ಉಪ್ಪಿನಂಗಡಿ : ಆಧ್ಯಾತ್ಮಿಕತೆಯ ಸೆಳೆತ ವರ್ಣಾನಾತೀತ. ಎಲ್ಲಿಯ ಉಪ್ಪಿನಂಗಡಿ, ಎಲ್ಲಿಯ ಬೈಲಂಗಡಿ, ಎಲ್ಲಿಯ ನರ್ಮದೆ? ಒಂದಕ್ಕೊಂದು ಸಂಬಂಧವೇ ಇಲ್ಲದಿದ್ದರೂ, ಆಧ್ಯಾತ್ಮಿಕ ಲೋಕದಲ್ಲಿ ಎಲ್ಲದಕ್ಕೂ ಬೆಸುಗೆ ಮೂಡಿ ದೂರದ ನರ್ಮದಾ ನದಿಯ ಗರ್ಭದೊಳಗಿದ್ದ ಶಿವಲಿಂಗವನ್ನು ಬೆಳ್ತಂಗಡಿ ತಾಲೂಕಿನ ಬೈಲಂಗಡಿಯ ಸೋಮನಾಥೇಶ್ವರ ದೇವಾಲಯಕ್ಕೆ ತಂದೊಪ್ಪಿಸುವಲ್ಲಿ ಉಪ್ಪಿನಂಗಡಿಯ ಕೃಷ್ಣ ಶೆಣೈ ಪ್ರಧಾನ ಪಾತ್ರ ವಹಿಸಿರುವ ವಿಸ್ಮಯಕಾರಿ ಘಟನೆಯ ವರದಿ ಇದು. 800 ವರ್ಷಗಳ ಇತಿಹಾಸವುಳ್ಳ ಬೆಳ್ತಂಗಡಿ ತಾಲೂಕಿನ ಬೈಲಂಗಡಿ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಜೀರ್ಣೋದ್ದಾರ ಕಾರ್ಯಕ್ಕೂ ಮುನ್ನಾ ನಡೆಸಿದ ಅಷ್ಠಮಂಗಲ ಪ್ರಶ್ನಾ ಚಿಂತನೆಯಲ್ಲಿ ಭಗ್ನ ಗೊಂಡ ಶ್ರೀ ದೇವರ ಲಿಂಗದ ಬದಲು ನರ್ಮದಾ ನದಿ ಒಡಲಲ್ಲಿರುವ ಲಿಂಗ ಸ್ವರೂಪಿ ಶಿವನನ್ನು ಕರೆತಂದು ಪ್ರತಿಷ್ಠಾಪಿಸಬೇಕೆಂದು ತಿಳಿಸಲಾಗುತ್ತದೆ. ದೂರದ ಮಧ್ಯಪ್ರದೇಶದಲ್ಲಿನ ನರ್ಮದಾ ನದಿಗೆ ಹೋಗಬೇಕು. ಅಲ್ಲಿ ನದಿಯ ಒಡಲಲ್ಲಿರುವ ಲಿಂಗವನ್ನು ಹುಡುಕಿ ತರಬೇಕು. ಈ ಪ್ರಯಾಸದ ಕಾರ್ಯ ಅಸಾಧ್ಯವೆಂದೇ ಅರಿತ ಅಲ್ಲಿನ ಜನತೆಗೆ ಯಾರೋ ಉಪ್ಪಿನಂಗಡಿಯ ಕೃಷ್ಣ ಶೆಣೈ ಯವರ ಬಗ್ಗೆ ಮಾಹಿತಿ ನೀಡುತ್ತಾರೆ. ಅದರಂತೆ ಕೃಷ್ಣ ಶೆಣೈಯವರನ್ನು ಭೇಟಿ ಮಾಡಿದ ನಿಯೋಗ ಅವರ ಮನವೊಲಿಸಿ ಮಧ್ಯ ಪ್ರದೇಶಕ್ಕೆ ಕರೆದೊಯ್ದು ನರ್ಮದೆಯ ಒಡಲಲ್ಲಿದ್ದ ಶಿವಲಿಂಗವನ್ನು ಪ್ರಯಾಸದಿಂದ ಹುಡುಕಿ ತಂದು ಕಳೆದ ಮೇ17 ರಿಂದ 22 ರ ವರೆಗೆ ನಡೆದ ಪುನರ್ ಪ್ರತಿಷ್ಟೆ- ಅಷ್ಠಬಂಧ ಬ್ರಹ್ಮಕಲಶೋತ್ಸಕ್ಕೆ ಕಾರಣೀಕರ್ತರಾದ ಕೃಷ್ಣ ಶೆಣೈ ರವರದ್ದು ಆಧ್ಯಾತ್ಮಿಕ ಲೋಕದ ಸದ್ದಿಲ್ಲದ ನಡಿಗೆಯಲ್ಲಿ ಇದೊಂದು ಮಹತ್ವ ಪೂರ್ಣ ಕಾರ್ಯವೆನಿಸಿದೆ.
