ಪ್ರಾಕೃತಿಕ ವಿಕೋಪ ನಿರ್ವಹಣಾ ತಾ.ಮಟ್ಟದ ಅಧಿಕಾರಿಗಳ ಸಭೆ

0

ವಿಕೋಪ ನಿರ್ವಹಣೆಗೆ ಎಲ್ಲಾ ಇಲಾಖೆಗಳ ಸಹಕಾರ ಅವಶ್ಯಕ-ಗಿರೀಶ್ ನಂದನ್

ಪುತ್ತೂರು:ಪ್ರಾಕೃತಿಕ ವಿಕೋಪಗಳನ್ನು ಸಮರ್ಪಕವಾಗಿ ಎದುರಿಸಲು ಎಲ್ಲಾ ಇಲಾಖೆಗೆಳ ಸಹಕಾರ ಅತೀ ಆವಶ್ಯಕ. ಹೀಗಾಗಿ ಮುಂಬರುವ ಮಳೆಗಾಲದಲ್ಲಿ ಪ್ರಾಕೃತಿಕ ವಿಕೋಪಗಳ ಸಂಭವಿಸಿದಾಗ ಎಲ್ಲಾ ಇಲಾಖೆಗಳು ಉತ್ತಮ ರೀತಿಯಲ್ಲಿ ಸ್ಪಂಧಿಸಿ, ಸಹಕರಿಸಬೇಕು. ಚುನಾವಣಾ ಸಂದರ್ಭದಲ್ಲಿ ಸಹಕರಿಸಿದಂತೆ ಪ್ರಾಕೃತಿಕ ವಿಕೋಪದ ಸಂದರ್ಭದಲ್ಲಿಯೂ ಎಲ್ಲಾ ಇಲಾಖೆಗಳು ಸಹಕರಿಸುವಂತೆ ಸಹಾಯಕ ಆಯುಕ್ತ ಗಿರೀಶ್ ನಂದನ್ ಅಧಿಕಾರಿಗಳಿಗೆ ಸೂಚನೆ ನೀಡಿದರು.


ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಮೇ.17ರಂದು ನಡೆದ ಪ್ರಾಕೃತಿಕ ವಿಕೋಪ ನಿರ್ವಹಣಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪ್ರಾಕೃತಿಕ ವಿಕೋಪ ನಿರ್ವಹಣೆಯಲ್ಲಿ ಅಗ್ನಿಶಾಮಕ ಇಲಾಖೆಯವರ ಪ್ರಾಮುಖ್ಯವಾಗಿದೆ. ಜೊತೆಗೆ ಎಸ್‌ಡಿಆರ್‌ಎಫ್ ತಂಡವಿದೆ. ಹೋಂ ಗಾರ್ಡ್‌ನವರು ಜೊತೆಗೆ ಸಹಕರಿಸಲಿದ್ದಾರೆ. ಇದಲ್ಲದೆ ಪಂಚಾಯತ್ ರಾಜ್, ಗ್ರಾಮ ಪಂಚಾಯತ್, ಕಂದಾಯ, ಅರಣ್ಯ, ಮೆಸ್ಕಾಂ ಮೊದಲಾದ ಇಲಾಖೆಯವರ ಸಹಕಾರ ಆವಶ್ಯಕವಾಗಿದೆ. ಮಳೆಗಾಲದಲ್ಲಿ ಭೂ ಕುಸಿತ ಉಂಟಾದಾಗ ಕೂಡಲೇ ಮಾಹಿತಿ ನೀಡಬೇಕು. ಮರಗಳು ಉರುಳಿ ಬಿದ್ದಾಗ ಅರಣ್ಯ ಇಲಾಖೆಯವರು ಕತ್ತರಿಸಿಕೊಟ್ಟಾಗ ಅದನ್ನು ತೆರವುಗೊಳಿಸಿ, ಸಾಗಿಸಲು ಸಂಬಂಧಿಸಿದ ಇತರ ಇಲಾಖೆಯವರು ಕೈಜೋಡಿಸಬೇಕು ಎಂದು ಸಹಾಯಕ ಆಯುಕ್ತರು ಅಧಿಕಾರಿಗಳಿಗೆ ತಿಳಿಸಿದರು.


