ಪುತ್ತೂರು ಡಿವೈಎಸ್ಪಿ ಮೇಲೆ ಕ್ರಮವಾಗದಿದ್ದರೆ ಹಿಂದೂ ಸಮಾಜದಿಂದ ತಕ್ಕ ಉತ್ತರ-ಹಿಂದೂ ಜಾಗರಣಾ ವೇದಿಕೆ ಎಚ್ಚರಿಕೆ

0

ಪುತ್ತೂರು: ಹಿಂದೂ ಕಾರ್ಯಕರ್ತರ ಮೇಲೆ ಪುತ್ತೂರು ಪೊಲೀಸರು ನಡೆಸಿದ ದೌರ್ಜನ್ಯ ಅತ್ಯಂತ ಅಕ್ಷಮ್ಯ. ಈ ಪ್ರಕರಣದಲ್ಲಿ ಪುತ್ತೂರು ಗ್ರಾಮಾಂತರ ಠಾಣೆ ಎಸ್‌ಐ ಮತ್ತು ಕಾನ್‌ಸ್ಟೇಬಲ್ ಅವರನ್ನು ಅಮಾನತು ಮಾಡಿರುವ ಎಸ್‌ಪಿ ಆದೇಶ ಸ್ವಾಗತಾರ್ಹ. ಆದರೆ ಪ್ರಕರಣದಲ್ಲಿ ಡಿವೈಎಸ್‌ಪಿ ವೀರಯ್ಯ ಹಿರೇಮಠ್ ಪ್ರಮುಖ ಆರೋಪಿಯಾಗಿದ್ದು, ಅವರ ಮೇಲೆ ಇಲಾಖಾ ಕ್ರಮಕ್ಕೆ ಶಿಫಾರಸ್ಸು ಮಾಡುವುವುದಾಗಿ ಎಸ್‌ಪಿ ಹೇಳಿದ್ದಾರೆ. ಶುಕ್ರವಾರ ಬೆಳಗ್ಗೆ 10 ಗಂಟೆಯ ಒಳಗೆ ಕ್ರಮ ಜಾರಿಯಾಗಬೇಕು. ಇಲ್ಲದಿದ್ದರೆ ಜಾಗೃತ ಹಿಂದೂ ಸಮಾಜ ಬಲವಾದ ಉತ್ತರ ನೀಡುತ್ತದೆ ಎಂದು ಹಿಂದೂ ಜಾಗರಣ ವೇದಿಕೆ ಎಚ್ಚರಿಕೆ ನೀಡಿದೆ.

ಸಂಘಟನೆಯ ಜಿಲ್ಲಾ ಸಹ ಸಂಚಾಲಕರಾದ ನರಸಿಂಹ ಮಾಣಿ ಗುರುವಾರ ಪುತ್ತೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ದೌರ್ಜನ್ಯಕ್ಕೆ ತುತ್ತಾದವರಲ್ಲಿ ನಮ್ಮ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರಿದ್ದಾರೆ. ನಮ್ಮ ಯುವಕರನ್ನು ಟಾರ್ಗೆಟ್ ಮಾಡಿಕೊಂಡು ಹಲ್ಲೆ ಮಾಡಲಾಗಿದೆ. ಬ್ಯಾನರ್ ಅಳವಡಿಸಿ, ಚಪ್ಪಲಿ ಹಾರ ಹಾಕಿದ ಪ್ರಕರಣ ನಿಜಕ್ಕಾದರೆ ದಂಡ ವಿಧಿಸಿ ಬಿಟ್ಟು ಬಿಡುವಂತಹ ಘಟನೆಯಾಗಿತ್ತು. ಅತ್ಯಾಚಾರ ಆರೋಪಿಗಳು, ಗ್ಯಾಂಗ್‌ಸ್ಟರ್‌ಗಳು, ದರೋಡೆಕೋರರು ಮುಂತಾದವರು ಬಂಧಿತರಾಗಿ ರಾಜಾರೋಷವಾಗಿ ಬಿಡುಗಡೆಗೊಂಡು ಬರುತ್ತಾರೆ. ಆದರೆ ಇಲ್ಲಿ ಅಮಾನುಷವಾಗಿ ಹಲ್ಲೆ ಮಾಡಲಾಗಿದೆ. ಟೇಬಲ್ ಮೇಲೆ ಪಿಸ್ತೂಲ್ ಇಟ್ಟು ಎನ್‌ಕೌಂಟರ್ ಬೆದರಿಕೆ ಒಡ್ಡಲಾಗಿದೆ ಎಂದು ಕಾರ್ಯಕರ್ತರು ಹೇಳುತ್ತಿದ್ದಾರೆ. ಜಾತಿ ಹೆಸರು ಹೇಳಿ ಅವಮಾನ ಮಾಡಿ ಹಲ್ಲೆ ಮಾಡಲಾಗಿದೆ ಎನ್ನುತ್ತಿದ್ದಾರೆ. ಒಬ್ಬ ಯುವಕನಿಗೆ ನಡೆದಾಡಲೂ ಆಗುತ್ತಿಲ್ಲ, ಕಿವಿ ಕೇಳುತ್ತಿಲ್ಲ, ಹೀಗಾಗಿ ಹಲ್ಲೆ ಮಾಡಿದ ಪೊಲೀಸರ ಮೇಲೆ ಐಪಿಸಿ ಸೆಕ್ಷನ್ 307ರ ಪ್ರಕಾರ ಕ್ರಿಮಿನಲ್ ಮೊಕದ್ದಮೆ ಹೂಡಬೇಕು. ಡಿವೈಎಸ್‌ಪಿ ವಿರುದ್ಧ ಕ್ರಮ ಜರುಗಿಸಬೇಕು. ಇಲ್ಲದಿದ್ದಲ್ಲಿ ಮುಂದಿನ ಎಲ್ಲ ಪರಿಸ್ಥಿತಿಗಳಿಗೆ ಇಲಾಖೆಯೇ ಜವಾಬ್ದಾರಿ ಎಂದು ಹೇಳಿದರು.

