@ ಸಿಶೇ ಕಜೆಮಾರ್
ಪುತ್ತೂರು: ಸುಳ್ಯ, ಪುತ್ತೂರು ಮತ್ತು ಕಡಬ ತಾಲೂಕುಗಳ 68 ಗ್ರಾಮ ಪಂಚಾಯಿತಿಗಳಲ್ಲಿ ಸಂಗ್ರಹವಾಗುವ ಒಣತ್ಯಾಜ್ಯವನ್ನು ಸಂಗ್ರಹಿಸಿ ಮರುಬಳಕೆ ಯೋಗ್ಯವಾಗಿಸುವ ಅತ್ಯಂತ ವೈಜ್ಞಾನಿಕವಾದ ಸಮಗ್ರ ಒಣತ್ಯಾಜ್ಯ ನಿರ್ವಹಣಾ ಘಟಕ (ಎಂಆರ್‌ಎಫ್) ಕೆದಂಬಾಡಿ ಗ್ರಾಮದ ತಿಂಗಳಾಡಿ ಸಮೀಪದ ಬೋಳೋಡಿಯಲ್ಲಿ ನಿರ್ಮಾಣಗೊಂಡಿದೆ. ಈ ಘಟಕ ನಿರ್ಮಾಣಕ್ಕೆ 2022ರ ನ. 18ರಂದು ಅಂದಿನ ಶಾಸಕ ಸಂಜೀವ ಮಠಂದೂರು ಶಂಕುಸ್ಥಾಪನೆ ಮಾಡಿದ್ದರು. 7 ತಿಂಗಳಲ್ಲಿ ಘಟಕದ ನಿರ್ಮಾಣ ಕಾಮಗಾರಿ ಸಂಪೂರ್ಣಗೊಂಡಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಜಿಲ್ಲೆಯ ಎಡಪದವಿನಲ್ಲಿ ಮೊದಲ ಘಟಕ ನಿರ್ಮಾಣಗೊಂಡಿದ್ದು ಕೆದಂಬಾಡಿಯ ಬೋಳೋಡಿಯಲ್ಲಿ ನಿರ್ಮಾಣಗೊಂಡಿರುವುದು ದಕ. ಜಿಲ್ಲೆಯ 2ನೇ ಎಫ್‌ಆರ್‌ಎಫ್ ಘಟಕ ಆಗಿದೆ.
5 ಟನ್ ಸಾಮರ್ಥ್ಯ
ಬೋಳೋಡಿಯಲ್ಲಿ ನಿರ್ಮಾಣಗೊಂಡಿರುವುದು 5 ಟನ್ ಸಾಮರ್ಥ್ಯದ ಘಟಕ ಆಗಿದ್ದು, ಸುಳ್ಯ, ಪುತ್ತೂರು ಮತ್ತು ಕಡಬ ತಾಲೂಕುಗಳ 68 ಗ್ರಾಪಂಗಳಿಂದ ನಿತ್ಯವೂ ಘನ ತ್ಯಾಜ್ಯವನ್ನು ವಾಹನಗಳ ಮೂಲಕ ತರಿಸಿಕೊಂಡು ಈ ಮೆಟೀರಿಯಲ್ಸ್ ರಿಕವರಿ ಫೆಸಿಲಿಟಿ (ಎಂಆರ್‌ಎಫ್)ನಲ್ಲಿ ನಿರ್ವಹಣೆ ಮಾಡಲಾಗುತ್ತದೆ.
1.95 ಕೋಟಿ ರೂ.ವೆಚ್ಚದ ಯೋಜನೆ ಇದಾಗಿದೆ
ಕೆದಂಬಾಡಿ ಗ್ರಾಪಂನ ಕೇಂದ್ರಭಾಗವಾದ ತಿಂಗಳಾಡಿಯಿಂದ 3 ಕಿ.ಮೀ. ದೂರದಲ್ಲಿರುವ ಬೋಳೋಡಿ ಎಂಬಲ್ಲಿ 1 ಎಕರೆ ಗೋಮಾಳ ಜಾಗವನ್ನು ಇದಕ್ಕಾಗಿ ನೀಡಲಾಗಿದೆ. 1.95 ಕೋಟಿ ರೂ. ವೆಚ್ಚದ ಯೋಜನೆ ಇದಾಗಿದೆ. ಕಾರ್ಕಳದ ನಿಟ್ಟೆಯಲ್ಲಿ 10 ಟನ್ ಸಾಮರ್ಥ್ಯದ ಎಂಆರ್‌ಎಫ್ 2 ವರ್ಷದಿಂದ ಕಾರ್ಯನಿರ್ವಹಿಸುತ್ತಿದೆ. ಪೈಲಟ್ ಯೋಜನೆಯಡಿಯಲ್ಲಿ ಎಡಪದವಿನಲ್ಲಿ ದಕ್ಷಿಣ ಕನ್ನಡದ ಮೊದಲ ಘಟಕ ನಿರ್ಮಾಣಗೊಂಡಿದ್ದು, ೨ನೇ ಘಟಕ ಇದಾಗಿದೆ.
