ಬೆಳ್ತಂಗಡಿ:ಮುಖ್ಯಮಂತ್ರಿ ಸಿದ್ದರಾಮಯ್ಯರವರ ಕುರಿತು ಅವಾಚ್ಯವಾಗಿ ಸುಳ್ಳು ಮಾತುಗಳನ್ನಾಡಿದ ಮತ್ತು ಕೋಮು ಸಾಮರಸ್ಯ ಕದಡಲು ಒಳಸಂಚು ರೂಪಿಸಿದ ಆರೋಪದಡಿ ಬೆಳ್ತಂಗಡಿ ಶಾಸಕ, ಪುತ್ತೂರು ಮೂಲದ ಹರೀಶ್ ಪೂಂಜ ಮತ್ತು ಬೆಳ್ತಂಗಡಿ ಮಂಡಲ ಬಿಜೆಪಿ ಅಧ್ಯಕ್ಷ ಜಯಂತ ಕೋಟ್ಯಾನ್ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್. ದಾಖಲಾಗಿದೆ.
ಬೆಳ್ತಂಗಡಿ ಮಂಡಲ ಬಿಜೆಪಿ ವತಿಯಿಂದ ಮೇ 23ರಂದು ಬೆಳ್ತಂಗಡಿಯಲ್ಲಿ ನಡೆದ ಬಿಜೆಪಿ ಅಭಿನಂದನಾ ಸಮಾರಂಭದಲ್ಲಿ, ಸಿದ್ದರಾಮಯ್ಯನವರು 24 ಹಿಂದೂ ಕಾರ್ಯಕರ್ತರನ್ನು ಹತ್ಯೆ ಮಾಡಿದ್ದಾರೆ ಎಂದು ಹೇಳಿಕೆ ನೀಡಿದ್ದ ಹಿನ್ನೆಲೆಯಲ್ಲಿ ಶಾಸಕ ಹರೀಶ್ ಪೂಂಜ ಮತ್ತು ಕಾರ್ಯಕ್ರಮ ಆಯೋಜಿಸಿದ್ದ ಮಂಡಲ ಬಿಜೆಪಿ ಅಧ್ಯಕ್ಷ ಜಯಂತ ಕೋಟ್ಯಾನ್ ವಿರುದ್ಧ ಕೇಸು ದಾಖಲಿಸಲಾಗಿದೆ.
ಮಹಿಳಾ ಕಾಂಗ್ರೆಸ್ ಘಟಕ ಅಧ್ಯಕ್ಷೆ ನಮಿತಾ ಪೂಜಾರಿ ಅವರು ನೀಡಿದ್ದ ದೂರಿನಂತೆ ಪೊಲೀಸರು ಶಾಸಕ ಹರೀಶ್ ಪೂಂಜ ಮತ್ತು ಜಯಂತ ಕೋಟ್ಯಾನ್ ವಿರುದ್ಧ ಸೆಕ್ಷನ್ 153, 153ಎ, 505(1) 505(ಬಿ),505 (ಸಿ) ಮತ್ತು 505(2)ರಂತೆ ಕೇಸು ದಾಖಲಾಗಿದೆ.ಬೆಳ್ತಂಗಡಿ ಠಾಣೆಗೆ ಮಾಜಿ ಶಾಸಕ ಕೆ.ವಸಂತ ಬಂಗೇರರ ಸೂಚನೆಯಂತೆ ಕಾಂಗ್ರೆಸ್ ವಕ್ತಾರ ಮನೋಹರ ಕುಮಾರ್ ಇಳಂತಿಲ, ಪುತ್ತೂರು ನಗರ ಪೊಲೀಸ್ ಠಾಣೆಗೆ ನಗರಸಭಾ ಸದಸ್ಯ ಮಹಮ್ಮದ್ ರಿಯಾಝ್ ಅವರೂ ಹರೀಶ್ ಪೂಂಜ ವಿರುದ್ಧ ದೂರು ನೀಡಿದ್ದರು.ಈ ಎಲ್ಲಾ ದೂರುಗಳನ್ನು ಬೆಳ್ತಂಗಡಿ ನಗರ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದ್ದು ನಮಿತಾ ಪೂಜಾರಿಯವರು ದಾಖಲಿಸಿರುವ ಎಫ್.ಐ.ಆರ್.ಗೆ ಸೇರಿಸಿಕೊಳ್ಳಲಾಗಿದೆ.