ಪುತ್ತೂರು: ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಏನಿದೆ ಎಂದು ಹುಡುಕಾಡುವ ಬದಲು ಬಿಜೆಪಿಯವರು ತನ್ನ ಪ್ರಣಾಳಿಕೆಯಲ್ಲೇನಿದೆ ಎಂಬುದನ್ನುನೋಡಿಕೊಳ್ಳಲಿ ಎಂದು ಕಾಂಗ್ರೆಸ್ ಮುಖಂಡ ಕುಂಬ್ರ ದುರ್ಗಾಪ್ರಸಾದ್ ರೈ ಹೇಳಿದ್ದು, ಕಾಂಗ್ರೆಸ್ ಪ್ರಣಾಳಿಕೆಯನ್ನು ನೋಡಿ ಬಿಜೆಪಿಗೆ ಭಯ ಸುರುವಾಗಿದೆ ಎಂದು ಹೇಳಿದರು. ಒಳಮೊಗ್ರು ಗ್ರಾಮದ ಕೊಯಿಲತ್ತಡ್ಕದಲ್ಲಿ ನಡೆದ ಪ್ರಚಾರ ಸಭೆಯಲ್ಲಿಮಾತನಾಡಿದ ಅವರು, ಕಾಂಗ್ರೆಸ್ ಕರ್ನಾಟಕವನ್ನು ಅಭಿವೃದ್ದಿಯತ್ತ ಕೊಂಡೊಯ್ಯುವ ಪ್ರಣಾಳಿಕೆಯನ್ನು ಸಿದ್ದಪಡಿಸಿದೆ. ಬಡವರ ಏಳಿಗೆಗೆ ಅನೇಕ ಯೋಜನೆಗಳನ್ನು ರೂಪಿಸಿದೆ ಅದನ್ನು ಕಾರ್ಯರೂಪಕ್ಕೆ ತರುವುದು ನಿಶ್ಚಿತ. ನಮ್ಮ ಗ್ಯಾರಂಟಿ ಯೋಜನೆಯ ಬಗ್ಗೆ ಜನತೆಗೆ ಗ್ಯಾರಂಟಿ ಇದೆ. ಹಿಂದೆಂದೂ ಕಾಣದ, ಕಂಡರಿಯದ ರೀತಿಯ ಅದ್ಬುತ ಪ್ರಣಾಳಿಕೆಯನ್ನು ನಾವು ಜನರ ಮುಂದೆ ಇಟ್ಟಿದ್ದೇವೆ, ಇದರಲ್ಲಿ ಏನಾದ್ರೂ ಇದೆಯಾ ಬೆಂಕಿ ಕೊಡ್ಲಿಕ್ಕೆ ಎಂದು ಬಿಜೆಪಿ ಹುಡುಕುತ್ತಿದೆ ಎಂದು ಲೇವಡಿ ಮಾಡಿದರು.
ಬಿಜೆಪಿಗೆ ಜನರಹಿತ ಬೇಕಿಲ್ಲ ಅವರಿಗೆ ಏನಿದ್ದರೂ ಧರ್ಮಗಳ ನಡುವೆ ಕಂದಕ ಸೃಷ್ಟಿಸಿ ಊರಿಗೆ ಬೆಂಕಿಹಚ್ಚಿ ಅದರಲ್ಲಿ ವಿಕೃತ ಸಂತೋಷ ಪಡೆಯುತ್ತಾರೆ. ಕಳೆದ ಚುನಾವಣೆಯಲ್ಲಿ ನೀಡಿದ್ದ ಪ್ರಣಾಳಿಕೆ ಬಿಜೆಪಿ ಕಚೇರಿಯ ಗೋಡೆಯಲ್ಲಿ ಈಗಲೂ ಇದೆ ಕಾರ್ಯರೂಪಕ್ಕೆಬಂದಿಲ್ಲ. ಈ ಬಾರಿಯ ಬಿಜೆಪಿ ಪ್ರಣಾಳಿಕೆ ಗೋಡೆಗೆ ಸೀಮಿತವಾಗಲಿದೆ ಎಂದು ಹೇಳಿದರು.
ಬಿಜೆಪಿಗೆ ತಾಕತ್ತಿದ್ದರೆ ಏರಿದ ಬೆಲೆಯನ್ನುಮೊದಲು ಇಳಿಸಿ ಬಡವರನ್ನು ಬದುಕಲು ಬಿಡಿ ಎಂದು ಹೇಳಿದರು. ಈ ಬಾರಿ ಬಿಜೆಪಿಗೆ ಬಡವರ ಶಾಪ ತಟ್ಟಲಿದೆ ಎಂದು ಭವಿಷ್ಯ ನುಡಿದ ಅವರು ಕನ್ನಡ ಮಣ್ಣಿನಲ್ಲಿ ಬಿಜೆಪಿ ಕೋಮುವಾದ ನಡೆಯುವುದಿಲ್ಲ. ಪುತ್ತೂರಿನಲ್ಲಿ ಈ ಬಾರಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ಮನವಿ ಮಾಡಿದರು.