ರಾಮಕುಂಜ ಪದವಿ ಕಾಲೇಜು ವಾರ್ಷಿಕೋತ್ಸವ

0


ವಿದ್ಯೆ, ಹಣ ಸಮನ್ವಯದಿಂದ ಸಮಾಜಮುಖಿಯಾಗಿ ಬಳಕೆ ಆಗಬೇಕು: ಪೇಜಾವರ ಶ್ರೀ

ರಾಮಕುಂಜ: ವಿದ್ಯೆಯ ಸಂಪಾದನೆ ಅರಿವಿಗಾಗಿ, ಹಣದ ಸಂಪಾದನೆ ಜೀವನಕ್ಕಾಗಿ. ಇವೆರಡನ್ನೂ ಸಮನ್ವಯದಿಂದ, ಸಮಾಜಮುಖಿಯಾಗಿ ಬಳಸುವುದು ರಾಷ್ಟ್ರ ನಿರ್ಮಾಣ ಕಾರ್ಯವಾಗುತ್ತದೆ ಎಂದು ಶ್ರೀ ಪೇಜಾವರ ಮಠಾಧೀಶ ಶ್ರೀ ವಿಶ್ವ ಪ್ರಸನ್ನತೀರ್ಥ ಶ್ರೀಪಾದರು ನುಡಿದರು.
ಅವರು ಶ್ರೀ ರಾಮಕುಂಜೇಶ್ವರ ಮಹಾವಿದ್ಯಾಲಯದ ವಾರ್ಷಿಕೋತ್ಸವ ಸಭೆಯ ಅಧ್ಯಕ್ಷತೆ ವಹಿಸಿ ಆಶೀರ್ವಚನ ನೀಡುತ್ತಿದ್ದರು. ಗಡಿ ಕಾಯುವ ಯೋಧರ ತ್ಯಾಗದಂತೆಯೇ ರಾಷ್ಟ್ರದೊಳಗಿನ ಪ್ರತಿಯೊಬ್ಬನೂ ತನ್ನ ಕರ್ತವ್ಯದಲ್ಲಿ ನಿಷ್ಠಾವಂತನಾದಾಗ ರಾಷ್ಟ್ರ ರಕ್ಷಣೆ ಸಾಧ್ಯವಾಗುತ್ತದೆ. ಉತ್ತಮ ಸಂಸ್ಕಾರ ಹೊಂದಿ ಸ್ವಾವಲಂಬಿ ಬದುಕಿನ ಕೌಶಲವನ್ನು ಸಾಧಿಸಿಕೊಳ್ಳಿ ಎಂದು ಅವರು ಕರೆ ನೀಡಿದರು. ಪ್ರಮುಖ ಅಭ್ಯಾಗತರಾಗಿದ್ದ ಪುತ್ತೂರು ವಿವೇಕಾನಂದ ಮಹಾವಿದ್ಯಾಲಯದ ಅಧ್ಯಕ್ಷ ಪ್ರೊ. ಶ್ರೀಪತಿ ಕಲ್ಲೂರಾಯ ಅವರು ಮಾತನಾಡಿ, ಕೇವಲ ಅಂಕ ಗಳಿಕೆ ಶಿಕ್ಷಣದ ಸಾಧನೆ ಅಲ್ಲ, ಇದರಿಂದಾಗಿ ಮಾನಸಿಕ ಒತ್ತಡ ಅಧಿಕವಾಗುತ್ತದೆ. ಸೋಲು ಗೆಲುವಿನ ಛಲಕ್ಕೆ ದಾರಿ ಮಾಡಿಕೊಡಬೇಕು. ಸಂತೋಷ ಚಿತ್ತರಾಗಿ, ಧನಾತ್ಮಕ ಚಿಂತನೆಯನ್ನು ಬೆಳೆಸಿಕೊಳ್ಳಬೇಕು. ಗ್ರಾಮೀಣ ಬದುಕಿನಲ್ಲಿ ಇದು ಸಾಧ್ಯ ಎಂದು ಹೇಳಿದರು.


