ನನ್ನ ಮೇಲಿನ ಆರೋಪಕ್ಕೆ ಹುರುಳಿಲ್ಲ – ಅರುಣ್ ಕುಮಾರ್ ಪುತ್ತಿಲ ಸ್ಪಷ್ಟನೆ
ಪುತ್ತೂರು: ಹಿಂದುತ್ವ ಹಿಂದುತ್ವ ಎಂದು ಹೇಳಿಕೊಳ್ಳುತ್ತಿರುವ ಅರುಣ್ ಕುಮಾರ್ ಪುತ್ತಿಲ ಹಿಂದು ದೇವಸ್ಥಾನಕ್ಕೆ ಅನ್ಯಾಯ ಮಾಡಿದ್ದಾರೆ. ಅಲ್ಲಿನ ಅರ್ಚಕರಿಗೆ ಸಾರ್ವಜನಿಕವಾಗಿ ನಿಂಧಿಸಿದ್ದಾರೆ ಇಂದು ಹಿಂದುತ್ವವಾ ಎಂದು ನರಿಮೊಗರು ಗ್ರಾಮದ ಮುಂಡೂರು ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನದ ಅರ್ಚಕ ರಮೇಶ ಬೈಪಡಿತ್ತಾಯ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಹಿಂದುತ್ವ ಎಂದು ಹೇಳಿಕೊಂಡು ಅರುಣ್ ಕುಮಾರ್ ಪುತ್ತಿಲ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ.ಅವರ ಇನ್ನೊಂದು ಮುಖವನ್ನು ಈ ಸಂದರ್ಭದಲ್ಲಿ ಹೇಳಲೇ ಬೇಕಾಗುತ್ತದೆ ಎಂಬ ನಿಟ್ಟಿನಲ್ಲಿ ಪತ್ರಿಕಾಗೋಷ್ಠಿ ಮಾಡುವುದಾಗಿ ಬಂದಿದ್ದೇನೆ ಎಂದ ಅವರು ಜೀರ್ಣ ವ್ಯವಸ್ಥೆಯಲ್ಲಿದ್ದ ಮುಂಡೂರು ಶ್ರೀಮೃತ್ಯುಂಜಯೇಶ್ವರ ದೇವಸ್ಥಾನದಲ್ಲಿ ಹಲವು ವರ್ಷಗಳ ಹಿಂದೆ ದಾರಿ ವಿವಾದಕ್ಕೆ ಸಂಬಂಧಿಸಿ ದೇವಳದ ಅಧಿಕಾರ ಪಡೆದು ಬಳಿಕ ಅಲ್ಲಿಂದ ಹೊರ ಹೋಗಿ ಮತ್ತೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಅವ್ಯವಹಾರ ನಡೆಸಿದ್ದಾರೆ. ಈ ನಡುವೆ ಅರ್ಚಕರನ್ನು ಸಾರ್ವಜನಿಕರ ಎದುರೇ ನಿಂದಿಸಿದ್ದಾರೆ. ಅವರ ಸಮಿತಿ ವಜಾಗೊಂಡ ಬಳಿಕ 12 ವರ್ಷ ದೇವಸ್ಥಾನಕ್ಕೆ ಬಾರದೆ ಅಷ್ಟಮಂಗಲ ಸಂದರ್ಭ ಮತ್ತೆ ಪ್ರವೇಶಿಸಿ ಗಲಾಟೆ ಮಾಡಿದ್ದಾರೆ. ವಾಸ್ತು ಶಿಲ್ಪಿ, ತಂತ್ರಿಗಳ ನೇತೃತ್ವದಲ್ಲೇ ಆಗಿರುವ ನೂತನ ನಾಗನಕಟ್ಟೆಗೆ ಹೈ ಕೋರ್ಟ್ ಸ್ಟೇ ತರಲು ಹೋಗಿದ್ದರು. ಹಿಂದುತ್ವ ಎಂದು ಹೇಳಿ ಇವರ ಇನ್ನೊಂದು ಮುಖವನ್ನೂ ಕೂಡಾ ಜನರು ನೋಡಬೇಕು. ಇವರು ಜನಪ್ರತಿನಿಧಿ ಆದರೆ ಏನು ಮಾಡಿಯಾರು ಎಂದು ಪ್ರಶ್ನಿಸಿದ ಅವರು ಮತದಾರರು ಮತ ಚಲಾವಣೆ ಮಾಡುವ ಮೊದಲು ಈ ವಿಚಾರ ತಿಳಿದುಕೊಳ್ಳಿ ಎಂದರು.
ನನ್ನ ಮೇಲಿನ ಆರೋಪಕ್ಕೆ ಹುರುಳಿಲ್ಲ – ಅರುಣ್ ಕುಮಾರ್ ಪುತ್ತಿಲ ಸ್ಪಷ್ಟನೆ
ಯಾರೇ ಆಗಲಿ ಸರಕಾರದ ನಿಯಮದಂತೆ ಕರ್ತವ್ಯ ನಿರ್ವಹಿಸಬೇಕು. ಧಾರ್ಮಿಕ ಭಾವನೆಗೆ ಧಕ್ಕೆಯಾಗದ ಹಾಗೆ ನಿಯಮದಂತೆ ನಡೆಯಬೇಕು. ಇದಕ್ಕೆ ವಿರುದ್ಧವಾಗಿ ಸರಕಾರದ ನಿಯಮವನ್ನು ಸರಿಯಾಗಿ ಮಾಡದಿದ್ದಾಗ ಇಲಾಖೆ ಕರ್ತವ್ಯದಲ್ಲಿರುವ ವ್ಯಕ್ತಿಯನ್ನು ಅಮಾನತು ಮಾಡುವುದು ಸಹಜ. ಅದೇ ಪ್ರಕ್ರಿಯೆ ನಡೆದಿದೆ. ಹಿಂದು ಭಕ್ತರ ಭಾವನೆಗೆ ದಕ್ಕೆಯಾಗದಂತೆ ದೇವಸ್ಥಾನದ ಕಾರ್ಯಕ್ರಮಗಳು ನಡೆಯಬೇಕು. ಅದಕ್ಕೆ ಪೂರಕವಾಗಿ ಹಿಂದುತ್ವದ ಆಧಾರದಲ್ಲೇ ಭಕ್ತರ ಸಹಕಾರದೊಂದಿಗೆ ಧಾರ್ಮಿಕ ಕ್ಷೇತ್ರ ಬೆಳಗಿಸುವಲ್ಲಿ ಪ್ರಯತ್ನಿಸಿದ್ದೇನೆ. ಆದರೆ ಚುನಾವಣೆ ಸಂದರ್ಭ ಬರುವ ಅಪಪ್ರಚಾರ, ಷಡ್ಯಂತ್ರಗಳಿಗೆ ದೇವರೆ ಉತ್ತರ ಕೊಡಲಿದ್ದಾರೆ ಎಂದು ಅರುಣ್ ಕುಮಾರ್ ಪುತ್ತಿಲ ತಿಳಿಸಿದ್ದಾರೆ.