ಶಿರಾಡಿಯ ತಾಯಿ, ಮಗುವಿನ ಹತ್ಯೆ ಪ್ರಕರಣದ ಅಪರಾಧಿ ಜಯೇಶ್‌ನಿಂದ ಸಚಿವ ಗಡ್ಕರಿಗೆ ಕೊಲೆ ಬೆದರಿಕೆ ಪ್ರಕರಣ-ಎನ್‌ಐಎಯಿಂದ ಎಫ್‌ಐಆರ್

0

ಹಿಂಡಲಗಾ ಜೈಲಿನಿಂದಲೇ ಕರೆ ಮಾಡಿದ್ದ ಜಯೇಶ್ ಪೂಜಾರಿ
ಭಯೋತ್ಪಾದಕ ಸಂಘಟನೆಯೊಂದಿಗೆ ಸಂಪರ್ಕ ಹೊಂದಿರುವ ಬೆಂಗಳೂರುನ ನಾಲ್ವರೊಂದಿಗೆ ಸಂಪರ್ಕದಲ್ಲಿದ್ದೆ -ಜಯೇಶ್ ಮಾಹಿತಿ
ಮಹಾರಾಷ್ಟ್ರ ಪೊಲೀಸರಿಂದ ಎನ್‌ಐಎ ಜೊತೆ ಮಾಹಿತಿ ವಿನಿಮಯ
ಜಯೇಶ್ ಹೆಸರಿಸಿದ್ದ ನಾಲ್ವರ ವಿರುದ್ಧ ಎನ್‌ಐಎ ಎಫ್‌ಐಆರ್

ಬೆಂಗಳೂರು:ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಕೊಲೆ ಬೆದರಿಕೆ ಕರೆ ಪ್ರಕರಣದ ಕುರಿತು ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ಪ್ರತ್ಯೇಕ ಎಫ್‌ಐಆರ್ ದಾಖಲಿಸಿಕೊಂಡಿದ್ದು, ಈ ಮೂಲಕ ಪ್ರಕರಣದ ತನಿಖೆ ಹೊಸ ತಿರುವು ಪಡೆದುಕೊಂಡಿದೆ. 2008ರಲ್ಲಿ ಶಿರಾಡಿಯಲ್ಲಿ ನಡೆದಿದ್ದ ತಾಯಿ, ಮಗುವಿನ ಹತ್ಯೆ ಪ್ರಕರಣದ ಅಪರಾಧಿಯಾಗಿದ್ದು ಶಿಕ್ಷೆಗೆ ಗುರಿಯಾಗಿ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿರುವ ಜಯೇಶ್ ಯಾನೆ ಜಯೇಶ್‌ಕಾಂತ್ ಅಲಿಯಾಸ್ ಶಾಹೀರ್ ಅಲಿಯಾಸ್ ಶಾಕೀರ್ ಹಿಂಡಲಗಾ ಜೈಲಿನಿಂದಲೇ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ನಾಗ್ಪುರದ ಕಚೇರಿಗೆ ಬೆದರಿಕೆ ಕರೆ ಮಾಡಿದ್ದ ಎಂದು ಈಗಾಗಲೇ ನಾಗ್ಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ತಾನು ದಾವೂದ್ ಇಬ್ರಾಹಿಂ ತಂಡದ ಸದಸ್ಯನೆಂದು ಹೇಳಿಕೊಂಡು ಫೋನ್ ಮಾಡಿದ್ದ ಜಯೇಶ್ ಪೂಜಾರಿ ಯಾನೆ ಜಯೇಶ್‌ಕಾಂತ್ ಅಲಿಯಾಸ್ ಶಾಹೀರ್ ಯಾನೆ ಶಾಕೀರ್ ಕಳೆದ ಮಾ.21ರಂದು ಮಹಾರಾಷ್ಟ್ರದ ನಾಗ್ಪುರದಲ್ಲಿರುವ ಸಚಿವ ಗಡ್ಕರಿ ಅವರ ಕಚೇರಿಗೆ ಕರೆ ಮಾಡಿ ನಿತಿನ್ ಗಡ್ಕರಿಯವರಿಗೆ ಜೀವ ಬೆದರಿಕೆ ಹಾಕಿದ್ದ. ಜನವರಿ 14ರಂದು ಸಚಿವರ ಕಚೇರಿಗೆ ಕರೆ ಮಾಡಿ ಜೀವ ಬೆದರಿಕೆ ಒಡ್ಡುವುದರ ಜತೆಗೆ 10 ಕೋಟಿ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದ ಆರೋಪವಿದೆ.

ಬಾಂಬ್ ಇಡುವುದಾಗಿ ಬೆದರಿಕೆ: ನಾಗ್ಪುರದಲ್ಲಿರುವ ಗಡ್ಕರಿ ಕಚೇರಿಗೆ ಕರೆ ಮಾಡಿದ್ದ ಆರೋಪಿ, ಸಚಿವರು 100 ಕೋಟಿ ನೀಡದಿದ್ದರೆ ಬಾಂಬ್ ಇಡುವುದಾಗಿ ಬೆದರಿಕೆ ಹಾಕಿದ್ದ. ಈ ಸಂಬಂಧ ಮಹಾರಾಷ್ಟ್ರ ಪೊಲೀಸರು ಕೂಡಲೇ ತನಿಖೆ ಆರಂಭಿಸಿದ್ದರು. ಮಾರ್ಚ್ 21ರಂದು ನಾಗ್ಪುರದಲ್ಲಿರುವ ಸಚಿವರ ಸಾರ್ವಜನಿಕ ಸಂಪರ್ಕ ಕಚೇರಿಗೆ ಮತ್ತೆ ಮೂರು ಬಾರಿ ದೂರವಾಣಿ ಕರೆ ಬಂದಿದ್ದು, ಹಣ ಕೊಡದಿದ್ದರೆ ಹತ್ಯೆ ಮಾಡುವುದಾಗಿ ಸಚಿವರಿಗೆ ಬೆದರಿಕೆ ಹಾಕಲಾಗಿತ್ತು.

