ಮಾನ್ಯ ಯೋಗಿಜೀಯವರೇ, ವ್ಯಕ್ತಿಗಿಂತ ಪಕ್ಷ ದೊಡ್ಡದು ಆದರೆ ಪಕ್ಷಕ್ಕಿಂತ ದೇಶ ಮತ್ತು ಜನಹಿತಾಸಕ್ತಿ ದೊಡ್ಡದಲ್ಲವೇ? ಲಂಚ ಭ್ರಷ್ಟಾಚಾರ ನಿರ್ಮೂಲನೆಯೇ ದೊಡ್ಡ ಜನಸೇವೆ ಮತ್ತು ದೇಶ ಸೇವೆ ಹೌದಲ್ಲವೇ?

0

ಊರಿನಲ್ಲಿ ಲಂಚ ಭ್ರಷ್ಟಾಚಾರ ನಿರ್ಮೂಲನೆಯಾದರೆ ಬಹುಸಂಖ್ಯಾತರಾಗಿರುವ
ಹಿಂದುಗಳ ಮಾತ್ರವಲ್ಲ ಎಲ್ಲರ ರಕ್ಷಣೆ ಆಗುವುದಿಲ್ಲವೇ?

ಲಂಚ ಭ್ರಷ್ಟಾಚಾರ ನಿರ್ಮೂಲನೆಯ ಜನಜಾಗೃತಿಗಾಗಿ ಕಳೆದ 38 ವರ್ಷಗಳಿಂದ ನನ್ನಿಂದಾದ ಪ್ರಯತ್ನ ಮಾಡುತ್ತಿದ್ದೇನೆ. ಪ್ರಧಾನಿ ಮೋದಿಜೀಯವರು “ನಾ ಕಾವೂಂಗ, ನಾ ಕಾನೆದೂಂಗ” ಎಂದಿದ್ದಾರೆ. ಲಂಚ ಭ್ರಷ್ಟಾಚಾರದಿಂದ ಜನರ ಮತ್ತು ದೇಶದ ಅಭಿವೃದ್ಧಿಯ ಮೇಲೆ ಆಗುವ ತೊಂದರೆಗಳ ಬಗ್ಗೆ ಸಿಬಿಐ ಸಂಸ್ಥೆಯ ದಿನಾಚರಣೆಯ ಸಂದರ್ಭದಲ್ಲಿ ವಿವರವಾಗಿ ಹೇಳಿದ್ದಾರೆ. ಅದನ್ನು ನಾನು ಸಂಪೂರ್ಣವಾಗಿ ಒಪ್ಪುತ್ತೇನೆ. ಕರ್ನಾಟಕದಲ್ಲಿ ಕಳೆದ 4 ವರ್ಷಗಳಿಂದ ಮತ್ತು ಕೇಂದ್ರದಲ್ಲಿ ಕಳೆದ 9 ವರ್ಷಗಳಿಂದ ಬಿ.ಜೆ.ಪಿ ಸರಕಾರವಿದೆ. ಇಲ್ಲಿ ಕಾಂಗ್ರೆಸ್ ಸರಕಾರದ ಆಡಳಿತವೇ ಹೆಚ್ಚು ಅವಧಿಗೆ ಇದ್ದದ್ದು ಮತ್ತು ಭ್ರಷ್ಟಾಚಾರ ಬೆಳೆಸಲು ಕಾಂಗ್ರೆಸ್ ಕಾರಣವಾಗಿತ್ತು ಎಂಬುವುದನ್ನು ಎಲ್ಲರೂ ಒಪ್ಪುತ್ತಾರೆ. ಆದರೆ ಇದೀಗ ಬಿಜೆಪಿ ಆಡಳಿತದಲ್ಲಿಯೂ ಲಂಚ, ಭ್ರಷ್ಟಾಚಾರವಿದೆ. ಕಾಂಗ್ರೆಸ್ ಅವಧಿಗಿಂತ ಜಾಸ್ತಿಯಾಗಿದೆ ಎಂಬ ಮಾತು ಜನರಲ್ಲಿದೆ. ಇದರಿಂದಾಗಿ ಯಾರೇ ಆಡಳಿತಕ್ಕೆ ಬಂದರೂ ಲಂಚ, ಭ್ರಷ್ಟಾಚಾರ ಕಡಿಮೆಯಾಗುವುದಿಲ್ಲ. ಅದಿಲ್ಲದೆ ಯಾವುದೇ ಕೆಲಸವಾಗುವುದಿಲ್ಲ ಎಂಬ ನಿರಾಶಾಭಾವನೆ ಜನರಲ್ಲಿ ಬರಲಾರಂಭಿಸಿದೆ. ಹಣವುಳ್ಳವರು ಹೇಗಾದರೂ ಕೆಲಸ ಮಾಡಿಸಿಕೊಳ್ಳುತ್ತಾರೆ. ಬಡವರು