ವರದಿ: ಸಂತೋಷ್ ಮೊಟ್ಟೆತ್ತಡ್ಕ
ಪುತ್ತೂರು: ಪದಡ್ಕ ವಿಶ್ವಕಲಾನಿಕೇತನ ಇನ್‌ಸ್ಟಿಟ್ಯೂಟ್ ಆಫ್ ಆರ್ಟ್ಸ್ ಆಂಡ್ ಕಲ್ಚರ್ ಪುತ್ತೂರು ನೃತ್ಯ ಸಂಸ್ಥೆಯ ಸ್ಥಾಪಕ ದಿ.ಕುದ್ಕಾಡಿ ವಿಶ್ವನಾಥ ರೈಯವರ ಪತ್ನಿ ವಿದುಷಿ, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕಿ ಕರ್ನಾಟಕ ಕಲಾಶ್ರೀ ಕುದ್ಕಾಡಿ ನಯನಾ ವಿ.ರೈ ಹಾಗೂ ಅವರ ಪುತ್ರಿ ವಿದುಷಿ ಸ್ವಸ್ತಿಕಾ ಆರ್.ಶೆಟ್ಟಿ ಅವರಿಗೆ ಭರತನಾಟ್ಯ ರಂಗದಲ್ಲಿ ಮಾಡಿದ ಸಾಧನೆ ಹಾಗೂ ಸೇವೆಗಾಗಿ ಬೆಂಗಳೂರಿನ ಆರ್ಯಭಟ ಸಾಂಸ್ಕೃತಿಕ ಸಂಸ್ಥೆಯಿಂದ 2023ನೇ ಸಾಲಿನ ಪ್ರತಿಷ್ಠಿತ 48ನೇ ವಾರ್ಷಿಕ ಆರ್ಯಭಟ ಅಂತರ್ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ.
ನಯನಾ ವಿ.ರೈಯವರಿಗೆ ಮೈಸೂರು ಭಾರತೀಯ ನೃತ್ಯಕಲಾ ಪರಿಷತ್‌ನಿಂದ ನರ್ತನಾ ಚತುರೆ ಪ್ರಶಸ್ತಿ, ಕರ್ನಾಟಕ ರಾಜ್ಯ ಕೊಡಲ್ಪಡುವ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಕಲಾಶ್ರಯ ಪ್ರಶಸ್ತಿ, ಸುಮ ಸೌರಭ ಪ್ರಶಸ್ತಿ, ಜನಮೆಚ್ಚಿದ ಶಿಕ್ಷಕಿ ಪ್ರಶಸ್ತಿ, ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ, ಗಡಿನಾಡ ಕನ್ನಡಿಗ ಪ್ರಶಸ್ತಿ, ಮೈಸೂರು ದಸರಾ ನಾಡಹಬ್ಬ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್‌ನಿಂದ ಜಿಲ್ಲಾ ಪ್ರಶಸ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಗೌರವ, ತುಳು ಅಕಾಡೆಮಿಯ ಗೌರವ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ತಾಲೂಕು ಸಾಹಿತ್ಯ ಪ್ರಶಸ್ತಿ, ಕಲಾ ವೈಭವ ಪ್ರಶಸ್ತಿ, ಭರತ ಪ್ರಶಸ್ತಿ, ನರ್ತನ ಜಗತ್ತಿನ ಭಲೇ ಜೋಡಿ ಪ್ರಶಸ್ತಿ, ಕಲಾ ವಿಶಾರದಾ ಪ್ರಶಸ್ತಿ, ಬೆಂಗಳೂರು ಭಾರತೀಯ ನೃತ್ಯ ಕಲಾ ಪರಿಷತ್‌ನಿಂದ ಕಲಾ ಪೋಷಕ ಪ್ರಶಸ್ತಿ ಅಲ್ಲದೆ ಕುವೈಟ್, ಬಹರೈನ್‌ನಲ್ಲಿಯೂ ಗೌರವ ಸಮ್ಮಾನಕ್ಕೆ ನಯನಾ ವಿ.ರೈಯವರು ಭಾಜನರಾಗಿದ್ದಾರೆ. ಜೊತೆಗೆ ವಿವಿಧ ಸಂಘ-ಸಂಸ್ಥೆಗಳಿಂದ ನೃತ್ಯಗುರು ನಯನಾ ವಿ.ರೈರವರ ಪ್ರತಿಭೆಯನ್ನು ಪ್ರೋತ್ಸಾಹಿಸಿ ಸನ್ಮಾನ, ಅಭಿನಂದನೆಯನ್ನು ಮಾಡಿರುತ್ತಾರೆ. ವಿದುಷಿ ನಯನಾ ವಿ.ರೈಯವರು ಪ್ರಸ್ತುತ ಪದಡ್ಕ-ಕುದ್ಕಾಡಿ ಎಂಬಲ್ಲಿ ವಾಸವಾಗಿದ್ದು, ಪುತ್ರಿ ಸ್ವಸ್ತಿಕಾ ಆರ್.ಶೆಟ್ಟಿ, ಅಳಿಯಂದಿರಾದ ರಾಜ್‌ಕುಮಾರ್ ಶೆಟ್ಟಿ, ಸುನೀಲ್ ಶೆಟ್ಟಿ, ಮೊಮ್ಮಕ್ಕಳಾದ ವಿದುಷಿ ಡಾ.ಅಕ್ಷಿ ಶೆಟ್ಟಿ, ಸಾಕ್ಷರ್ ಶೆಟ್ಟಿ, ಆಂಗಿಕಾ ಶೆಟ್ಟಿರವರನ್ನು ಹೊಂದಿರುತ್ತಾರೆ.
