ಕ್ಷೇತ್ರಗಳು ಬೆಳಗಬೇಕಾದರೆ ನಿಸ್ವಾರ್ಥ ಸೇವೆಯಿಂದ ದುಡಿಯಬೇಕು- ಕೇಶವ ತಂತ್ರಿ
ಕ್ಷೇತ್ರದ ಮುಂದಿನ ಅಭಿವೃದ್ಧಿ ಕಾರ್ಯಕ್ಕೆ ಎಲ್ಲರ ಸಹಕಾರ ಅಗತ್ಯ- ಧನಂಜಯ ಆಚಾರ್ಯ ಏನೆಕಲ್ಲು
ಮಾನವೀಯ ಮೌಲ್ಯಗಳ ಜೊತೆಗೆ ಧರ್ಮವನ್ನು ಅಳವಡಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ-ಅರುಣ್ ಕುಮಾರ್ ಪುತ್ತಿಲ
ಕಾಣಿಯೂರು: ದೇವಸ್ಥಾನವಿದ್ದರೆ ಅದು ಆ ಊರಿಗೆ ದೊಡ್ಡ ಸಂಪತ್ತು. ದೇವಸ್ಥಾನ ಧಾರ್ಮಿಕವಾಗಿ ನಮ್ಮ ಸನಾತನ ಸಂಸ್ಕೃತಿಯನ್ನು ಉದ್ಧೀಪನಗೊಳಿಸುವ ಕೇಂದ್ರ ಎಂದು ಕ್ಷೇತ್ರದ ತಂತ್ರಿ ಕೇಶವ ತಂತ್ರಿ ಅಂಕಶಾಲೆ ಮೂಡಬಿದ್ರೆ ಹೇಳಿದರು. ಅವರು ಮುರುಳ್ಯ ಕುಕ್ಕಟ್ಟೆ ಶ್ರೀ ಕಾಳಿಕಾಪರಮೇಶ್ವರಿ ಭದ್ರಕಾಳಿ ದೇವಸ್ಥಾನದಲ್ಲಿ ಮೇ 25ರಂದು ನಡೆದ ಪ್ರತಿಷ್ಠಾ ವರ್ಧಂತಿ ಉತ್ಸವ ಕಾರ್ಯಕ್ರಮದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು. ಮಾನವನ ನೆಮ್ಮದಿಯ ಬದುಕಿಗೆ ಧಾರ್ಮಿಕ ವಿಚಾರಗಳು ಅತೀ ಅಗತ್ಯ. ಕ್ಷೇತ್ರಗಳು ಬೆಳಗಬೇಕಾದರೆ ನಿಸ್ವಾರ್ಥ ಸೇವೆಯಿಂದ ದುಡಿಯಬೇಕು. ಭಕ್ತಿಯಿಂದ ದೇವರ ಪ್ರದಕ್ಷಿಣೆ ಮಾಡಿದಾಗ ಭಗವಂತನ ಸಿದ್ಧಿ ಸಾಧ್ಯ. ಪ್ರಕೃತಿಯನ್ನು ರಕ್ಷಿಸಿ ಉಳಿಸಿ ಪೂಜಿಸುವುದು ಧರ್ಮ, ಇನ್ನೊಬ್ಬರಿಗೆ ನೋವು ಮಾಡದೇ ಅವರೊಂದಿಗೆ ತನ್ನ ಬದುಕನ್ನು ಸುಂದರಗೊಳಿಸುವುದು ಧರ್ಮ ಎಂದರು.