ಉಪ್ಪಿನಂಗಡಿಯ ಪತ್ರಿಕಾ ಏಜೆಂಟ್ ಪ್ರಸಾದ್ ಶೆಣೈ ಸಹೋದರನಾದ ಕೃಷ್ಣ ಶೆಣೈ ಅಪ್ರತಿಮ ಶಿವಭಕ್ತ ಗಡ್ಡಧಾರಿ ತರುಣ. ತೆಳ್ಳನೆಯ ದೇಹ, ಕಂಡಾಗಲೇ ಗೌರವಿಸಬೇಕೆಂಬ ಭಾವ ಮೂಡಿಸುವ ಮುಖ ತೇಜಸ್ಸು, ಮಿತಭಾಷಿ, ತಾನಾಯಿತು ತನ್ನ ಪಾಡಯಿತೆಂಬ ರೀತಿಯಲ್ಲಿ ಜೀವನ ನಡೆಸುವ ಇವರಿಗೆ ಯಾತ್ರೆ ಕೈಗೊಳ್ಳುವುದೆಂದರೆ ಬಲು ಪ್ರೀತಿ. ವರ್ಷಕ್ಕೆ ನಾಲ್ಕೈದು ಬಾರಿ ಉತ್ತರ ಭಾರತದ ಪುಣ್ಯ ತೀರ್ಥ ಕ್ಷೇತ್ರಗಳಿಗೆ ಯಾತ್ರೆ ಕೈಗೊಳ್ಳುವ ಇವರು, ತನ್ನೊಂದಿಗೆ ಆಸಕ್ತ ಭಕ್ತಾದಿಗಳನ್ನೂ ಕರೆದೊಯ್ಯುತ್ತಿರುತ್ತಾರೆ. 2009 ರಿಂದ ತೀರ್ಥ ಯಾತ್ರೆ ಕೈಗೊಳುತ್ತಿರುವ ಇವರು ಈ ವರೆಗೆ 120 ಕ್ಕೂ ಹೆಚ್ಚಿನ ಭಕ್ತಾದಿಗಳನ್ನು ಜೊತೆಯಲ್ಲಿ ಕರೆದೊಯ್ದಿದ್ದಾರೆ.
2009 ರಿಂದ ನಿರಂತರ ಕೇದಾರನಾಥನ ದರ್ಶನಗೈಯುವ ಇವರು, 2018 ರಿಂದ ಅಮರನಾಥ ಕ್ಷೇತ್ರಕ್ಕೂ ಯಾತ್ರೆ ಕೈಗೊಳ್ಳುತ್ತಿದ್ದಾರೆ. ಜೊತೆಗೆ ಬದರೀನಾಥ್, ಯಮುನೋತ್ರಿ, ಗಂಗೋತ್ರಿ, ಹೃಷಿಕೇಶ, ವಾರಣಾಶಿ, ವೈಷ್ಣೋದೇವಿ , ಗಯಾ ಮೊದಲಾದ ಉತ್ತರ ಭಾರತೀಯ ಪುಣ್ಯ ಕ್ಷೇತ್ರಕ್ಕೆ ಯಾತ್ರೆ ಕೈಗೊಂಡು ಹಿಮಾಲಯದ ತಪ್ಪಲಿನಲ್ಲಿ ದೊರಕುವ ವರ್ಣಾನಾತೀತ ಆಧ್ಯಾತ್ಮಿಕ ಸವಿಯನ್ನು ಆಸ್ವಾಧಿಸುತ್ತಿದ್ದಾರೆ.