ಕಿಂಡಿ ಆಣೆಕಟ್ಟುಗಳನ್ನು ತೆರವುಗೊಳಿಸಬೇಕು. ಒಡೆದುಹೋದ ಕೆರೆಗಳ ಬಗ್ಗೆ ಸೂಕ್ತ ಕ್ರಮಕೈಗೊಳ್ಳಬೇಕು. ತುರ್ತು ಸಂದರ್ಭದಲ್ಲಿ ಶಾಲೆ, ವಿದ್ಯಾರ್ಥಿ ವಸತಿ ನಿಲಯಗಳಲ್ಲಿ ಸಾಂತ್ವನ ಕೇಂದ್ರಗಳನ್ನು ತೆರೆಯಲು ಕ್ರಮಕೈಗೊಳ್ಳಬೇಕು. ಕೃಷಿ ಹಾನಿಯುಂಟಾದಾಗ ತೋಟಗಾರಿಕೆ ಹಾಗೂ ಕೃಷಿ ಇಲಾಖೆ ಮೌಲ್ಯಮಾಪನ ನಡೆಸಿ ವರದಿ ನೀಡಬೇಕು. ವಿಪತ್ತು ನಿರ್ವಹಣಾ ವಾಟ್ಸಪ್ ಗ್ರೂಪ್ ಇದ್ದು ಅರದಲ್ಲಿ ಪ್ರತಿಯೊಬ್ಬರೂ ಸೇರಿಕೊಂಡು ತಕ್ಷಣ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಮಾರ್ಗದರ್ಶನ ಮಾಡಿದರು.


ಇನ್ನೊಂದು ಸಭೆ ತನಕ ಕಾಯಬಾರದು:
ಅಗ್ನಿಶಾಮಕ ಇಲಾಖೆಯವರಿಂದ ಮಾಹಿತಿ ಪಡೆದುಕೊಳ್ಳುವ ಸಂದರ್ಭದಲ್ಲಿ ಬೋಟ್ ತೂತಾಗಿ, ನೀರುವ ಸೋರುವ ಸ್ಥಿಯಲ್ಲಿದೆ. ಟಾರ್ಚ್ ಲೈಟ್‌ನಲ್ಲಿ ಚಾರ್ಜ್ ನಿಲ್ಲುತ್ತಿಲ್ಲ ಎಂಬ ಬಗ್ಗೆ ಅಗ್ನಿಶಾಮಕ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಹಾಯಕ ಆಯುಕ್ತರು, ಅಗ್ನಿಶಾಮಕ ಇಲಾಖೆಯು ತುರ್ತು ಸಂದರ್ಭದಲ್ಲಿ ಆವಶ್ಯಕವಿರುವ ಇಲಾಖೆಯಾಗಿದೆ. ಇಲಾಖೆಯಲ್ಲಿ ನಿರ್ವಹಣೆಗೆ ಆವಶ್ಯಕವಿರುವ ಸಾಮಾಗ್ರಿಗಳ ಕುರಿತು ಕೂಡಲೇ ಬೇಡಿಕೆ ಸಲ್ಲಿಸಿಬೇಕು. ಅವುಗಳನ್ನು ಒದಗಿಸಲು ಕ್ರಮಕೈಗೊಳ್ಳಲಾಗುವುದು. ಅದನ್ನು ಮುಂದಿನ ಸಭೆಯ ತನಕ ಕಾಯುವುದಲ್ಲ. ತುರ್ತು ಸಂದರ್ಭದಲ್ಲಿ ನಿರ್ವಹಣೆಗೆ ಆವಶ್ಯಕವಿರುವ ವಾಹನಗಳನ್ನು ಒದಗಿಸಲಾಗುವುದು. ಭೂ ಕುಸಿತದ ಬಗ್ಗೆ ಪ್ರಥಮ ಮಾಹಿತಿ ಅಗ್ನಿಶಾಮಕ ಇಲಾಖೆಗೆ ದೊರೆಯುತ್ತಿದ್ದು ಅದರ ಬಗ್ಗೆ ನಮಗೆ ಕೂಡಲೇ ಮಾಹಿತಿ ನೀಡಬೇಕು ಎಂದು ಅವರಿಗೆ ತಿಳಿಸಿದರು.