ಧಾರ್ಮಿಕ ಮುಖಂಡ ಅರುಣ್ ಕುಮಾರ್ ಪುತ್ತಿಲ ಮಾತನಾಡಿ, ಸನಾತನ ಹಿಂದೂ ಧರ್ಮ ಹಾಗೂ ನಮ್ಮ ಸಾಂಪ್ರದಾಯಿಕ ಕಟ್ಟುಪಾಡುಗಳನ್ನು ರಕ್ಷಿಸುವ ನಿಟ್ಟಿನಲ್ಲಿ ನಾವೆಲ್ಲಾ ಒಂದಾಗಿ ಕಟಿ ಬದ್ದರಾಗಿ ಸಂಕಲ್ಪ ಮಾಡಬೇಕಾಗಿದೆ. ಮಾನವೀಯ ಮೌಲ್ಯಗಳ ಜೊತೆಗೆ ಧರ್ಮವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಅನಿವಾರ್ಯತೆಯೂ ಇದೆ. ದೇವಸ್ಥಾನಗಳಿಂದ ಸಂಸ್ಕೃತಿ, ಸಂಸ್ಕಾರ ಪುನರುತ್ಥಾನಗೊಳ್ಳುತ್ತದೆ. ದೇವಸ್ಥಾನ, ಭಜನಾ ಮಂದಿರಗಳಿಂದಾಗಿ ಧರ್ಮದ ಆಚಾರ, ವಿಚಾರಗಳು ನಿರಂತರ ಅನುಷ್ಟಾನಗೊಳ್ಳುತ್ತದೆ. ಹಿಂದು ಧರ್ಮಕ್ಕೆ ವಿಶ್ವಕರ್ಮರ ಕೊಡುಗೆ ಅಪಾರವಾಗಿದೆ. ದೇವರ ಇಚ್ಚೆ ಹಾಗೂ ಭಕ್ತರ ಶ್ರದ್ದೆಯಿಂದ ಕುಕ್ಕಟ್ಟೆ ಕ್ಷೇತ್ರದ ಸುತ್ತು ಪೌಳಿ ಗೋಪುರವು ಒಂದು ವರ್ಷದೊಳಗೆ ಪೂರ್ಣಗೊಳ್ಳುತ್ತದೆ. ಆ ಸಂದರ್ಭದಲ್ಲಿ ನಾವೆಲ್ಲರೂ ಜತೆಯಾಗಿರುತ್ತೇವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುಕ್ಕಟ್ಟೆ ಶ್ರೀ ಕಾಳಿಕಾಪರಮೇಶ್ವರಿ ಭದ್ರಕಾಳಿ ದೇವಸ್ಥಾನದ ಆಡಳಿತ ಸಮಿತಿಯ ಧನಂಜಯ ಆಚಾರ್ಯ ಏನೆಕಲ್ಲು ಮಾತನಾಡಿ, ಎಲ್ಲರ ಸಹಕಾರದಿಂದ ಕ್ಷೇತ್ರವು ಜೀರ್ಣೋದ್ಧಾರಗೊಂಡು, ಒಂದು ವೈಶಿಷ್ಟ್ಯತೆಯಿಂದ ಕೂಡಿದ ಶಿಲಾಮಯವಾದ ದೇವಸ್ಥಾನದ ಗರ್ಭಗುಡಿ ನಿರ್ಮಾಣವಾಗಿ, ಬ್ರಹ್ಮಕಲಶೋತ್ಸವವು ಯಶಸ್ವಿಯಾಗಿ ನಡೆದಿದೆ. ಜೊತೆಗೆ ಸುತ್ತು ಪೌಳಿ ನಿರ್ಮಾಣ, ಪರಿವಾರ ದೇವರ ಗುಡಿಗಳು ನಿರ್ಮಾಣವಾಗಬೇಕಿದೆ. ಕ್ಷೇತ್ರದ ಮುಂದಿನ ಅಭಿವೃದ್ಧಿ ಕಾರ್ಯಗಳು ಕೂಡ ಎಲ್ಲರ ಸಹಕಾರದಿಂದ ನಡೆಯಬೇಕಿದೆ ಎಂದರು. ಜಿ.ಪಂ. ಮಾಜಿ ಸದಸ್ಯೆ ಪ್ರಮೀಳಾ ಜನಾರ್ದನ, ಪುತ್ತೂರು ನಗರ ಸಭೆ ಸದಸ್ಯೆ ಇಂದಿರಾ ಪುರುಷೋತ್ತಮ, ದೇವಸ್ಥಾನದ ಅನುವಂಶೀಯ ಮೊಕ್ತೇಸರರಾದ ಚಿನ್ನಯ್ಯ ಆಚಾರ್ಯ ಕುಕ್ಕಟ್ಟೆ, ದೇವಸ್ಥಾನದ ಆಡಳಿತ ಸಮಿತಿ ಕಾರ್ಯದರ್ಶಿ ಪುರುಷೋತ್ತಮ ಆಚಾರ್ಯ ಕುಕ್ಕಟ್ಟೆ ಉಪಸ್ಥಿತರಿದ್ದರು. ಕ್ಷೇತ್ರದ ಪ್ರಧಾನ ಅರ್ಚಕ ಬಾಲಕೃಷ್ಣ ಪುರೋಹಿತ್ ಪ್ರಾಸ್ತಾವಿಕದೊಂದಿಗೆ ಸ್ವಾಗತಿಸಿದರು. ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಜನಾರ್ದನ ಆಚಾರ್ಯ ಕಾಣಿಯೂರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಸನ್ಮಾನ: ಕುಕ್ಕಟ್ಟೆ ಶ್ರೀ ಕಾಳಿಕಾಪರಮೇಶ್ವರಿ ಭದ್ರಕಾಳಿ ದೇವಸ್ಥಾನದ ಪ್ರತಿಷ್ಠಾ ವರ್ಧಂತಿ ಉತ್ಸವ ಕಾರ್ಯಕ್ರಮದಲ್ಲಿ ಸುಳ್ಯ ಕ್ಷೇತ್ರದ ನೂತನ ಶಾಸಕಿ ಆಯ್ಕೆಯಾದ ಭಾಗೀರಥಿ ಮುರುಳ್ಯ ಹಾಗೂ ಪುತ್ತೂರು ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪಽಸಿ ಧಾರ್ಮಿಕ ಮುಖಂಡ ಅರುಣ್ ಕುಮಾರ್ ಪುತ್ತಿಲ ಇವರನ್ನು ಅಭಿನಂದಿಸಲಾಯಿತು.
