ಸಿದ್ಧರಾಮಯ್ಯರವರೇ, ರಾಹುಲ್ ಗಾಂಧಿಯವರೇ ಗ್ಯಾರಂಟಿ ಕಾರ್ಡ್ ಸಹಾಯ ಮಾಡಿದೆ, ಆದರೆ ಭ್ರಷ್ಟಾಚಾರವೇ ಬಿಜೆಪಿಗೆ ಮುಳುವಾಗಿರುವುದು

0

ಅನಗತ್ಯ ವಿಷಯ ಎಳೆದುಕೊಳ್ಳದೆ, — ಬಾಯಿ ಮುಚ್ಚಿಕೊಂಡು ಜನರ ಸಮಸ್ಯೆ ಪರಿಹರಿಸಿ, ವಿಶ್ವಾಸ ಗಳಿಸಿರಿ

ಪ್ರದೀಪ್ ಈಶ್ವರ್‌ರವರು ಡಾ. ಸುಧಾಕರರನ್ನು ಸೋಲಿಸಿದ್ದು ಹೇಗೆ ಮತ್ತು ಯಾಕೆ ಎಂಬುದನ್ನು ಅರಿತರೆ ಅದು ರಾಜ್ಯಕ್ಕೆ ಮಾದರಿಯಾಗಬಹುದು
ಸಿದ್ಧರಾಮಯ್ಯರ ಸರಕಾರ 10% ಸರಕಾರ ಎಂದು ಹಿಂದಿನ ಅವಧಿಯಲ್ಲಿ ಮೋದಿಜೀಯವರು ಕಾಂಗ್ರೆಸ್‌ನ್ನು ತರಾಟೆಗೆ ತೆಗೆದುಕೊಂಡಿದ್ದರು. ಕಾಂಗ್ರೆಸ್ ಅಂದರೆ ಭ್ರಷ್ಟಾಚಾರದ ಗಂಗೋತ್ರಿ ಎಂದು ಪ್ರಚಾರ ಇದ್ದುದರಿಂದ, ಮೋದೀಜೀಯವರು ನಂಜನಗೂಡಿನಲ್ಲಿ ಭಾಷಣದಲ್ಲಿ ತಮ್ಮ ಪಕ್ಷದ ಭ್ರಷ್ಟಾಚಾರವನ್ನು ಉಲ್ಲೇಖಿಸದೆ ಕಾಂಗ್ರೆಸ್ 85% ಭ್ರಷ್ಟಾಚಾರದ ಸರಕಾರ ಅದನ್ನು ಆರಿಸಬೇಡಿ ಎಂದು ಹೇಳಿದ್ದರು. ಆದರೆ ಬಿಜೆಪಿಯ ಸರಕಾರದ 40% ಭ್ರಷ್ಟಾಚಾರದ ಅನುಭವ ರಾಜ್ಯದ ಜನರಿಗೆ, ಸ್ಥಳೀಯವಾಗಿಯೂ ಇದ್ದುದರಿಂದ ಅಮಿತ್ ಷಾ, ಮೋದೀಜೀಯವರು, ಯೋಗೀಜೀಯವರು, ಚಲನಚಿತ್ರ ತಾರೆಯರು, ಪ್ರಚಾರ ಮಾಡಿದರೂ ಜನರು ಅದನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ. ಸಾಮಾನ್ಯ ಜನರು ಭ್ರಷ್ಟಾಚಾರದಿಂದ ನಲುಗಿರುವುದು ಮಾತ್ರವಲ್ಲ ಬಿಜೆಪಿಯಲ್ಲಿ ಬಹುಕಾಲ ದುಡಿದ ಹಿರಿಯರು ಭ್ರಷ್ಟಾಚಾರ ತೊಲಗಲಿ ಎಂದು ಹಿಡಿಶಾಪ ಹಾಕುತ್ತಿದ್ದುದು ಕಾಂಗ್ರೆಸ್‌ನ ಗೆಲುವಿಗೆ, ಬಿಜೆಪಿಯ ಘಟಾನುಘಟಿ ನಾಯಕರ ಸೋಲಿಗೆ ಕಾರಣವಾಗಿದೆ ಮತ್ತು ಸಾಮಾಜಿಕ ನ್ಯಾಯದ ಗ್ಯಾರಂಟಿ ಕಾರ್ಡ್ ಗೆಲುವಿಗೆ ಸಹಕಾರವಾಗಿದೆ ಎಂದರೆ ತಪ್ಪಾಗಲಾರದು.

