದಲ್ಲಿ ಕಲಹ ಉಂಟಾಗಿದ್ದು ಆ ಬಳಿಕ ಕಾಮಧೇನು ಗೋಲ್ಡ್ ಪ್ಯಾಲೇಸ್‌ನಲ್ಲಿ ವ್ಯಾಪಾರ ಮುಚ್ಚಿರುತ್ತದೆ. 19-01-2023ರಂದು ಮಧ್ಯಾಹ್ನ ನನ್ನ ಗಂಡ ಮಾಧವ ಗೌಡ, ನವೀನ್ ಎಂ.ರವರ ಪತ್ನಿ ಶ್ರೀಮತಿ ಸ್ಪಂದನ ಮತ್ತು ಸ್ಪಂದನರ ತಾಯಿ ಶ್ರೀಮತಿ ದಿವ್ಯಪ್ರಭಾರವರು ಕೆಲವು ಗೂಂಡಾಗಳೊಂದಿಗೆ ಇನ್ನೋವಾ ಕಾರು ನಂ.ಕೆ.ಎ.19-ಎಂಎಂ 5356ರಲ್ಲಿ ಚಿನ್ನಾಭರಣ ಮಳಿಗೆಯ ಬಳಿ ಬಂದು ನವೀನ್ ಎಂ.ರವರ ಅನುಪಸ್ಥಿತಿಯಲ್ಲಿ, ಮಳಿಗೆಗೆ ಹಾಕಿರುವ ಬೀಗವನ್ನು ಬಲತ್ಕಾರವಾಗಿ ಒಡೆದು ಮಳಿಗೆಯ ಒಳಗೆ ಪ್ರವೇಶಿಸಿ ಮಳಿಗೆಯ ಒಳಗೆ ಇರುವ ಸಿಸಿ ಕೆಮರಾ ಬಂದ್ ಮಾಡಿ ಮಳಿಗೆಯಲ್ಲಿದ್ದ ಚಿನ್ನ ಹಾಗೂ ಬೆಳ್ಳಿಯ ಆಭರಣಗಳನ್ನು ಹಾಗೂ ನವೀನ್ ಎಂ.ರವರಿಗೆ ಸಂಬಂಧಪಟ್ಟ ಫೈನಾನ್ಸ್ನ ದಾಖಲೆ, ಫೈಲು, ಮೂಲ ಕರಾರುಪತ್ರಗಳನ್ನು, ಮಳಿಗೆಯ ಒಳಗಿನ ಸಿಸಿ ಕೆಮರಾಗಳನ್ನು ದರೋಡೆ ಮಾಡಿಕೊಂಡು ಹೋಗಿ ಕಲಂ 451, 453, 454,406,409,420,380 ಜೊತೆಗೆ 34 ಐಪಿಸಿಯಂತೆ ಶಿಕ್ಷಾರ್ಹ ಅಪರಾಧ ಎಸಗಿರುತ್ತಾರೆ ಎಂದು ಶ್ರೀಮತಿ ತಾರಾ ಕುಮಾರಿಯವರು ನ್ಯಾಯಾಲಯಕ್ಕೆ ಖಾಸಗಿ ದೂರು ನೀಡಿದ್ದರು. ನ್ಯಾಯಾಲಯದ ನಿರ್ದೇಶನದಂತೆ ಬೆಳ್ಳಾರೆ ಪೊಲೀಸರು ಆರೋಪಿಗಳ ವಿರುದ್ಧ ಐಪಿಸಿ 1860(ಸೆಕ್ಷನ್ 451,453,454,406,409,420,380,34)ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here