ನಷ್ಟಕ್ಕೆ, ಕಷ್ಟಕ್ಕೆ, ಸಾವು, ನೋವಿಗೆ, ಆತ್ಮಹತ್ಯೆಗೆ ಒಳಗಾಗುತ್ತಾರೆ. ಕಚೇರಿಗಳಲ್ಲಿ ಅಽಕಾರಿಗಳನ್ನು ಕೇಳಿದರೆ, ಲಂಚಕೊಡುವುದಕ್ಕೆ ತಕರಾರು ಎತ್ತಿದರೆ. ‘ನಾವು ಕೆಲಸ ಸಿಗಲು ಹಣ ಕೊಟ್ಟು ಬಂದಿದ್ದೇವೆ, ವರ್ಗಾವಣೆಗೆ ಮತ್ತು ಇಲ್ಲಿ ಕೆಲಸ ಮಾಡಲು ಮೇಲಿನವರಿಗೆ ಹಣಕೊಡಬೇಕು ನಾವು ಜನರಿಂದ ಸುಲಿಗೆಯಾಗಿ ಸಂಗ್ರಹಿಸಿದ ಹಣದ ಪಾಲು ಮೇಲಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ, ಮಂತ್ರಿಗಳಿಗೆ ಹೋಗುತ್ತದೆ ಎಂದು ಹೇಳಿ ತಮ್ಮ ದರೋಡೆಗೆ ಸಮರ್ಥನೆ ನೀಡುತ್ತಾರೆ.

ಇದರಿಂದ ರಸ್ತೆಗಳ ಕಾಮಗಾರಿಗಳು ಕಳಪೆಯಾಗಿರುತ್ತದೆ. ಸರಕಾರಿ ಶಾಲೆಗಳು ಸೊರಗುತ್ತಿದೆ. ಬಡವಿದ್ಯಾರ್ಥಿಗಳಿಗೆ ಶಿಕ್ಷಣ ವಂಚನೆಯಾಗುತ್ತಿದೆ. ಸರಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ, ವ್ಯವಸ್ಥೆ, ಸರಿಯಾದ ವೈದ್ಯರು, ಸಿಬ್ಬಂದಿಗಳು, ಮೆಡಿಸಿನ್ ಇಲ್ಲದೆ ಬಡ ಜನರು ನರಳುತ್ತಿದ್ದಾರೆ, ಸರಿಯಾದ ಚಿಕಿತ್ಸೆ, ಸರಿಯಾದ ಸಮಯಕ್ಕೆ ಸಿಗದೆ ರೋಗಿಗಳು ಸಾಯುತ್ತಿದ್ದಾರೆ. ಕಚೇರಿಗಳಲ್ಲಿ ಹಣ ಕೊಡದೆ ಯಾವುದೇ ಕೆಲಸ ಆಗದೇ ಇರುವುದರಿಂದ ಬಡಜನರು ಮತ್ತು ಕಾನೂನು ರೀತಿಯಲ್ಲಿ ವ್ಯವಹರಿಸುವವರು ಹಾಗೂ ಪ್ರಾಮಾಣಿಕರು ದಿನಗಟ್ಟಲೆ, ತಿಂಗಳುಗಟ್ಟಲೆ, ವರ್ಷಗಟ್ಟಲೆ ಕಾಯಬೇಕಾಗುತ್ತದೆ. ಬಹಳಷ್ಟು ಕಷ್ಟ-ನಷ್ಟಗಳಿಗೆ ಒಳಗಾಗುತ್ತಿದ್ದಾರೆ. ಒಟ್ಟಿನಲ್ಲಿ ಈ ಲಂಚ ಭ್ರಷ್ಟಾಚಾರದಿಂದಾಗಿ ಜೀವಹಾನಿ, ಆರ್ಥಿಕ ಹಾನಿ ಉಂಟಾಗಿ ಸಮಾಜದ ಅಧಪತನಕ್ಕೆ ಕಾರಣವಾಗುತ್ತಿದೆ. ಉದಾ: ಕಳೆದ ಹಲವಾರು ಬಾರಿ ಮೋದಿಜೀಯವರು, ಅಮಿತ್ ಶಾ ಮತ್ತು ತಾವು ಕರ್ನಾಟಕಕ್ಕೆ ಬಂದಾಗಲೆಲ್ಲಾ ಕೋಟ್ಯಾಂತರ ರೂ.