ನೂಜಿಬಾಳ್ತಿಲ: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಗ್ರಾಮ ಪಂಚಾಯತ್ ನೂಜಿಬಾಳ್ತಿಲ, ಬಾಲ ವಿಕಾಸ ಸಮಿತಿ, ಅಂಗನವಾಡಿ ಕೇಂದ್ರ ಕಲ್ಲುಗುಡ್ಡೆ ಇದರ ಜಂಟಿ ಆಶ್ರಯದಲ್ಲಿ ಕಲ್ಲುಗುಡ್ಡೆ ಅಂಗನವಾಡಿ ಕೇಂದ್ರದ ವಾರ್ಷಿಕೋತ್ಸವ ಮತ್ತು ನಿವೃತ್ತ ಅಂಗನವಾಡಿ ಕಾರ್ಯಕರ್ತೆ ಅಮೀನ ಕೆ. ಅವರಿಗೆ ಸನ್ಮಾನ ಕಾರ್ಯಕ್ರಮ ಮೇ 17 ರಂದು ನೂಜಿಬಾಳ್ತಿಲ ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ನಡೆಯಿತು.
ನೂಜಿಬಾಳ್ತಿಲ ಗ್ರಾಮ ಪಂಚಾಯತ್ ಅಧ್ಯಕ್ಷೆ ಗಂಗಮ್ಮ ಕೆ. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರಾಥಮಿಕ ಶಾಲೆಗೆ ಮಕ್ಕಳನ್ನು ಸೇರ್ಪಡೆ ಮಾಡುವ ಮೊದಲು ಅವರಿಗೆ ಪೂರ್ವ ಶಿಕ್ಷಣ ಅಂಗನವಾಡಿ ಕೇಂದ್ರದಲ್ಲಿ ಸಿಗುತ್ತಿದೆ. ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಿಗೆ ಚಟುವಟಿಕೆಗಳನ್ನು ನೀಡಿ, ಯಾವುದೇ ಒತ್ತಡ ನೀಡದೆ ಅವರನ್ನು ಮುಂದಿನ ಶಾಲಾ ಶಿಕ್ಷಣಕ್ಕೆ ತಯಾರು ಮಾಡಲಾಗುತ್ತದೆ. ಅಂಗನವಾಡಿ ಕಾರ್ಯಕರ್ತೆಯರ ಸೇವೆ ಶ್ಲಾಘನೀಯ, ಶಾಲಾ ಶಿಕ್ಷಣಕ್ಕೆ ಮಕ್ಕಳನ್ನು ಸಿದ್ಧತೆ ಮಾಡಿದ ಕೀರ್ತಿ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರಿಗೆ ಸಲ್ಲುತ್ತದೆ ಎಂದವರು ನಿವೃತ್ತಗೊಂಡಿರುವ ಅಂಗನವಾಡಿ ಕಾರ್ಯಕರ್ತೆ ಅಮೀನ ಕೆ. ಅವರಿಗೆ ಶುಭಹಾರೈಸಿದರು.
ರೆಂಜಿಲಾಡಿ ಬೀಡಿನ ಯಶೋಧರ ಯಾನೆ ತಮ್ಮಯ್ಯ ಬಳ್ಳಾಲ್ ಮಾತನಾಡಿ, ಮಕ್ಕಳಿಗೆ ಚಟುವಟಿಕೆಯಲ್ಲಿ ತೊಡಗಲು ವಾರ್ಷಿಕೋತ್ಸವ ಕಾರ್ಯಕ್ರಮ ಪೂರಕವಾಗಿದ್ದು, ಈ ಮೂಲಕ ಮಕ್ಕಳ ವ್ಯಕ್ತಿತ್ವ ಬೆಳವಣಿಗೆಗೂ ಇದು ದಾರಿಯಾಗುತ್ತದೆ. ಕಲ್ಲುಗುಡ್ಡೆ ಅಂಗನವಾಡಿ ಕೇಂದ್ರ ತನ್ನದೇ ಆದ ವಿಶೇಷತೆಗಳಿಂದ ಗುರುತಿಸಿಕೊಂಡಿದೆ. ಇಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿರಿವುದು ಇದಕ್ಕೆ ಪೂರಕ ಎಂದರು.
