ಹುಟ್ಟೂರು ಕೋಡಿಂಬಾಡಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈ ಚುನಾವಣಾ ಪ್ರಚಾರ ಸಭೆ

0

ಮನೆಮಗನಾಗಿ ಸ್ವೀಕರಿಸಿ ನನ್ನನ್ನು ಆಶೀರ್ವದಿಸಿ: ಅಶೋಕ್ ರೈ

ಪುತ್ತೂರು: ಹುಟ್ಟೂರು ಕೋಡಿಂಬಾಡಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈಯವರು ಚುನಾವಣಾ ಪ್ರಚಾರ ಸಭೆ ನಡೆಸಿದರು. ಕಿಕ್ಕಿರಿದು ತುಂಬಿದ್ದ ಸಭೆಯಲ್ಲಿ ಮಾತನಾಡಿದ ಅಶೋಕ್ ರೈಯವರು ‘ ನಾನು ಕೋಡಿಂಬಾಡಿಯ ಹುಡುಗ, ಹತ್ತೂರಲ್ಲಿ ನಾಲ್ಕು ಅಕ್ಷರ ಕಲಿಸಿದ ಸಂಜೀವ ರೈಯವರ ಪುತ್ರ , ಈ ಸಲ ಕಾಂಗ್ರೆಸ್ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸುತ್ತಿದ್ದು ನಿಮ್ಮೆಲ್ಲರ ಆಶೀರ್ವಾದವನ್ನು ಬೇಡುತ್ತಿದ್ದೇನೆ, ನೀವು ನನ್ನನ್ನು ಮನೆಮಗನಾಗಿ ಸ್ವೀಕರಿಸಿ ಆಶೀರ್ವಾದ ಮಾಡುತ್ತೀರಿ ಎಂಬ ಪೂರ್ಣ ನಂಬಿಕೆ ನನ್ನಲ್ಲಿದೆ. ಹುಟ್ಟೂರಿನ ಸಹೋದರ, ಸಹೋದರಿಯರು, ಬಂಧುಗಳು ತಾಯಂದಿರು, ಅಕ್ಕಂದಿರು, ಅಣ್ಣಂದಿರು ಮಾಡುವ ಆಶೀರ್ವಾದ ಅದು ದೊಡ್ಡ ಆಶೀರ್ವಾದ ಎಂಬ ನಂಬಿಕೆ ನನಗಿದೆ. ತಾಯಿ ಮಹಿಷ ಮರ್ಧಿನಿಯಲ್ಲಿ ಅನುಮತಿ ಪಡೆದು ನಾನು ಚುನಾವಣೆಗೆ ನಿಂತಿದ್ದೇನೆ, ತಾಯಿಯ ಆಶೀರ್ವಾದ ದ ಜೊತೆಗೆ ಹುಟ್ಟೂರಿನ ಬಂಧುಗಳ ಆಶೀರ್ವಾದವನ್ನು ನಾನು ಬೇಡುತ್ತಿದ್ದೇನೆ. ಚುನಾವಣೆಯಲ್ಲಿ ನನಗೆ ಮತ ಹಾಕುವ ಮೂಲಕ ಗೆಲ್ಲಿಸಿ , ನಾನು ಗೊತ್ತಿದ್ದೋ ಗೊತ್ತಿಲ್ಲದೆಯೋ ಏನಾದರೂ ತಪ್ಪು ಮಾಡಿದ್ದರೆ ನಿಮ್ಮ ಮನೆ ಮಗನಾಗಿ ನನ್ನನ್ನು ಕ್ಷಮಿಸಿ ಎಂದು ಸೇರಿದ್ದ ಸಾವಿರಾರು ಮಂದಿ ಕೋಡಿಂಬಾಡಿಯ ಜನತೆಗೆ ಕೈಮುಗಿದು ಬೇಡಿಕೊಂಡರು. ನಾನು ಚುನಾವಣೆಗೆ ನಾಮಪತ್ರ ಸಲ್ಲಿಸಿದ ಬಳಿಕ ನನಗೆ ಬಿಜೆಪಿಯಿಂದ ಅನೇಕ ಕಿರುಕುಳ ಆರಂಭವಾಗಿದೆ. ನಾನು ಹೋದಲ್ಲೆಲ್ಲಾ, ಬಂದಲ್ಲೆಲ್ಲಾ ನನ್ನ ಹಿಂದೆಯೇ ಜನರನ್ನು , ಅಧಿಕಾರಿಗಳನ್ನು ಕಳುಹಿಸಿ ಮಾನಸಿಕ ಹಿಂಸೆ ಕೊಡುತ್ತಿದ್ದಾರೆ, ಎಲ್ಲಾ ಹಿಂಸೆಗಳನ್ನು ಸಹಿಸಿ ನಾನು ಹಲವು ದಿನಗಳಿಂದ ಕ್ಷೇತ್ರದಾದ್ಯಂತ ಕ್ರಯಿಸಿದ್ದೇನೆ, ಜನರ ಸಮಸ್ಯೆಗಳನ್ನು ಅರಿತುಕೊಂಡಿದ್ದೇನೆ, ಭರವಸೆಯನ್ನು ನೀಡಿದ್ದೇನೆ ಆಶೀರ್ವಾದ ಮಾಡುವುದಾಗಿ ಹೇಳಿದ್ದಾರೆ. ಸುಮಾರು 22 ಸಾವಿರ ಬಡ ಕುಟುಂಬಗಳಿಗೆ ನೆರವು ನೀಡಿದ್ದೇನೆ , ಬಡವರಿಗೆ ಮಾಡಿದ ದಾನದ ಶಕ್ತಿ ನನಗೆ ಆಶೀರ್ವಾದ ರೂಪದಲ್ಲಿ ಸಿಗಬಹುದು ಎಂಬ ನಂಬಿಕೆ ಇದೆ ಎಂದು ಮಾರ್ಮಿಕವಾಗಿ ಹೇಳಿದರು.

