ಮನೆಯಂಗಳದಿ ಔಷಧಿ ಸಸ್ಯ – 3(ಅಂಬೆಹಳದಿ ಗಿಡ)

0

ಮೂಲಿಕಾ ಪರಿಚಯ:

ಮಾವಿನ ಪರಿಮಳ ಹೊಮ್ಮಿಸುವ ಗಡ್ಡೆಗಳಿಂದ ಕೂಡಿದ ಈ ವಾರ್ಷಿಕ ಗಿಡವು ಶುಂಠಿಯಂತಹ ಪ್ರಕಾಂಡ ಸಸ್ಯಗಳ ಗುಂಪಿಗೆ ಸೇರಿದ್ದರೂ ಅರಿಸಿನದ ಒಳಜಾತಿಯದು. ಸ್ಥೂಲವಾಗಿ ಅರಿಸಿನ ಗಿಡವನ್ನೇ ಹೋಲುವುದು. ಗಾತ್ರದಲ್ಲಿ ತುಸು ಚಿಕ್ಕದು. ಮಳೆ ಬಿದ್ದೊಡನೆ ಸಸ್ಯದ ಮೂಲಗಡ್ಡೆಯಿಂದ ಹೂದಿಂಡು ಕೊನರಿ ಒಂದು ಮೊಳ ಎತ್ತರ ಬೆಳೆಯುವುದು. ಹೂಗಳ ಬಣ್ಣ ಹೆಚ್ಚಾಗಿ ಬಿಳಿ, ಒಳಗೆ ಹಳದಿ. ಹೂಗಳನ್ನಾವರಿಸಿರುವ ನಾಲಗೆಯಂತಹ ಆವರಣಗಳು (bracts-ಇವು ಸಸ್ಯದ ಅಲಂಕಾರಿಕ ಭಾಗ) ಹಸಿರೊತ್ತಿದ ಬಿಳಿಯವು. ಮಳೆ ಚೆನ್ನಾಗಿ ಬಿದ್ದಾಗ ಹೊಸ ಗಿಡಗಳು ಚಿಗಿತು, ಹೊಸ ಪ್ರಕಾಂಡಗಳನ್ನು ಬೆಳೆಸುತ್ತವೆ. ಇವುಗಳ ಸಮೂಹವೇ ಆಹಾರಕ್ಕೆ ಮತ್ತು ಔಷಧಿಗೆ ಬೇಕಾಗುವ ಪಿಷ್ಟಸಹಿತ ʼಗಡ್ಡೆʼ ಗಳೆನಿಸುವ ʼಅಂಗೆಹಲ್ಲೆʼ. ಅಡುಗೆಯಲ್ಲಿ ಚಟ್ನಿ, ಸಾರು, ಉಪ್ಪಿನಕಾಯಿ ಇತ್ಯಾದಿಗಳಿಗೆ ಮಾವಿನ ಪರಿಮಳ ನೀಡಲು ಇದರ ಬಳಕೆ ಸಾಮಾನ್ಯವಾಗಿದೆ. ಬಂಗಾಳದಿಂದ ತೊಡಗಿ ಕೊಂಕಣ ತನಕ ತೀರಗಳಲ್ಲಿ ಸಾಮಾನ್ಯ. ಸ್ವಾಭಾವಿಕವಾಗಿಯೂ ಕೃಷಿಯಲ್ಲಿಯೂ ಇದೆ. ಗಡ್ಡೆಗಳ ಪರೀಕ್ಷೆಯಿಂದ ಮಾವಿನ ʼಸೊನೆʼಯ ಪರಿಮಳವುಳ್ಳ ಆರುವ ತೈಲ 1 ಶೇಕಡಾ ಹಾಗೂ ರಾಳ, ಅಂಟು, ಸಕ್ಕರೆ, ಪಿಷ್ಟ, ಆಮ್ಲಗಳು, ನಾರು, ಕ್ಷಾರಗಳು ದೊರೆತಿವೆ. ಇದರಿಂದ ಬಿಳಿಯಾದ ಹಿಟ್ಟಿನಂತಹ ಸತ್ವವನ್ನು ತೆಗೆದು ಬಳಸುತ್ತಾರೆ. ಆರ್ಯುವೇದದಲ್ಲಿ ʼಸರ್ವಕಂಡೂವಿನಾಶಿನೀʼ ಎಂಬ ಗುಣನಾಮ ಪಡೆದಿದೆ. ವಿವಿಧ ಚರ್ಮರೋಗಗಳ ಬೇರೆ ಬೇರೆ ಔಷಧಗಳ ಸಹಯೋಗದೊಂದಿಗೆ ಲೇಪನ, ಸೇವನಗಳಿಗೆ ತಿಳಿಸಲ್ಪಟ್ಟಿದೆ. ಕಹಿ ಹಾಗೂ ಸಿಹಿ ರುಚಿ ಪಡೆದಿದೆ. ಪಿತ್ತಹಾರಕವಾಗಿ ಜೀರ್ಣಕಾರಿಯಾಗಿ ಪುಷ್ಟಿದಾಯಕವಾಗಿಯೂ ಬಳಸಲ್ಪಡುತ್ತದೆ. ರಕ್ತಶುಧ್ದಿಗೊಳಿಸುವುದು ಇದರ ವಿಶೇಷ ಗುಣ.

