ಕುಂಬ್ರದಲ್ಲಿ ಪಕ್ಷೇತರ ಅಭ್ಯರ್ಥಿ ಅರುಣ್ ಪುತ್ತಿಲ ಚುನಾವಣಾ ಪ್ರಚಾರ ಸಭೆ

0

24 ಗಂಟೆಯೂ ನಾನು ನಿಮ್ಮ ಮನೆ ಮಗನಾಗಿರುತ್ತೇನೆ: ಅರುಣ್ ಪುತ್ತಿಲ

ಪುತ್ತೂರು: ಭ್ರಷ್ಟಾಚಾರ ರಹಿತ ಆಡಳಿತ, ಮೂಲಭೂತ ಸೌಕರ್ಯಗಳಿಂದ ವಂಚಿತರಾದ ಬಡವರ್ಗದವರಿಗೆ ನ್ಯಾಯ ಕೊಡಿಸುವ ಮೂಲಕ ಶಾಂತಿ, ನೆಮ್ಮದಿಯ ಬದುಕನ್ನು ಕಂಡುಕೊಳ್ಳುವುದು, ಸಮಸ್ಯೆ, ಸವಾಲುಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವುದು ಎಂಬ ನಿಟ್ಟಿನಲ್ಲಿ ನಾನು ರಾಜಕೀಯ ಪಕ್ಷಗಳಿಂದ ಭ್ರಮನಿರಸನಗೊಂಡು ಕಾರ್ಯಕರ್ತರ ಪ್ರೀತಿಯ ದ್ಯೋತಕವಾಗಿ ನಾನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ. ನನ್ನಲ್ಲಿ ಹಣ, ಅಧಿಕಾರ ಇಲ್ಲ ಆದರೆ ನನ್ನ ಎಲ್ಲಾ ಕಾರ್ಯಕರ್ತರ ಪ್ರೀತಿ ನನ್ನ ಜೊತೆ ಇದೆ. ಇದೇ ನನಗೆ ಸಾಕು. ನಿಜವಾದ ಹಿಂದುತ್ವದ ಆಧಾರದಲ್ಲಿ ಪುತ್ತೂರಲ್ಲಿ ಹಿಂದುತ್ವಕ್ಕೆ ಜಯ ಸಿಕ್ಕೇ ಸಿಗುತ್ತದೆ ಎಂಬ ನಂಬಿಕೆ ನನ್ನಲ್ಲಿದೆ ಎಂದು ಪಕ್ಷೇತರ ಅಭ್ಯರ್ಥಿ ಅರುಣ್ ಪುತ್ತಿಲ ಹೇಳಿದರು.


ಅವರು ಮೇ.03 ರಂದು ಸಂಜೆ ಕುಂಬ್ರದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು. ಕಾಂಗ್ರೆಸ್ ಪಕ್ಷವು ತನ್ನ ಪ್ರಣಾಳಿಕೆಯಲ್ಲಿ ಭಜರಂಗ ದಳವನ್ನು ನಿಷೇಧ ಮಾಡುತ್ತೇವೆ ಎಂದು ಹೇಳಿಕೊಂಡಿದೆ. ತಾಕತ್ತಿದ್ದರೆ ಕಾಂಗ್ರೆಸ್ ಭಜರಂಗದಳವನ್ನು ನಿಷೇಧ ಮಾಡಿ ನೋಡಲಿ ಎಂದು ಪುತ್ತಿಲ ಸವಾಲೆಸದರು. ಹಿಂದೂ ಸಮಾಜಕ್ಕೆ ಶಕ್ತಿಯನ್ನು ಕೊಡುವ ಕೆಲಸವನ್ನು ಮಾಡಿಕೊಂಡು ಬಂದಿರುವ ಭಜರಂಗ ದಳವನ್ನು ನಿಷೇಧ ಮಾಡುತ್ತೇವೆ ಎಂದೇಳುವ ಕಾಂಗ್ರೆಸ್ ಮತಾಂಧ ಸಂಘಟನೆಗಳನ್ನು ಬೆಂಬಲಿಸುವ ಪ್ರಯತ್ನ ಮಾಡುತ್ತಿರುವುದು ಕಂಡು ಬರುತ್ತಿದೆ ಇದನ್ನು ಜನರು ಅರ್ಥ ಮಾಡಿಕೊಳ್ಳಬೇಕಾಗಿದೆ ಎಂದರು.