ಕರ್ನಾಟಕ ಕಲಾಶ್ರೀ ದಿ.ಕುದ್ಕಾಡಿ ವಿಶ್ವನಾಥ ರೈ ಹಾಗೂ ವಿದುಷಿ ನಯನಾ ವಿ.ರೈ ದಂಪತಿ ಪುತ್ರಿ ವಿದುಷಿ ಸ್ವಸ್ತಿಕಾ ಆರ್.ಶೆಟ್ಟಿಯವರು ತನ್ನ ಶಿಕ್ಷಣವನ್ನು ಪುತ್ತೂರಿನ ವಿದ್ಯಾಸಂಸ್ಥೆಗಳಲ್ಲಿ ಪೂರೈಸಿ 2000ರಲ್ಲಿ ಭರತನಾಟ್ಯದಲ್ಲಿ ವಿದ್ವತ್ ಪದವಿಯನ್ನು ಪಡೆದಿದ್ದರು. ತಂದೆ-ತಾಯಿಯ ಮಾರ್ಗದರ್ಶನದಲ್ಲಿ ಭರತನಾಟ್ಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು. ಅಣ್ಣಾಮಲೈ ವಿಶ್ವವಿದ್ಯಾನಿಲಯದಿಂದ ನಟುವಾಂಗದಲ್ಲಿ ಕಲೈಮಣಿ ಸರ್ಟಿಫಿಕೇಟ್ ಕೋರ್ಸ್‌ನಲ್ಲಿ ತೇರ್ಗಡೆ. ಪ್ರತಿಷ್ಠಿತ ಭರತನಾಟ್ಯ ಗುರುಗಳ ನೃತ್ಯಕಮ್ಮಟಗಳಲ್ಲಿ ಭಾಗವಹಿಸಿ ಹೆಚ್ಚಿನ ಅಭ್ಯಾಸಗಳಲ್ಲಿ ತನ್ನನ್ನು ತೊಡಗಿಸಿಕೊಂಡಿರುವರು. ವಿಶ್ವಕಲಾನಿಕೇತನ ನೃತ್ಯಕಲಾ ಶಾಲೆಯ ವಿದ್ಯಾರ್ಥಿಗಳಿಗೆ ತರಬೇತಿ ನೀಡಿ, ಜ್ಯೂನಿಯರ್, ಸೀನಿಯರ್ ವಿದ್ವತ್ ಪರೀಕ್ಷೆಗಳಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆ. ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಪರೀಕ್ಷೆಗಳಲ್ಲಿ ಪರೀಕ್ಷಕರಾಗಿ ಸ್ವಸ್ತಿಕಾ ಶೆಟ್ಟಿಯವರು ಕಾರ್ಯನಿರ್ವಹಿಸಿದ್ದು, ತಾಯಿ ಕನಸು, ಸಿಂಗಾರಿ ಬಂಗಾರಿ ಚಲನಚಿತ್ರಗಳಲ್ಲಿ ಬಾಲನಟಿಯಾಗಿಯೂ ಅವರು ಅಭಿನಯಿಸಿರುತ್ತಾರೆ. ಆಳ್ವಾಸ್ ನುಡಿಸಿರಿ, ಧರ್ಮಸ್ಥಳ ಲಕ್ಷದೀಪೋತ್ಸವ, ಕರಾವಳಿ ಉತ್ಸವ, ಕರಾವಳಿ ನೃತ್ಯಕಲಾ ಪರಿಷತ್ತು, ಜಗನ್ಮೋಹನ ಪ್ಯಾಲೇಸ್, ನಾದಬ್ರಹ್ಮ ವೇದಿಕೆ ಮೈಸೂರು, ಜಾಂಬೂರಿ ನುಡಿಸಿರಿ ವೇದಿಕೆ, ಅಂತರ್ರಾಷ್ಟ್ರೀಯ ಬಂಟರ ಸಮಾವೇಶ ಬೆಂಗಳೂರು, ಬಹರೈನ್‌ನ ಪ್ರತಿಷ್ಠಿತ ವೇದಿಕೆಗಳಲ್ಲಿ ನೃತ್ಯ ಕಾರ್ಯಕ್ರಮ ನೀಡಿರುವ ಹೆಗ್ಗಳಿಕೆ ಸ್ವಸ್ತಿಕಾ ಶೆಟ್ಟಿಯವರದ್ದು. ರೋಟರಿ ಪುತ್ತೂರು ಕ್ಲಬ್ ಯುವ ಇದರ ಸದಸ್ಯೆಯಾಗಿರುವ ಸ್ವಸ್ತಿಕಾರವರು ಅಬ್ಬಕ್ಕ ನಾಟಕದ ತಿರುಮಲಾದೇವಿ ಪಾತ್ರಕ್ಕೆ ರಾಜ್ಯ ಪ್ರಶಸ್ತಿ ಪಡೆಯುವುದರೊಂದಿಗೆ ಅನೇಕ ನೃತ್ಯ ಕ್ಷೇತ್ರದ ಸಾಧನೆಗಾಗಿ ವೇದಿಕೆಗಳಲ್ಲಿ ಯುವ ಕಲಾವಿದೆಯಾಗಿ ಗೌರವ, ಸನ್ಮಾನ ಪುರಸ್ಕಾರಗಳು ಲಭಿಸಿವೆ. ಪ್ರಸ್ತುತ ಸ್ವಸ್ತಿಕಾ ಶೆಟ್ಟಿಯವರು ಪತಿ ತುಂಬೆಗುತ್ತು ರಾಜ್‌ಕುಮಾರ್ ಶೆಟ್ಟಿ, ಪುತ್ರಿಯರಾದ ನಟುವಾಂಗದಲ್ಲಿ ಕಲೈಮಣಿ ಸರ್ಟಿಫಿಕೇಟ್ ಕೋರ್ಸ್‌ನ್ನು ಅಣ್ಣಾಮಲೈ ವಿಶ್ವವಿದ್ಯಾನಿಲಯದಲ್ಲಿ ಪೂರೈಸಿರುವ ವಿದುಷಿ ಡಾ|ಅಕ್ಷಿ ಶೆಟ್ಟಿ, ಭರತನಾಟ್ಯದಲ್ಲಿ ಸೀನಿಯರ್ ಪರೀಕ್ಷೆಯನ್ನು ಪೂರೈಸಿರುವ ವಿದುಷಿ ಆಂಗಿಕ ಶೆಟ್ಟಿಯವರೊಂದಿಗೆ ವಾಸವಾಗಿದ್ದಾರೆ.
ಮೇ 25ರಂದು ಪ್ರಶಸ್ತಿ ಪ್ರದಾನ..
ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಮೇ 25 ರಂದು ಸಂಜೆ ನಡೆಯುವ ಆರ್ಯಭಟ ನೃತ್ಯೋತ್ಸವ ಕಾರ್ಯಕ್ರಮದಲ್ಲಿ ವಿದುಷಿ ನಯನಾ ವಿ.ರೈ ಹಾಗೂ ವಿದುಷಿ ಸ್ವಸ್ತಿಕಾ ರೈಯವರಿಗೆ ಆರ್ಯಭಟ ಅಂತರ್ರಾಷ್ಟ್ರೀಯ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ. ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಾಧೀಶ ಪಿ.ಎಸ್ ದಿನೇಶ್ ಕುಮಾರ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಡೋಜ ಡಾ|ಮಹೇಶ್ ಜೋಶಿ, ಚಲನಚಿತ್ರ ನಟ ಹಾಗೂ ನಿರ್ಮಾಪಕ ಟಿ.ಎಸ್ ನಾಗಾಭರಣ, ಆರ್ಯಭಟ ಸಾಂಸ್ಕೃತಿಕ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಡಾ|ಹೆಚ್.ಎಲ್.ಎನ್ ರಾವ್‌ರವರು ಅತಿಥಿಗಳಾಗಿ ಆಗಮಿಸಲಿರುವರು. ಪ್ರಶಸ್ತಿ ಪ್ರದಾನ ಸಮಾರಂಭದ ಮೊದಲು ಸಾಂಸ್ಕೃತಿಕ ಹಬ್ಬ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.