ತ್ಯಾಜ್ಯ ಡಂಪಿಂಗ್ ಇಲ್ಲ..
ಗ್ರಾಮೀಣ ಪ್ರದೇಶದಲ್ಲಿ ಹಸಿ ತ್ಯಾಜ್ಯಗಳು ಮನೆಮನೆ ವಠಾರದಲ್ಲೇ ವಿಲೇವಾರಿ ಆಗುತ್ತಿದ್ದು, ಒಣ ಕಸ, ಪ್ಲಾಸ್ಟಿಕ್ ಕಸ ಇತ್ಯಾದಿಗಳನ್ನು ಸಂಗ್ರಹಿಸಿ 68 ಗ್ರಾಪಂಗಳಿಂದ ಇಲ್ಲಿಗೆ ಕಳಿಸಲಾಗುತ್ತದೆ. ಪ್ರತೀ ದಿನ 5000 ಕೆ.ಜಿ. ಕಸವನ್ನು ಇಲ್ಲಿ 30 ಬಗೆಯಲ್ಲಿ ವಿಂಗಡಣೆ ಮಾಡಿ ಮರು ಉತ್ಪನ್ನಕ್ಕೆ ಯೋಗ್ಯವಾಗಿಸಲಾಗುತ್ತದೆ. ಇದಕ್ಕಾಗಿ ಯಂತ್ರ ಹಾಗೂ ಶ್ರಮಿಕರು ಕೆಲಸ ಮಾಡಲಿದ್ದಾರೆ. ಮರುಉತ್ಪನ್ನ ಯೋಗ್ಯ ಬಂಡಲ್‌ಗಳನ್ನು ಕಾರ್ಖಾನೆಗಳಿಗೆ ಮಾರಲಾಗುತ್ತದೆ. ಮತ್ತೂ ಉಳಿದ ತ್ಯಾಜ್ಯವನ್ನು ಸಿಮೆಂಟ್ ಕಾರ್ಖಾನೆಗೆ ನೀಡಲಾಗುತ್ತದೆ. ನೆಲಭರ್ತಿ ಕಲ್ಪನೆ ಇಲ್ಲಿರುವುದಿಲ್ಲ. ಅರ್ಥಾತ್ ತ್ಯಾಜ್ಯವನ್ನು ಸಂಗ್ರಹಿಸಿ ಡಂಪ್ ಮಾಡುವ ವಿಧಾನವಿರುವುದಿಲ್ಲ.
` ಕೆದಂಬಾಡಿ ಎಂಆರ್‌ಎಫ್ ಘಟಕ ನಿರ್ಮಾಣ ಪೂರ್ಣಗೊಂಡಿದೆ. ಸಣ್ಣ ಪುಟ್ಟ ಕೆಲಸಗಳು ಮಾತ್ರ ಬಾಕಿ ಇವೆ. ಮುಂದಿನ ತಿಂಗಳಾಂತ್ಯಕ್ಕೆ ಉದ್ಘಾಟನೆಗೆ ದಿನಾಂಕ ನಿಗದಿ ಮಾಡಲಿದ್ದೇವೆ.ಯೋಜನೆ ಮಂಜೂರಾತಿಯಲ್ಲಿ ಅಂದಿನ ಶಾಸಕ ಸಂಜೀವ ಮಠಂದೂರು ವಿಶೇಷ ಮುತುವರ್ಜಿ ವಹಿಸಿದ್ದರು. ಶಿಲಾನ್ಯಾಸ ನಡೆದ ಬಳಿಕ ಕಾಮಗಾರಿಯ ನಾನಾ ಹಂತಗಳ ಬಗ್ಗೆ ಬೆನ್ನತ್ತಿದ್ದ ಅವರು, ಚುನಾವಣೆ ಘೋಷಣೆಗೆ ಮುನ್ನವೇ ಉದ್ಘಾಟಿಸುವ ಕನಸು ಕಂಡಿದ್ದರು. ಎಂ.ಆರ್.ಎಫ್ ಘಟಕ ಕೆದಂಬಾಡಿ ಗ್ರಾಮದಲ್ಲಿ ನಿರ್ಮಾಣಗೊಂಡಿರುವುದು ಗ್ರಾಮಕ್ಕೆ ಮತ್ತಷ್ಟು ಮೌಲ್ಯವನ್ನು ತಂದಿದೆ. ಸಹಕರಿಸಿದ ಸರ್ವರಿಗೂ ಕೃತಜ್ಞತೆ ಸಲ್ಲಿಸುತ್ತೇನೆ.’
———ರತನ್ ರೈ ಕುಂಬ್ರ, ಅಧ್ಯಕ್ಷರು ಕೆದಂಬಾಡಿ ಗ್ರಾಮ ಪಂಚಾಯತ್