ಬಪ್ಪಳಿಗೆ-ಅಂಬಿಕಾ ಸಿಬಿಎಸ್‌ಇ ವಿದ್ಯಾಲಯದಲ್ಲಿ ಶಾಲಾ ಪ್ರಾರಂಭೋತ್ಸವ

0

ಗಣ ಹೋಮ, ಶಾರದಾ ಪೂಜೆಯೊಂದಿಗೆ ಆರತಿ ಬೆಳಗಿ ತಿಲಕವಿಟ್ಟು ಸ್ವಾಗತ
ಪುತ್ತೂರು: ಅಂಬಿಕಾ ಸಿ.ಬಿ.ಎಸ್.ಇ ಶಾಲೆಯ 2023-24ನೇ ಸಾಲಿನ ಶೈಕ್ಷಣಿಕ ವರ್ಷವನ್ನು ಗಣಪತಿ ಹೋಮ, ಶಾರದಾ ಪೂಜೆಯೊಂದಿಗೆ ಮಂಗಳವಾರ ಪುನರಾರಂಭ ಮಾಡಲಾಯಿತು. ವೇದಮೂರ್ತಿ ಶ್ರೀಕೃಷ್ಣ ಉಪಾಧ್ಯಾಯ ಧಾರ್ಮಿಕ ವಿಧಿವಿಧಾನಗಳನ್ನು ನಡೆಸಿಕೊಟ್ಟರು.

ಈ ಸಂದರ್ಭದಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಮಕ್ಕಳನ್ನು ಉದ್ದೇಶಿಸಿ ಮಾತನಾಡಿ ನೂತನ ಶೈಕ್ಷಣಿಕ ವರ್ಷ ಆರಂಭಗೊಂಡಿದೆ. ಮೊದಲ ದಿನದಿಂದಲೇ ಓದುವಿಕೆ, ಬರೆಯುವಿಕೆಯ ಕಡೆ ಹೆಚ್ಚಿನ ಗಮನ ಹರಿಸಬೇಕು. ಶಿಕ್ಷಕರು ನೀಡಿದ ಕೆಲಸವನ್ನು ಅಂದೇ ಪೂರ್ತಿ ಗೊಳಿಸಬೇಕು. ಕಳೆದ ಬಾರಿ ಕಡಿಮೆ ಅಂಕಗಳಿಸಿದ್ದರೆ ಅದನ್ನು ಮರೆತು ಈ ವರ್ಷ ಸಾಧನೆ ಮಾಡುವ ಕಾರ್ಯ ಆಗಬೇಕು. ಗಮನ ಕೊಟ್ಟು ಆಸಕ್ತಿಯಿಂದ ಓದಿ ಉತ್ತಮ ಅಂಕ ಗಳಿಸಬೇಕು ಎಂದರು.

ಪ್ರತಿಯೊಬ್ಬನೂ ದೇಶಪ್ರೇಮಿಯಾಗಿ ಬೆಳೆಯಬೇಕು. ನಮ್ಮ ದೇಶದ ಸ್ವಾತಂತ್ರ‍್ಯಕ್ಕಾಗಿ ಹೋರಾಡಿದ ಮಹಾವೀರ ವಿನಾಯಕ ದಾಮೋದರ ಸಾವರ್ಕರ್ ಅವರ ಬದುಕು ನಮಗೆಲ್ಲರಿಗೂ ಆದರ್ಶ. ಹಾಗಾಗಿ ನಾವೆಲ್ಲರೂ ದೇಶಕ್ಕಾಗಿ ಶ್ರಮಿಸಬೇಕು, ದೇಶಕ್ಕೆ ನಾವು ಮಾದರಿಯಾಗಬೇಕು ಎಂದು ವಿದ್ಯಾರ್ಥಿಗಳನ್ನು ಪ್ರೇರೇಪಿಸಿದರು. ಸಭೆಯಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ನಟ್ಟೋಜ, ಅಂಬಿಕಾ ಸಿ.ಬಿ.ಎಸ್.ಇ ವಿದ್ಯಾಲಯದ ಪ್ರಾಚಾರ್ಯೆ ಮಾಲತಿ ಡಿ, ಬಪ್ಪಳಿಗೆಯ ಅಂಬಿಕಾ ಪದವಿ ಪೂರ್ವ ವಿದ್ಯಾಲಯದ ಪ್ರಾಚಾರ್ಯೆ ಸುಚಿತ್ರಾ ಪ್ರಭು, ಎಲ್ಲಾ ಶಿಕ್ಷಕ ವೃಂದ, ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದ ನಂತರ ಅಂಬಿಕಾ ಸಿಬಿಎಸ್‌ಇ ಶಾಲೆಯ ಎಲ್ಲಾ ವಿದ್ಯಾರ್ಥಿಗಳನ್ನು ಹಿಂದೂ ಸಂಪ್ರದಾಯದಂತೆ ಆರತಿ ಬೆಳಗಿ, ತಿಲಕವನ್ನಿಟ್ಟು ಸ್ವಾಗತಿಸಲಾಯಿತು.

LEAVE A REPLY

Please enter your comment!
Please enter your name here