ಈ ಚುನಾವಣೆಯವರೆಗೆ ರಾಜಕೀಯದಲ್ಲಿ ಅನಾಮಿಕ ವ್ಯಕ್ತಿಯಾಗಿದ್ದ ಪ್ರದೀಪ್ ಈಶ್ವರ್‌ರವರು ಚಿಕ್ಕಬಳ್ಳಾಪುರದಲ್ಲಿ ಡಾ. ಸುಧಾಕರ್ ಎಂಬ ದೈತ್ಯ ನಾಯಕನನ್ನು ಯಾರದೇ ಸಹಾಯವಿಲ್ಲದೆ ಸೋಲಿಸಿರುವುದು ತಮಗೆಲ್ಲಾ ತಿಳಿದಿದೆ. ಅವರ ಸಂದರ್ಶನ ನೋಡಿದರೆ ಸರಕಾರದಲ್ಲಿ ಭ್ರಷ್ಟಾಚಾರ ಮಾಡಿದ್ದ, ಅಹಂಕಾರಿಯಾಗಿದ್ದ, ಜನರಿಂದ ದೂರವಾಗಿದ್ದ ಕಾರಣಕ್ಕೆ ಸುಧಾಕರ್‌ರವರು ಸೋತಿದ್ದಾರೆ. ಜನರು ಓಟಿಗೆಂದು ಅವರಿಂದ ಹಣ ಪಡೆದಿದ್ದಾರೆ ಓಟು ನನಗೆ ನೀಡಿದ್ದಾರೆ ಎಂದು ಹೇಳಿರುವುದಲ್ಲದೆ ತಾನು ಜನರ ಸಮಸ್ಯೆ ಪರಿಹರಿಸುತ್ತೇನೆ. ಜನರ ನಡುವೆ ಇರುತ್ತೇನೆ. ಬೇರೆ ಯಾವ ಯೋಜನೆಗಳು ನನ್ನಲ್ಲಿ ಸದ್ಯಕ್ಕೆ ಇಲ್ಲ ಎಂದು ಹೇಳಿರುವುದು ರಾಜಕೀಯದಲ್ಲಿ ಸಂಚಲನ ಉಂಟು ಮಾಡಿದೆ. ಸುಧಾಕರರನ್ನು ಎಲ್ಲಿ ನಿಂತರೂ ಸೋಲಿಸುತ್ತೇನೆ ಎಂಬ ಅವರ ಹೇಳಿಕೆಯನ್ನು, ಅದಕ್ಕೆ ಅವರು ನೀಡಿದ ಕಾರಣವನ್ನು ಗೆದ್ದ ಮತ್ತು ಸೋತ ಎಲ್ಲಾ ಅಭ್ಯರ್ಥಿಗಳು ಗಮನಿಸಬೇಕು. ಎಲ್ಲಾ ಪಕ್ಷಗಳ ಆಡಳಿತಕ್ಕೆ , ರಾಜ್ಯಕ್ಕೆ ಅದು ಮಾದರಿಯಾಗಬೇಕು ಎಂದು ಬಯಸುತ್ತೇನೆ.
ಲಂಚ, ಭ್ರಷ್ಟಾಚಾರದ ವಿರುದ್ಧ ನಾವು ಮಾಡುತ್ತಿರುವ ಜನಾಂದೋಲನದ ಬಗ್ಗೆ ಮತದಾರರಲ್ಲಿ ಜಾಗೃತಿ ಮೂಡಿಸಲು ನಾನು ಮಾಜಿ ಮುಖ್ಯಮಂತ್ರಿ ಹಾಗೂ ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯರ ಕ್ಷೇತ್ರ ವರುಣಾದಲ್ಲಿ ಮತ್ತು ಹಾಲಿ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿಯವರ ಕ್ಷೇತ್ರ ಶಿಗ್ಗಾಂವಿಯಲ್ಲಿ ಸ್ಪರ್ಧಿಸಿದ್ದೆ. ಅಲ್ಲಿ ನಾನು ನನಗಾಗಿ ಓಟು ಕೇಳಿರಲಿಲ್ಲ. ಅಲ್ಲಿ ನಿಂತ ಅಭ್ಯರ್ಥಿಗಳು ಲಂಚ, ಭ್ರಷ್ಟಾಚಾರ ನಿಲ್ಲಿಸುತ್ತೇವೆ ಎಂಬ ಘೋಷಣೆ ಮಾಡಬೇಕು. ಲಂಚವಾಗಿ ಅಧಿಕಾರಿಗಳು ಜನರಿಂದ ಪಡೆದ ಹಣವನ್ನು ಜನರಿಗೆ ಹಿಂತಿರುಗಿಸುವಂತೆ ಅಭ್ಯರ್ಥಿಗಳಲ್ಲಿ ಕೇಳಬೇಕು ಎಂದು ಅಲ್ಲಿಯ ಮತದಾರರಲ್ಲಿ ವಿನಂತಿಸಿದ್ದೆ. ಅದಕ್ಕೆ ಸಂಬಂಧಿಸಿದ್ದ ಕರಪತ್ರವನ್ನು, ಲಂಚ-ಭ್ರಷ್ಟಾಚಾರದ ವಿರುದ್ಧದ ಫಲಕವನ್ನು ಎರಡೂ ಕ್ಷೇತ್ರದಲ್ಲೂ ನೀಡಿದ್ದೆ. ಶಿಗ್ಗಾಂವಿ ಹಾಗೂ ವರುಣಾದಲ್ಲಿ ಎರಡು ಕಡೆಯೂ ಭ್ರಷ್ಟಾಚಾರವಿದೆ ಎಂದು ಅಲ್ಲಿಯ ಜನರು ಒಪ್ಪಿಕೊಂಡಿದ್ದಾರೆ. ನಮ್ಮ ಆಂದೋಲನಕ್ಕೆ ಬೆಂಬಲವಾಗಿ ಫಲಕದೊಂದಿಗೆ ಫೊಟೋ ತೆಗೆಸಿಕೊಂಡಿದ್ದಾರೆ. ಕೆಲವು ಕಡೆ ಉಚಿತ ಊಟ, ತಿಂಡಿಗಳನ್ನು ನಮಗೆ ನೀಡಿದ್ದಾರೆ. ವ್ಯಾಪಕವಾಗಿರುವ ಭ್ರಷ್ಟಾಚಾರ ನಿಂತು ಜನರಿಗೆ ಉತ್ತಮ ಸೇವೆ ದೊರಕುವಂತ ಆಡಳಿತ ಬರಲಿ ಎಂಬ ಆಶಯವನ್ನು ಹಂಚಿಕೊಂಡಿದ್ದಾರೆ.
ಚುನಾವಣಾ ಫಲಿತಾಂಶ ಬಂದ ಕೂಡಲೇ ಸಿದ್ಧರಾಮಯ್ಯ ಹಾಗೂ ರಾಹುಲ್ ಗಾಂಧಿಯವರು ಭ್ರಷ್ಟಾಚಾರ ನಿಲ್ಲಿಸುತ್ತೇವೆ ಎಂಬ ಘೋಷಣೆ ಕೂಗಿರುವುದು ನಮಗೆ ಅತ್ಯಂತ ಸಂತೋಷ ಕೊಟ್ಟಿದೆ. ಈ ಹಿನ್ನಲೆಯಲ್ಲಿ ಸರಕಾರ ರಚನೆಯಾದ ಮೇಲೆ ಸಿದ್ಧರಾಮಯ್ಯರ ಕ್ಷೇತ್ರ ವರುಣಾದಲ್ಲಿ, ಬೊಮ್ಮಾಯಿಯವರ ಕ್ಷೇತ್ರ ಶಿಗ್ಗಾಂವಿಯಲ್ಲಿ ಲಂಚ, ಭ್ರಷ್ಟಾಚಾರದ ನಿರ್ಮೂಲನೆಯಾಗಿ ಉತ್ತಮ ಸೇವೆ ದೊರಕುವಂತಾದರೆ ಅದು ರಾಜ್ಯಕ್ಕೆ ಮಾದರಿಯಾಗುವುದು ಮಾತ್ರವಲ್ಲ, ರಾಜ್ಯದ ಎಲ್ಲ ಕ್ಷೇತ್ರಗಳಿಗೆ ಹರಡುತ್ತದೆ ಎಂಬ ನಂಬಿಕೆಯಿಂದ ನಮ್ಮ ಲಂಚ, ಭ್ರಷ್ಟಾಚಾರದ ವಿರುದ್ಧದ ಜನಾಂದೋಲನವನ್ನು ಅಲ್ಲಿ ಪ್ರಥಮವಾಗಿ ಕೈಗೆತ್ತಿಕೊಳ್ಳಬೇಕೆಂದು ಬಯಸಿzನೆ.
