ನಕಲಿ ಚಿನ್ನವಿರಿಸಿ ಸೊಸೈಟಿಯಿಂದ ಸಾಲ ಪಡೆದು ವಂಚನೆ- ಚಿನ್ನ ಪರೀಕ್ಷಕನಿಗೆ ನಿರೀಕ್ಷಣಾ ಜಾಮೀನು

0

ಪುತ್ತೂರು:ಎರಡು ವರ್ಷಗಳ ಹಿಂದೆ ಉಪ್ಪಿನಂಗಡಿಯಲ್ಲಿ ಕೋ ಆಪರೇಟಿವ್ ಸೊಸೈಟಿಯೊಂದರಲ್ಲಿ ನಕಲಿ ಚಿನ್ನವನ್ನು ಅಡವಿರಿಸಿ ಸಾಲ ಪಡೆದು ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ ಚಿನ್ನ ಪರೀಕ್ಷಕನಿಗೆ ಜಿಲ್ಲಾ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ಶ್ರೀ ವೆಂಕಟ್ರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಉಪ್ಪಿನಂಗಡಿ ಶಾಖೆಯಲ್ಲಿ 2021ರ ಜನವರಿ 25ರಂದು ಬೆಳಿಗ್ಗೆ 11 ಗಂಟೆ ಸುಮಾರಿಗೆ ಗಿರೀಶ್ ಕುಮಾರ್ ಕೆ.ಎಂಬಾತ 31,900 ಗ್ರಾಮ್ ತೂಕದ 4 ಬಳೆಗಳನ್ನು ಚಿನ್ನದ್ದು ಎಂದು ಹೇಳಿ ಅಡವಿರಿಸಿ 1,10,000ರೂ. ಸಾಲ ಪಡೆದುಕೊಂಡಿದ್ದರು. ಸ್ವಲ್ಪ ಸಮಯದ ಬಳಿಕ ಪುತ್ತೂರು ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘ ಇದರ ಉಪ್ಪಿನಂಗಡಿ ಶಾಖೆಯಿಂದ ಸಿಕ್ಕಿದ ಮಾಹಿತಿ ಪ್ರಕಾರ, ಸದ್ರಿ ಅಡವು ಇಟ್ಟ ಚಿನ್ನ ನಕಲಿ ಚಿನ್ನವೆಂದು ಮಾಹಿತಿ ಗೊತ್ತಾಗಿ ಕೂಲಂಕುಷವಾಗಿ ಪರಿಶೀಲಿಸಿದಾಗ ನಕಲಿ ಚಿನ್ನವೆಂದು ಗೊತ್ತಾಗಿತ್ತು. ಈ ರೀತಿ ನಕಲಿ ಚಿನ್ನವನ್ನು ಅಸಲಿ ಚಿನ್ನವೆಂದು ನಂಬಿಸಿ ಅಡವಿಟ್ಟು ಸಾಲ ಪಡೆದು ವಂಚಿಸಿರುವ ಆರೋಪಿತ ಗಿರೀಶನ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಸೊಸೈಟಿಯಲ್ಲಿ ಆ ಸಂದರ್ಭ ಶಾಖಾ ವ್ಯವಸ್ಥಾಪಕ ಕುಸುಮಾಧರ ಜಿ.ಅವರು ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣದ ಆರೋಪಿ ಗಿರೀಶ್‌ನನ್ನು ಪೊಲೀಸರು ಬಳಿಕ ಬಂಧಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸೊಸೈಟಿಯ ಚಿನ್ನ ಪರೀಕ್ಷಕರಾಗಿರುವ ಬಂಟ್ವಾಳದ ಲೋಕೇಶ್ ಆಚಾರ್ಯ ಎಂಬವರು ನಿರೀಕ್ಷಣಾ ಜಾಮೀನು ಕೋರಿ ವಕೀಲ ಮಹೇಶ್ ಕಜೆ ಅವರ ಮೂಲಕ ಪುತ್ತೂರು ಐದನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.ಅರ್ಜಿಯನ್ನು ಪುರಸ್ಕರಿಸಿರುವ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

LEAVE A REPLY

Please enter your comment!
Please enter your name here