ಜನರು ಬುದ್ದಿವಂತರಾಗಿದ್ದಾರೆ. ಪ್ರವೀಣ್ ಪೂಜಾರಿ ಹತ್ಯೆಯ ಸಂದರ್ಭದಲ್ಲಿ ಗುಪ್ತಚರ ಇಲಾಖೆ ಕೊಟ್ಟಂತಹ ಮಾಹಿತಿಯಲ್ಲಿ ಭಯೋತ್ಪಾದನೆಯ ಮೂಲ ಪುತ್ತೂರು ಆಗಿದೆ ಎಂಬ ವಿಚಾರವನ್ನು ನಾವು ಅರ್ಥ ಮಾಡಿಕೊಳ್ಳಬೇಕಾಗಿದೆ.ಈ ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಎಸ್‌ಡಿಪಿಐ ಯಾವುದೇ ಕಾರಣಕ್ಕೂ ಬರದಂತೆ ಮತದಾರರು ನೋಡಿಕೊಳ್ಳಬೇಕಾಗಿದೆ ಎಂದು ಪುತ್ತಿಲ ಹೇಳಿದರು.


ಪುತ್ತೂರಲ್ಲಿ ಹಿಂದುತ್ವ ಗೆದ್ದೇ ಗೆಲ್ಲುತ್ತದೆ ಎಂಬ ವಿಶ್ವಾಸ ಇದೆ ಎಂದ ಅರುಣ್ ಪುತ್ತಿಲರವರು, ನೈಜ ಹಿಂದುತ್ವದ ಅಡಿಯಲ್ಲಿ ಸ್ಪರ್ಧೆ ಮಾಡುತ್ತಿರುವ ಒಬ್ಬ ಸಾಮಾನ್ಯ ಕಾರ್ಯಕರ್ತನಿಗೆ ಗೆಲುವು ದೊರೆಯಲಿದೆ ಆ ಗೆಲುವು ನಿಮ್ಮೆಲ್ಲರ ಗೆಲುವು ಆಗಲಿದೆ. ದಿನದ 24 ಗಂಟೆಯೂ ನಿಮ್ಮ ಮನೆ ಮಗನಾಗಿ ಸೇವೆ ಮಾಡಲು ನನಗೆ ನೀವೆಲ್ಲರೂ ಅನುವು ಮಾಡಿಕೊಡಬೇಕು, ಹಿಂದುತ್ವವನ್ನು ಭರ್ಜರಿ ಮತಗಳಿಂದ ಗೆಲ್ಲಿಸಬೇಕು ಎಂದು ಕೇಳಿಕೊಂಡರು.