ಗಳ ವೆಚ್ಚದಲ್ಲಿ ಕಳಪೆ ರಸ್ತೆಗಳ ತುರ್ತು ರಿಪೇರಿ ಆಗಿದೆ. ಮೋದಿಜೀಯವರು ಹಾಗೂ ತಾವುಗಳು ಹಿಂತಿರುಗಿ ಹೋದಂತೆ ಆ ರಸ್ತೆಗಳ ಡಾಮರುಗಳು ಎದ್ದು ರಸ್ತೆಗಳು ಮೊದಲಿನಂತೆಯೇ ಆಗಿವೆ. ಎಂಬುದು ವರದಿಯಾಗಿದ್ದನ್ನು ತಾವು ಗಮನಿಸಿರಬಹುದು. ಮಾನ್ಯ ಯೋಗಿಜೀಯವರೇ, ಮೋದಿಜೀಯವರೇ ನೀವು ಮನಸ್ಸು ಮಾಡಿದರೆ ಈ ಪಿಡುಗನ್ನು ನಿವಾರಿಸಿ ಜನರಿಗೆ ರಕ್ಷಣೆ ನೀಡಬಹುದು
ಯೋಗಿಜೀಯವರೆ ಪುತ್ತೂರಿಗೆ ಆಗಮಿಸಲಿರುವ ನಿಮಗೆ ಸ್ವಾಗತ. ನೀವು ಉತ್ತಮ ಆಡಳಿತಗಾರ, ಜನಪರ ಕೆಲಸಗಾರ ಎಂದು ಎಲ್ಲರಿಗೆ ಗೊತ್ತಿದೆ, ಅದಕ್ಕಾಗಿ ನಾವು ಕಳೆದ ಹಲವು ವರ್ಷಗಳಿಂದ ನಡೆಸುತ್ತಿರುವ, ಲಂಚ-ಭ್ರಷ್ಟಾಚಾರ ವಿರುದ್ಧದ ಜನಾಂದೋಲನದ ಬಗ್ಗೆ ಕೆಲವು ವಿಷಯಗಳನ್ನು ನಿಮ್ಮ ಗಮನಕ್ಕೆ ತರಲು ಇಚ್ಚಿಸುತ್ತೇವೆ. ‘ಚುನಾವಣೆಗೆ ನಿಂತಿರುವ, ಓಟು ಕೇಳುವ ಎಲ್ಲಾ ಅಭ್ಯರ್ಥಿಗಳು, ಅವರ ಬೆಂಬಲಿಗರು ಈ ಕ್ಷೇತ್ರದಲ್ಲಿ ಲಂಚ-ಭ್ರಷ್ಟಾಚಾರ ನಿಲ್ಲಿಸುತ್ತೇವೆ ಎಂದು ಘೋಷಣೆ ಮಾಡಲಿ. ಅಧಿಕಾರಿಗಳು ಜನರಿಂದ ಕಾನೂನಿನ ಚೂರಿ ಹಿಡಿದು ದರೋಡೆ(ಸುಲಿಗೆ) ಮಾಡಿದ ಹಣವನ್ನು ಜನರಿಗೆ ಹಿಂತಿರುಗಿಸುವ ಪ್ರತಿಜ್ಞೆ ಮಾಡಲಿ ಎಂದು ಆಯಾ ಕ್ಷೇತ್ರದ ಮತದಾರರು ಅಭ್ಯರ್ಥಿಗಳನ್ನು ಕೇಳುವಂತೆ ಮಾಡುವ ಮತದಾರ ಜಾಗೃತಿ ಆಂದೋಲನವನ್ನು ಮಾಡುತ್ತಿದ್ದೇವೆ. ಅದಕ್ಕೆ ಮತದಾರರ ಉತ್ತಮ ಪ್ರೋತ್ಸಾಹ ದೊರೆತಿದೆ. ಸುಳ್ಯ, ಪುತ್ತೂರು, ಬೆಳ್ತಂಗಡಿ ಕ್ಷೇತ್ರದ ಎಲ್ಲಾ ಅಭ್ಯರ್ಥಿಗಳು, ಪಕ್ಷದವರು ಬೆಂಬಲ ನೀಡಿದ್ದಾರೆ. ಮತ್ತುಲಂಚ, ಭ್ರಷ್ಟಾಚಾರದ ವಿರುದ್ಧದ ಬಹಿರಂಗ ಘೋಷಣೆ ಮತ್ತು ಪ್ರತಿಜ್ಞೆಯನ್ನು ಮಾಡಿದ್ದಾರೆ.