ಉಪಯೋಗಗಳು:
ಪ್ರಕಾಂಡಗಳು, ಎಲೆ, ಹೂ.

ಜಜ್ಜು ಗಾಯಗಳಿಗೆ:
(ಜಜ್ಜಿ ರಕ್ತ ಹೆಪ್ಪುಗಟ್ಟಿದಾಗ ಮತ್ತು ಉಳುಕಿಗೆ ಸಹ) ಬರಿಯ ಗಡ್ಡೆಗಳನ್ನು ನೀರಿನಲ್ಲಿ ಅರೆದು ಆರಿದಂತೆ ಲೇಪಿಸುವುದು. 2-3 ಗಂಟೆ ಕಾಲ. ರಕ್ತಶುಧ್ದವೂ ಆಗುವುದು. ನೋವು ಬಾವು ಇಳಿಯುವುದು.

ಚಿಕ್ಕಮಕ್ಕಳ ಚರ್ಮರೋಗಗಳಿಗೆ:
ಅಂಬೆಹಳದಿ ಗಡ್ಡೆಯನ್ನು ಚೆಂಡುಪುಳ (ತೆಂಗಿನ ಎಳೆಮಿಳ್ಳೆ) ಯೊಂದಿಗೆ ತಣ್ಣೀರಲ್ಲಿ ತೇದು ಲೇಪನ. 1 ಗಂಟೆಯಂತೆ 3-6 ದಿನ. (ಇದರಿಂದ ಚರ್ಮದ ಆರೋಗ್ಯ ಸುಧಾರಿಸಿ ರೋಗನಿರೋಧಕ ಶಕ್ತಿ ಹೆಚ್ಚುವುದು.

ಅಂಬೆಹಳದಿ ಗಿಡ (ಮಾವುಶುಂಠಿ) ಚರ್ಮಾರೋಗ್ಯ ಸಿಧಾರಿಸುವ ಹೆಸರುಗಳು:
ಕನ್ನಡ: ಮಾವಿನ ಶುಂಠಿ, ಅಂಬೆ ಹಳದಿ, ಅಂಬೆಹಲ್ಲೆ ಗಿಡ
ತುಳು: ಕುಕ್ಕು ಸೂಂಟಿ
ತೆಲುಗು: ಮಾಮಿಡಿ ಅಲ್ಲಮು
ತಮಿಳು: ಮಾಂಗಾಐ ಇಂಜಿ
ಮಲಯಾಳ: ಮಾಙ್ಙನಾರಿ
ಮರಾಠಿ: ಅಂಬಾಹಳ್ದೀ
ಹಿಂದಿ: ಆಮ್‌ಹಲ್‌ದೀ
ಸಂಸ್ಕೃತ: ಆಮ್ರಗಂಧೀಹರಿದ್ರಾ
ಇಂಗ್ಲಿಷ್:‌ Mango Ginger
ಸಸ್ಯಶಾಸ್ತ್ರೀಯ: Curcuma amada Roxb
ಕುಟುಂಬ: Zingiberaceae

ಮೂಲ ಬರಹ: ಪಿ ಎಸ್‌ ವೆಂಕಟರಾಮ ದೈತೋಟ

LEAVE A REPLY

Please enter your comment!
Please enter your name here