ತಾಲೂಕಿನಲ್ಲೇ ಏಕೈಕ ಅಧ್ಯಯನ ಸಂಸ್ಥೆ
ಪುತ್ತೂರು: ಉನ್ನತ ಕೈಗಾರಿಕಾ ಮತ್ತು ವಾಣಿಜ್ಯ ಸಂಸ್ಥೆಗಳಲ್ಲಿ ಕಂಪೆನಿ ಸೆಕ್ರೆಟರಿ ಕಾರ್ಯ ಕ್ಷೇತ್ರವು ಪ್ರಾಮುಖ್ಯತೆ ಮತ್ತು ಬೇಡಿಕೆಯನ್ನು ಹೊಂದಿದ್ದು, ಇದಕ್ಕೆ ಪೂರಕವಾಗಿ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ವಿಶೇಷ ಪ್ರಾತಿನಿಧ್ಯವನ್ನು ಹೊಂದಿರುವ ಸಂತ ಫಿಲೋಮಿನಾ ಕಾಲೇಜಿನಲ್ಲಿ ಇನ್ಸ್ಟಿಟ್ಯೂಟ್ ಆಫ್ ಕಂಪೆನಿ ಸೆಕ್ರೆಟರೀಸ್ ಆಫ್ ಇಂಡಿಯಾ(ಐಸಿಎಸ್‌ಐ) ಅಧ್ಯಯನ ಕೇಂದ್ರವು ಮೇ 26ರಂದು ಉದ್ಘಾಟನೆಗೊಳ್ಳಲಿದೆ. ಪುತ್ತೂರು ತಾಲೂಕಿನಲ್ಲೇ ಏಕೈಕ ಐಸಿಎಸ್‌ಐ ಅಧ್ಯಯನ ಸಂಸ್ಥೆಯಾಗಿ ಮೂಡಿ ಬರಲಿದೆ.
ಪತ್ರಿಕಾಗೋಷ್ಠಿಯಲ್ಲಿ ಸಂತ ಫಿಲೋಮಿನಾ ಕಾಲೇಜಿನ ಪ್ರಾಂಶುಪಾಲ ರೇ ಡಾ| ಆಂಟನಿ ಪ್ರಕಾಶ್ ಮೊಂತೆರೋ ಮಾತನಾಡಿ ಸಂಸ್ಥೆಯ ಆಡಳಿತ ವಿಭಾಗ ಮತ್ತು ಐಸಿಎಸ್‌ಐ ಮಂಗಳೂರು ಚಾಪ್ಟರ್ ನಡುವೆ ಶೈಕ್ಷಣಿಕ ವಿನಿಮಯ ಒಡಂಬಡಿಕೆಗಳ ಹಾಗೂ ಐಸಿಎಸ್‌ಐ ಅಧ್ಯಯನ ಕೇಂದ್ರದ ಉದ್ಘಾಟನೆ ಮೇ 26ರಂದು ಕಾಲೇಜಿನ ಬೆಳ್ಳಿ ಹಬ್ಬ ಸಭಾ ಭವನದಲ್ಲಿ ನಡೆಯಲಿದೆ. ಐಸಿಎಸ್ ಐ ರಾಷ್ಟ್ರಮಟ್ಟದಲ್ಲಿ ಕಂಪೆನಿ ಸೆಕ್ರೆಟರಿ ಕೋರ್ಸ್ ಸಂಯೋಜಿಸುವುದರ ಮೂಲಕ ಶ್ರೇಷ್ಠ ಗುಣಮಟ್ಟದ ಮಾನವ ಸಂಪನ್ಮೂಲವನ್ನು ಕಾರ್ಪೊರೇಟ್ ಕಂಪೆನಿಗಳಿಗೆ ಒದಗಿಸುತ್ತದೆ. ವಿದ್ಯಾರ್ಥಿಗಳಿಗೆ ಕಂಪೆನಿ ಸೆಕ್ರೆಟರಿ ಕೋರ್ಸಿನ ಸಂಪೂರ್ಣ ಮಾಹಿತಿ, ಅಧ್ಯಯನ ವಿಚಾರಗಳ ತರಬೇತಿಯು ಐಸಿಎಸ್‌ಐ ಕೇಂದ್ರದಲ್ಲಿ ನಡೆಯುತ್ತದೆ. ಪುತ್ತೂರು, ಸುಳ್ಯ, ಬೆಳ್ತಂಗಡಿ, ಬಂಟ್ವಾಳ ತಾಲೂಕಿನ ವಿದ್ಯಾರ್ಥಿಳಿಗೆ ಐಸಿಎಸ್‌ಐ ಅಧ್ಯಯನ ಕೇಂದ್ರವು ತಮ್ಮ ವೃತ್ತಿ ಜೀವನಕ್ಕೆ ಪಥ ನಿರ್ದೇಶನವನ್ನು ಮಾಡುವ ಸಂಕಲ್ಪವನ್ನು ಹೊಂದಿದೆ ಎಂದರು.
ವೃತ್ತಿ ಜೀವನದ ಯಶಸ್ಸನ್ನು ಸಾಧಿಸಲು ಪ್ರೇರೆಪಿಸುವ ಉದ್ದೇಶ:
ಸಂತ ಫಿಲೋಮಿನಾ ಸಂಸ್ಥೆಯಲ್ಲಿ 2022-23ನೇ ಶೈಕ್ಷಣಿಕ ವರ್ಷದಿಂದ ಬಿಬಿಎ(ಸಿಎಸ್, ಇಂಟಿಗ್ರೇಟೆಡ್) ಪದವಿಯನ್ನು ಸಂಯೋಜಿಸಲಾಗಿದೆ. ವಿದ್ಯಾರ್ಥಿ ಸಮೂಹವನ್ನು ಸೃಜನಾತ್ಮಕವಾಗಿ ಬೆಳೆಸಿ, ವೃತ್ತಿಪರತೆಯನ್ನು ಬೋಧಿಸುವುದರ ಮೂಲಕ ಬಹುರಾಷ್ಟ್ರೀಯ ಕಂಪೆನಿಗಳಲ್ಲಿ ವೃತ್ತಿ ಜೀವನದ ಯಶಸ್ಸನ್ನು ಸಾಧಿಸಲು ಪ್ರೇರೆಪಿಸುವುದು ಅಧ್ಯಯನ ಕೇಂದ್ರದ ಉದ್ದೇಶವಾಗಿದೆ ಎಂದು ಡಾ| ಆಂಟನಿ ಪ್ರಕಾಶ್ ಮೊಂತೆರೋ ಹೇಳಿದರು.
ಉದ್ಘಾಟನೆ:
ಕಾಲೇಜಿನ ಪ್ರಾಂಶುಪಾಲ ರೇ ಡಾ| ಆಂಟಿನಿ ಪ್ರಕಾಶ್ ಮೊಂತೆರೊ ಮತ್ತು ಐಸಿಎಸ್‌ಐ ಮಂಗಳೂರು ಚಾಪ್ಟರ್‌ನ ಮುಖ್ಯಸ್ಥ ಸಿ.ಎಸ್ ಸೋನಾಲಿ ಸುರೇಶ್ ಮಲ್ಯರವರು ಶೈಕ್ಷಣಿಕ ಒಡಂಬಡಿಕೆಗೆ ಸಹಿ ಹಾಕಲಿದ್ದಾರೆ. ಐಸಿಎಸ್‌ಐ ಅಧ್ಯಯನ ಕೇಂದ್ರವನ್ನು ಐಸಿಎಸ್‌ಐಯ ಸದರ್ನ್ ಇಂಡಿಯಾ ರೀಜಿನಲ್ ಇದರ ಉಪಾಧ್ಯಕ್ಷ ಸಿ.ಎಸ್ ಪ್ರದೀಪ್ ಕುಲಕರ್ಣಿ ಅವರು ಉದ್ಘಾಟಿಸಲಿದ್ದಾರೆ. ಸಂತ ಫಿಲೋಮಿನಾ ಕಾಲೇಜಿನ ಸಂಚಾಲಕ ವಂ.ಲಾರೆನ್ಸ್ ಮಸ್ಕರೇನ್ಹಸ್ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಕ್ಯಾಂಪಸ್ ನಿರ್ದೇಶಕ ರೇ ಫಾ| ಸ್ಟ್ಯಾನಿ ಪಿಂಟೋ ಅವರು ಗೌರವ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ಡಾ| ಆಂಟನಿ ಪ್ರಕಾಶ್ ಮೊಂತೆರೋ ಅವರು ಮಾಹಿತಿ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ಕಾಲೇಜಿನ ಉಪಪ್ರಾಂಶುಪಾಲ ಪ್ರೊ. ಗಣೇಶ್ ಭಟ್, ಬಿಬಿಎ ವಿಭಾಗದ ಮುಖ್ಯಸ್ಥ ಡಾ.| ರಾಧಾಕೃಷ್ಣ ಗೌಡ ವಿ, ಕಾಲೇಜಿನ ಸಾರ್ವಜನಿಕ ಸಂಪರ್ಕಾಧಿಕಾರಿ ಭಾರತಿ ಎಸ್ ರೈ, ಅಧ್ಯಯನ ಕೇಂದ್ರದ ಸಂಯೋಜಕ ಅಭಿಷೇಕ್ ಸುವರ್ಣ ಉಪಸ್ಥಿತರಿದ್ದರು.