ಪುತ್ತೂರು: ಇಂದು ರಾಜ್ಯ ಮಾತ್ರವಲ್ಲ ದೇಶವೇ ತಿರುಗಿ ನೋಡುವಂತೆ ಮಾಡಿದ ಹೈವೋಲ್ಟೇಜ್ ಕದನ ಕಣ. ಬಿಜೆಪಿ-ಆರೆಸ್ಸೆಸ್ನ ಭದ್ರಕೋಟೆಯಾದ ಕರಾವಳಿಯ ಕ್ಷೇತ್ರಗಳಲ್ಲಿ ಇದು ಕೂಡ ಅತ್ಯಂತ ಪ್ರಮುಖವಾದ ಕ್ಷೇತ್ರ. ದಕ್ಷಿಣ ಕನ್ನಡದ ಎರಡನೆ ದೊಡ್ಡ ವಾಣಿಜ್ಯ ನಗರ ಎನಿಸಿರುವ ಪುತ್ತೂರು ಕೋಮು ಸೂಕ್ಷ್ಮ ಪ್ರದೇಶವೂ ಹೌದು. ಇನ್ನು ಕೋಮು ಸೂಕ್ಷ್ಮ ಪ್ರದೇಶ ಎನಿಸಿಕೊಂಡಿರುವ ಪುತ್ತೂರಿನಲ್ಲಿ ಆರ್ ಎಸ್ ಎಸ್ ಪ್ರಭಾವವೂ ಬಹಳಷ್ಟಿದೆ. ಕ್ಷೇತ್ರದಲ್ಲಿ ನಡೆದ ವಿಧಾನಸಭಾ ಚುನಾವಣೆಗಳ ಪೈಕಿ 9 ಬಾರಿ ಕಾಂಗ್ರೆಸ್, ಗೆದ್ದರೆ ಆರು ಬಾರಿ ಬಿಜೆಪಿ ಗೆದ್ದಿದೆ. ಪ್ರತಿ ಬಾರಿ ನಡೆಯುತ್ತಿದ್ದ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಹೋರಾಟದ ಕಣ ಈ ಬಾರಿ ತ್ರಿಕೋನ ಸ್ಪರ್ಧೆಯಾಗಿ ಬದಲಾದುದು ಒಂದು ವಿಶಿಷ್ಟ ವಿದ್ಯಾಮಾನ. ಇದಕ್ಕೆ ಕಾರಣ ಅರುಣ್ ಕುಮಾರ್ ಪುತ್ತಿಲರ ಪಕ್ಷೇತರ ಕದನ. ಹೌದು, ಬಿಜೆಪಿಯಿಂದ ಟಿಕೆಟ್ ಸಿಗಲಿಲ್ಲ ಎನ್ನುವ ಕಾರಣಕ್ಕೆ ಹಿಂದು ಮುಖಂಡ ಅರುಣ್ ಕುಮಾರ್ ಪುತ್ತಿಲ ಅವರು ಪಕ್ಷೇತರರಾಗಿ ಕಣಕ್ಕೆ ಇಳಿದಂದಿನಿಂದ ಪುತ್ತೂರು ವಿಧಾನಸಭಾ ಕ್ಷೇತ್ರದ ರಾಜಕೀಯ ಚಿತ್ರಣವೇ ಬದಲಾಗಿಹೋಯಿತು. ಈ ಹಿಂದೆಂದೂ ಕಂಡಿರದ ವಾದ-ಪ್ರತಿವಾದ, ವಾಕ್ಸಮರಗಳಿಗೆ ಪುತ್ತೂರು ಕ್ಷೇತ್ರ ಸಾಕ್ಷಿಯಾಯಿತು. ಚುನಾವಣೆ ಘೊಷಣೆಯಾದಂದಿನಿಂದ ಫಲಿತಾಂಶದವರೆಗೆ ಪುತ್ತೂರಿನಲ್ಲಿ ಏನೇನಾಯ್ತು ಎನ್ನುವ ಸಣ್ಣ ರಿವೈಂಡ್ ಸ್ಟೋರಿ ಇಲ್ಲಿದೆ ನೋಡಿ.
ಟಿಕೆಟ್ ಫೈಟ್..