ಲಂಚ-ಭ್ರಷ್ಟಾಚಾರದ ಮೂಲ ರಾಜ್ಯದ ಕೇಂದ್ರಗಳಲ್ಲಿ ಇರುವುದರಿಂದ ಅಲ್ಲಿಂದಲೇ ಈ ಆಂದೋಲನ ಪ್ರಾರಂಭವಾಗಬೇಕೆಂದು ಹಾಲಿ ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿಯವರ ಕ್ಷೇತ್ರ ಶಿಗ್ಗಾಂವಿಯಲ್ಲಿ, ಮಾಜಿ ಮುಖ್ಯಮಂತ್ರಿ ಹಾಗೂ ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯನವರ ಕ್ಷೇತ್ರ ವರುಣಾದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿ, ಮತದಾರರ ಜಾಗೃತಿ ಉಂಟುಮಾಡುತ್ತಿದ್ದೇನೆ. ಈ ಎರಡೂ ಮುಖ್ಯಮಂತ್ರಿಗಳ ಕ್ಷೇತ್ರದಲ್ಲಿಯೂ ಲಂಚ-ಭ್ರಷ್ಟಾಚಾರ ವ್ಯಾಪಕವಾಗಿ ಇದೆ. ಅಲ್ಲಿಯ ಜನರು ಅದರಿಂದ ತೊಂದರೆಗೆ ಒಳಗಾಗುತ್ತಿದ್ದಾರೆ ಎಂಬ ಅನುಭವ ನಮಗಾಗಿದೆ. ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರೂ ನಾನು ನನಗೆ ವೋಟ್ ಕೇಳುತ್ತಿಲ್ಲ.ನಿಮಗೆ ಬೇಕಾದ ಉತ್ತಮ ಅಭ್ಯರ್ಥಿಯನ್ನು ಗೆಲ್ಲಿಸಿರಿ. ಆದರೆ ಅಭ್ಯರ್ಥಿಗಳಲ್ಲಿ, ಲಂಚ,ಭ್ರಷ್ಟಾಚಾರ ನಿಲ್ಲಿಸುತ್ತೀರಾ? ಮತ್ತು ಲಂಚವಾಗಿ ಅಧಿಕಾರಿಗಳು ಪಡೆದ ಹಣವನ್ನು ಜನರಿಗೆ ಹಿಂತಿರುಗಿಸುತ್ತೀರಾ ಎಂದು ಪ್ರಶ್ನೆ ಕೇಳಿದರೆ ಅದು ನನಗೆ ದೊರೆತ ಮತವೆಂದು ಪರಿಗಣಿಸುತ್ತೇನೆ. ಆ ಪ್ರಯತ್ನದ ಮೂಲಕ ಲಂಚ ಭ್ರಷ್ಟಾಚಾರ ಮುಕ್ತ ಕ್ಷೇತ್ರವಾದರೆ ಅದು ಸುದ್ದಿ ಜನಾಂದೋಲನಕ್ಕೆ ಸಿಕ್ಕಿದ ಜಯವೆಂದೂ ಪರಿಗಣಿಸುತ್ತೇನೆ ಎಂದು ಹೇಳಿ ಮತದಾರರಲ್ಲಿ ಜಾಗೃತಿ ಮೂಡಿಸುತ್ತಿದ್ದೇನೆ.
