ಸವಣೂರು ಸೀತಾರಾಮ ರೈಯವರಿಗೆ ದುಬೈಯಲ್ಲಿ ಸನ್ಮಾನ-ಅಮೃತ ರಶ್ಮಿ ಪುಸ್ತಕ ಬಿಡುಗಡೆ

0

ಸವಣೂರು ಅಭಿವೃದ್ಧಿಯಾಗಬೇಕೆನ್ನುವುದು ನನ್ನ ಧ್ಯೇಯವಾಗಿತ್ತು-ಸೀತಾರಾಮ ರೈ

ಪುತ್ತೂರು: ಪೇಟೆ ಪಟ್ಟಣಗಳಲ್ಲಿ ಸಿಗುವ ಗುಣಮಟ್ಟದ ವಿದ್ಯಾಭ್ಯಾಸ ನಮ್ಮ ಸವಣೂರು ಗ್ರಾಮದಲ್ಲಿ ಸಿಗಬೇಕು, ಸವಣೂರು ಅಭಿವೃದ್ಧಿಯಾಗಬೇಕು, ನಮ್ಮೆಲ್ಲರಲ್ಲಿ ಒಗ್ಗಟ್ಟಿರಬೇಕು, ಜಾತ್ಯತೀತತೆ ಬೆಳೆಯಬೇಕು ಇದು ನನ್ನ ಧ್ಯೇಯವಾಗಿತ್ತು ಎಂದು ವಿದ್ಯಾರಶ್ಮಿ ವಿದ್ಯಾ ಸಂಸ್ಥೆಗಳ ಸಂಸ್ಥಾಪಕ, ಸವಣೂರಿನ ಶಿಲ್ಪಿ, ಸವಣೂರು ಸೀತಾರಾಮ ರೈ ಅವರು ದುಬೈಯಲ್ಲಿ ಹೇಳಿದರು.

ದುಬೈ ನಗರದ ಐಬಿಸ್ ಹೋಟೆಲ್ ಸಭಾಂಗಣದಲ್ಲಿ ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮ ಮತ್ತು ಅಮೃತರಶ್ಮಿ ಪುಸ್ತಕ ಬಿಡುಗಡೆ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು. ವಿದ್ಯಾರಶ್ಮಿ ವಿದ್ಯಾಸಂಸ್ಥೆಯ ನಿರ್ಮಾಣಕ್ಕೆ ಮೊದಲು ಸವಣೂರಿನಲ್ಲಿ ಹಿರಿಯ ಪ್ರಾಥಮಿಕ ಶಾಲೆ, ಪ್ರೌಢ ಶಾಲೆ ಮತ್ತು ಪದವಿ ಪೂರ್ವ ಕಾಲೇಜು, ಸಹಕಾರಿ ಸಂಘ ಇತರ ಸ್ಥಾಪನೆಗೆ ಹೆಚ್ಚು ಶ್ರಮ ವಹಿಸಿ ಕೆಲಸ ಮಾಡಿರುವುದು ನಮ್ಮೂರಿನ ಜನರ ಏಳಿಗೆ, ಪ್ರೀತಿ ಮತ್ತು ಸಂತೋಷಕ್ಕಾಗಿಯಾಗಿದೆ. ನಾವು ಪರಸ್ಪರ ಶಾಂತಿ, ಸೌಹಾರ್ದತೆಯಿಂದ ಅನ್ಯೋನ್ಯವಾಗಿ ಬಾಳಬೇಕು. ಜನರ ಪ್ರೀತಿ ಮತ್ತು ಸಂತೋಷ ಎಲ್ಲಕ್ಕಿಂತ ಮಿಗಿಲು ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಅನಿವಾಸಿ ಸಂಘ ಸಂಸ್ಥೆಗಳ ವತಿಯಿಂದ ಉದ್ಯಮಿ, ಬೆಳಂದೂರು ಈಡನ್ ಗ್ಲೋಬಲ್ ಶಾಲೆಯ ಅಧ್ಯಕ್ಷ ಅಶ್ರಫ್ ಶಾ ಮಾಂತೂರು ಅವರ ನೇತೃತ್ವದಲ್ಲಿ ಸೀತಾರಾಮ ರೈ ಸವಣೂರು ಅವರನ್ನು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ನಂತರ ಅಮೃತರಶ್ಮಿ ಪುಸ್ತಕ ಬಿಡುಗಡೆ ಮಾಡಲಾಯಿತು.