ಹೌದು ಆರಂಭದಲ್ಲಿ ಪುತ್ತೂರು ಕ್ಷೇತ್ರದಲ್ಲಿ ಅತ್ಯಂತ ಕ್ಯೂರಿಯಾಸಿಟಿ ಹುಟ್ಟುಹಾಕಿದ್ದ ವಿಚಾರ ಎಂದರೆ ಅದು ಕಾಂಗ್ರೆಸ್ನ ಟಿಕೆಟ್ ಫೈಟ್. ಪುತ್ತೂರು ಕ್ಷೇತ್ರದ ಕಾಂಗ್ರೆಸ್ ಟಿಕೆಟ್ಗೆ ಇಲ್ಲಿಂದ 13 ಮಂದಿ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದರು. ಆದರೆ ಅವರ್ಯಾರಿಗೂ ಟಿಕೆಟ್ ಸಿಗದೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡಿದ್ದ ಅಶೋಕ್ ಕುಮಾರ್ ರೈಯವರು ಟಿಕೆಟ್ ಪಡೆದು ಅಚ್ಚರಿ ಮೂಡಿಸಿದ್ದರು. ಕಾಂಗ್ರೆಸ್ನಲ್ಲಿ ಮತ್ತೆ ಭಿನ್ನಮತ ಸ್ಫೋಟಗೊಂಡು ಕಾಂಗ್ರೆಸ್ ಒಡೆಯಬಹುದು ಎನ್ನುವ ಲೆಕ್ಕಾಚಾರ ಇತ್ತಾದರೂ, ದಿವ್ಯಪ್ರಭಾ ಗೌಡ ಅವರು ತನಗೆ ಕಾಂಗ್ರೆಸ್ನಿಂದ ಅನ್ಯಾಯವಾಗಿದೆ ಎಂದು ಜೆಡಿಎಸ್ಗೆ ಸೇರ್ಪಡೆಗೊಂಡರು ಎನ್ನುವುದನ್ನು ಬಿಟ್ಟರೆ ಉಳಿದ ಆಕಾಂಕ್ಷಿಗಳ್ಯಾರೂ ಬಹಿರಂಗವಾಗಿ ಅಸಮಾಧಾನವನ್ನು ತೋರ್ಪಡಿಸಿಕೊಳ್ಳಲಿಲ್ಲ. ಅಲ್ಲಿಗೆ ಕಾಂಗ್ರೆಸ್ ಮುಖಂಡರೆಲ್ಲರೂ ಒಗ್ಗಟ್ಟಾಗಿದ್ದಾರೆನ್ನುವ ಸಂದೇಶ ರವಾನೆಯಾಗಿ ಕಾಂಗ್ರೆಸ್ ಫೀಲ್ಡ್ ವರ್ಕ್ಗೆ ಹಾದಿ ಸುಗಮವಾಯ್ತು.
ಬಿಜೆಪಿಯಲ್ಲಿ ಸಿಟ್ಟಿಂಗ್ ಎಂಎಲ್ಎಗೆ ಟಿಕೆಟ್ ಫಿಕ್ಸ್ ಎನ್ನುವ ಮಾತಿದ್ದರೂ ಪುತ್ತೂರಲ್ಲಿ ಮಾತ್ರ ಹಾಲಿ ಶಾಸಕರಿಗೆ ಟಿಕೆಟ್ ಸಿಗುವುದಿಲ್ಲ ಎನ್ನುವ ಮಾತು ಹರಿದಾಡುತ್ತಿತ್ತು. ಬಿಜೆಪಿಯಿಂದ ಅರುಣ್ ಕುಮಾರ್ ಪುತ್ತಿಲರಿಗೆ ಟಿಕೆಟ್ ನೀಡಬೇಕೆಂದು ಫೆಬ್ರವರಿ ತಿಂಗಳಿನಿಂದಲೇ ಅರುಣ್ ಪುತ್ತಿಲರ ಪರ ಅಭಿಯಾನ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿತ್ತು. ಫೆಬ್ರವರಿಯಲ್ಲಿ ಅಮಿತ್ ಶಾ ಭೇಟಿ ವೇಳೆ ನಡೆದ `ಅಣಬೆ’ ಪ್ರಹಸನ ಶಾಸಕರ ಪರ ಅಸಮಾಧಾನ ಹೆಚ್ಚಲು ಕಾರಣವಾಗಿತ್ತು. ಎ.11ರಂದು ರಾತ್ರಿ ಬಿಜೆಪಿಯು ಅಭ್ಯರ್ಥಿಗಳ ಪಟ್ಟಿಯನ್ನು ಯಾವಾಗ ಬಿಡುಗಡೆ ಮಾಡಿತೋ, ಅದರಲ್ಲಿ ಪುತ್ತೂರು