ಗುಡುಗು ಸಹಿತ ಗಾಳಿ ಮಳೆ: 5 ಟ್ರಾನ್ಸ್‌ಫಾರ್ಮರ್, 130 ವಿದ್ಯುತ್ ಕಂಬಗಳಿಗೆ ಹಾನಿ – ಮೆಸ್ಕಾಂಗೆ 25 ಲಕ್ಷ ರೂ.ಗಳಿಗೂ ಅಧಿಕ ನಷ್ಟ-ದುರಸ್ತಿ ಕಾರ್ಯ ಪ್ರಗತಿಯಲ್ಲಿ

0

ಪುತ್ತೂರು:ಮೇ 11ರಂದು ಗುಡುಗು ಸಹಿತ ಭಾರೀ ಗಾಳೆ ಮಳೆಯಾಗಿದ್ದು ಇದರ ಪರಿಣಾಮ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಹಾಗೂ ವಿದ್ಯುತ್ ಕಂಬಗಳಿಗೆ ಹಾನಿಯಾಗಿ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದಲ್ಲದೆ ಮೆಸ್ಕಾಂ ಪುತ್ತೂರುಗೆ ಸುಮಾರು 25 ಲಕ್ಷ ರೂ.ಗಳಿಗೂ ಅಧಿಕ ನಷ್ಟ ಸಂಭವಿಸಿದೆ. ದುರಸ್ತಿ ಕಾರ್ಯ ಭರದಿಂದ ನಡೆಯುತ್ತಿದ್ದು ಮೇ 13ರ ಮಧ್ಯಾಹ್ನದೊಳಗೆ ಯಥಾಸ್ಥಿತಿಗೆ ಬರುವ ಸಾಧ್ಯತೆ ಇದೆ.

ಮೆಸ್ಕಾಂ ಕುಂಬ್ರ ಗ್ರಾಮಾಂತರ ವಲಯದಲ್ಲಿ ಚಾರ್ವಾಕ, ಕೊಳ್ತಿಗೆ ಹಾಗೂ ಕುಂಬ್ರ ಸೇರಿ 3 ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗಳಿಗೆ ಹಾನಿಯಾಗಿದೆ.ಸುಮಾರು 20 ಕಂಬಗಳು ಬಿದ್ದು ಹಾನಿಯಾಗಿದೆ. ಇದರಿಂದಾಗಿ ಸುಮಾರು 6 ಲಕ್ಷ ರೂ.ಗಳಿಗೂ ಅಧಿಕ ನಷ್ಟ ಸಂಭವಿಸಿದೆ. ಈ ವ್ಯಾಪ್ತಿಯಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ದುರಸ್ತಿ ಕಾರ್ಯ ನಡೆಯುತ್ತಿದ್ದು ಬಹುತೇಕ ಸರಿಪಡಿಸಲಾಗಿದ್ದು ಎರಡು ದಿನಗಳೊಳಗೆ ಸಂಪೂರ್ಣ ದುರಸ್ತಿ ಕಾರ್ಯ ಪೂರ್ಣಗೊಂಡು ವಿದ್ಯುತ್ ಸಂಪರ್ಕ ವ್ಯವಸ್ಥೆ ಮೊದಲಿನಂತೆ ಮುಂದುವರಿಯಲಿದೆ. ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ಕುಂಬ್ರ ಗ್ರಾಮಾಂತರ ವಲಯದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ವಸಂತ ಕುಮಾರ್ ಕೋರಿದ್ದಾರೆ.

ಪುತ್ತೂರು ಉಪವಿಭಾಗ ವ್ಯಾಪ್ತಿಯಲ್ಲಿ ಸುಮಾರು 70ಕ್ಕೂ ಅಧಿಕ ವಿದ್ಯುತ್ ಕಂಬಗಳಿಗೆ ಹಾನಿಯಾಗಿದ್ದು ಮುಂಡೂರು ಮತ್ತು ಸಾಂದೀಪನಿ ಸಮೀಪ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಮಗುಚಿ ಹಾನಿಯಾಗಿದ್ದು ಸುಮಾರು 20 ಲಕ್ಷ ರೂ.ನಷ್ಟ ಸಂಭವಿಸಿದೆ. ಒಟ್ಟಾರೆ ಪುತ್ತೂರು ತಾಲೂಕಿನಲ್ಲಿ ಸುಮಾರು 130 ವಿದ್ಯುತ್ ಕಂಬಗಳಿಗೆ ಹಾಗೂ ಐದು ಟ್ರಾನ್ಸ್‌ಫಾರ್ಮರ್‌ಗಳಿಗೆ ಹಾನಿಯಾಗಿ ಸುಮಾರು 25 ಲಕ್ಷ ರೂ.ಗಳಿಗೂ ಅಧಿಕ ನಷ್ಟ ಸಂಭವಿಸಿದೆ. ದುರಸ್ತಿ ಕಾರ್ಯ ಭರದಿಂದ ನಡೆಯುತ್ತಿದ್ದು ಈಗಾಗಲೇ ಹೆಚ್‌ಟಿ ಲೈನ್ ದುರಸ್ತಿ ಕಾರ್ಯಪೂರ್ಣಗೊಂಡಿದ್ದು ಮೇ 13ರ ಮಧ್ಯಾಹ್ನದೊಳಗೆ ಎಲ್‌ಟಿ ಲೈನ್ ದುರಸ್ತಿ ಕಾರ್ಯವೂ ಪೂರ್ಣಗೊಳ್ಳಲಿದೆ ಎಂದು ಮೆಸ್ಮಾಂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

LEAVE A REPLY

Please enter your comment!
Please enter your name here