ಹಾಗಾಗಿ ಅಲ್ಲಿ ನಮ್ಮ ಲಂಚ-ಭ್ರಷ್ಟಾಚಾರ ವಿರುದ್ಧದ ಜನಾಂದೋಲನಕ್ಕೆ ವ್ಯಾಪಕ ಬೆಂಬಲ ದೊರಕಿದೆ ಎಂಬುವುದನ್ನು ನಿಮ್ಮ ಗಮನಕ್ಕೆ ತರಲು ಇಚ್ಚಿಸುತ್ತಾ, ನೀವುಗಳು ಲಂಚ-ಭ್ರಷ್ಟಾಚಾರ ಮುಕ್ತ ಊರು, ತಾಲೂಕು, ಕರ್ನಾಟಕ ರಾಜ್ಯ ಆಗುವಲ್ಲಿ ಪ್ರಯತ್ನ ಪಡುತ್ತೀರಿ. ಚುನಾವಣೆಗೆ ನಿಂತ ಎಲ್ಲಾ ಅಭ್ಯರ್ಥಿಗಳಲ್ಲಿ ಘೋಷಣೆ ಮಾಡಿಸುತ್ತೀರಿ ಎಂಬ ನಂಬಿಕೆ ನಮಗಿದೆ. ಲಂಚ-ಭ್ರಷ್ಟಾಚಾರಕ್ಕೆ ಬಹಿಷ್ಕಾರ, ಉತ್ತಮ ಸೇವೆಗೆ ಪುರಸ್ಕಾರ ಎಂಬ ಘೋಷಣೆ ತಾವು ಮತ್ತು ಮೋದಿಜೀಯವರು ಮಾಡಿದರೆ ದೇಶದ 130ಕೋಟಿ ಜನರು ಅದನ್ನು ಒಪ್ಪಿಕೊಳ್ಳಲಿದ್ದಾರೆ. ಕೋಟ್ಯಂತರ ಸಂಖ್ಯೆಯಲ್ಲಿರುವ ತಮ್ಮ ಅಭಿಮಾನಿಗಳು, ಪಕ್ಷದ ಕಾರ‍್ಯಕರ್ತರುಗಳು ಅದನ್ನು ಶಿರಸಾ ವಹಿಸಿ ಪಾಲಿಸಲಿದ್ದಾರೆ ಎಂದು ನಾವು ನಂಬಿದ್ದೇವೆ.

ಯೋಗಿಜೀಯವರೆ, ಪ್ರಧಾನಿ ಮೋದಿಜೀಯವರೆ ನಮ್ಮ ಹೆಚ್ಚಿನ ಊರುಗಳಲ್ಲಿ, ನಮ್ಮ ರಾಜ್ಯದಲ್ಲಿ ಶೇ.80ಕ್ಕಿಂತ ಹೆಚ್ಚು ಜನರು ಹಿಂದುಗಳಾಗಿದ್ದಾರೆ. ಈ ಲಂಚ ಭ್ರಷ್ಟಾಚಾರದ ಪಿಡುಗಿನಿಂದ ಹೆಚ್ಚು ತೊಂದರೆಗೆ ಒಳಗಾಗುವವರು ಹಿಂದುಗಳೇ ಆಗಿದ್ದಾರೆ. ಅವರಿಂದಲೇ ಅಧಿಕಾರಿಗಳು ಹಣವಸೂಲಿ ಮಾಡುತ್ತಾರೆ. ಮೇಲಾಧಿಕಾರಿಗಳನ್ನು, ಶಾಸಕರನ್ನು, ಮಂತ್ರಿಗಳನ್ನು, ಪಕ್ಷದವರನ್ನು ಸಾಕುತ್ತಾರೆ. ಈ ಹಿನ್ನಲೆಯಲ್ಲಿ ತಾವುಗಳು ನಮ್ಮ ಊರನ್ನು ಲಂಚ ಭ್ರಷ್ಟಾಚಾರ ಮುಕ್ತ ಮಾಡಲು ಪ್ರಯತ್ನಿಸಿದರೆ. ನಮ್ಮ ಊರಿನ, ರಾಜ್ಯದ ಬಹುಸಂಖ್ಯಾತ ಹಿಂದುಗಳಿಗೆ ರಕ್ಷಣೆ ದೊರಕುತ್ತದೆ. ಅವರ ಕಷ್ಟ-ನಷ್ಟಗಳಿಗೆ ಪರಿಹಾರ ದೊರಕುತ್ತದೆ. ಇತರ ಸಮುದಾಯದವರಿಗೂ ಒಳಿತಾಗುತ್ತದೆ. ಪ್ರಧಾನಿ ಮೋದಿಜೀಯವರ ಸಬ್ ಕೆ ಸಾತ್, ಸಬ್ ಕಿ ವಿಕಾಸ್ ನಿಜವಾಗಿಯೂ ಕಾರ‍್ಯರೂಪಕ್ಕೆ ಬರಲಿದೆ ಎಂದು ನಾವು ಖಂಡಿತ ನಂಬಿದ್ದೇವೆ.