ಕ್ಷೇತ್ರದ ಅಭ್ಯರ್ಥಿಯಾಗಿ ಸುಳ್ಯ ವಿಧಾನಸಬಾ ಕ್ಷೇತ್ರದ ಆಶಾ ತಿಮ್ಮಪ್ಪ ಅವರಿಗೆ ಅವಕಾಶ ಲಭಿಸಿತ್ತು. ಈ ಬಾರಿಯೂ ಪುತ್ತಿಕರಿಗೆ ಟಿಕೆಟ್ ಸಿಗುವುದಿಲ್ಲ ಎನ್ನುವುದು ಕನ್ಫರ್ಮ್ ಆಗ್ತಿದ್ದಂತೆ ಎ.12ರಂದು ಸಂಜೆ ಪುತ್ತೂರು ಕೊಟೇಚಾ ಹಾಲ್ನಲ್ಲಿ ಅರುಣ್ ಪುತ್ತಿಲರ ಬೆಂಬಲಿಗರ ಸಭೆ ನಡೆಯಿತು. ಸಭೆಯಲ್ಲಿ ಅರುಣ್ ಪುತ್ತಿಲ ಪಕ್ಷೇತರರಾಗಿ ಕಣಕ್ಕಿಳಿಯಬೇಕೆನ್ನುವ ಒತ್ತಾಯ ಕೇಳಿಬಂತು. ಅದರಂತೆ ಸಮಾಲೋಚನೆ ನಡೆಸಿ ನಿರ್ಧಾರ ಕೈಗೊಂಡ ಪುತ್ತಿಲ ಅವರು, ಎ.15ರಂದು ಪುತ್ತೂರು ಸುಭದ್ರಾ ಸಭಾಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಚುನಾವಣೆಗೆ ಸ್ಪರ್ಧಿಸುವ ನಿರ್ಧಾರ ಪ್ರಕಟಿಸಿದ್ರು. ಅಂದಿನಿಂದಲೇ ಪುತ್ತೂರಿನ ಮತಕ್ಷೇತ್ರ ಅಕ್ಷರಶಃ ಕದನಕಣವಾಗಿ ಮಾರ್ಪಟ್ಟಿತು.
ಎ.15ರಂದು ಅಶೋಕ್ ಕುಮಾರ್ ರೈಯವರು ಕೂಡ ಕಾಂಗ್ರೆಸ್ ಅಭ್ಯರ್ಥಿ ಎಂದು ಅಧಿಕೃತವಾಗಿ ಘೊಷಣೆಯಾಗ್ತಿದ್ದಂತೆ ಪುತ್ತೂರು ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆಯ ಸ್ಪಷ್ಟ ಚಿತ್ರಣ ಲಭ್ಯವಾಯಿತು. ಮುಂದಕ್ಕೆ ನಾಮಪತ್ರ ಸಲ್ಲಿಕೆಯ ವೇಳೆ ಬಲಾಬಲ ಪ್ರದರ್ಶನ ನಡೆಯಿತು. ಎ.17ರಂದು ಪುತ್ತಿಲರು ಸಹಸ್ರಾರು ಸಂಖ್ಯೆಯ ಅಭಿಮಾನಿಗಳ ಜೊತೆ ಮೆರವಣಿಗೆಯಲ್ಲಿ ಸಾಗಿ ನಾಮಪತ್ರ ಸಲ್ಲಿಸಿದರು. ಇಲ್ಲಿ ಸೇರಿದ್ದ ಜನಸಂಖ್ಯೆ ಒಂದು ರೀತಿ ಸಂಚಲನ ಉಂಟುಮಾಡಿತ್ತು. ಅದರ ಬಳಿಕ ಎ.19ರಂದು ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈಯವರು ಕೂಡ ಸಹಸ್ರಾರು ಕಾರ್ಯಕರ್ತರೊಂದಿಗೆ ತೆರಳಿ ನಾಮಪತ್ರ ಸಲ್ಲಿಸಿದ್ದರು. ಎ.20ರಂದು ಬಿಜೆಪಿ ಕೂಡ ಸಹಸ್ರಾರು ಸಂಖ್ಯೆಯಲ್ಲಿ ಕಾರ್ಯಕರ್ತರನ್ನು ಸೇರಿಸಿ ನಾಮಪತ್ರ ಸಲ್ಲಿಕೆ ಮೆರವಣಿಗೆ ಮಾಡಿತ್ತು. ಈ ಮೂಲಕ ಬಲಾಬಲ ಪರೀಕ್ಷೆಗೆ ಮೂರೂ ಬಣಗಳು ಪಂಥಾಹ್ವಾನ ನೀಡಿದ್ದವು.
