ವಿಟ್ಲ: ಬಂಟ್ವಾಳ ತಾಲೂಕು ವಿಟ್ಲ ಕಸಬಾ ಗ್ರಾಮದ ಬನ ಎಂಬಲ್ಲಿ ದ್ವಿಚಕ್ರ ವಾಹನ ಒಂದರಲ್ಲಿ ಬಂದ ಯುವಕನೋರ್ವ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವತಿಯೋರ್ವರ ಮೈಗೆ ಕೈಹಾಕಿ ಮಾನಭಂಗಕ್ಕೆ ಯತ್ನಿಸಿದ ಪ್ರಕರಣದ ಆರೋಪಿಯನ್ನು ವಿಟ್ಲ ಠಾಣಾ ಇನ್ಸ್ ಪೆಕ್ಟರ್ ರವರ ನೇತೃತ್ವದ ಪೊಲೀಸರ ತಂಡ ಬಂಧಿಸಿದೆ.
ಬಂಟ್ವಾಳ ತಾಲೂಕು ಕನ್ಯಾನ ಗ್ರಾಮದ ಅಬೂಬಕ್ಕರ್ ಕೆ. (46 ವ.) ಬಂಧಿತ ಆರೋಪಿಯಾಗಿದ್ದಾರೆ. ಬಂಟ್ವಾಳ ತಾಲೂಕು ವಿಟ್ಲ ಕಸಬಾ ಗ್ರಾಮದ ಬನ ಎಂಬಲ್ಲಿ ಮೇ.13ರಂದು ಈ ಘಟನೆ ನಡೆದಿತ್ತು.
ವಿಟ್ಲ ಕಸಬ ಗ್ರಾಮದ ಕಡಂಬು ನಿವಾಸಿ ಯುವತಿಯೋರ್ವರು ಮೇ.13ರಂದು ಮಧ್ಯಾಹ್ನದ ವೇಳೆ ತನ್ನ ಮನೆಯಿಂದ ತರವಾಡು ಮನೆಗೆ ರಸ್ತೆ ಬದಿಯಲ್ಲಿ ನೆಡೆದುಕೊಂಡು ಹೋಗುತ್ತಿದ್ದ ವೇಳೆ ಬಂಟ್ವಾಳ ತಾಲೂಕು ವಿಟ್ಲ ಕಸಬಾ ಗ್ರಾಮದ ಬನ ಎಂಬಲ್ಲಿಗೆ ತಲುಪಿದಾಗ ಅನಿಲಕಟ್ಟೆ ಕಡೆಯಿಂದ ದ್ವಿಚಕ್ರ ವಾಹನದಲ್ಲಿ ಬಂದ ಯುವಕನೋರ್ವ ಯುವತಿಯಲ್ಲಿ ವಿಟ್ಲಕ್ಕೆ ಹೋಗುವ ರಸ್ತೆಯ ಬಗ್ಗೆ ವಿಚಾರಿಸಿ ಬಳಿಕ ಯುವತಿಯ ಮೈಗೆ ಕೈ ಹಾಕಿ ಮಾನ ಭಂಗಕ್ಕೆ ಪ್ರಯತ್ನಿಸಿ ಅಸಭ್ಯವಾಗಿ ವರ್ತಿಸಿರುವ ಬಗ್ಗೆ ಯುವತಿ ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರು ವಿಟ್ಲ ಠಾಣಾ ಪೊಲೀಸರು ತನಿಖೆ ಆರಂಭಿಸಿ ಕೆಲವೊಂದು ಸಿಸಿ ಕ್ಯಾಮರಾಗಳಲ್ಲಿ ಸೆರೆಯಾಗಿರುವ ದೃ಼ಶ್ಯವಳಿಗಳ ಆಧಾರದಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.
ವಿಟ್ಲ ಠಾಣಾ ಇನ್ಸ್ ಪೆಕ್ಟರ್ ನಾಗರಾಜ್ ಹೆಚ್. ಈ.ರವರ ಮಾರ್ಗದರ್ಶನದಲ್ಲಿ ಪೊಲೀಸ್ ಉಪ ನಿರೀಕ್ಷಕರಾದ ಕಾರ್ತಿಕ್ ಕಾತರಕಿ ಹಾಗೂ ಸಿಬ್ಬಂದಿಗಳಾದ ಹೆಚ್‌ಸಿ ರಕ್ಷಿತ್, ಹೇಮರಾಜರವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಾಪಕ ಪ್ರತಿರೋಧ ವ್ಯಕ್ತವಾಗಿದ್ದು, ಶೀಘ್ರವಾಗಿ ಆರೋಪಿಯನ್ನು ಪತ್ತೆಹಚ್ಚುವಂತೆ ಆಗ್ರಹ ವ್ಯಕ್ತವಾಗಿತ್ತು.