ಬೆದರಿಕೆ ಹಿನ್ನೆಲೆಯಲ್ಲಿ ನಾಗ್ಪುರ ಪೊಲೀಸರು ಗಡ್ಕರಿ ಅವರ ನಿವಾಸ ಮತ್ತು ಕಚೇರಿಗಳಿಗೆ ಬಿಗಿ ಭದ್ರತೆ ಒದಗಿಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ನಾಗ್ಪುರ ಪೊಲೀಸರು ಮಾರ್ಚ್ 28 ರಂದು ಹಿಂಡಲಗಾ ಜೈಲಿಗೆ ಭೇಟಿ ನೀಡಿ ವಿಚಾರಣೆ ನಡೆಸಿದ್ದರು. ಈ ವೇಳೆ ಜಯೇಶ್‌ನನ್ನು ವಶಕ್ಕೆ ಪಡೆದುಕೊಂಡು ಆತನಿಂದ ಒಂದು ಸೆಲ್ ಫೋನ್ ಮತ್ತು ಎರಡು ಸಿಮ್ ಕಾರ್ಡ್‌ಗಳನ್ನು ವಶಪಡಿಸಿಕೊಂಡಿದ್ದರು. ಇದೀಗ ಆತನನ್ನು ನಾಗ್ಪುರ ಜೈಲಿಗೆ ಸ್ಥಳಾಂತರಿಸಲಾಗಿದೆ ಎಂದು ತಿಳಿದುಬಂದಿದೆ. ಭಯೋತ್ಪಾದಕ ಸಂಘಟನೆಯೊಂದಿಗೆ ‘ಸಂಪರ್ಕ’ ಹೊಂದಿರುವ ಬೆಂಗಳೂರಿನ ನಾಲ್ವರೊಂದಿಗೆ ತಾನು ಸಂಪರ್ಕದಲ್ಲಿದ್ದೆ ಎಂದು ಜಯೇಶ್ ವಿಚಾರಣೆ ವೇಳೆ ಹೇಳಿ ತಪ್ಪೊಪ್ಪಿಕೊಂಡಿದ್ದ ಎಂದು ತಿಳಿದುಬಂದಿದೆ.

ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ಜಯೇಶ್: ನಿತಿನ್ ಗಡ್ಕರಿಯವರ ಕಚೇರಿಗೆ ಬೆದರಿಕೆ ಕರೆ ಮಾಡಿರುವ ಆರೋಪಿ ಜಯೇಶ್ 2008ರಲ್ಲಿ ಶಿರಾಡಿ ಗ್ರಾಮದ ಸಿರಿಬಾಗಿಲು ಪೊಲ್ಯೊಟ್ಟು ಎಂಬಲ್ಲಿ ತನ್ನ ದೊಡ್ಡಪ್ಪನ ಮಗ ಲೋಹಿತ್ ಅವರ ಪತ್ನಿ ಸೌಮ್ಯ ಮತ್ತು ಆಕೆಯ ಮೂರು ವರ್ಷ ಪ್ರಾಯದ ಮಗು ಜಿಷ್ಣುವನ್ನು ಕೊಲೆಗೈದ ಪ್ರಕರಣದ ಅಪರಾಧಿಯಾಗಿದ್ದಾನೆ. ತಾಯಿ, ಮಗುವಿನ ಹತ್ಯೆ ಪ್ರಕರಣದ ವಿಚಾರಣೆ ಪೂರ್ಣಗೊಳಿಸಿದ್ದ ಪುತ್ತೂರು ಐದನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಈತನಿಗೆ ಗಲ್ಲು ಶಿಕ್ಷೆ ವಿಧಿಸಿ 2016ರ ಆಗಸ್ಟ್ 12ರಂದು ತೀರ್ಪು ನೀಡಿತ್ತು.

ಎನ್‌ಐಎ ಜೊತೆ ಮಾಹಿತಿ ಹಂಚಿಕೊಂಡ ಪೊಲೀಸರು
ಬೆದರಿಕೆ ಹಾಕುವ ವೇಳೆ ಜಯೇಶ್, ತಾನು ದಾವೂದ್ ಇಬ್ರಾಹಿಂ ಗ್ಯಾಂಗ್‌ನ ಸದಸ್ಯ ಎಂದು ಹೇಳಿಕೊಂಡಿದ್ದ. ಮಹಾರಾಷ್ಟ್ರ ಪೊಲೀಸರು ಈ ಮಾಹಿತಿಯನ್ನು ಎನ್‌ಐಎ ಜತೆ ಹಂಚಿಕೊಂಡಿದ್ದಾರೆ.ಇದರಂತೆ ಜಯೇಶ್ ಹೆಸರಿಸಿರುವ ನಾಲ್ವರ ವಿರುದ್ಧ ಎನ್‌ಐಎ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

LEAVE A REPLY

Please enter your comment!
Please enter your name here