ಕಾಂಗ್ರೆಸ್-ಎಸ್‌ಡಿಪಿಐ ವಿರುದ್ಧ ನನ್ನ ಸ್ಪರ್ಧೆ; ವಿಟ್ಲ : ಸೀತಾರಾಮ ಪರಿವಾರ ಕಾರ್ಯಕ್ರಮದಲ್ಲಿ ಪುತ್ತಿಲ

0

ಅರುಣಣ್ಣನ ವೈಯ್ಯಕ್ತಿಕ ವರ್ಚಸ್ಸು ಇಡೀ ಕರ್ನಾಟಕದಲ್ಲಿ ರಾರಾಜಿಸ್ತಾ ಇದೆ: ಶ್ರೀಕೃಷ್ಣ ಉಪಾಧ್ಯಾಯ
ಈ ಚುನಾವಣೆ ಧರ್ಮ – ಅಧರ್ಮದ ಯುದ್ಧದ ಹಾಗೆ ಕಾಣ್ತಾ ಇದೆ: ಡಾ. ಸುರೇಶ್ ಪುತ್ತೂರಾಯ

ವಿಟ್ಲ: ಸಾವಿರಾರು ಸವಾಲುಗಳ ನಡುವೆ ಹಿಂದೂ ಸಮಾಜವನ್ನು ಮುನ್ನಡೆಸಬೇಕಾಗಿರತಕ್ಕಂತಹ ಜವಾಬ್ದಾರಿಯ ಜೊತೆಗೆ ಧರ್ಮವನ್ನು ರಕ್ಷಣೆ ಮಾಡುತ್ತೇನೆ ಎನ್ನುವ ಆಶ್ವಾಸನೆಯನ್ನು ನಾನು ಈ ಸಂದರ್ಭದಲ್ಲಿ ಕೊಡಬಲ್ಲೆ. ಅಧಿಕಾರಕ್ಕಾಗಿ ನನ್ನ ಸ್ಪರ್ದೆಯಲ್ಲ. ಕಾಂಗ್ರೆಸ್ ಹಾಗೂ ಎಸ್.ಡಿ.ಪಿ.ಐ. ಪಕ್ಷದ ವಿರುದ್ಧ ನಮ್ಮ ಸ್ಪರ್ಧೆ ಹೊರತು ಬೇರೆ ಯಾವ ಪಕ್ಷದ ವಿರುದ್ಧವಲ್ಲ. ನನ್ನೊಂದಿಗೆ ಕೈ ಜೋಡಿಸಿರುವ ಕಾರ್ಯಕರ್ತ ಬಂಧುಗಳಿಗೆ ನಾನು ಚಿರಋಣಿಯಾಗಿದ್ದೇನೆ ಎಂದು ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಹೇಳಿದರು. ಅವರು ವಿಟ್ಲ ಮಹಿಮೆಯ ಗದ್ದೆಯಲ್ಲಿ ನಡೆದ ಸೀತಾರಾಮ ಪರಿವಾರ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಮಾಜಕ್ಕೆ ಶಕ್ತಿಯಾಗಬೇಕಾದ ಯುವಕರು ಬೀದಿಯ ಹೆಣವಾಗುತ್ತಿರುವ ದಿನದಲ್ಲಿ ನಾವಿದ್ದೇವೆ. ದುರಾಡಳಿತದ ಮೂಲಕ ಕಾಂಗ್ರೆಸ್ ಸಮಾಜವನ್ನು ಒಡೆಯುವ ಕಾರ್ಯ ಮಾಡಿದೆ. ದೇಶದ್ರೋಹ, ಅಶಾಂತಿ, ಮತಾಂಧತೆಯನ್ನು ತಡೆಯುವ ನಿಟ್ಟಿನಲ್ಲಿ ಕೆಲಸ ಕಾರ್ಯ ನಡೆಯಬೇಕಾಗಿದೆ. ಹಿರಿಯರ ಹಾಗೂ ಕಾರ್ಯಕರ್ತರ ಆಶಯದಂತೆ ಈ ಬಾರಿ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ. ಹಿಂದುತ್ವದ ಹೆಸರಿನಲ್ಲಿ ಸ್ಪರ್ಧೆಗೆ ಇಳಿದಿದ್ದೇನೆ ಎಂದ ಅವರು, ಸೌಮ್ಯ ಭಟ್, ಅಕ್ಷತಾ ಕೊಲೆ ಪ್ರಕರಣ, ಪ್ರವೀಣ್ ನೆಟ್ಟಾರು ಹತ್ಯೆ ನಮ್ಮ ಕಣ್ಣ ಮುಂದೆ ಹಾದು ಹೋಗುತ್ತದೆ ಇವರೆಲ್ಲರ ಕುಟುಂಬಕ್ಕೆ ನ್ಯಾಯ ಒದಗಿಸುವ ಕೆಲಸ ಆಗಬೇಕಾಗಿದೆ ಎಂದರು.