ಮುಂದಿನದ್ದು ಪ್ರಚಾರ ಹಂತ. ಬಹಿರಂಗ ಸಭೆಗಳು ನಡೆದವು. ಅರುಣ್ ಪುತ್ತಿಲರ ಜೊತೆಗೆ ನಾಮಪತ್ರ ವಾಪಸ್ ಪಡೆಯುವಂತೆ ಆರೆಸ್ಸೆಸ್, ಬಿಜೆಪಿ ಮುಖಂಡರು ಮಾತುಕತೆ ನಡೆದರೂ ಪ್ರಯೋಜನವಾಗಲಿಲ್ಲ, ಪುತ್ತಿಲರು ನಾಮಪತ್ರ ವಾಪಸ್ ಪಡೆಯುತ್ತಾರೆನ್ನುವ ವಿಶ್ವಾಸವೂ ಎ.೨೪ರ ಬಳಿಕ ಹುಸಿಯಾಯ್ತು. ಬಳಿಕ ಒಂದಷ್ಟು ವಾಕ್ಸಮರಗಳು ನಡೆದವು. ಕಲ್ಲಡ್ಕ ಪ್ರಭಾಕರ್ ಭಟ್, ಡಾ.ಎಂ.ಕೆ. ಪ್ರಸಾದ್, ಡಿ.ವಿ.ಸದಾನಂದ ಗೌಡ ಮೊದಲಾದ ಹಿರಿಯರು ಸುದ್ದಿಗೋಷ್ಠಿ ನಡೆಸಿ ಅರುಣ್ ಪುತ್ತಿಲ ವಿರುದ್ಧ ವಾಗ್ದಾಳಿ ನಡೆಸಿದರೆ ಪುತ್ತಿಲ ಮತ್ತವರ ಬೆಂಬಲಿಗರು ಪ್ರಚಾರ ಸಭೆಗಳಲ್ಲಿ ತಮ್ಮ ತಮ್ಮ ವಾಗ್ಬಾಣಗಳನ್ನೆಸೆದರು. ಬಿಜೆಪಿ-ಕಾಂಗ್ರೆಸ್ ಎನ್ನುವಂತಿದ್ದ ಸ್ಪರ್ಧೆ ಕೊನೆಗೆ ಹಿಂದುತ್ವ ವರ್ಸಸ್ ಬಿಜೆಪಿ ಎನ್ನುವ ಆಂಗಲ್ ತಳೆಯಿತು. ಇಬ್ಬರ ಜಗಳವನ್ನು ನೋಡುತ್ತಾ ಕಾಂಗ್ರೆಸ್ ತನ್ನ ಗ್ಯಾರಂಟಿ, ಭರವಸೆಗಳನ್ನು ಮನೆಮನೆಗೆ ತಲುಪಿಸುತ್ತಾ ಸಾಗಿತು. ಮೇ 8ರಂದು ಬಹಿರಂಗ ಪ್ರಚಾರ ಅಂತ್ಯಗೊಳ್ಳುವ ದಿನವೂ ಭರ್ಜರಿ ರೋಡ್ಶೋಗಳ ಮೂಲಕ ತಮ್ಮ ತಮ್ಮ ಶಕ್ತಿಪ್ರದರ್ಶನ ಮಾಡಿದರು. ಕೊನೆಯ ಹಂತದವರೆಗೂ ಸಾಧ್ಯವಾದಷ್ಟು ಮಟ್ಟಿಗೆ ತಮ್ಮ ಪ್ರಯತ್ನಗಳನ್ನು ಮುಂದುವರೆಸಿದರು.
ಮೇ 10ರಂದು ಚುನಾವಣೆ ನಡೆಯಿತು. ಮೇ 13ಕ್ಕೆ ಫಲಿತಾಂಶ ಪ್ರಕಟಗೊಂಡು ಇಬ್ಬರ ಜಗಳ ಮೂರನೇಯವರಿಗೆ ಲಾಭ ಎನ್ನುವಂತೆ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈಯವರು 66,607 ಮತಗಳನ್ನು ಪಡೆದು ವಿಜಯಿಯಾದರು. ಪಕ್ಷೇತರ ಅಭ್ಯರ್ಥಿ ಪುತ್ತಿಲ ಅವರು ದ್ವಿತೀಯ ಸ್ಥಾನಿಯಾಗಿ 62,458 ಮತಗಳನ್ನು ಪಡೆದುಕೊಂಡರು. ಪ್ರಬಲ ಸ್ಪರ್ಧಿಯಾಗಿದ್ದ ಬಿಜೆಪಿ 37,558 ಮತಗಳನ್ನು ಪಡೆದು ತೃತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಈಗ ಸೋಲು ಗೆಲುವಿನ ಲೆಕ್ಕಾಚಾರ-ಪರಾಮರ್ಶೆಗಳು ನಡೆಯುತ್ತಿವೆ. ಜೊತೆಗೆ 2024ರ ಲೋಕಸಭಾ ಚುನಾವಣೆಯ ನಿಟ್ಟಿನಲ್ಲೂ ಲೆಕ್ಕಾಚಾರ ಶುರುವಾಗಿದೆ.