ಬೆಂಗಳೂರು:ಪತ್ರಕರ್ತೆ, ಸಾಹಿತಿ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಓರ್ವ ಆರೋಪಿಯಾಗಿರುವ ಪುತ್ತೂರಿನ ಮೋಹನ್ ನಾಯಕ್ ಅವರು ಜಾಮೀನು ಕೋರಿ ಬೆಂಗಳೂರು ಪ್ರಧಾನ ಸಿವಿಲ್ ಮತ್ತು ಸತ್ರ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದು ನ್ಯಾಯಾಲಯ ವಿಚಾರಣೆಯನ್ನು ಜೂ.3ಕ್ಕೆ ಮುಂದೂಡಿದೆ.
ಪ್ರಕರಣದಲ್ಲಿ 11ನೇ ಆರೋಪಿಯಾಗಿರುವ ಮೋಹನ್ ನಾಯಕ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಬೆಂಗಳೂರಿನ ಪ್ರಧಾನ ಸಿವಿಲ್ ಮತ್ತು ಸತ್ರ ನ್ಯಾಯಾಲಯದಲ್ಲಿ ಮೇ 24ರಂದು ನಡೆದಿದ್ದು ಜೂ.3ಕ್ಕೆ ಮುಂದೂಡಿಕೆಯಾಗಿದೆ.
ಬೆಂಗಳೂರಿನಲ್ಲಿ ಬಾಡಿಗೆ ಮನೆ ಮಾಡಿದ್ದ ಮೋಹನ್ ನಾಯಕ್ ಅವರು, ಗೌರಿ ಹತ್ಯೆಯ ಆರೋಪಿಗಳಿಗೆ ಆಶ್ರಯ ನೀಡಿದ್ದರೆಂಬ ಆರೋಪವಿದೆ. ಮೋಹನ್ ನಾಯಕ್ ಅವರಿಗೆ ಗೋವಾ ರಾಜ್ಯದ ಸಂಘಟನೆಯೊಂದರ ಮೂಲಕ ಪ್ರಕರಣದ ಮೊದಲ ಆರೋಪಿ ಅಮೋಲ್ ಕಾಳೆಯ ಪರಿಚಯವಾಗಿತ್ತು. ಬೆಂಗಳೂರಿನಲ್ಲಿ ಮೋಹನ್ ನಾಯಕ್ ಅವರು ಮಾಡಿದ್ದ ಬಾಡಿಗೆ ಮನೆಗೆ ಪ್ರಕರಣದ ಆರೋಪಿ ಅಮೋಲ್ ಕಾಳೆ ಬರುತ್ತಿದ್ದನಲ್ಲದೆ,ಎರಡನೆ ಆರೋಪಿ ಪರಶುರಾಮ್ ವಾಗೋರೆಯನ್ನೂ ಜತೆಗೆ ಕರೆದೊಯ್ಯುತ್ತಿದ್ದ. ಈ ಮನೆಯಲ್ಲಿಯೇ ಗೌರಿ ಹತ್ಯೆಗೆ ಆರಂಭಿಕ ತಯಾರಿಗಳನ್ನು ಮಾಡಿದ್ದರು. ಆನಂತರ ಮೋಹನ್ ನಾಯಕ್ ಬೆಂಗಳೂರಲ್ಲಿ ಪಡೆದುಕೊಂಡಿದ್ದ ಬಾಡಿಗೆ ಮನೆ ಖಾಲಿ ಮಾಡಿ, ಮಂಗಳೂರಿಗೆ ತೆರಳಿದ್ದರು ಎಂದು ಆರೋಪಿಸಲಾಗಿದೆ. ಪ್ರಕರಣದಲ್ಲಿ 11ನೇ ಆರೋಪಿಯಾಗಿರುವ ಮೋಹನ್ ನಾಯಕ್ ಅವರು ಜಾಮೀನಿನಲ್ಲಿ ಬಿಡುಗಡೆ ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ಜೂ.3ಕ್ಕೆ ನಡೆಯಲಿದೆ.