ಮುಖಂಡ ಶ್ರೀಕೃಷ್ಣ ಉಪಾಧ್ಯಾಯರವರು ಮಾತನಾಡಿ ಅರುಣಣ್ಣನ ವೈಯಕ್ತಿಕ ವರ್ಚಸ್ಸು ಇಡೀ ಕರ್ನಾಟಕದಲ್ಲಿ ಇವತ್ತು ಕಾಣ್ತಾಇದೆ. ಜನರ ನಾಡಿಮಿಡಿತ ಅರಿತ ಓರ್ವ ನಾಯಕರಿವರು. ವಿಟ್ಲದಲ್ಲಿ ಪುತ್ತಿಲರ ಚುನಾವಣೆಯ ಪ್ರಚಾರ ನಡೆದದ್ದು ಅಲ್ಲ, ಹಿಂದು ಸಮಾಜೋತ್ಸವದ ರೀತಿಯಲ್ಲಿ ಜನಸ್ತೋಮ ನೆರೆದಿದೆ. ಪುತ್ತೂರಿನಲ್ಲಿ ಅಭಿವೃದ್ಧಿಯ ಧ್ವಜ ಹಾರಿಸುವ ಸಾಮರ್ಥ್ಯವನ್ನು ಪುತ್ತಿಲ ಹೊಂದಿದ್ದಾರೆ. ಕಾರ್ಯಕರ್ತರಿಗೆ ಸ್ವಂತಿಕೆ ಇದ್ದು, ಸತ್ಯವನ್ನು ಸುಳ್ಳು ಮಾಡಲು ಸಾಧ್ಯವಿಲ್ಲ. ಯಾವುದೇ ಅಪಪ್ರಚಾರಗಳಿಗೆ ಯಾರೂ ಕಿವಿಗೊಡಬಾರದು. ಕಾರ್ಯಕರ್ತರ ಸಂಕಲ್ಪ ಸಾಕಾರವಾಗಲು ಎಲ್ಲರೂ ಕೈಜೋಡಿಸಬೇಕು ಎಂದು ತಿಳಿಸಿದರು. ಮುಖಂಡರಾದ ಡಾ. ಸುರೇಶ್ ಪುತ್ತೂರಾಯರವರು ಮಾತನಾಡಿ ಮುಂದಿನ ವಿಧಾನಸಭಾ ಚುನಾವಣೆ ಧರ್ಮ ಮತ್ತು ಅಧರ್ಮದ ಯುದ್ಧದ ಹಾಗೆ ಕಾಣ್ತಾ ಇದೆ. ಪ್ರಚಾರ ಮತ್ತು ಅಪಪ್ರಚಾರದ ಬಗ್ಗೆ ತಿಳಿಯದವರು ನಾವಲ್ಲ. ಆದರೆ ಅರುಣಣ್ಣನ ವಿರೋಧಿಗಳು ಇವತ್ತು ಅಪಪ್ರಚಾರದಲ್ಲಿ ತೊಡಗಿದ್ದಾರೆ. ತಮ್ಮ ತಮ್ಮ ಅಭ್ಯರ್ಥಿಗಳ ಪರ ಪ್ರಚಾರ ಮಾಡುವುದನ್ನು ಬಿಟ್ಟು ಮನೆಮನೆಗೆ ತೆರಳಿ ಅರುಣಣ್ಣನ ಬಗ್ಗೆ ಅಪಪ್ರಚಾರದಲ್ಲೇ ತೊಡಗಿರುವುದು ಬೇಸರದ ಸಂಗತಿ. ಇಲ್ಲಿನ ಜನಬೆಂಬಲ ಕಂಡು ತುಂಬಾ ಸಂತಸವಾಗಿದೆ. ಇಷ್ಟೆಲ್ಲ ಜನರ ಪ್ರೀತಿಗಳಿಸಿರುವ ಅರುಣಣ್ಣ ಭಾಗ್ಯವಂತ. ಯಾವುದೇ ಅಪಪ್ರಚಾರಕ್ಕೆ ಕಿವಿಕೊಡದೆ ಮುಂದಿನ ಚುನಾವಣೆಯಲ್ಲಿ ಅವರ ಬ್ಯಾಟ್ ಚಿಹ್ನೆಗೆ ಮತನೀಡಿ ಎಂದರು.

ಡಾ. ಗಣೇಶ್ ಪ್ರಸಾದ್ ಮುದ್ರಾಜೆ, ಉದ್ಯಮಿ ರಾಜಶೇಖರ ಬನ್ನೂರು, ವಿಟ್ಲ ಗ್ರಾಮ ಪಂಚಾಯಿತಿ ಸದಸ್ಯ ರಘುರಾಮ ವಿಟ್ಲ, ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ ಸಂದ್ಯಾಮೋಹನ್ ಉಪಸ್ಥಿತರಿದ್ದರು. ಸುಕನ್ಯಾ ಸೇರಾಜೆ ಪ್ರಾರ್ಥಿಸಿದರು. ಶ್ರೀಕೃಷ್ಣ ವಿಟ್ಲ ಸ್ವಾಗತಿಸಿದರು. ಸದಾಶಿವ ಅಳಿಕೆ ಕಾರ್ಯಕ್ರಮ ನಿರೂಪಿಸಿದರು. ಕಾರ‍್ಯಕ್ರಮದ ಆರಂಭದಲ್ಲಿ ಬೃಹತ್ ರೋಡ್ ಶೋ ನಡೆಯಿತು.

LEAVE A REPLY

Please enter your comment!
Please enter your name here