ಡೆಂಗ್ಯೂ ನಿರ್ವಹಣೆ ಆರೋಗ್ಯ ಇಲಾಖೆಗೆ ಸೀಮಿತವಲ್ಲ:
ಮಳೆಗಾಲದಲ್ಲಿ ಉಂಟಾಗುವ ಮಾರಕ ರೋಗ ಡೆಂಗ್ಯು ಜ್ವರ ನಿಯಂತ್ರಣ ಮಾಡುವುದು ಕೇವಲ ಆರೋಗ್ಯ ಇಲಾಖೆಗೆ ಸೀಮಿತವಲ್ಲ. ಎಲ್ಲಾ ಇಲಾಖೆಗೆಳ ಪ್ರಾಮುಖ್ಯವಾಗಿದೆ. ತಮ್ಮ ಕಚೇರಿ ಪರಿಸರ ಹಾಗೂ ಇತರ ಕಡೆಗಳಲ್ಲಿ ನೀರು ನಿಂತು, ಅಲ್ಲಿ ಸೊಳ್ಳೆಗಳು ಉತ್ಪತ್ತಿಯಾಗದಂತೆ ಪ್ರತಿಯೊಬ್ಬರೂ ಮುಂಜಾಗ್ರತೆ ವಹಿಸಬೇಕು. ಪ್ರತಿಯೊಬ್ಬರೂ ವೈಯಕ್ತಿಕವಾಗಿ ಮುತುವರ್ಜಿ ವಹಿಸಿಕೊಂಡು ಡೆಂಗ್ಯೂ ಖಾಯಿಲೆ ಹರಡದಂತೆ ಕ್ರಮಕೈಗೊಳ್ಳಬೇಕು ಎಂದು ಸಹಾಯಕ ಆಯುಕ್ತರ ಸೂಚಿಸಿದರು.


ಅಪಾಯಕಾರಿ ಮರ ತೆರವುಗೊಳಿಸಿ:
ರಸ್ತೆ ಬದಿ ಹಾಗೂ ಇತರ ಸಾರ್ವಜನಿಕ ಪ್ರದೇಶಗಳಲ್ಲಿ ಅಪಾಯಕಾರಿ ಸ್ಥಿತಿಯಲ್ಲಿರುವ ಮರಗಳನ್ನು ಬೀಳುವ ತನಕ ಕಾಯುವುದಲ್ಲ. ಅಪಾಯಕಾರಿ ಸ್ಥಿತಿಯಲ್ಲಿರುವ ಬಗ್ಗೆ ಮಾಹಿತಿ ಬಂದ ಕೂಡಲೇ ಅದನ್ನು ಕೂಡಲೇ ತೆರವುಗೊಳಿಸಬೇಕು. ಯಾವುದೇ ಕಾರಣಕ್ಕೂ ವಿಳಂಬವಾಗಬಾರದು ಎಂದು ಗಿರೀಶ್ ನಂದನ್ ಅರಣ್ಯ ಇಲಾಖಾಧಿಕಾರಿಗಳಿಗೆ ಸೂಚನೆ ನೀಡಿದರು.


ಭೂ ಕುಸಿತದ ಪಟ್ಟಿಕೊಡಿ:
ರಸ್ತೆ ಬದಿಯ ಚರಂಡಿಗಳನ್ನು ಸಮಪರ್ಕವಾಗಿ ನಿರ್ವಹಣೆ ಮಾಡಬೇಕು. ರಸ್ತೆ ಹಾನಿಯುಂಟಾದಾಗ ಶೀಘ್ರವಾಗಿ ಕ್ರಮಕೈಗೊಳ್ಳಬೇಕು. ಕಳೆದ ಮಳೆಗಾಲದಲ್ಲಿ ಸಂಭವಿಸಿದ ಭೂ ಕುಸಿತದ ಸಂಭವಿಸಿದ ಸ್ಥಳಗಳನ್ನು ಪಟ್ಟಿಮಾಡಿಕೊಡುವಂತೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.


ಡಿವೈಎಸ್‌ಪಿ ವೀರಯ್ಯ ಹಿರೇಮಠ, ತಹಶೀಲ್ದಾರ್ ಶಿವಶಂಕರ್, ಪೌರಾಯುಕ್ತ ಮಧು ಎಸ್ ಮನೋಹರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ತಾಲೂಕು ಮಟ್ಟದ ವಿವಿಧ ಇಲಾಖೆಗಳ ಇಲಾಖಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು. ತಾ.ಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಸ್ವಾಗತಿಸಿ, ವಂದಿಸಿದರು.

LEAVE A REPLY

Please enter your comment!
Please enter your name here