ಇಂತಹ ಸಮಯದಲ್ಲಿ ಬೈಲಂಗಡಿ ದೇವಾಲಯದ ಬಂದ ಕೆಲವು ಮಂದಿ ಶಿವಲಿಂಗವನ್ನು ತರಲು ಸಹಕರಿಸಬೇಕೆಂದಾಗ ಮೊದಲು ಮನಸ್ಸು ಹಿಂಜರಿಯಿತು. ಬಳಿಕ ದೇವಾಲಯದ ಪುಣ್ಯ ಕಾರ್ಯಕ್ಕೆ ನನ್ನಿಂದಾದ ಕೊಡುಗೆ ಸಲ್ಲಿಸಲು ದೇವನೇ ಅವಕಾಶ ನೀಡಿದ್ದಾನೆಂದು ಭಾವಿಸಿ ಹೊರಡಲು ಅನುವಾದೆ. ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ ದೇವಾಲಯದ ಕಚೇರಿ ಸಿಬ್ಬಂದಿ ಕೃಷ್ಣಪ್ರಸಾದ್ , ಬೈಲಂಗಡಿ ದೇವಾಲಯದ ಮುಂದಾಳುಗಳಾದ ಲೋಕೇಶ್ ಶೆಟ್ಟಿ ಹಾಗೂ ಮೋಹನ್ ಗೌಡ ಜೊತೆಗೂಡಿ ಮೊದಲು ಕಾಶಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದೆವು. ಬಳಿಕ ಮಧ್ಯಪ್ರದೇಶದ ಓಂಕಾರೇಶ್ವರ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿ, ಅಲ್ಲಿನ ಮುಖ್ಯ ಪುರೋಹಿತರ ಸಲಹೆ ಪಡೆದು ದೋಣಿಯೊಂದನ್ನು ಬಾಡಿಗೆಗೆ ಗೊತ್ತು ಪಡಿಸಿ, ನರ್ಮದೆಯಲ್ಲಿ ಕಿ.ಮೀಗಳಷ್ಟು ದೂರ ಪ್ರಯಾಣಿಸಿ ಹುಡುಕಾಟ ನಡೆಸಿದೆವು. ನಮ್ಮ ಪ್ರಾರ್ಥನೆಗೆ ದೇವರ ಒಲುಮೆ ದೊರೆತು ಕೊನೆಗೂ ನದಿ ಗರ್ಭದಲ್ಲಿ ನೀರಿನಾಳದಲ್ಲಿದ್ದ ಶಿವಲಿಂಗವನ್ನು ಪತ್ತೆ ಹಚ್ಚಿ ಸಂಭ್ರಮಿಸಿದೆವು. ಬೈಲಂಗಡಿಯ ದೇವಾಲಯದವರ ಪರಿಚಯ ನನಗಿರಲಿಲ್ಲ. ನನ್ನ ಪರಿಚಯ ಅವರಿಗಿರಲಿಲ್ಲ. ಯಾರಿಂದಲೋ ತಿಳಿದು ನನ್ನನ್ನು ಸಂಪರ್ಕಿಸಿ ಶಿವಲಿಂಗವನ್ನು ತರುವ ಕಾರ್ಯವನ್ನು ನನ್ನಿಂದ ಮಾಡಿಸಲಾಗಿದೆ ಎಂದರೆ ಅದು ಶಿವನಾನುಗ್ರಹವಲ್ಲದೆ ಬೇರೇನೂ ಅಲ್ಲ ಎಂಬ ಕೃಷ್ಣ ಶೆಣೈಯವರ ಸಂತೃಪ್ತ ನುಡಿಯ ಹಿಂದೆ ಆಧ್ಯಾತ್ಮದ ಸವಿಯು ಪ್ರಕಟವಾದಂತಿತ್ತು. ದೇವಾಲಯದ ಬ್ರಹ್ಮಲಶೋತ್ಸವದ ಸಮಯದಲ್ಲಿ ಅಲ್ಲಿನ ಮಂದಿ ಅತೀವ ಗೌರವ ಭಾವದಿಂದ ನನ್ನನ್ನು ಸನ್ಮಾನಿಸಿ ಸಂಭ್ರಮಿಸಿದ್ದಾರೆ. ಅದೆಲ್ಲವನ್ನೂ ಶಿವನಿಗರ್ಪಿಸಿದ್ದೇನೆ ಎನ್ನುವ ಕೃಷ್ಣ ಶೆಣೈ ರವರ ಮಾತು ಅವರ ಭಕ್ತಿಯ ಆಳವನ್ನು ಅಭಿವ್ಯಕ್ತಪಡಿಸುತ್ತಿತ್ತು.
ಬರಹ :ಯು ಎಲ್ ಉದಯ ಕುಮಾರ್