ಯುವಕರನ್ನು ಹಾಳುಮಾಡುವುದೇ ಬಿಜೆಪಿ ಅಜೆಂಡಾ; ಈಶ್ವರಭಟ್: ಕಾಂಗ್ರೆಸ್ ಮುಖಂಡ ಪಂಜಿಗುಡ್ಡೆ ಈಶ್ವರಭಟ್ ಮಾತನಾಡಿ, ಯುವಕರನ್ನು ಬಿಜೆಪಿ ಹಾಳುಮಾಡುತ್ತಿದೆ. ಹಿಂದುತ್ವದ ಹೆಸರಿನಲ್ಲಿ ಅಮಾಯಕ ಯುವಕರನ್ನು ಜೈಲಿಗೆ ತಳ್ಳುವ ಕೆಲಸ ಮಾಡುತ್ತಿದೆ. ಕಾಂಗ್ರೆಸ್ಸಿನ ಹಿಂದುತ್ವ ನಿಜವಾದ ಹಿಂದುತ್ವವಾಗಿದ್ದು ಮಸೀದಿಗೆ, ಚರ್ಚಿಗೆ ಕಲ್ಲೆಸೆಯುವ ಬಿಜೆಪಿ ಹಿಂದುತ್ವ ಅದು ನಕಲಿ ಹಿಂದುತ್ವ, ಅದು ಬಿಜೆಪಿ ಅಧಿಕಾರಕ್ಕಾಗಿ ಜನರ ಭಾವನೆ ಒಡೆಯುವ ಹಿಂದುತ್ವವಾಗಿದೆ ಎಂದು ಹೇಳಿದರು. ಭಾರತದಲ್ಲಿರುವ ಪ್ರತೀಯೊಬ್ಬರೂ ಸಹೋದರರಾಗಿದ್ದಾರೆ ಅದು ಎಲ್ಲಾ ಭಾರತೀಯನ ರಕ್ತದಲ್ಲಿದೆ. ದೇಶದಲ್ಲಿ ಅತೀ ಹೆಚ್ಚು ಗೋಮಾಂಸ ರಫ್ತು ಮಾಡುವುದು ಉತ್ತರಪ್ರದೇಶದಲ್ಲಿ, ಅದೇ ರಾಜ್ಯದ ಮುಖ್ಯಮಂತ್ರಿ ಪುತ್ತೂರಿಗೆ ಬಂದು ಗೋರಕ್ಷಣೆಯ ಬಗ್ಗೆ ಮಾತನಡುತ್ತಿರುವುದು ಯಾಕೆ ಎಂಬುದನ್ನು ಬಜರಂಗದಳದವರು ಪ್ರಶ್ನಿಸಬೇಕು ಎಂದು ಹೇಳಿದರು. ಬೆಲೆ ಏರಿಕೆ ಬಿಜೆಪಿ ಸಾಧನೆ. ಲಂಚ ಮತ್ತು ಮಂಚ ಬಿಜೆಪಿಗರಿಗೆ ಪ್ರಿಯವಾದ ಸಾಧನ, ಬಿಜೆಪಿ ಸರಕಾರ ಮಾಡಿದ ಸಾಲಮನ್ನಾ ಹಣ ಸೊಸೈಟಿಗೆ ಬಂದಿಲ್ಲ, ಗೊಬ್ಬರ ದ ಬೆಲೆ ಏರಿಕೆಯಾಗಿದೆ. ದೇಶದ ಜನರನ್ನು ಕೊಳ್ಳೆ ಹೊಡೆಯುವ ಬಿಜೆಪಿಯನ್ನು ತಿರಸ್ಕರಿಸಿ ಕಾಂಗ್ರೆಸ್ ಬೆಂಬಲಿಸಿ ಎಂದು ಮನವಿ ಮಾಡಿದರು.