ಕಲ್ಲುಗುಡ್ಡೆ ಅಂಗನವಾಡಿ ಕೇಂದ್ರದ ಬಾಲವಿಕಾಸ ಸಮಿತಿ ಅಧ್ಯಕ್ಷೆ ನಾಗವೇಣಿ ದುರ್ಗಾಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ಕಡಬ ಉಪತಹಶೀಲ್ದಾರ್ ಗೋಪಾಲ ಕಲ್ಲುಗುಡ್ಡೆ ಸನ್ಮಾನ ನೆರವೇರಿಸಿದರು. ಗ್ರಾ.ಪಂ. ಸದಸ್ಯರಾದ ಜೋಸೆಫ್ ಪಿ.ಜೆ., ವಸಂತ ಕುಬಲಾಡಿ, ವಿಜಯಲಕ್ಷ್ಮಿ ಅರಿಮಜಲು, ನೂಜಿಬಾಳ್ತಿಲ ಗ್ರಾಮ ಪಂಚಾಯತ್ ಪ್ರಭಾರ ಅಭಿವೃದ್ಧಿ ಅಧಿಕಾರಿ ಗುರುವ ಎಸ್., ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕಿ ಭವಾನಿ, ನೂಜಿಬಾಳ್ತಿಲ ಶಾಲಾ ಮುಖ್ಯ ಶಿಕ್ಷಕಿ ಸುಂದರಿ, ಸಿವಿಲ್ ಇಂಜಿನಿಯರ್ ದುರ್ಗಾಪ್ರಸಾದ್ ಕೆ.ಪಿ., ನೂಜಿಬಾಳ್ತಿಲ ಶಾಲಾ ಎಸ್ಡಿಎಂಸಿ ಅಧ್ಯಕ್ಷ ಬಾಲಕೃಷ್ಣ ಉಳಿಪ್ಪು, ಮಾಜಿ ಮೇಲ್ವಿಚಾರಕಿ ಹೇಮರಾಮ್ ದಾಸ್, ಗೊಂಚಲು ಸಮಿತಿ ಅಧ್ಯಕ್ಷೆ ಮರಿಯಮ್ಮ, ಅಂಗನವಾಡಿ ಕಾರ್ಯಕರ್ತೆ/ಸಹಾಯಕಿಯರ ಸಂಘದ ಅಧ್ಯಕ್ಷೆ ಪ್ರಫುಲ್ಲಾ ರೈ ಕುಬಲಾಡಿ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಮೀನ ಕೆ. ವರದಿ ವಾಚಿಸಿದರು. ಶಿಕ್ಷಕಿ ಶ್ರೀಲತಾ ಸ್ವಾಗತಿಸಿದರು. ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಕಿಟ್ಟು ಕೆ. ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಸನ್ಮಾನ ಹಾಗೂ ವಾರ್ಷಿಕೋತ್ಸವ:
ಕಾರ್ಯಕ್ರಮದಲ್ಲಿ ನಿವೃತ್ತ ಅಂಗನವಾಡಿ ಕಾರ್ಯಕರ್ತೆ ಅಮೀನ ಕೆ. ಅವರನ್ನು ಶಾಲು, ಹಾರ, ಸನ್ಮಾನ ಪತ್ರ, ಫಲ-ಪುಷ್ಪ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಅಂಗನವಾಡಿ ವತಿಯಿಂದ, ನೂಜಿಬಾಳ್ತಿಲ-ರೆಂಜಿಲಾಡಿ ಅಂಗನವಾಡಿ ಕಾರ್ಯಕರ್ತೆಯರು-ಸಹಾಯಕಿಯರ ವತಿಯಿಂದ, ಊರವರು, ಬಾಲವಿಕಾಸ ಸಮಿತಿ, ಆಶಾಕಾರ್ಯಕರ್ತೆಯರ ವತಿಯಿಂದ, ಪೋಷಕರ ವತಿಯಿಂದ ಸೇರಿದಂತೆ ಹಲವರು ವೈಯಕ್ತಿಕ ನೆಲೆಯಲ್ಲೂ ಅಮೀನ ಅವರನ್ನು ಸನ್ಮಾನಿಸಿ ಗೌರವಿಸಿದರು. ಪುತ್ರಿ ಇಂದಿಕಾ ಜತೆಗಿದ್ದರು. ಅಮೀನ ಅವರು ಅಂಗನವಾಡಿಗೆ ತಮ್ಮ ವತಿಯಿಂದ ಕೊಡುಗೆ ಹಸ್ತಾಂತರಿಸಿದರು. ಪೋಷಕರ ವತಿಯಿಂದಲೂ ಅಂಗನವಾಡಿಗೆ ಕೊಡುಗೆ ಹಸ್ತಾಂತರಿಸಲಾಯಿತು.ಅಂಗನವಾಡಿ ಪುಟಾಣಿ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.