ಪುತ್ತೂರು: ಚುನಾವಣೆಗೆ ಸ್ಪರ್ದಿಸುತ್ತಿದ್ದೇನೆ ವೋಟು ಸಿಗಬೇಕು ಎಂದು ಜನತೆಗೆ ಸುಳ್ಳು ಭರವಸೆಯನ್ನು ಕೊಡುವುದಿಲ್ಲ ಮತ್ತು ಮಾತು ಕೊಟ್ಟಿದ್ದರೆ ಅದಕ್ಕೆ ತಪ್ಪಿ ನಡೆಯಲಾರೆ ಎಂದು ಪುತ್ತೂರು ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈಯವರು ಹೇಳಿದರು.
ಗುರುವಾರದಂದು ಮಾಣಿಲ ಗ್ರಾಮದ ವಿವಿಧ ದಲಿತ ಕಾಲೊನಿಗಳಿಗೆ ಭೇಟಿ ನೀಡಿ ಮತಯಾಚನೆ ನಡೆಸಿದರು. ಈ ಸಂದರ್ಭದಲ್ಲಿ ಕಾಲನಿಯ ನಿವಾಸಿಗಳು ತಮ್ಮ ಸಮಸ್ಯೆಗಳನ್ನು ಅಶೋಕ್ ರೈ ಬಳಿ ಹೇಳಿಕೊಂಡರು. ಕಳೆದ ಹಲವು ವರ್ಷಗಳಿಂದ ನಾವು ಮನೆ ಮಾಡಿಕೊಂಡಿದ್ದು, ನಮ್ಮ ಮನೆಯ ಅಡಿಸ್ಥಳಕ್ಕೆ ಇನ್ನೂ ಹಕ್ಕು ಪತ್ರ ಕೊಟ್ಟಿಲ್ಲ. 94ಸಿ ಅಡಿ ಅರ್ಜಿ ಹಾಕಿದರೂ ಯಾವುದೇ ಪ್ರಯೋಜನವಿಲ್ಲ. ಕೆಲವರು ಹಲವು ಬಾರಿ ಕಚೇರಿಗೆ ಅಲೆದಾಡಿದ್ದೇವೆ, ಶಾಸಕರ ಬಳಿಗೂ ತೆರಳಿ ವಿವರ ನೀಡಿದ್ದೇವೆ, ಆದರೂ ಏನೂ ಪ್ರಯೋಜನವಾಗಿಲ್ಲ .
ಕುಡಿಯುವ ನೀರಿನ ಸಮಸ್ಯೆ ಇದೆ, ಕೆಲವು ಮನೆಗಳು ನಾದುರಸ್ಥಿಯಲ್ಲಿದ್ದು, ನಮ್ಮ ಸಮಸ್ಯೆಯನ್ನು ಕೇಳುವವರೇ ಇಲ್ಲದಂತಾಗಿದೆ. ಪ್ರತೀ ಬಾರಿಯೂ ಚುನಾವಣೆ ಬಂದಾಗ ಒಂದಷ್ಟು ಮಂದಿ ಮನೆ ಕಡೆ ಬರುತ್ತರೆ , ಆಶ್ವಾಸನೆ ಕೊಡುತ್ತರೆ ಮತ್ತೆ ಬರುವುದೇ ಇಲ್ಲ ಎಂದು ತಮ್ಮ ನೋವನ್ನು ಹೇಳಿಕೊಂಡರು. ಬಳಿಕ ಮಾತನಾಡಿದ ಅಭ್ಯರ್ಥಿ ಅಶೋಕ್ ರೈಯವರು ನಿಮ್ಮ ಸಂಕಷ್ಟ ನನಗೆ ಅರಿವಾಗಿದೆ. ನಿಮ್ಮ ಮನೆಯ ಅಡಿಸ್ಥಳಕ್ಕೆ ಹಕ್ಕುಪತ್ರ ಸಿಕ್ಕಿಲ್ಲ ಮತ್ತು94ಸಿ ಅರ್ಜಿಯನ್ನು ವಿಲೇವಾರಿ ಮಾಡದೇ ಇರುವುದು ದೊಡ್ಡ ತಪ್ಪು. ನೀವು ಕಾಂಗ್ರೆಸ್ ಗೆ ವೋಟು ಹಾಕಿ ನಾನು ಗೆದ್ದು ಬಂದಲ್ಲಿ ನಿಮ್ಮ ಮನೆಯ ಅಡಿಸ್ಥಳಕ್ಕೆ ಖಂಡಿತವಾಗಿಯೂ ಹಕ್ಕುಪತ್ರವನ್ನು ನೀಡುತ್ತೇನೆ. ಕುಡಿಯುವ ನೀರಿನ ಸಮಸ್ಯೆ ಎಲ್ಲಾ ಕಡೆಯಲ್ಲೂ ಬೇಸಿಗೆಯಲ್ಲಿ ಸಾಮಾನ್ಯವಾಗಿದ್ದು, ಇದಕ್ಕೆ ಶಾಶ್ವತ ಪರಿಹಾರವನ್ನು ನಾವು ಕಂಡು ಕೊಳ್ಳಬೇಕಿದೆ. ತಾನು ಗೆದ್ದು ಬಂದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಚಾಲ್ತಿಗೆ ತರಲಿದ್ದೇನೆ ಎಂದು ಹೇಳಿದರು. ನಾನು ಸುಳ್ಳು ಭರವಸೆಯನ್ನು ಕೊಡುವುದೇ ಇಲ್ಲ ಎಂದು ಹೇಳಿದ ಅಶೋಕ್ ರೈಯವರು ಕೊಟ್ಟ ಮಾತಿಗೆ ಎಂದಿಗೂ ತಪ್ಪಲಾರೆ ಎಂದು ತಿಳಿಸಿದರು.