ನನಗೆ 20,30 ಫೋನ್ ಕರೆಗಳು ಬಂದಿವೆ ಎಂದು ಡಿವೈಎಸ್‌ಪಿ ಅವರು ವಿಚಾರಣೆ ಸಂದರ್ಭ ಕಾರ್ಯಕರ್ತರಿಗೆ ಹೇಳಿದ್ದಾರೆಂದು ಗೊತ್ತಾಗಿದೆ. ಹಾಗಾದರೆ ಕರೆ ಮಾಡಿದವರು ಯಾರು? ಒತ್ತಡ ತಂದವರು ಯಾರೆಂದು ಅವರು ಬಹಿರಂಗಪಡಿಸಲಿ. ಆ ರೀತಿ ಒತ್ತಡ ಹಾಕಿದವರು ಕೂಡ ನಾಳೆ ದಿನ ಸಮಾಜದ ಮುಂದೆ ಬತ್ತಲಾಗುತ್ತಾರೆ. ಅವರನ್ನು ಕೂಡ ನಾವು ಬಿಡುವುದಿಲ್ಲ. ನೇರ ಉತ್ತರ ಕೊಡಲಿದ್ದೇವೆ. ಚುನಾವಣೆ ಬರುತ್ತದೆ, ಹೋಗುತ್ತದೆ. ಆದರೆ ನಮಗೆ ನಮ್ಮ ಹಿಂದೂ ಸಮಾಜ ಮುಖ್ಯ. ಸಮಾಜದ ನೆಮ್ಮದಿಗಾಗಿ ನಾವು ನಿರಂತರ ಹೋರಾಟ ಮಾಡುತ್ತೇವೆ ಎಂದವರು ಹೇಳಿದರು.

ಚಪ್ಪಲಿ ಹಾರ ಹಾಕಿದವರ ವಿರುದ್ಧ ಪ್ರತಿಭಟನೆ ಮಾಡುವ ಸಂದರ್ಭ ಮಾಜಿ ಶಾಸಕ ಸಂಜೀವ ಮಠಂದೂರು ಅವರು ಹಿಂದೂ ಕಾರ್ಯಕರ್ತರಿಗೆ ಧಿಕ್ಕಾರ ಕೂಗಿದ್ದಾರೆ. ಇವರ ಸ್ಥಾನಮಾನವನ್ನು ಅವರೇ ಸಮಾಜದ ಮುಂದೆ ನಿರ್ಧರಿಸಿದ್ದಾರೆ ಎಂದು ನರಸಿಂಹ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಸಂಚಾಲಕ ಜಗದೀಶ್ ನೆತ್ತರಕೆರೆ, ಪ್ರಮುಖರಾದ ದಿನೇಶ್ ಪಂಜಿಗ, ವೆಂಕಟ್ ಕಡಬ, ರಾಜೇಶ್ ಪಂಜೋಡಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here