ಅಶ್ರಫ್ ಶಾ ಮಾಂತೂರು ಮಾತನಾಡಿ, ಸವಣೂರು ಸೀತಾರಾಮ ರೈ ಅವರ ವಿದ್ಯಾ ಸಂಸ್ಥೆಯಲ್ಲಿ ಯಾವುದೇ ತಾರತಮ್ಯವಿಲ್ಲದೆ ಸಾಮಾನ್ಯ ಕುಟುಂಬದ ಮಕ್ಕಳು ಕಳೆದ ಹಲವಾರು ವರ್ಷಗಳಿಂದ ಉತ್ತಮ ಶಿಕ್ಷಣ ಪಡೆಯುತ್ತಿದ್ದಾರೆ. ಸವಣೂರಿನ ಹೃದಯ ಭಾಗದಲ್ಲಿ ಸುಮಾರು 25 ಎಕರೆ ವಿಶಾಲವಾದ ಪ್ರದೇಶದಲ್ಲಿ ವಿದ್ಯಾ ಸಂಸ್ಥೆಗಳನ್ನು ಕಟ್ಟಿ ಮುನ್ನಡೆಸಲು ಸವಣೂರು ಸೀತಾರಾಮ ರೈ ಅವರ ಪರೋಪಕಾರಿ, ತ್ಯಾಗಮಯ ಮತ್ತು ಶ್ರೀಮಂತ ಸ್ವಭಾವ ಗುಣವೇ ಕಾರಣ, ಪರಮಾತ್ಮನು ಇನ್ನಷ್ಟು ಕಾಲ ಸಾಮಾಜಿಕ ಕಾರ್ಯಗಳಿಗೆ ನೇತೃತ್ವ ವಹಿಸಲು ಸೀತರಾಮ ರೈಯವರಿಗೆ ದೀರ್ಘಾಯುಷ್ಯ, ಆರೋಗ್ಯ ಕರುಣಿಸಲಿ ಎಂದು ಅವರು ಹಾರೈಸಿದರು.

ಕರ್ನಾಟಕ ಇಸ್ಲಾಮಿಕ್ ಸೆಂಟರ್ ಯುಎಇ ಸಮಿತಿ ಅಧ್ಯಕ್ಷ ಅಬ್ದುಲ್ ಖಾದರ್ ಬೈತಡ್ಕ, ಮಾಡನ್ನೂರು ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿ ಯುಎಇ ಸಮಿತಿ ಅಧ್ಯಕ್ಷ ಶೆರೀಫ್ ಕಾವು, ಜಬ್ಬಾರ್ ಬೈತಡ್ಕ ಮೊದಲಾದವರು ಮಾತನಾಡಿ ಶುಭ ಹಾರೈಸಿದರು.

ವಿದ್ಯಾರಶ್ಮಿ ಸಂಸ್ಥೆಯ ವ್ಯವಸ್ಥಾಪಕರಾದ ಅಶ್ವಿನ್ ಶೆಟ್ಟಿ, ಪದ್ಮನಾಭ ಶೆಟ್ಟಿ, ಭಾಸ್ಕರ್ ಸೋಂಪಾಡಿ, ಅಬ್ದುಲ್ ಸಲಾಮ್ ಬಪ್ಪಳಿಗೆ, ರಝಾಕ್ ಹಾಜಿ ಮಣಿಲ, ಶರೀಫ್ ಕೊಡಿನೀರು, ಅನ್ವರ್ ಮಣಿಲ, ಅಝೀಝ್ ಸೋಂಪಾಡಿ, ಆಸಿಫ್ ಮರೀಲ್, ಅಲಿ ಮಣಿಲ, ರಫೀಕ್ ಸೋಂಪಾಡಿ, ಹಾರಿಸ್ ಸವಣೂರು, ಹನೀಫ್ ಮಜಲು, ರಿಯಾಝ್ ಸವಣೂರು, ಆರಿಫ್ ಕೂರ್ನಡ್ಕ, ಜಾಬಿರ್ ಬೆಟ್ಟಂಪಾಡಿ, ನಾಸಿರ್ ಬಪ್ಪಳಿಗೆ, ಜಾಬಿರ್ ಬಪ್ಪಳಿಗೆ ಉಪಸ್ಥಿತರಿದ್ದರು. ನೂರ್ ಮುಹಮ್ಮದ್ ನೀರ್ಕಜೆ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here