ಪುತ್ತೂರು: ಉಡುಪಿಯಿಂದ ಬಂಟ್ವಾಳ-ವಿಟ್ಲ ಮೂಲಕ ಕಾಸರಗೋಡಿಗೆ ಹಾದು ಹೋಗುವ 400 ಮೆಗಾವ್ಯಾಟ್ ವಿದ್ಯುತ್ ಪ್ರಸರಣಾ ಲೈನ್ ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ಪುತ್ತೂರು ಶಾಸಕರಾದ ಅಶೋಕ್ ರೈ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಕಾಮಗಾರಿಗೆ ಸಂಬಂಧಿಸಿದಂತೆ ಅಧಿಕಾರಿಗಳನ್ನು ಕಚೇರಿಗೆ ಕರೆಸಿ ಕಾಮಗಾರಿಯ ಮಾಹಿತಿ ಪಡೆದುಕೊಂಡ ಶಾಸಕರು ವಿದ್ಯುತ್ ಲೈನ್ ಹಾದು ಹೋಗುವ ಗ್ರಾಮಗಳಲ್ಲಿ ಕೃಷಿಕರಿಗೆ ತೊಂದರೆಯಾಗುತ್ತಿರುವ ಬಗ್ಗೆ ಚುನಾವಣಾ ಪ್ರಚಾರಕ್ಕೆ ತೆರಳಿದ ಸಂದರ್ಭದಲ್ಲಿ ಸಾರ್ವಜನಿಕರು ಮಾಹಿತಿ ನೀಡಿ ಲೈನ್ ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ಅಶೋಕ್ ರೈಯವರಲ್ಲಿ ಮನವಿ ಮಾಡಿದ್ದರು.
ಉಡುಪಿಯಿಂದ ಬಂಟ್ವಾಳ ಮೂಲಕ ವಿಟ್ಲದಲ್ಲಿ ಹಾದು ಹೋಗುವ ಈ ಹೆವಿ ವಿದ್ಯುತ್ ಲೈನ್ ವಿಟ್ಲ- ವಿಟ್ಲ ಕಸಬಾ, ವೀರಕಂಬ, ಕೇಪು ಪುಣಚ, ಅಳಿಕೆ ಭಾಗದಲ್ಲಿ ಅನೇಕ ಕೃಷಿ ಭೂಮಿಗೆ ಹಾನಿ ಮಾಡುತ್ತಿದೆ. ಈ ವ್ಯಾಪ್ತಿಯಲ್ಲಿ ಅನೇಕ ಮನೆಗಳಿದ್ದು ಅವರಿಗೂ ತೊಂದರೆಯಾಗಲಿದೆ ಎಂಬ ದೂರುಗಳು ಬಂದಿತ್ತು. ಕಾಮಗಾರಿಯಿಂದ ಜನರಿಗೆ ತೀವ್ರ ತೊಂದರೆಯಾಗುವ ಕಾರಣ ಯಾವುದೇ ಕಾರಣಕ್ಕೂ ಕಾಮಗಾರಿಯನ್ನು ಮುಂದುವರೆಸದಂತೆ ಸೂಚನೆಯನ್ನು ನೀಡಿದ್ದಾರೆ. ಜಿಲ್ಲಾಧಿಕಾರಿಗಳಿಗೂ ಈ ಬಗ್ಗೆ ಸೂಚನೆಯನ್ನು ನೀಡಿದ್ದಾರೆ.
ಪ್ರಸ್ತುತ ಈ ಕಾಮಗಾರಿಯು ಕೇಂದ್ರ ಸರಕಾರದ ಸುಪರ್ದಿಯಲ್ಲಿ ಅದಾನಿ ಸಮೂಹ ಸಂಸ್ಥೆಗೆ ಗುತ್ತಿಗೆಯನ್ನು ನೀಡಲಾಗಿದೆ. 2015 ರಲ್ಲಿ ಈ ಯೋಜನೆಗೆ ಟೆಂಡರ್ ಕರೆಯಲಾಗಿದೆ. ಕಾಮಗಾರಿ ನಡೆಸಲು ಮೂರು ಬಾರಿ ಸರ್ವೆ ಕಾರ್ಯವನ್ನು ನಡೆಸಲಾಗಿದೆ. ಲೈನ್ ಹಾದುಹೋಗುವ ಪ್ರದೆಶದ 3 ಕಿ ಮೀ ವ್ಯಾಪ್ತಿಯಲ್ಲಿ ವಾಸ್ತವ್ಯ ಹೂಡುವ ಮಂದಿಗೆ ಇದರಿಂದ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರಲಿದೆ ಎಂಬ ಆತಂಕವೂ ಇದ್ದು, ಈ ಭಾಗದ ಕೃಷಿಕರು ಮತ್ತು ಸಾರ್ವಜನಿಕರು ಕಾಮಗಾರಿ ವಿರೋಧಿಸಿ ನ್ಯಾಯಾಲಯದಲ್ಲಿ ದಾವೆಯನ್ನು ಹೂಡಿದ್ದಾರೆ. ಇದೀಗ ಶಾಸಕರು ಯಾವುದೇ ಕಾರಣಕ್ಕೂ ಜನರಿಗೆ ತೊಂದರೆಯಾಗುವ ವಿದ್ಯುತ್ ಲೈನ್ ಕಾಮಗಾರಿಯನ್ನು ತಕ್ಷಣ ಸ್ಥಗಿತಗೊಳಿಸುವಂತೆ ಸೂಚನೆಯನ್ನು ನೀಡಿದ್ದಾರೆ.