ಪುತ್ತೂರು: ಸಹೋದ್ಯೋಗಿಯ ಸ್ಯಾಲರಿ ಸ್ಲಿಪ್, ಆಧಾರ್ ಕಾರ್ಡ್, ಪಾನ್ ಕಾರ್ಡ್ ಸಹಿಯನ್ನು ದುರುಪಯೋಗ ಪಡಿಸಿ ಬ್ಯಾಂಕಿನಿಂದ ಸಾಲ ಪಡೆದು ಬಳಿಕ ವಂಚಿಸಿದ ಘಟನೆಯೊಂದು ಪುತ್ತೂರಿನಲ್ಲಿ ನಡೆದಿದೆ.
ಮೆಸ್ಕಾಂನ ಬನ್ನೂರು ಘಟಕದಲ್ಲಿ ಗುತ್ತಿಗೆ ಆಧಾರದಲ್ಲಿ ಅಟೆಂಡರ್ ಆಗಿ ಕಾರ್ಯನಿರ್ವಹಿಸುತ್ತಿರುವ ನವೀನ್ ಎಂಬವರು ಅದೇ ಘಟಕದಲ್ಲಿ ಸ್ಟೋರ್ ಹೆಲ್ಪರ್ ಆಗಿ ಕಾರ್ಯನಿರ್ವಹಿಸುತ್ತಿರುವ ಯಶವಂತ ಗೌಡ ಎಂಬವರ ವೈಯುಕ್ತಿಕ ದಾಖಲೆಗಳನ್ನು ಹಾಗೂ ಸಹಿ ಬಳಸಿಕೊಂಡು ಪುತ್ತೂರಿನ ಸಿಂಚನ ಚಿಟ್ಸ್‌ನಲ್ಲಿ ಸಾಲ ಪಡೆದುಕೊಂಡಿದ್ದಾರೆ. ಯಶವಂತ್ ಅವರ ಅನುಮತಿಯಿಲ್ಲದೆ ಅವರ ದಾಖಲೆಗಳನ್ನು ಬಳಸಿಕೊಂಡು ಜಾಮೀನುದಾರರನ್ನಾಗಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ’ನಾನು ಮೆಸ್ಕಾಂ ಬನ್ನೂರು ಘಟಕದಲ್ಲಿ 1998ರಿಂದ ಗುತ್ತಿಗೆ ಆಧಾರದಲ್ಲಿ ಸೆಕ್ಯೂರಿಟಿ ಆಗಿ ಕಾರ್ಯನಿರ್ವಹಿಸಿ ಈಗ ಸ್ಟೋರ್ ಹೆಲ್ಪರ್ ಆಗಿ ಕಾರ್ಯನಿರ್ವಹಿಸುತ್ತಿದ್ದೇನೆ. ನವೀನ್ ಎಂಬವರು ಸದ್ರಿ ಘಟಕದಲ್ಲಿ 2016ರಿಂದ ಗುತ್ತಿಗೆ ಆಧಾರದಲ್ಲಿ ಅಟೆಂಡರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ಕೆಲಸ ನಿರ್ವಹಿಸುವ ಸಮಯದಲ್ಲಿ ನನ್ನ ಹಾಗೂ ಇತರ ಸಿಬ್ಬಂದಿಗಳ ಆಧಾರ್, ಪಾನ್ ಕಾರ್ಡ್ ಮತ್ತು ಇತರ ದಾಖಲೆಗಳನ್ನು ಜೆರಾಕ್ಸ್ ಮಾಡಿ ತರುತ್ತಿದ್ದರು. ಹೀಗಿರುವಲ್ಲಿ ಸುಮಾರು ಮೂರು ವರ್ಷಗಳ ಹಿಂದೆ ನಾನು ಪಿಎಫ್, ಖಾತಾ ವಿಚಾರದ ಬಗ್ಗೆ ಆಧಾರ್, ಪಾನ್ ಕಾರ್ಡ್‌ನ್ನು ಜೆರಾಕ್ಸ್ ಮಾಡಿಸಿ ನನ್ನ ಸಹಿ ಹಾಕಿ ಮತ್ತು ಪೊಟೋವನ್ನು ನವೀನ್ ಅವರಲ್ಲಿ ನೀಡಿದ್ದೆ. ಆದರೆ ಮೇ 20ರಂದು ಸಿಂಚನ್ ಚಿಟ್ಸ್ ಪ್ರೈವೇಟ್ ಲಿ ಪುತ್ತೂರು ಎಂಬಲ್ಲಿರುವ ಚಿಟ್ ವ್ಯವಹಾರದಲ್ಲಿ ಸಾಲ ಕಟ್ಟದೇ ಬಾಕಿ ವಸೂಲಾತಿಯ ಬಗ್ಗೆ ನೋಟೀಸ್ ಬಂದಿತ್ತು. ಆದರೆ ನಾನು ಸಿಂಚನ ಚಿಟ್ಸ್ ಪ್ರೈ.ಲಿ ನಲ್ಲಿ ಯಾವುದೇ ವ್ಯವಹಾರ ನಡೆಸದೇ ಇದ್ದರೂ ನನಗೆ ಬಂದಿರುವ ನೋಟೀಸ್ ಕುರಿತು ಅಲ್ಲಿ ವಿಚಾರಿಸಿದಾಗ ನವೀನ್ ಅವರು ನನ್ನನ್ನು ಜಾಮೀನುದಾರರನ್ನಾಗಿ ಮಾಡಿರುವ ವಿಚಾರ ಗೊತ್ತಾಯಿತು. ನವೀನ್ ಅವರು ನನ್ನ ಗಮನಕ್ಕೆ ತಾರದೆ ನನ್ನ ಸಹಿ ಮತ್ತು ಆಧಾರ್, ಪಾನ್ ಮತ್ತು ಇತರ ದಾಖಲೆ ಮತ್ತು ಸ್ಯಾಲರಿ ಸ್ಲಿಪ್ ಉಪಯೋಗಿಸಿ ಪೋರ್ಜರಿ ಮಾಡಿ ಚಿಟ್ ವ್ಯವಹಾರ ಮಾಡಿದಲ್ಲದೆ ನನ್ನ ಸಹಿ ಮತ್ತು ದಾಖಲೆಯನ್ನು ದುರುಪಯೋಗ ಪಡಿಸಿ ಚಿಟ್ ಫಂಡ್ ವ್ಯವಹಾರ ಮುಖಾಂತರ ಸಾಲ ತೆಗೆದು ಮೋಸ ಮತ್ತು ವಂಚನೆ ಮಾಡಿದ್ದಾರೆ. ಈ ಕುರಿತು ನವೀನ್ ಮತ್ತು ಸಿಂಚನ ಚಿಟ್ಸ್ ಪ್ರೈವೆಟ್ ಲಿ.ನ ಮೇನೇಜರ್ ಅವರನ್ನು ವಿಚಾರಣೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಯಶವಂತ ಗೌಡ ಅವರು ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.