ಜಲ ಪರಿವೀಕ್ಷಕ ರಾಜೀವ ಸುವರ್ಣರವರು ಮಾತನಾಡಿ, ಅರುಣ್ ಪುತ್ತಿಲರವರು ಅವರಾಗಿಯೇ ಸ್ಪರ್ಧೆಗೆ ನಿಲ್ಲಲಿಲ್ಲ, ಕಾರ್ಯಕರ್ತರ ಪ್ರೀತಿಯ ದ್ಯೋತಕವಾಗಿ ನಿಂತಿದ್ದಾರೆ. ನೈಜ ಹಿಂದುತ್ವಕ್ಕೆ ಓಟು ಹಾಕುವುದಾದರೆ ಪುತ್ತಿಲರಿಗೆ ಓಟು ಹಾಕಿ, ಆ ಮೂಲಕ ಹಿಂದುತ್ವವನ್ನು ಗೆಲ್ಲಿಸಿ ಎಂದು ಕೇಳಿಕೊಂಡರು. ಧರ್ಮದ ಮೇಲೆ ಅಧಿಕಾರ ಸರಿಯಲ್ಲ ಎಲ್ಲರನ್ನು, ಎಲ್ಲಾ ಧರ್ಮವನ್ನು ಒಂದೇ ರೀತಿಯಲ್ಲಿ ಕಾಣುವುದೇ ಸಂಸ್ಕಾರ, ಸಂಸ್ಕೃ ತಿಯಾಗಿದೆ ಎಂದ ರಾಜೀವ ಸುವರ್ಣರು, ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 1 ಲಕ್ಷದ 60 ಸಾವಿರ ಹಿಂದುಗಳ ಮತಗಳಿವೆ. ನಾವೆಲ್ಲರೂ ಈ ಓಟನ್ನು ಪುತ್ತಿಲರಿಗೆ ಹಾಕುವ ಮೂಲಕ ಹಿಂದುತ್ವಕ್ಕೆ ಜಯ ತಂದುಕೊಡಬೇಕು ಎಂದು ಕೇಳಿಕೊಂಡರು. ಶನಿಪೂಜೆಯ ಘಟನೆಗಳ ಬಗ್ಗೆ ಮಾತನಾಡಿದ ರಾಜೀವ ಸುವರ್ಣರು, ಶನಿಪೂಜೆಯ ಸಂದರ್ಭದಲ್ಲಿ ನಡೆದ ಘಟನೆಗಳ ಸತ್ಯಾಸತ್ಯತೆಗಳು ಈಗ ಒಂದೊಂದೇ ಹೊರ ಬರುತ್ತಿದ್ದು ಇದರ ಹಿಂದೆ ಪಿತೂರಿ ನಡೆಸಿದವರ ಬಾಯಿಂದಲೇ ಎಲ್ಲಾ ಸತ್ಯಗಳು ಹೊರಬೀಳುತ್ತಿರುವುದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಕೃಪೆ ಆಗಿದೆ ಎಂದರು.

ಶನಿಪೂಜೆಯ ಸಂದರ್ಭದಲ್ಲಿ ನಡೆದ ಲಾಠಿಚಾರ್ಜ್‌ನಲ್ಲಿ ಅದೆಷ್ಟೋ ಮಹಿಳೆಯರಿಗೆ ನೋವಾಗಿದೆ ಅವರ ಕರಿಮಣಿ ಸರ, ಕಾಲುಂಗುರ ಬಿದ್ದು ಹೋಗಿದೆ. ಅದೆಷ್ಟೋ ಮಹಿಳೆಯರು ಕಣ್ಣೀರು ಹಾಕಿದ್ದಾರೆ. ಆ ಶಾಪ ತಟ್ಟಲಿದೆ. ಶನಿ ಬಿಡಿಸಿದ್ದೇವೆ ಎಂದೇಳುವ ಜನರ ಬೆನ್ನೇರಿದ್ದಾನೆ ಶನಿ. ಮುಂದಕ್ಕೆ ಎಲ್ಲವೂ ಜನರಿಗೆ ಅರ್ಥವಾಗಲಿದೆ ಎಂದರು.


ಸುನೀಲ್ ಬೋರ್ಕರ್, ಮನ್ಮಥ ಶೆಟ್ಟಿ, ರಾಜರಾಮ್ ಭಟ್, ರಾಜಶೇಖರ್ ಕೋಟ್ಯಾನ್ ಮತ್ತಿತರರು ಮಾತನಾಡಿದರು. ಯುವರಾಜ್ ಪೂಂಜ ಸ್ವಾಗತಿಸಿ, ವಂದಿಸಿ ಕಾರ್ಯಕ್ರಮ ನಿರೂಪಿಸಿದರು. ನೂರಾರು ಸಂಖ್ಯೆಯಲ್ಲಿ ಜನರು ಸೇರಿದ್ದರು. ಭಾಷಣದ ಮಧ್ಯೆ ಮಧ್ಯೆ ಪುತ್ತಿಲರಿಗೆ ಜೈಹಾಕ ಹಾಕುತ್ತಿರುವುದು ಕೇಳಿಬರುತ್ತಿತ್ತು.

LEAVE A REPLY

Please enter your comment!
Please enter your name here