ಈ ಮೇಲಿನ ವಿಚಾರದ ಮುಂದುವರಿದ ಭಾಗವಾಗಿ ಕರ್ನಾಟಕ ರಾಜ್ಯದಲ್ಲಿ ಇಷ್ಟರವರೆಗೂ ಶಾಸಕರಾಗಿ, ಮಂತ್ರಿಗಳಾಗಿ ಕೆಲಸಮಾಡಿದ ಎಲ್ಲಾ ಪಕ್ಷದವರ ಮನೆಗಳಿಗೆ ಇಡಿ, ಸಿಬಿಐ ರೈಡ್ ಮಾಡಿಸಿ ಅವರು ಅಕ್ರಮವಾಗಿ ಸಂಪಾದಿಸಿದ ಹಣವನ್ನು ಜನರಿಗೆ ಹಿಂತಿರುಗಿಸುವ ಕೆಲಸ ಮಾಡಬೇಕಾಗಿ ಕೇಳಿಕೊಳ್ಳುತ್ತಿದ್ದೇನೆ. ಅದರಲ್ಲೂ ತಮ್ಮ ಪಕ್ಷದ ಹೆಸರಿನಲ್ಲಿ ಗೆದ್ದುಬಂದವರು ಮತ್ತು ತಮ್ಮ ಪಕ್ಷದವರು ಲಂಚ, ಭ್ರಷ್ಟಾಚಾರ ಮಾಡಿದ್ದರೆ ಅದು ಪಕ್ಷಕ್ಕೆ ಮಾಡಿದ ಅವಮಾನ ಎಂದೂ ಪರಿಗಣಿಸಿ ಅವರ ಮೇಲೆ ಹೆಚ್ಚು ಕ್ರಮ ಕೈಗೊಳ್ಳಬೇಕು. ಮತ್ತು ಆ ಮೂಲಕ ಅದು ಇತರ ಪಕ್ಷದವರಿಗೂ ಮಾದರಿಯಾಗುವಂತೆ ಮಾಡಬೇಕು ಎಂದು ಬಯಸುತ್ತೇವೆ. ಕರ್ನಾಟಕದಲ್ಲಿ ಕೆಲಸ ಮಾಡಿರುವ ಎಲ್ಲರೂ ಭ್ರಷ್ಟಾಚಾರಿಗಳಲ್ಲ. ಉದಾ: ಪುತ್ತೂರಿನಲ್ಲಿ ಬಿಜೆಪಿಯಿಂದ ಎರಡು ಬಾರಿ ಶಾಸಕರಾಗಿದ್ದ ಉರಿಮಜಲು ರಾಮ ಭಟ್ಟರಂತವರು ಇದ್ದಾರೆ. ರಾಜಕೀಯಕ್ಕೆ ಮಾದರಿಯಾಗಿದ್ದ ಅವರು ಲಂಚ-ಭ್ರಷ್ಟಾಚಾರವಿಲ್ಲದ ಸರಳ ಜೀವನ ನಡೆಸಿದ್ದರು. ಹಣಮಾಡುವುದಿರಲಿ ತಮ್ಮ ಆಸ್ತಿಯನ್ನು ಮಾರಾಟ ಮಾಡಿ ರಾಜಕೀಯ ಮತ್ತು ಜನಸೇವೆ ಮಾಡಿದ್ದರು. ಈ ಸಂದರ್ಭದಲ್ಲಿ ಅವರನ್ನು ಉಲ್ಲೇಖಿಸಿ ಅವರ ಆದರ್ಶವನ್ನು ಜನರು ಪಾಲಿಸುವಂತೆ ಕರೆಕೊಡಬೇಕಾಗಿ ಕೇಳಿಕೊಳ್ಳುತ್ತಿದ್ದೇನೆ. ‘ಲಂಚ-ಭ್ರಷ್ಟಾಚಾರದ ನಿರ್ಮೂಲನೆಯೇ ದೊಡ್ಡ ಜನಸೇವೆ ಮತ್ತು ದೇಶಸೇವೆ. ಲಂಚ ಅಂದರೆ ದರೋಡೆ, ಭ್ರಷ್ಟಾಚಾರ ಎಂದರೆ ದೇಶದ್ರೋಹ ಎಂಬ ನಮ್ಮ ಆಂದೋಲನದ ಘೋಷಣೆ ಗಳನ್ನು ಸಮರ್ಥಿಸುವ ಮೂಲಕ ನಮ್ಮ ಊರು, ತಾಲೂಕು, ರಾಜ್ಯವನ್ನು ಲಂಚ ಭ್ರಷ್ಟಾಚಾರ ಮುಕ್ತ ಮಾಡುವಲ್ಲಿ ತಮ್ಮ ಕೊಡುಗೆ ನೀಡಬೇಕೆಂದು ಕೇಳಿಕೊಳ್ಳುತ್ತಿದ್ದೇನೆ.

ಯೋಗಿಜೀಯವರೇ ವ್ಯಕ್ತಿಗಿಂತ ಪಕ್ಷ ದೊಡ್ಡದು. ಪಕ್ಷಕ್ಕಿಂತ ಜನರ ಹಿತಾಸಕ್ತಿ ಮತ್ತು ದೇಶ ದೊಡ್ಡದು ಎಂಬುವುದನ್ನು ತಾವು ಸಾಬೀತು ಪಡಿಸಿದ್ದೀರಿ. ಜನರ ಹಿತವನ್ನು ಕಾಪಾಡದಿದ್ದರೆ ಅಲ್ಲಿ ಪಕ್ಷವೂ ಉಳಿಯುವುದಿಲ್ಲ, ಊರೂ ಉದ್ದಾರವಾಗುವುದಿಲ್ಲ ಎಂಬುವುದನ್ನು ತಾವೂ ಒಪ್ಪುತ್ತೀರಿ. ಈ ಹಿನೆಲೆಯಲ್ಲಿ ತಾವು ಪುತ್ತೂರು ಕ್ಷೇತ್ರದ ಹಿತಾಸಕ್ತಿಯನ್ನು ಕಾಪಾಡುವ, ಇಲ್ಲಿಯ ಜನರ ಅಭಿವೃದ್ಧಿಗೆ ಕಾರಣರಾಗುವವರನ್ನು ಆರಿಸುವಂತೆ ಹಾಗೂ ಲಂಚ-ಭ್ರಷ್ಟಾಚಾರ ಮುಕ್ತ ಊರು ನಮ್ಮದಾಗಲಿ ಎಂಬ ಕರೆಯನ್ನು ಜನರಿಗೆ ನೀಡುತ್ತೀರಿ ಎಂಬ ಆಶಯದಿಂದ ಈ ಪತ್ರವನ್ನು ಬರೆದಿರುತ್ತೇನೆ.

  • ಡಾ.ಯು.ಪಿ.ಶಿವಾನಂದ
    ಸಂಚಾಲಕರು, ಸುದ್ದಿ ಜನಾಂದೋಲನ ವೇದಿಕೆ ಮತ್ತು ವರುಣಾ, ಶಿಗ್ಗಾಂವಿ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ

LEAVE A REPLY

Please enter your comment!
Please enter your name here