ಸನ್ಮಾನ/ ಗೌರವಾರ್ಪಣೆ:

ಮಂಗಳೂರು ವಿಶ್ವವಿದ್ಯಾಲಯ ಎಂ.ಕಾಂ. ಪರೀಕ್ಷೆಯಲ್ಲಿ ನಾಲ್ಕನೇ ಮತ್ತು ಐದನೇಯ ಸ್ಥಾನ ಪಡೆದ ಸಂಸ್ಥೆಯ ಹಿರಿಯ ವಿದ್ಯಾರ್ಥಿನಿಯರಾದ ಶ್ಲಾಘ್ಯ ಆಳ್ವ ಮತ್ತು ಚೈತ್ರ ಬಿ., ಅವರನ್ನು ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು ಸನ್ಮಾನಿಸಿದರು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಸುಂದರ ಶೆಟ್ಟಿ ಅವರ ನಿರಂತರ ಪ್ರೋತ್ಸಾಹವನ್ನು ಸ್ಮರಿಸಿ ಶ್ರೀಗಳು ಸನ್ಮಾನಿಸಿದರು. ಹತ್ತು ಮಂದಿ ಅರ್ಹ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ರಕ್ಷಕ ಶಿಕ್ಷಕ ಸಂಘದ ವತಿಯಿಂದ ನಗದು ಬಹುಮಾನವನ್ನು ನೀಡಿ ಪುರಸ್ಕರಿಸಲಾಯಿತು. ಚಾಂಪಿಯನ್ ಶಿಪ್ ಪಡೆದ ಕ್ರೀಡಾ ತಂಡಗಳನ್ನೂ, ಅತ್ಯಂತ ಹೆಚ್ಚು ಅಂಕ ಗಳಿಸಿದ ಆರು ಮಂದಿ ವಿದ್ಯಾರ್ಥಿಗಳನ್ನೂ ಸಭೆಯಲ್ಲಿ ಗೌರವಿಸಲಾಯಿತು.
ಪ್ರಾಂಶುಪಾಲರಾದ ಗಣರಾಜ ಕುಂಬ್ಳೆ ಅವರು ಕಾಲೇಜಿನ ಚಟುವಟಿಕೆಗಳ ವಾರ್ಷಿಕ ವರದಿಯನ್ನು ವಾಚಿಸಿದರು. ಆಡಳಿತ ಮಂಡಳಿಯ ಕಾರ್ಯದರ್ಶಿ ರಾಧಾಕೃಷ್ಣ ಕೆ.ಎಸ್. ಅವರು ಸ್ವಾಗತಿಸಿದರು. ಉಪನ್ಯಾಸಕ ದಿವಾಕರ್ ಅವರು ವಂದಿಸಿದರು. ಆಡಳಿತ ಮಂಡಳಿಯ ಅಧ್ಯಕ್ಷರಾದ ನಾರಾಯಣ ಭಟ್. ಟಿ, ಖಜಾಂಜಿ ಸೇಸಪ್ಪ ರೈ, ಆಡಳಿತ ಮಂಡಳಿಯ ಸದಸ್ಯರಾದ ಮಾಧವ ಆಚಾರ್ ಹಾಗೂ ಕಾಲೇಜಿನ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಸ್ವಪ್ನ, ಕಾರ್ಯದರ್ಶಿ ಪವನ್ ಕುಮಾರ್, ಜೊತೆ ಕಾರ್ಯದರ್ಶಿ ಶ್ರದ್ಧಾ ಯು.ಎಸ್. ಕ್ರೀಡಾ ಕಾರ್ಯದರ್ಶಿ ಪ್ರಜ್ವಲ್ ಮತ್ತು ಸಾಂಸ್ಕೃತಿಕ ಕಾರ್ಯದರ್ಶಿ ಮೋಕ್ಷಿತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಪನ್ಯಾಸಕ ಕೃಷ್ಣಪ್ರಸಾದ್ ಕಾರ್ಯಕ್ರಮ ನಿರ್ವಹಿಸಿದರು. ಶಿವಪ್ರಸಾದ್, ಜಯಶ್ರೀ, ಸವಿತಾ, ಸವಿತ ಪಿ. ಸಹಕರಿಸಿದರು. ವಾರ್ಷಿಕೋತ್ಸವದ ಅಂಗವಾಗಿ ಪೂರ್ವಾಹ್ನ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

LEAVE A REPLY

Please enter your comment!
Please enter your name here