ಬಿಜೆಪಿಯವರಿಗೆ ಐಟಿ ದಾಳಿ ಭಯವಿಲ್ಲ: ಭಾಸ್ಕರ ಗೌಡ ಕೋಡಿಂಬಾಳ: ದೇಶದಲ್ಲಿ ಬಿಜೆಪಿಯವರಿಗೆ ಐಟಿ ದಾಳಿ ಭಯವಿಲ್ಲ. ಬಿಜೆಪಿ ವಿರೋಧ ಪಕ್ಷಗಳ ನಾಯಕರ ಮೇಲೆ ಐ ಟಿ ದಾಳಿ ನಡೆಸಿ ಸರಕಾರಿ ಸಂಸ್ಥೆಯನ್ನು ತನ್ನ ಸ್ವಂತಕ್ಕೆ ಬಳಕೆ ಮಾಡುತ್ತಿರುವುದು ಅತ್ಯಂತ ಅಪಾಯಕಾರಿಯಾಗಿದೆ ಎಂದು ಭಾಸ್ಕರ ಗೌಡ ಕೋಡಿಂಬಾಳ ಹೇಳಿದರು. ವಾಮ ಮಾರ್ಗದಲ್ಲಿ ಎಂದೂ ಕಾಂಗ್ರೆಸ್ ಅಧಿಕಾರ ಪಡೆದುಕೊಂಡಿಲ್ಲ ಎಂದು ಹೇಳಿದ ಅವರು ಅಽಕಾರಕ್ಕಾಗಿ ಬಿಜೆಪಿ ಯಾವುದೇ ಹೇಯ ಕೃತ್ಯಕ್ಕೂ ಹೇಸುವುದಿಲ್ಲ ಎಂದು ಹೇಳಿದರು. ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈ ನಿಜವಾದ ಹಿಂದುತ್ವವನ್ನು ಜನತೆಗೆ ಕಲಿಸಿದ್ದಾರೆ. ನೂರಾರು ದೇವಸ್ಥಾನಗಳನ್ನು ಅಭಿವೃದ್ದಿ ಮಾಡುವ ಮೂಲಕ ಓರ್ವ ನೈಜ ಹಿಂದುತ್ವವಾದಿಯಾಗಿದ್ದಾರೆ. ಬಿಜೆಪಿಯವರಿಗೆ ಅಧಿಕಾರಕ್ಕೆ ಬಂದರೆ ಸಿ ಡಿ ಸೃಷ್ಟಿಯಾಗುತ್ತದೆ. ನ್ಯಾಯಾಲಯದಲ್ಲಿ ಸ್ಟೇ ತರುವುದೇ ಬಿಜೆಪಿ ನಾಯಕರ ಕೆಲಸವಾಗಿದೆ. ಪುತ್ತೂರಿನ ಅಭಿವೃದ್ದಿಗಾಗಿ ಕಾಂಗ್ರೆಸ್ ಬೆಂಬಲಿಸುವಂತೆ ಮನವಿ ಮಾಡಿದರು.