ಕಾರ್ಯಕ್ರಮಗಳು: ಮುರುಳ್ಯ ಕುಕ್ಕಟ್ಟೆ ಶ್ರೀ ಕಾಳಿಕಾಪರಮೇಶ್ವರಿ ಭದ್ರಕಾಳಿ ದೇವಸ್ಥಾನದಲ್ಲಿ ಮೇ 24, 25 ರಂದು ಪ್ರತಿಷ್ಠಾವರ್ಧಂತಿ ಉತ್ಸವವು ಮೂಡಬಿದಿರೆ ವೇದಮೂರ್ತಿ ಎನ್. ಕೇಶವ ತಂತ್ರಿಗಳ ನೇತೃತ್ವದಲ್ಲಿ ನಡೆಯಿತು. ಮೇ 24 ರಂದು ಬೆಳಿಗ್ಗೆ ಹೊರೆ ಕಾಣಿಕೆ ಸಮರ್ಪಣೆ, ಸಂಜೆ 6:೦೦ ಗಂಟೆಗೆ ವಾಸ್ತು, ರಾಕ್ಷೋಘ್ನ, ನವಗ್ರಹ ಹೋಮ ವಾಸ್ತು ಬಲಿ, ದಿಗ್ಬಲಿ ಕಾರ್ಯಕ್ರಮ, ಮೇ 25 ರಂದು ಬೆಳಿಗ್ಗೆ ಗುರು ಗಣಪತಿ ಪೂಜೆ, ನಾಗಾಭಿಷೇಕ, ಬಳಿಕ ದೇವರಿಗೆ ನವಕ ಕಲಹೋಮ, ಅಭಿಷೇಕ, ಪ್ರಸನ್ನ ಪೂಜೆ, ದೇವರ ಪ್ರೀತ್ಯರ್ಥವಾಗಿ ಭದ್ರಕಾಳಿ ಹೋಮ, ಮಧ್ಯಾಹ್ನ ಪೂಜೆ ಪೂರ್ಣಾಹುತಿ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಬೆಳಿಗ್ಗೆ ನಿಡ್ಮಾರು ಶ್ರೀ ವಿಶ್ವಕರ್ಮ ಭಜನಾ ಮಂಡಳಿ, ಇರುವೈಲು ಶ್ರೀ ದುರ್ಗಾಪರಮೇಶ್ವರೀ ಭಜನಾ ಮಂಡಳಿ ಹಾಗೂ ಪುತ್ತೂರು ಶ್ರೀ ವಿಶ್ವಕರ್ಮ ಮಹಿಳಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ, ಸಂಜೆ ಎಣ್ಮೂರು ಸೀತಾರಾಮಾಂಜನೇಯ ಭಾರತಿ ಕುಣಿತ ಭಜನಾ ಮಂಡಳಿ ಮತ್ತು ಕಡಬ ಶ್ರೀರಾಮ ಮಹಿಳಾ ಮತ್ತು ಮಕ್ಕಳ ಕುಣಿತ ಭಜನಾ ಮಂಡಳಿ ಸಬಳೂರುರವರಿಂದ ಕುಣಿತ ಭಜನಾ ಕಾರ್ಯಕ್ರಮ ನಡೆಯಿತು.
ಶಾಸಕಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಮೇಲೆ ಮೊದಲು ಬಂದ ಕ್ಷೇತ್ರ
ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ, ನಾನು ಶಾಸಕಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಮೇಲೆ ಮೊದಲು ಬಂದ ಕ್ಷೇತ್ರವೇ ನನ್ನ ಊರಿನ ಕುಕ್ಕಟ್ಟೆ ಕ್ಷೇತ್ರ. ಕಳೆದ ವರ್ಷ ಕ್ಷೇತ್ರದ ಜೀರ್ಣೋದ್ಧಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೆ.ಕ್ಷೇತ್ರದ ಅಭಿವೃದ್ಧಿಗೆ ಸಹಕರಿಸುವುದಾಗಿ ಹೇಳಿದರು.