ಈ ಸಲದ ಚುನಾವಣೆಯಲ್ಲಿ ಸೋತ ಮತ್ತು ಗೆದ್ದ ಅಭ್ಯರ್ಥಿಗಳನ್ನು ನೋಡಿದರೆ ಜನಪ್ರತಿನಿಧಿ ರಾಜನಾಗಬಾರದು, ಅಧಿಕಾರಿಗಳು ದಬ್ಬಾಳಿಕೆ ನಡೆಸಬಾರದು, ಜನರೇ ರಾಜರಾಗಬೇಕು ಎಂಬ ಜಾಗೃತಿ ಮತದಾರರಲ್ಲಿ ಉಂಟಾಗಿದೆ ಎಂಬ ನಂಬಿಕೆ ನನಗೆ ಬಂದಿದೆ. ಚಿಕ್ಕಾಬಳ್ಳಾಪುರ ಕ್ಷೇತ್ರದಲ್ಲಿ ಪ್ರದೀಪ್ ಈಶ್ವರರ ಗೆಲುವು ಮತ್ತು ಅವರ ನಿಲುವು ಆಶಾ ಭಾವನೆಯನ್ನು ಉಂಟು ಮಾಡಿದೆ. ಜನರು ವಿಶ್ವಾಸ ನೀಡಿ ಗೆಲ್ಲಿಸಿರುವ ಸಿದ್ಧರಾಮಯ್ಯರ ಸರಕಾರ ತಮ್ಮ ಜೀವನದಲ್ಲಿ ಸಿಕ್ಕಿರುವ ದೊಡ್ಡ ಅವಕಾಶವನ್ನು ಕಳೆದುಕೊಳ್ಳದೆ, ಅನಗತ್ಯ ವಿವಾದಗಳನ್ನು ಮೈಮೇಲೆ ಎಳೆದುಕೊಂಡು ಸಮಯ ಹಾಳುಮಾಡದೆ, ಜನರ ವಿಶ್ವಾಸ ಪಡೆದುಕೊಂಡು ಯೋಜನೆಗಳು ಜನರ ಸಹಭಾಗಿತ್ವದಿಂದ ನಡೆಯುವಂತೆ ನೋಡಿಕೊಳ್ಳಲಿ. ಮಹಾತ್ಮಾ ಗಾಂಧಿಯವರ ‘ಗ್ರಾಮ ಸ್ವರಾಜ್ಯದ ಹಳ್ಳಿಯಿಂದ ಡೆಲ್ಲಿಗೆ ಆಡಳಿತ’ ಅನುಷ್ಠಾನಗೊಳ್ಳಲಿ ಎಂದು ಹಾರೈಸುತ್ತೇನೆ.
ಕಾಂಗ್ರೆಸ್ ಪಕ್ಷದ ಗೆಲುವಿಗೆ ಗ್ಯಾರಂಟಿ ಕಾರ್ಡ್ ಕಾರಣ ಎಂದು ಪ್ರತಿಪಕ್ಷಗಳು ಯೋಚಿಸುವುದಾದರೆ ತಾವು ಮಾಡಿರುವ ಲೇವಡಿಯನ್ನು, ತಪ್ಪನ್ನು ಅರಿತುಕೊಂಡು, ಗೊಂದಲ ಉಂಟುಮಾಡದೆ ಅದನ್ನು ಜನರಿಗೆ ದೊರಕುವಂತೆ ಮಾಡಲಿ. ಆಡಳಿತ ಪಕ್ಷಕ್ಕೆ ಸಮಯಾವಕಾಶವನ್ನು ನೀಡುವುದಲ್ಲದೆ ಅದನ್ನು ಹೇಗೆ ಜನರಿಗೆ ನೀಡಬಹುದು ಎಂಬ ಬಗ್ಗೆ ಸಲಹೆ ಸೂಚನೆಗಳನ್ನು ನೀಡಿ ಜನರಿಗೆ ಪ್ರಯೋಜನ ದೊರಕುವಂತೆ ಮಾಡಲಿ. ಒಂದು ವೇಳೆ ಆಡಳಿತ ಪಕ್ಷದಿಂದ ಸಾಧ್ಯವಾಗದೇ ಇದ್ದರೆ ತಾವು ಅದನ್ನು ನೀಡಲು ಬದ್ಧರೇ ಅಥವಾ ತಾವು ಅಧಿಕಾರಕ್ಕೆ ಬಂದರೆ ಅದನ್ನು ಹಿಂತೆಗೆದುಕೊಳ್ಳುತ್ತೇವೆಯೇ ಎಂಬ ಬಗ್ಗೆಯೂ ಜನರಿಗೆ ಸ್ಪಷ್ಟನೆ ನೀಡಲಿ. ಗೊಂದಲಗಳನ್ನು ಮಾಡದೆ ಜನರಿಗೆ ಭ್ರಷ್ಟಾಚಾರ ರಹಿತ ಆಡಳಿತ ದೊರಕುವಂತೆ ಮಾಡುವುದನ್ನು ಆದ್ಯತೆಯಾಗಿ ತೆಗೆದುಕೊಳ್ಳಲಿ ಎಂದು ವಿನಂತಿಸುತ್ತೇನೆ.

LEAVE A REPLY

Please enter your comment!
Please enter your name here