ಸಭೆಯನ್ನುದ್ದೇಶಿಸಿ ಕೆಪಿಸಿಸಿ ಸಂಯೋಜಕರಾದ ಹೇಮನಾಥ ಶೆಟ್ಟಿ ಕಾವು, ಮಹಮ್ಮದ್ ಬಡಗನ್ನೂರು, ಎಂ ಎಸ್ ಮಹಮ್ಮದ್ ಹಾಗೂ ಉಮಾನಾಥ ಶೆಟ್ಟಿ ಮಾತನಾಡಿ ಬಿಜೆಪಿ ಮತ್ತು ಬಿಜೆಪಿ ಸರಕಾರದ ಜನವಿರೋಧಿ ನೀತಿಯ ಬಗ್ಗೆ ವಿವರಿಸಿದರು.

ವೇದಿಕೆಯಲ್ಲಿ ಕಾಂಗ್ರೆಸ್ ಮುಖಂಢರು ಉಪಸ್ಥಿತರಿದ್ದರು. ನಿರಂಜನ್ ರೈ ಮಠಂತಬೆಟ್ಟು ಕಾರ್ಯಕ್ರಮ ನಿರ್ವಹಿಸಿದರು.

ಡಿ.ವಿ. ಬಂದ ಮೇಲೆ ಬಿಜೆಪಿ ವೆಂಟಿಲೇಟ್‌ರ್‌ಗೆ ಶಿಫ್ಟ್:
ಡಿ ವಿ ಸದಾನಂದ ಗೌಡರು ಬರುವ ಮೊದಲು ಬಿಜೆಪಿಯನ್ನು ವಾರ್ಡ್‌ಗೆ ಶಿಫ್ಟ್ ಮಾಡಿದ್ದೆವು ಅವರು ಬಂದು ಭಾಷಣ ಮಾಡಿದ ಬಳಿಕ ನಾವು ಮತ್ತೆ ವೆಂಟಿಲೇಟ್‌ರ್‌ಗೆ ಹೋಗಿದ್ದೇವೆ ಎಂದು ಬಿಜೆಪಿಯವರು ಕರೆ ಮಾಡಿ ನನಗೆ ತಿಳಿಸಿದ್ದಾರೆ ಎಂದು ಅಭ್ಯರ್ಥಿ ಅಶೋಕ್ ರೈ ಸಭೆಗೆ ತಿಳಿಸಿದರು. ಪುತ್ತೂರಿನಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ. ಹಣ ಕೊಡದೆ ಯಾವುದೇ ಕೆಲಸಗಳು ನಡೆಯುವುದಿಲ್ಲ ಎನ್ನುವ ಮಟ್ಟಕ್ಕೆ ಭ್ರಷ್ಟಾಚಾರ ಬೆಳೆದಿದೆ. ನಾನು ಗೆದ್ದುಬಂದಲ್ಲಿ ಭ್ರಷ್ಟಾಚಾರದ ಬೇರು ಸಮೇತ ಕಿತ್ತು ಹಾಕುತ್ತೇನೆ. ನಯಾ ಪೈಸೆ ಲಂಚ ಕೊಡದೆ ಜನರ ಕೆಲಸವನ್ನು ಮಾಡುವ ಹಾಗೇ ನೋಡಿಕೊಳ್ಳುತ್ತೇನೆ. ಪುತ್ತೂರು ಕ್ಷೇತ್ರದಾದ್ಯಂತ ಪ್ರಚಾರ ಕಾರ್ಯ ಉತ್ತಮವಾಗಿ ನಡೆಯುತ್ತಿದ್ದು ಜನ ಬೆಂಬಲ ವ್ಯಕ್ತವಾಗುತ್ತಿದೆ ಎಂದು ಹೇಳಿದರು.

LEAVE A REPLY

Please enter your comment!
Please enter your name here